Part-35


ಮೂಲ:
ಆಪ್ತೋಕ್ತಿಂ ಖನನಂ ತಥೋಪರಿಶಿಲಾದ್ಯುತ್ಕರ್ಷಣಂ ಸ್ವೀಕೃತಿಂ|
ನಿಕ್ಷೇಪಃ ಸಮಪೇಕ್ಷತೇ ನ ಹಿ ಬಹಿಃ ಶಬ್ದೈಸ್ತು ನಿರ್ಗಚ್ಛತಿ|
ತದ್ವದ್ಬ್ರಹ್ಮವಿದೋಪದೇಶ_ಮನನ_ಧ್ಯಾನಾದಿಭಿರ್ಲಭ್ಯತೇ
ಮಾಯಾಕಾರ್ಯ_ತಿರೋಹಿತಂ ಸ್ವಮಮಲಂ ತತ್ತ್ವಂನ ದುರ್ಯುಕ್ತಿಭಿಃ || ೬೫||

ಪ್ರತಿಪದಾರ್ಥ:
ನಿಕ್ಷೇಪಃ=ಭೂಮಿಯೊಳಗಿರುವ (ಹೂತಿಟ್ಟಿರುವ) ನಿಧಿ, ಆಪ್ತೋಕ್ತಿಂ=ಆಪ್ತರ ಮಾತುಗಳನ್ನೂ, ಖನನಂ=ಅಗೆಯುವುದು, ತಥಾ=ಹಾಗೆಯೇ, ಉಪರಿ_ಶಿಲಾದಿ_ಉತ್ಕರ್ಷಣಂ=ಮೇಲಿರುವ ಕಲ್ಲು ಇತ್ಯಾದಿಗಳನ್ನು ತೆಗೆಯುವುದು, ಸ್ವೀಕೃತಿಂ=ಪಡೆದುಕೊಳ್ಳುವುದು, ಸಮಪೇಕ್ಷತೇ=ಅಪೇಕ್ಷಿಸುತ್ತದೆ, ತು_ಶಬ್ದೈಃ= ಆದರೆ ಶಬ್ದಗಳಿಂದಲೇ, ಬಹಿಃ ನ ಹಿ ನಿರ್ಗಚ್ಛತಿ=ಹೊರಗೆ ಬರುವುದಿಲ್ಲ, ತದ್ವತ್=ಹಾಗೆಯೇ=, ಬ್ರಹ್ಮವಿದೋಪದೇಶ_ಮನನ_ಧ್ಯಾನಾಧಿಭಿಃ=ಬ್ರಹ್ಮಜ್ಞಾನಿಯ ಉಪದೇಶ, ಮನನ, ಧ್ಯಾನ ಮುಂತಾದವುಗಳಿಂದ, ಮಾಯಾಕಾರ್ಯ_ತಿರೋಹಿತಂ=ಮಾಯೆಯಿಂದ ಮುಚ್ಚಿರುವ, ಸಮಮಲಂ=ತನ್ನ ವಿಮಲವಾದ, ತತ್ತ್ವಂ_ಲಭ್ಯತೇ=ಜ್ಞಾನವು ಲಭಿಸುತ್ತದೆ, ದುರ್ಯುಕ್ತಿಭಿಃ=ಕೆಟ್ಟ ಯೋಚನೆಗಳಿಂದ(ಕುತರ್ಕದಿಂದ), =ಅಲ್ಲ.

ತಾತ್ಪರ್ಯ:
ಭೂಮಿಯೊಳಗಿರುವ ನಿಧಿಯನ್ನು ಪಡೆಯಬೇಕಾದರೆ ಆಪ್ತರ ಸಲಹೆ, ಸರಿಯಾದ ಸ್ಥಳದಲ್ಲಿ ಅಗೆಯುವುದು ಮತ್ತು ಕೈಯಿಂದ ಕಲ್ಲು, ಮಣ್ಣು ಇತ್ಯಾದಿ ವಸ್ತುಗಳನ್ನು ತೆಗೆದು ಹಾಕಬೇಕಾಗುತ್ತದೆ. ಅದು ಅಪೇಕ್ಷಣೀಯವೇ ಆಗಿದೆ. ಕೇವಲ 'ನಿಧಿ' ‘ನಿಧಿ' ಎಂದು ಜಪಿಸಿದ ಮಾತ್ರಕ್ಕೆ (ಶಬ್ದಮಾತ್ರದಿಂದ) ಅದು ಹೊರಗೆ ಬರುವುದಿಲ್ಲ. ಹಾಗೆಯೇ ಮಾಯಾ ಕಾರ್ಯದಿಂದ ಮುಚ್ಚಿಹೋದಂತೆ ಆಗಿರುವ ಸ್ವಸ್ವರೂಪವು ಜ್ಞಾನಿಯಾದವನಿಂದ ಪಡೆಯುವ ಉಪದೇಶ, ಮನನ ಮತ್ತು ಧ್ಯಾನದಿಂದ ಮನಸ್ಸು ನಿರ್ಮಲವಾಗಿ ಅನುಭವಕ್ಕೆ ಬರುತ್ತದೆ. ಯಾವುದೇ ಕುತರ್ಕ, ಕುಯುಕ್ತಿಗಳಿಂದ ಆತ್ಮಜ್ಞಾನ ಸಿದ್ಧಿಸುವುದಿಲ್ಲ.

ವಿವರಣೆ:
ಎಲ್ಲಾದರೂ ಚಿನ್ನದ ನಿಕ್ಷೇಪವಿದೆ ಎಂದು ಗೊತ್ತಾಗಬೇಕಾದರೆ ಯಾರಿಗಾದರೂ ಒಂದು ಹಿಡಿ ಮಣ್ಣಿನೊಳಗೆ ಚಿನ್ನದ ರೇಖೆಗಳು ಕಾಣಬೇಕಾಗುತ್ತದೆ. ಬಳಿಕ ತಜ್ಞರ ಸಲಹೆ ಮೇರೆಗೆ ಆ ಸ್ಥಳವನ್ನು ಶೋಧಿಸಿ, ಕಲ್ಲು_ಮಣ್ಣನ್ನು ತೆಗೆದು ಹೊರಹಾಕುವ ಮೂಲಕ ದೊಡ್ಡ ಸುವರ್ಣ ನಿಧಿಯನ್ನು ಪಡೆಯಬಹುದಾಗಿರುತ್ತದೆ. ಬಂಗಾರ ಬೇಕು ಎಂಬ ಹಂಬಲದಿಂದ ಗಣಿಯ ಬಾಗಿಲಲ್ಲಿ ನಿಂತು ಚಿನ್ನ, ಚಿನ್ನ ಎಂದು ಕಿರುಚಿದರೆ ಏನೂ ಬರುವುದಿಲ್ಲ, ಯಾರು ಸಹ ತಂದು ಕೊಡುವುದೂ ಇಲ್ಲ. ಹಾಗೆಯೇ ಕುತರ್ಕಗಳಿಂದ ( ತರ್ಕದಿಂದಲೇ ಪ್ರಯೋಜನವಿಲ್ಲ ಎಂದು ಸದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳು ಕಠೋಪನಿಷತ್ತಿನ ವಾಕ್ಯವೊಂದನ್ನು ಹೇಳಿ ವ್ಯಾಖ್ಯಾನಿಸಿರುತ್ತಾರೆ) ದುರ್ಯುಕ್ತಿಯಿಂದ ಉಪಯೋಗವಿಲ್ಲ. ಹೇಗೆ ಒಬ್ಬನು ನಿಧಿಯಿರುವ ಭೂಮಿಯ ಮೇಲೇ ಪದೇ ಪದೇ ಸುತ್ತುತ್ತಿದ್ದರೂ ಅವನ ಅರಿವಿಗೆ ಬಾರದೇ ಹೋಗುತ್ತದೆಯೋ, ಹಾಗೆಯೇ ಮಾಯೆಯಿಂದ ಮುಚ್ಚಲ್ಪಟ್ಟಿರುವ ಸ್ವಸ್ವರೂಪವು ಜ್ಞಾನಿಯ ಉಪದೇಶವಿಲ್ಲದೆ ತಿಳಿಯುವುದಿಲ್ಲ ಎಂದು ಹೇಳುತ್ತಾರೆ.

'ಯಥಾsಪಿ ಹಿರಣ್ಯನಿಧಿಂ ನಿಹಿತಮಕ್ಷೇತ್ರಜ್ಞಾ ಉಪರ್ಯುಪರಿ ಸಂಚರಂತೋ ನ ವಿಂದೇಯುಃ' (ನಿಧಿಕ್ಷೇತ್ರವನ್ನು ಅರಿಯದವರು ಮತ್ತೆಮತ್ತೆ ನೆಲದಲ್ಲಿ ಹುದುಗಿರುವ ನಿಧಿಯ ಮೇಲೆಯೇ ನಡೆಯುತ್ತಿದ್ದರೂ ಅದನ್ನು ಹೇಗೆ ಪಡೆಯಲಾಗುವುದಿಲ್ಲವೋ..) ಎಂಬ ಛಾಂದೋಗ್ಯ ಉಪನಿಷತ್ತಿನ ವಾಕ್ಯವೂ, ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲಾ ತಿರುಗಿದಳು ಮತ್ತು ಕೈಯಲ್ಲಿ ಬೆಣ್ಣೆ ಹಿಡಿದುಕೊಂಡು ತುಪ್ಪಕ್ಕೆ ಅಲೆದರು ಎಂಬ ನಾಣ್ಣುಡಿಯಂತೆ ಜ್ಞಾನಿಯಾದವನಿಂದ ಉಪದೇಶ ಪಡೆಯುವುದು ಬಿಟ್ಟು ಕುತರ್ಕಗಳನ್ನು ಮಾಡಿಕೊಂಡಿದ್ದರೆ ಯಾವ ಪ್ರಯೋಜನವೂ ಇಲ್ಲ ಎಂಬರ್ಥದಲ್ಲಿ ಹೇಳುತ್ತಾರೆ.
................................

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ