Part - 48



ಮೂಲ:
ವಿಷಯಾಶಾ_ಮಹಾಪಾಶಾದ್ಯೋ ವಿಮುಕ್ತಃ ಸುದುಸ್ತ್ಯಜಾತ್ |
ಸ ಏವ ಕಲ್ಪತೇ ಮುಕ್ತ್ಯೈ ನಾನ್ಯಃ ಷಟ್_ಶಾಸ್ತ್ರವೇದ್ಯಪಿ ||೭೮||

ಪ್ರತಿಪದಾರ್ಥ:
ಸುದುಸ್ತ್ಯಜಾತ್ = ಬಿಡಿಸಿಕೊಳ್ಳಲು ಅಶಕ್ಯವಾಗಿರುವ, ವಿಷಯಾಶಾ_ಮಹಾಪಾಶಾತ್ = ವಿಷಯಾಭಿಲಾಷೆ ಎಂಬ ಮಹಾಪಾಶದಿಂದ, ಯಃ = ಯಾರು, ವಿಮುಕ್ತಃ = ಮುಕ್ತನಾಗುತ್ತಾನೋ, ಸಃ ಏವ = ಅವನೇ , ಮುಕ್ತ್ಯೈ = ಮುಕ್ತಿಗೆ, ಕಲ್ಪತೇ = ಅರ್ಹನಾಗುತ್ತಾನೆ, ಷಟ್_ಶಾಸ್ತ್ರವೇದೀ ಅಪಿ = ಆರು ಶಾಸ್ತ್ರಗಳನ್ನು ಬಲ್ಲವನಾದರೂ, ಅನ್ಯಃ = ಮತ್ತೊಬ್ಬನು, = ಆಗುವುದಿಲ್ಲ (ಅರ್ಹ).

ತಾತ್ಪರ್ಯ:
ತ್ಯಜಿಸಲು ಸರ್ವಥಾ ಅಶಕ್ಯವಾಗಿರುವ ವಿಷಯಾಭಿಲಾಷೆಯಿಂದ ಯಾರು ಬಿಡುಗಡೆ ಹೊಂದುವನೋ ಅವನೇ ಮೋಕ್ಷಕ್ಕೆ ಅರ್ಹನಾಗುತ್ತಾನೆ. ಆರು ಶಾಸ್ತ್ರಗಳನ್ನು ತಿಳಿದವನಿಗೂ ಇಂತಹ ಅರ್ಹತೆಯು ದುರ್ಲಭವಾಗಿರುತ್ತದೆ.

ವಿವರಣೆ:
ಅನರ್ಥಕಾರಿಯಾದ ವಿಷಯಗಳಲ್ಲೂ ಮನುಷ್ಯನು ಮೋಹವನ್ನಿಟ್ಟುಕೊಳ್ಳುತ್ತಾನೆ. ಅದರಿಂದ ಪಾಠವನ್ನು ಕಲಿತರೂ ವಿಷಯಾಭಿಲಾಷೆಯನ್ನು ಬಿಡಲು ಅಶಕ್ಯನಾಗುತ್ತಾನೆ. ಇಂತಹ ಪುರುಷನು (ಪುರುಷತ್ವದ ಬಗ್ಗೆ ಮೊದಲನೆಯ ಭಾಗದಲ್ಲೇ ವಿವರಣೆಯಿದೆ) ಆರು ಶಾಸ್ತ್ರಗಳನ್ನು ಬಲ್ಲವನಾದರೂ ಮೋಕ್ಷಕ್ಕೆ ಅರ್ಹನಾಗುವುದಿಲ್ಲ. ಬಿಡಲು ಅಸಾಧ್ಯವಾದ ವಿವಿಧ ರೀತಿಯ ಪ್ರಲೋಭನೆಗಳಿಂದ ಯಾರು ವಿಮುಖನಾಗುತ್ತಾನೋ ಆತನೇ ಸಾಕ್ಷಾತ್ಕಾರದ ಚಿಂತನೆಗೆ ಅರ್ಹನಾಗುತ್ತಾನೆ ಎಂದು ಹೇಳುತ್ತಾರೆ.
...........

ಟಿಪ್ಪಣಿ:
ಆರು ಶಾಸ್ತ್ರಗಳು (ಷಡ್ದರ್ಶನಗಳು) : ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸಾ, ವೇದಾಂತ

ಅಡಿ ಟಿಪ್ಪಣಿ_ :
ಕೆಲವೆಡೆ ದರ್ಶನಗಳನ್ನು ಚಾರ್ವಾಕ, ಜೈನ, ಬೌದ್ಧವನ್ನು ಸೇರಿಸಿ ಒಂಬತ್ತು ಎನ್ನುತ್ತಾರೆ. ಇವು ವೇದ ಪ್ರಮಾಣವನ್ನು ಒಪ್ಪುವುದಿಲ್ಲ, ಹಾಗಾಗಿ ಶಂಕರರ ಎಲ್ಲ ರಚನೆಗಳಲ್ಲೂ ಆರಕ್ಕೇ ಪ್ರಾಮುಖ್ಯವಿದೆ.

ಅಡಿ ಟಿಪ್ಪಣಿ_೨:
ನ್ಯಾಯ ದರ್ಶನವು ಗೌತಮ ಮಹರ್ಷಿಯ ನ್ಯಾಯಸೂತ್ರ, ವೈಶೇಷಿಕವು ಕಣಾದ ಋಷಿಯ ಸೂತ್ರಗಳು, ಸಾಂಖ್ಯವು ಸಾಂಖ್ಯ ಕಾರಿಕೆಗಳಿಂದ, ಯೋಗವು ಪತಂಜಲಿಯ ಸೂತ್ರಗಳಿಂದ, ಮೀಮಾಂಸೆಯು ಜೈಮಿನಿ ಮಹರ್ಷಿಗಳ ಧರ್ಮಸೂತ್ರ, ವೇದಾಂತವು ಶಾರೀರಕ ಮೀಮಾಂಸೆ ಅಥವಾ ಬ್ರಹ್ಮಸೂತ್ರ(ಬಾದರಾಯಣ ಕೃತ) ಗಳ ಮೂಲಕ ತೆರೆದುಕೊಳ್ಳುತ್ತವೆ.
.........

ಕಾಮೆಂಟ್‌ಗಳು