Part - 42


ಮೂಲ:
ಮಜ್ಜಾಸ್ಥಿಮೇದಃ_ಪಲ_ರಕ್ತ_ಚರ್ಮ
ತ್ವಗಾಹ್ವಯೈರ್ಧಾತುಭಿರೇಭಿರನ್ವಿತಮ್ |
ಪಾದೋರುವಕ್ಷೋಭುಜ_ಪೃಷ್ಠ_ಮಸ್ತಕೈ
ರಂಗೈರುಪಾಂಗೈರುಪಯುಕ್ತಮೇತಮ್ ||೭೨||

ಪ್ರತಿಪದಾರ್ಥ:
ಏತತ್=ಇದು, ಮಜ್ಜಾ_ಅಸ್ಥಿ_ಮೇದಃ=ಮಜ್ಜೆ ಮೂಳೆ ಕೊಬ್ಬು, ಪಲ_ರಕ್ತ_ಚರ್ಮ=ಮಾಂಸ ರಕ್ತ ಚರ್ಮ, ತ್ವಕ್_ಆಹ್ವಯೈಃ=ಹೊರ ಚರ್ಮ ಎಂಬ ಹೆಸರುಳ್ಳ, ಏಭಿಃಧಾತುಭಿಃ=ಈ ಧಾತುಗಳಿಂದ, ಅನ್ವಿತಂ=ಕೂಡಿರುವ, ಪಾದ_ಊರು_ವಕ್ಷಃ=ಕಾಲು ತೊಡೆ ಎದೆ, ಭುಜ_ಪೃಷ್ಠ_ಮಸ್ತಕೈಃ=ತೋಳು ಬೆನ್ನು (ಹಿಂಭಾಗ) ತಲೆ, ಅಂಗೈಃ ಉಪಾಂಗೈಃ=ಅಂಗೋಪಾಂಗಗಳಿಂದ, ಉಪಯುಕ್ತಂ= ಕೂಡಿರುವ.

ತಾತ್ಪರ್ಯ:
ಮಜ್ಜೆ ಮೂಳೆ ಕೊಬ್ಬು ಮಾಂಸ ರಕ್ತ (ಒಳ)ಚರ್ಮ ಮತ್ತು ಹೊರಚರ್ಮ ಎಂಬ ಏಳು ಧಾತುಗಳಿಂದ ಕೂಡಿ, ಕಾಲು ತೋಳು(ಕೈ) ತೊಡೆ ಎದೆ ಬೆನ್ನು ತಲೆ ಮುಂತಾದ ಅಂಗಗಳಿಂದಲೂ, ಉಪಾಂಗಗಳಿಂದಲೂ ಕೂಡಿರುವ....

ವಿವರಣೆ:
ಆತ್ಮಾನಾತ್ಮ ವಿವೇಕವನ್ನು ವಿವರಿಸುತ್ತೇನೆ ಮನಸ್ಸಿಟ್ಟು ಕೇಳಿಸಿಕೋ ಎಂದು ಶಿಷ್ಯನಿಗೆ ಹೇಳಿದ ಬಳಿಕ ಗುರುವು, ಮಾನವ ದೇಹರಚನೆ ಅಥವಾ ಸ್ಥೂಲ ಶರೀರದ ವರ್ಣನೆಗೆ ಮುಂದಾಗುತ್ತಾರೆ. ಬೆನ್ನೆಲುಬು(Bone marrow fluid), ಮೂಳೆ, ಕೊಬ್ಬು, ಮಾಂಸ, ರಕ್ತ, ಒಳ ಮತ್ತು ಹೊರ ಚರ್ಮಪದರ ಎಂಬ ಏಳು ಧಾತುಗಳಿಂದ ಕೂಡಿ, ಕಾಲು, ತೊಡೆ, ಭುಜ(ತೋಳು ಅಥವಾ ಕೈ), ಎದೆ, ಬೆನ್ನು, ತಲೆ ಮೊದಲಾಗಿ ವಿವಿಧ ಅಂಗ_ಉಪಾಂಗಗಳಿಂದ ಕೂಡಿ ಶರೀರವು ಆಕೃತಿಯನ್ನು ಪಡೆದುಕೊಂಡಿದೆ ಎಂದು ಹೇಳುತ್ತಾರೆ.

ಅನಾತ್ಮನ ಮೂಲಕವಾಗಿಯೇ ಆತ್ಮವಸ್ತುವನ್ನು ತಿಳಿಯಬೇಕಾಗಿರುವುದರಿಂದ ಮತ್ತು ಅನಾತ್ಮ ಎನ್ನುವುದು ಸ್ಥೂಲರೂಪದ್ದಾಗಿದ್ದು ಮೊದಲಿಗೇ ತಿಳಿಯಲು ಸಾಧ್ಯವಿರುವುದರಿಂದ 'ಮಜ್ಜಾಸ್ಥಿ' ಎಂಬ ಶ್ಲೋಕದ ಮೂಲಕ ನಾನು, ನನ್ನ ಕಾಲು, ಕೈ, ಕಣ್ಣು ಎಂಬ ಮೋಹಕಾಂಕ್ಷೆಗೆ ಸಿಲುಕಿಸುವ ಧಾತುಗಳು ಮತ್ತು ಅಂಗೋಪಾಂಗಗಳ ಬಗ್ಗೆ ಹೇಳಲಾಗಿದೆ ಎಂದು ಸದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳು ವಿವರಿಸುತ್ತಾರೆ. ಯಾವುದು ನಾನಾಗಿರುವುದಕ್ಕೆ ಅಂದರೆ, ನಾನು ನೋಡುತ್ತೇನೆ, ಕೇಳುತ್ತೇನೆ, ಹಾಡುತ್ತೇನೆ ಮುಂತಾಗಿ 'ಅಹಂ' ಎಂಬ ಶಬ್ದಪ್ರಯೋಗಕ್ಕೆ ಆಶ್ರಯವಾಗುತ್ತದೆಯೋ ಅದನ್ನು ಸ್ಥೂಲ ಎಂದು ನಿರೂಪಿಸುತ್ತಾರೆ. ಇದರಿಂದ ಆತ್ಮನು ಬೇರೆಯೇ ಆಗಿದ್ದು ಸ್ಥೂಲ ಶರೀರವು (ಯಾವುದು ಲೌಕಿಕ ಮೋಹಕ್ಕೆ ಕಾರಣವಾಗುತ್ತದೆಯೋ ಮತ್ತು ಇಂದ್ರಿಯಗಳ ಮೂಲಕ ಗೊತ್ತಾಗುತ್ತದೆಯೋ) ಅನಾತ್ಮವೆನಿಸಿಕೊಳ್ಳುತ್ತದೆ. ಆತ್ಮಕ್ಕೆ ಶರೀರವು ಬಾಹ್ಯಾಧಾರವಾಗಿರುತ್ತದೆ ಎಂದು ಸೂಚ್ಯವಾಗಿ ಹೇಳುತ್ತಾರೆ.
.......
ಟಿಪ್ಪಣಿ:
ಚರ್ಮ_ತ್ವಕ್ ಎಂಬ ಪದಗಳು ಚರ್ಮ ಎಂಬುದನ್ನೇ ಸೂಚಿಸುತ್ತದೆ. ಭಾಷ್ಯಕಾರರು ಇದಕ್ಕೆ ಪ್ರತ್ಯೇಕ ವಿವರಣೆ ನೀಡಿರುವುದಿಲ್ಲ. 'ಪಲ_ರಕ್ತ_ಶುಕ್ಲಾ' (ಶುಕ್ಲಾ=ಶೋಣಿತ ಅಥವಾ ರೇತಸ್ಸು, ವೀರ್ಯ) ಆಗಿದ್ದರೆ ಸರಿಯಾಗುತ್ತಿತ್ತು ಎಂದು ಶತಾವಧಾನಿ ರಾ. ಗಣೇಶ್ ಹೇಳಿರುತ್ತಾರೆ. ಚಂದ್ರಶೇಖರ ಭಾರತೀ ಸ್ವಾಮಿಗಳು ಚರ್ಮದ ಒಳ ಮತ್ತು ಹೊರ ಪದರ ಎಂಬುದಾಗಿ ವ್ಯಾಖ್ಯಾನಿಸಿರುತ್ತಾರೆ.
....

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ