Part - 38


ಮೂಲ:
ಶೃಣುಷ್ವಾವಹಿತೋ ವಿದ್ವನ್ ಯನ್ಮಯಾ ಸಮುದೀರ್ಯತೇ |
ತದೇತಚ್ಛ್ರವಣಾತ್ ಸದ್ಯೋ ಭವಬಂಧಾದ್ವಿಮೋಕ್ಷ್ಯಸೇ ||೬೮||

ಪ್ರತಿಪದಾರ್ಥ:
ವಿದ್ವನ್, ಯತ್=(ವಿದ್ವಾಂಸನೇ) ಯಾವುದು, ಮಯಾ=ನನ್ನಿಂದ, ಸಮುದೀರ್ಯತೇ=ಹೇಳಲ್ಪಡುತ್ತದೆಯೋ, ತತ್=ಅದನ್ನು, ಅವಹಿತಃ=ಶಾಂತಮನಸ್ಸಿನಿಂದ, ಶೃಣುಶ್ವ=ಕೇಳು, ಏತತ್_ಶ್ರವಣಾತ್=ಇದನ್ನು ಕೇಳುವುದರಿಂದ, ಭವಬಂಧಾತ್=ಸಂಸಾರ ಬಂಧದಿಂದ, ಸದ್ಯಃ=ಕೂಡಲೇ, ವಿಮೋಕ್ಷ್ಯಸೇ=ಬಿಡುಗಡೆಯನ್ನು ಹೊಂದುವೆ.

ತಾತ್ಪರ್ಯ:
ವಿದ್ವನ್ಮಣಿಯಾದ ಶಿಷ್ಯನೇ, ನಾನು ಯಾವ ವಿಷಯವನ್ನು ಹೇಳಲು ಮೊದಲಾಗುತ್ತಿರುವೆನೋ, ಅದನ್ನು ತುಂಬ ಶಾಂತ_ಸಾವಧಾನ ಮನಸ್ಸಿನಿಂದ ಆಲಿಸು. ಹಾಗೆ ಕೇಳುವುದರಿಂದ ನೀನು ಕೂಡಲೇ ಸಂಸಾರ ಬಂಧನದಿಂದ ಬಿಡುಗಡೆಯನ್ನು ಹೊಂದುವೆ.

ವಿವರಣೆ:
ಶಿಷ್ಯನ ಪ್ರಶ್ನೆಗಳು ಶ್ರೇಷ್ಠವಾದುದೆಂದು ಪ್ರಶಂಸೆ ವ್ಯಕ್ತಪಡಿಸಿದ ಬಳಿಕ ಗುರುವು, ನಿನ್ನ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರಗಳಿವೆ. ಅವು ಕೇವಲ ನಾಲ್ಕೈದು ಸಾಲಿನ ವಿವರಣೆಗಳಲ್ಲ ಬದಲಾಗಿ ನಿನ್ನನ್ನು ಸಂಸಾರ ಬಂಧನದಿಂದ ಬಿಡುಗಡೆಗೊಳಿಸುವಂತಹ ವಿವೇಕಯುಕ್ತ ವಿಷಯಗಳು. ಅವನ್ನು ನೀನು ಶಾಂತ ಹಾಗೂ ಏಕಾಗ್ರ ಮನಸ್ಸಿನಿಂದ ಕೇಳಿಸಿಕೊಳ್ಳಬೇಕು. ಹಾಗೆ ಆಲಿಸಿದ ಕೂಡಲೇ ನಿನ್ನ ಭವಬಂಧನವು ಕಳೆದು ಬಿಡುಗಡೆ ಹೊಂದುವೆ (ಮುಕ್ತನಾಗುವೆ) ಎಂದು ಹೇಳುತ್ತಾರೆ.

ಶಾಲಾ ಪರೀಕ್ಷೆಯಲ್ಲಿ ಸಹಜವಾಗಿ ನಾಲ್ಕು ಮಾರ್ಕಿಗೆ ೧೦ ಸಾಲಿನ ಉತ್ತರ ಬರೆಯಿರಿ ಎಂಬ ಪ್ರಶ್ನೆ ಕೊಡುತ್ತಾರೆ. ಅದೇ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಯು ಅಚ್ಚುಕಟ್ಟಾಗಿ ೧೦ ಸಾಲು ಬರೆದು ಪೂಣಾಂಕ ಗಳಿಸುತ್ತಾನೆ, ಅಷ್ಟೇಕೆ ಎಲ್ಲವನ್ನೂ ಸರಿಯಾಗಿ ಉತ್ತರಿಸಿ ಶೇ ೧೦೦ ಅಂಕವನ್ನೂ ಗಳಿಸುತ್ತಾನೆ. ಅದೇ ವಿದ್ಯಾರ್ಥಿಗೆ ೧೦ ಸಾಲಿನ ಬಳಿಕ ೧೧ನೇ ಸಾಲಿನ ಉತ್ತರ ಏನಾದರೂ ಇರಬಹುದೇ ಎಂಬ ಆಲೋಚನೆ ಬರುವ ಸಾಧ್ಯತೆ ಇಂದಿನ ಶೈಕ್ಷಣಿಕ ಪದ್ಧತಿಯಲ್ಲಿ ತೀರಾ ಕಡಿಮೆ ಎಂದು ಹೇಳಬಹುದು. ಲೌಕಿಕ ವಿದ್ಯಾರ್ಜನೆಯ ಹಂತವು ಇಷ್ಟರಲ್ಲೇ ಮುಗಿದುಹೋಗುತ್ತದೆ. ಪಾರಮಾರ್ಥಿಕ ಚಿಂತನೆಯು ಜ್ಞಾನ ಮತ್ತು ಬುದ್ಧಿಯ ವಿಕಸನದ ಜತೆಗೆ ನೆಮ್ಮದಿಯನ್ನೂ ತಂದುಕೊಡುತ್ತದೆ ಎನ್ನಬಹುದು.
.........

ಕಾಮೆಂಟ್‌ಗಳು