Part - 49



ಮೂಲ:
ಅಪಾತ_ವೈರಾಗ್ಯವತೋ ಮುಮುಕ್ಷೂನ್
ಭವಾಬ್ದಿಪಾರಂ ಪ್ರತಿಯಾತುಮುದ್ಯತಾನ್ |
ಆಶಾ_ಗ್ರಹೋ ಮಜ್ಜಯತೇಂತರಾಲೇ
ನಿಗೃಹ್ಯ ಕಂಠೇ ವಿನಿವರ್ತ್ಯ ವೇಗಾತ್ ||೭೯||

ಪ್ರತಿಪದಾರ್ಥ:
ಭವಾಬ್ದಿಪಾರಂ = ಸಂಸಾರ ಸಾಗರ ವನ್ನು, ಪ್ರತಿಯಾಂತು= ಹೊಂದಲು, ಉದ್ಯತಾನ್= ಪ್ರಯತ್ನಿಸುತ್ತಿರುವ, ಅಪಾತ_ವೈರಾಗ್ಯವತಃ=ಮಂದ ವೈರಾಗ್ಯವುಳ್ಳ, ಮುಮುಕ್ಷೂನ್=ಬಂಧನದಿಂದ ಬಿಡಿಸಿಕೊಳ್ಳುತ್ತಿರುವವರು (ಸಾಧನ ಚತುಷ್ಟಯದ ಸಾಧಕರು), ಆಶಾ_ಗ್ರಹಃ=ಆಸೆಯೆಂಬ ಮೊಸಳೆಯ, ಕಂಠೇ=ಕೊರಳಿನಲ್ಲಿ, ನಿಗೃಹ್ಯ=ಹಿಡಿದು, ವೇಗಾತ್=ವೇಗದ ಕಾರಣದಿಂದ, ವಿನಿವರ್ತ್ಯ=ಹಿಂದಿರುಗಿಸಿ, ಅಂತರಾಲೇ=ಮಧ್ಯದಲ್ಲಿ, ಮಜ್ಜಯತೇ=ಮುಳುಗಿಸುತ್ತದೆ.

ತಾತ್ಪರ್ಯ:
ಸಂಸಾರ ಸಾಗರವನ್ನು ದಾಟಲು ಆಸಕ್ತನಾಗಿದ್ದರೂ(ಆ ದಾರಿಯಲ್ಲೇ ನಡೆದು ಬಂದಿದ್ದರೂ) ವಿಷಯಗಳ ಪ್ರತಿ ತೀವ್ರವಾದ ವೈರಾಗ್ಯವಿಲ್ಲದಿದ್ದರೆ ಅನರ್ಥವಾಗುತ್ತದೆ. ಮಂದ ವೈರಾಗ್ಯದಿಂದ ಮುನ್ನೆಡೆಯುವವರನ್ನು 'ಆಸೆ' ಎಂಬ ಮೊಸಳೆಯು ತನ್ನ ಹಿಡಿತಕ್ಕೆ ತೆಗೆದುಕೊಂಡು ಯಾವ ವೇಗದಲ್ಲಿ ಸಾಗಿ ಬಂದಿರುತ್ತಾರೋ ಅಷ್ಟೇ ಬೇಗ (ಹಿಮ್ಮುಖವಾಗಿ) ಸಾಗರ(ಸಂಸಾರ) ದ ಮಧ್ಯದಲ್ಲಿ ಮುಳುಗಿಸುತ್ತದೆ.

ವಿವರಣೆ:
ಜ್ಞಾನಿಯಾಗುವವನಿಗೆ ವೈರಾಗ್ಯ ಅಥವಾ ಜಿಗುಪ್ಸೆಯು ಯಾವ ರೀತಿಯಲ್ಲಿ ಇರಬೇಕು ಎಂಬುದನ್ನು ನಾವು ಈಗಾಗಲೇ ಮಂದ_ಮಧ್ಯಮ_ರೂಪಾಪಿ ಎಂಬ ಶ್ಲೋಕದಲ್ಲಿ ತಿಳಿದಿದ್ದೇವೆ. ಸಂಸಾರ ಸಾಗರದ ಪರತೀರವನ್ನು ಮುಟ್ಟಬೇಕು ಎಂಬ ಇಚ್ಚೆ ಹುಟ್ಟುವುದೇ ವೈರಾಗ್ಯದ ಮುಖ್ಯಲಕ್ಷಣವಾಗಿದ್ದು (ಅಥವಾ ವೈರಾಗ್ಯ ಬಂದ ಬಳಿಕವೇ ಸಂಪೂರ್ಣ ಬಿಡುಗಡೆಯ ಬಯಕೆಯು ಹುಟ್ಟುತ್ತದೆ ಎನ್ನಬಹುದು. ಇವೆಲ್ಲವೂ ಒಂದೇ ದಾರಕ್ಕೆ ಪೋಣಿಸಿರುವ ಹೂವುಗಳು ಎಂದುಕೊಳ್ಳೋಣ), ಇದು ತೀವ್ರವಾಗಿಲ್ಲದಿದ್ದರೆ ಏನೂ ಪ್ರಯೋಜನವಿಲ್ಲ. ಯಾವ ದುಃಖ ಶೋಕಾದಿಗಳಿಗೂ ಜಗ್ಗದೆ ವಿಷಯವಸ್ತುಗಳ ಪ್ರತಿ ಜಿಗುಪ್ಸೆಯನ್ನು ತಾಳಬೇಕು, ಅದರಿಂದ ಪಡೆಯುವ ಜ್ಞಾನವೇ ಉನ್ನತವಾದುದು ಎಂದು ಹೇಳುತ್ತಾರೆ. ಹಾಗೆ ಮೇಲ್ಮೇಲಿನ ವೈರಾಗ್ಯ ಹೊಂದಿರುವವರು ಸಾಧನೆಯ ಹಾದಿಯಲ್ಲಿ ಕ್ರಮಿಸಿ ಸಂಸಾರದ ಬಂಧನದಿಂದ ಬಿಡಿಸಿಕೊಂಡು ಮಧ್ಯ ದಾರಿಗೆ ಬಂದಿರುತ್ತಾರೆ. ಆಕಸ್ಮಿಕವಾಗಿ ಅದ್ಯಾವುದೋ ದುಃಖವು ಬಾಧಿಸಿದಾಗ ಅದಕ್ಕೆ ಓಗೋಟ್ಟರೆ ಸಾಧನೆಯೆಲ್ಲಾ ಹೊಳೆಯಲ್ಲಿ ಹುಣಸೆಹಣ್ಣು ಕಿವುಚಿದಂತಾಗುತ್ತದೆ. ಹಾಗಾಗಿ ಜ್ಞಾನದ ಹಾದಿಲ್ಲಿದ್ದಾಗ ಪ್ರಲೋಭನೆ ಅಥವಾ 'ಆಸೆ' ಎಂಬ ಮೊಸಳೆಯ ಹಿಡಿತಕ್ಕೆ ಸಿಲುಕಬಾರದು. ಹಾಗೇನಾದರೂ ಆದರೆ, ಎಷ್ಟೆಲ್ಲಾ ಸಾಧನೆಗಳನ್ನು ಮಾಡಿ ಅರ್ಧ ದಾರಿಗೆ ಬಂದಿರುತ್ತಾನೋ ಅಷ್ಟೇ ವೇಗವಾಗಿ ಸಾಗರದ ಮಧ್ಯದಲ್ಲೆ ಮುಳುಗಿ ನಾಶವಾಗಬೇಕಾಗುತ್ತದೆ ಎಂಬ ಅರ್ಥದಲ್ಲಿ ಹೇಳುತ್ತಾರೆ.
.................
ಟಿಪ್ಪಣಿ:
ಮೊಸಳೆಯ ಉದಾಹರಣೆ ಶಂಕರರ ಜೀವನಕಥೆಯಲ್ಲಿ ಬಂದಿರುವುದೇ ಆಗಿದೆ. ತಮ್ಮ ಸನ್ಯಾಸ ಸ್ವೀಕಾರ ಸಂದರ್ಭದಲ್ಲಿ ತಾಯಿಯ ಅನುಮತಿ ಬೇಡಲು 'ಮೊಸಳೆಯು' ನನ್ನನ್ನು ಹಿಡಿದಿದೆ, ಪ್ರಾಣ ಹೋಗುತ್ತಿದೆ ಎಂದೆಲ್ಲಾ ಹೇಳಿ ಆಜ್ಞೆ ಪಡೆದುಕೊಳ್ಳುತ್ತಾರೆ. ಈ ಶ್ಲೋಕವನ್ನು ಅರ್ಥೈಸಿಕೊಂಡಾಗ , ಮೊಸಳೆ ಎಂಬ ಪದವನ್ನು ಬಳಸಿರುವ ಔಚಿತ್ಯ ತಿಳಿಯುತ್ತದೆ.
............

ಕಾಮೆಂಟ್‌ಗಳು

  1. ಶಂಕರರ ಬಾಲ್ಯದಲ್ಲಿಯ ಮೊಸಳೆಯನ್ನು ನೆನಪಿಸಿ, ಶ್ಲೋಕದಲ್ಲಿಯ ಮೊಸಳೆಯ ಹೋಲಿಕೆಯ ಔಚಿತ್ಯವನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಪ್ರಲೋಭನೆ ಅಥವಾ ವಿಷಯವಸ್ತುಗಳ ಸಂಕೇತವಾಗಿಯೇ ಮೊಸಳೆಯ ಪ್ರಸ್ತಾಪವಾಗಿದೆ ಎನಿಸುತ್ತದೆ. ಧನ್ಯವಾದ.

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ