Part - 33



ಮೂಲ:
ನ ಗಚ್ಛತಿ ವಿನಾ ಪಾನಂ ವ್ಯಾಧಿರೌಷಧ_ಶಬ್ದತಃ |
ವಿನಾsಪರೋಕ್ಷಾನುಭವಂ ಬ್ರಹ್ಮಶಬ್ದೈರ್ನ ಮುಚ್ಯತೇ |೬೩|

ಪ್ರತಿಪದಾರ್ಥ:
ವ್ಯಾಧಿಃ=ರೋಗವು, ಪಾನಂ ವಿನಾ=ಕುಡಿಯದಿದ್ದರೆ, ಔಷಧಃ_ಶಬ್ದತಃ=ಔಷಧ ಎಂಬ ಹೆಸರಿನಿಂದ, ನ ಗಚ್ಛತಿ=ಹೋಗುವುದಿಲ್ಲ, ಅಪರೋಕ್ಷಾನುಭವಂ ವಿನಾ=ಸಾಕ್ಷಾತ್ಕಾರವಿಲ್ಲದೆ, ಬ್ರಹ್ಮಶಬ್ದೈಃ=ಬ್ರಹ್ಮ ಎಂಬ ಪದದಿಂದಲೇ, ನ ಮುಚ್ಯತೇ=ಮುಕ್ತನಾಗುವುದಿಲ್ಲ.

ತಾತ್ಪರ್ಯ:
ಔಷಧವನ್ನು ಕುಡಿಯದೇ ಅದರ ಹೆಸರು ಹೇಳಿದ ಮಾತ್ರಕ್ಕೆ ರೋಗವು ನಿವಾರಣೆಯಾಗುವುದಿಲ್ಲ, ಅಂತೆಯೇ ಬ್ರಹ್ಮ ಎಂಬ ಹೆಸರನ್ನು ಹೇಳಿಕೊಂಡು ತಿರುಗಿದರೆ ಮೋಕ್ಷವು ದೊರಕುವುದಿಲ್ಲ.

ವಿವರಣೆ:
'ಶಬ್ದಜಾಲಂ' ಎಂಬ ಸೂಕ್ತದಲ್ಲಿ ಮಾತು ಹಾಗೂ ಪದಗಳ ಮೋಡಿಗೆ ಸಿಲುಕಿದವನು ಹೇಗೆ ಜ್ಞಾನದಿಂದ ವಂಚಿತನಾಗುತ್ತಾನೆ ಎಂಬುದನ್ನು ತಿಳಿದೆವು. ಹಾಗೆಯೇ, ರೋಗಿಯ ಮುಂದೆ ನಿಂತು ಔಷಧದ ಹೆಸರನ್ನು ಹೇಳಿದ ಮಾತ್ರಕ್ಕೆ ಆತನ ವ್ಯಾಧಿಯು ಪರಿಹಾರವಾಗುವುದಿಲ್ಲ. ಸೂಚಿತ ಔಷಧಗಳನ್ನು ಕಾಲಕಾಲಕ್ಕೆ ವೈದ್ಯರ ಮಾರ್ಗದರ್ಶನದ ಅನುಸಾರ ದೇಹಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ. ಅದರಿಂದ ಆತನ ಕಾಯಿಲೆಯು ಕ್ರಮೇಣ ಉಪಶಮನವಾಗುತ್ತದೆ. ಅದೇ ರೀತಿ, ನಾನು ಬ್ರಹ್ಮಸೂತ್ರಗಳನ್ನೂ, ವೇದಾಂತಗಳನ್ನೂ ಅರೆದು ಕುಡಿದಿದ್ದೇನೆಂದು ಹೇಳಿಕೊಂಡು ತಿರುಗಿದರೆ ಆತ್ಮ ಸಾಕ್ಷಾತ್ಕಾರವಾಗುವುದಿಲ್ಲ, ಬದಲಾಗಿ ಜ್ಞಾನಿಯಾದವನಿಂದ ಉಪದೇಶವನ್ನು ಪಡೆದು ಸ್ವಾನುಭವದಿಂದ ಮೋಕ್ಷ ಹೊಂದಬೇಕು ಎಂದು ವಿವರಿಸುತ್ತಾರೆ.
.....................-------

ಕಾಮೆಂಟ್‌ಗಳು

  1. ಕೆಲವು ಕಾರಣಗಳಿಂದ bloggerಗೆ ಬರಲು ಸಾಧ್ಯವಾಗಲಿಲ್ಲ. ನಿಮ್ಮ ಹಾಗು ಇತರ ಕೆಲವು blogpostಗಳನ್ನು ನೋಡಲು ಆಗಲಿಲ್ಲ. ಇದೀಗ ನಿಮ್ಮ ಹಿಂದಿನ ಸಂಚಿಕೆಗಳನ್ನೂ ನೋಡಿದೆ. ಏನು ಹೇಳಲಿ? ಆದರೆ ಇಲ್ಲಿ ಹೇಳಿದಂತೆ, ನಾನೂ ಸಹ ಶಬ್ದಜಾಲದಲ್ಲಿಯೇ ಜೇಡರ ಹುಳುವಿನಂತೆ ಸಿಕ್ಕಿ ಹಾಕಿಕೊಂಡಿದ್ದೇನೆ. ವಿವೇಕಚೂಡಾಮಣಿಯು ನನಗೆ ಬೆಳಕು ನೀಡಲಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಬಹುಷಃ ನೀವು ಬೇಂದ್ರೆಯವರ ಶಬ್ದಜಾಲದಲ್ಲಿ ಸಿಲುಕಿರಬೇಕು !, ಅದು ನಮಗೆಲ್ಲ ಸಂತಸ ಕೊಡುವಂತದ್ದೇ ಆಗಿದೆ. ಅಲ್ಲಿಂದಲೂ ಜ್ಞಾನದ ಬಳಕು ನಮಗೆ ಬರುತ್ತಲೇ ಇದೆ. :)

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ