Part - 47



ಮೂಲ:
ದೋಷೇಣ ತೀವ್ರೋ ವಿಷಯಃ ಕೃಷ್ಣಸರ್ಪವಿಷಾದಪಿ |
ವಿಷಂ ನಿಹಂತಿ ಭೋಕ್ತಾರಂ ದ್ರಷ್ಟಾರಂ ಚಕ್ಷುಷಾsಪ್ಯಯಮ್ ||೭೭||

ಪ್ರತಿಪದಾರ್ಥ:
ದೋಷೇಣ=ದೋಷದಿಂದ, ತೀವ್ರಃ=ತೀಕ್ಷ್ಣವಾದದ್ದು, ವಿಷಯಃ=ವಿಷಯಗಳು, ಕೃಷ್ಣಸರ್ಪವಿಷಾತ್_ಅಪಿ=ಕಾಳಸರ್ಪದ ವಿಷಕ್ಕಿಂತಲೂ, ವಿಷಂ=ವಿಷವು, ನಿಹಂತಿ=ಕೊಲ್ಲುವುದು, ಭೋಕ್ತಾರಂ=ತಿನ್ನುವವನನ್ನು, ಅಯಂ=ಇದು, ಚಕ್ಷುಷಾ=ಕಣ್ಣಿನಿಂದ, ದ್ರಷ್ಟಾರಮ್_ಅಪಿ=ನೋಡುವವನನ್ನು ಸಹ.

ತಾತ್ಪರ್ಯ:
ಕಾಳಸರ್ಪದ ವಿಷಕ್ಕಿಂಲೂ ವಿಷಯ(ಭೋಗವಸ್ತು)ವು ದೋಷದಲ್ಲಿ ತೀಕ್ಷ್ಣವಾದುದು. ವಿಷವು ತಿಂದವನನ್ನು ಮಾತ್ರ ಕೊಲ್ಲುತ್ತದೆ. ವಿಷಯವು ಕಣ್ಣಿನಿಂದ ನೋಡಿದವರನ್ನೂ ನಾಶಮಾಡುತ್ತದೆ.

ವಿವರಣೆ:
ವಿಷಯವಸ್ತುಗಳ (ಶಬ್ದಾದಿ ಪಂಚ) ಅನುಭವವು ಹೇಗೆ ನಾಶಕ್ಕೆ ಕಾರಣವಾಗುತ್ತದೆ ಎಂಬುದನ್ನು ಹಿಂದಿನ ಶ್ಲೋಕದಲ್ಲಿ ತಿಳಿದುಕೊಂಡೆವು. ಇಲ್ಲಿ ಇನ್ನೂ ಮುಂದುವರಿದು, ಅಂತಹ ಗುಣಗಳನ್ನು ಕಣ್ಣಾರೆ ಕಂಡರೂ ಸಾಕು ಮೃತ್ಯುವಿನ ಮನೆಯ ಬಾಗಿಲು ತಟ್ಟಬೇಕಾಗುತ್ತದೆ, ಏಕೆಂದರೆ ಕಾಳಸರ್ಪದ ವಿಷಕ್ಕಿಂತಲೂ ಹೆಚ್ಚು ಪರಿಣಾಮವು ಭೋಗವಸ್ತುಗಳನ್ನು ನೋಡುವುದರಿಂದಲೇ ಆಗುತ್ತದೆ ಎನ್ನುತ್ತಾರೆ. ಕಾಳಿಂಗಸರ್ಪದ ವಿಷವು ಅತ್ಯಂತ ಘೋರವಾದುದೆಂಬುದು ತಿಳಿದಿರುವ ಸಂಗತಿಯೇ ಆಗಿದೆ. ಇಂದ್ರಿಯ ಗ್ರಾಹ್ಯವಾದ ರೂಪಾದಿ ಗುಣಗಳಿಂದ ಹುಟ್ಟುವ ಭೋಗವಸ್ತುಗಳ ಮೇಲಿನ ಮಮಕಾರವು ಅದಕ್ಕಿಂತಲೂ ಹಾನಿಕಾರಕವಾದುದು ಎಂದು ನಿರೂಪಿಸುತ್ತಾರೆ.

ಅತ್ಯದ್ಭುತ ಶಬ್ದ (Dolby 7.1ಎಂದುಕೊಳ್ಳೋಣ)ವನ್ನು ಹೊಮ್ಮಿಸುವ ಸಂಗೀತ ಉಪಕರಣವನ್ನು ದುಡ್ಡು ಹೆಚ್ಚೇ ಎನಿಸಿದರೂ ಮನೆಗೆ ತಂದು ಅದರಲ್ಲೊಂದು ಹಾಡನ್ನು ಹಾಕಿ ಕೇಳುತ್ತಿರುವಾಗಲೆ ಕೆಟ್ಟು ಹೋದರೆ, ಮನಸ್ಸಿಗೆ ಎಷ್ಟು ಬೇಸರವಾಗುತ್ತದೆ !. ವಾರಂಟಿ ಮೇಲೆ ಉಚಿತ ರಿಪೇರಿ ಮಾಡಿಕೊಟ್ಟರೂ ಒರಿಜನಲ್ ಎನ್ನುವ ಹಮ್ಮಿಗೆ ಪೆಟ್ಟು ಬಿದ್ದಾಗಿರುತ್ತದೆ. ರೇಶ್ಮೆಯ ನುಣುಪಿಗೆ ಮಾರುಹೋಗಿ ಒಂದೈವತ್ತು ಸಾವಿರದ ಸೀರೆ ಕೊಂಡು ತಿಂಗಳಾಂತ್ಯಕ್ಕೆ ಹಣವಿಲ್ಲದೆ ಪರದಾಡುವ ಮಂದಿ ಎಷ್ಟೊಂದಿದ್ದಾರೆ. ಯಾವ್ಯವುದೋ ರೂಪಕ್ಕೆಲ್ಲ ಮನಸೋತು ಕೊಲೆ ಮಾಡಿರುವವರರು_ಆಗಿರುವವರು ಈ ಜಗತ್ತಿನಲ್ಲಿ ಅಸಂಖ್ಯಾತರಿದ್ದಾರೆ. ಇಂದ್ರಿಯ ಚೋದಕ ಸೌಂದರ್ಯವನ್ನು ಅನುಭವಿಸಿ ಸತ್ತವರಿಗಿಂತಲೂ ಅದನ್ನು ಕಂಡು ಚಡಪಡಿಸಿ ಪ್ರಾಣ ಕಳೆದುಕೊಂಡಿರುವವರ ಉದಾಹರಣೆ ನಮ್ಮ ಕಣ್ಮುಂದೆಯೇ ಇದೆ.(ರಾಮಾಯಣ_ಮಹಾಭಾರತವೇ ನಡೆದುಹೋಗಿದೆ !) . ಶಾಪಿಂಗ್ ಎಂದು ಹೋದ ದಂಪತಿ, ಲಕ್ಷ ರೂಪಾಯಿಯ ಟಿ.ವಿ. ಮನೆಗೆ ಬೇಕು_ಬೇಡ ಎಂಬ ಪರ ವಿರೋಧದ ಚರ್ಚೆ ಮಾಡುತ್ತಾ ಕಡೆಗೆ ಅದು ಜಗಳಕ್ಕೆ ತಿರುಗಿ ಡಿವೋರ್ಸ್ (ಭಾರತದಲ್ಲಿ ಆಗಿದೆಯೋ ಇಲ್ಲವೋ ಗೊತ್ತಿಲ್ಲ)ತನಕ ಹೋಗಿರುವ ಕೇಸ್ಗಳೂ ಇವೆ. ಹಾಗಾಗಿ ವಿಷಯವನ್ನು ನೋಡುವ ದೋಷವು ಹಾವಿನ ವಿಷಕ್ಕಿಂತಲೂ ಕೆಟ್ಟದ್ದು ಎಂದು ಆಚಾರ್ಯರು ಹೇಳುತ್ತಾರೆ.
..............

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ