Part - 39




ಮೂಲ:
ಮೋಕ್ಷಸ್ಯ ಹೇತುಃ ಪ್ರಥಮೋ ನಿಗದ್ಯತೇ
ವೈರಾಗ್ಯಮತ್ಯಂತಮನಿತ್ಯ_ವಸ್ತುಷು |
ತತಃ ಶಮಶ್ಚಾಪಿ ದಮಸ್ತಿತಿಕ್ಷಾ
ನ್ಯಾಸಃ ಪ್ರಸಕ್ತಾಖಿಲಕರ್ಮಣಾಂ ಭೃಷಮ್ ||೬೯||

ಪ್ರತಿಪದಾರ್ಥ:
ಅನಿತ್ಯ_ವಸ್ತುಷು =ಅಶಾಶ್ವತ ವಸ್ತುಗಳಲ್ಲಿ, ಅತ್ಯತಂ ವೈರಾಗ್ಯಂ=ತೀವ್ರ ವೈರಾಗ್ಯವೇ, ಮೋಕ್ಷಸ್ಯ = ಮೋಕ್ಷಕ್ಕೆ, ಪ್ರಥಮ ಹೇತುಃ=ಮೊದಲ ಹೆಜ್ಜೆ, ನಿಗದ್ಯತೇ=ಹೇಳಲಾಗಿದೆ, ತತಃ=ಬಳಿಕ, ಶಮಃ=ಶಮವು, ಅಪಿ ಚ ದಮಃ=ಮತ್ತು ದಮವು, ತಿತಿಕ್ಷಾ=ತಿತಿಕ್ಷೆಯು, ಪ್ರಸಕ್ತ_ಅಖಿಲ_ಕರ್ಮಣಾಂ=ಪ್ರಾಪ್ತವಾದ ಎಲ್ಲ ಕರ್ಮಗಳನ್ನೂ, ಭೃಷಮ್=ಕೊನೆ_ಮೊದಲಾಗಿ, ನ್ಯಾಸಃ=ಬಿಡುವುದು.

ತಾತ್ಪರ್ಯ:
ಅನಿತ್ಯ (ಅಶಾಶ್ವತ) ವಸ್ತುಗಳ ಪ್ರತಿಯಾಗಿ ಹುಟ್ಟುವ ತೀವ್ರತರವಾದ ವೈರಾಗ್ಯ ಭಾವವೇ ಮೋಕ್ಷಕ್ಕೆ ಮೊದಲನೆಯ ಹೆಜ್ಜೆಯಾಗುತ್ತದೆ. ಶಮ, ದಮ, ತಿತಿಕ್ಷೆ ಹಾಗೂ ಪ್ರಾಪ್ತವಾಗಿರುವ ಕರ್ಮಗಳ ಸಂಪೂರ್ಣ ತ್ಯಾಗವು ಅನಂತರದ ಸಾಧನಗಳಾಗಿರುತ್ತವೆ.

ವಿವರಣೆ:
ಈ ಶ್ಲೋಕವು ಪುನರುಕ್ತಿಯಂತೆ ಕಂಡರೂ ಗುರು_ಶಿಷ್ಯ ಸಂವಾದದ ನಿಟ್ಟಿನಲ್ಲಿ ಮತೊಮ್ಮೆ ಹೇಳಲಾಗಿದೆ. ಈಗಾಗಲೇ ಸಾಧನ ಚತುಷ್ಟಯದ ಬಗ್ಗೆ ನಾವು ವಿವರವಾಗಿ ತಿಳಿದುಕೊಂಡಿದ್ದೇವೆ. ನಮ್ಮ ಬ್ಲಾಗ್ ಲೋಕದ ಮಿತ್ರರು ವಿದ್ವತ್ಪೂರ್ಣವಾದ ಚರ್ಚೆಯ ಮೂಲಕ ಅದನ್ನು ಇನ್ನಷ್ಟು ಸ್ಫುಟಗೊಳಿಸಿದ್ದಾರೆ. ಇಲ್ಲಿ ಮತ್ತೊಮ್ಮೆ ಅದೇ ವಿಷಯಗಳು  ಬರುತ್ತವೆ. ಮೊದಲಿಗೆ 'ಬ್ರಹ್ಮಸತ್ಯಂ ಜಗನ್ಮಿಥ್ಯಾ' ಎಂದು ನಿಶ್ಚಯಿಸಿಕೊಳ್ಳುವುದು. ಇಹ ಮತ್ತು ಪರದಲ್ಲಿನ (ಇಹಾಮುತ್ರಫಲಭೋಗ ವೈರಾಗ್ಯ) ವಸ್ತು ವಿಷಯಗಳ ಬಗ್ಗೆ ಜಿಗುಪ್ಸೆ ತಳೆಯುವುದು. ಶಮ_ದಮಾದಿ ಆರು ಗುಣಗಳನ್ನು (ತಿತಿಕ್ಷಾ) ಮೈಗೂಡಿಸಿಕೊಳ್ಳುವುದು. ಮೋಕ್ಷಕ್ಕೆ ಕಾರಣವಾಗುವ ಸಾಧನಗಳಲ್ಲಿ ಎಲ್ಲದರಲ್ಲೂ ಸಂಪೂರ್ಣ ವೈರಾಗ್ಯ ಭಾವವನ್ನು ತಳೆಯುವುದೇ ಮೊಟ್ಟ ಮೊದಲನೆಯ ಅಂಶ ಎಂದು ಪ್ರಸ್ತುತ ಶ್ಲೋಕದಲ್ಲಿ ವಿಶೇಷವಾಗಿ ಹೇಳುತ್ತಾರೆ. ಉಪದೇಶದ ಆರಂಭದಲ್ಲಿ ಗುರುವು ಶಿಷ್ಯನಿಗೆ, ನೀನು ಈ  ಗುಣಗಳನ್ನೇ ಅನುಸರಿಸಬೇಕು ಮತ್ತು ಅದರಿಂದಲೇ ಮುಮುಕ್ಷುತ್ವದ ದಾರಿ ತೆರೆಯುತ್ತದೆ ಎಂದು ಹೇಳುತ್ತಾರೆ.
............

ಕಾಮೆಂಟ್‌ಗಳು

  1. ತಿತಿಕ್ಷೆಯ ಬಗೆಗೆ ನೀವು ಭಾಗ ೧೩ರಲ್ಲಿ ಚೆನ್ನಾಗಿ ವಿವರಿಸಿದ್ದೀರಿ. ಅದಕ್ಕೆ ಒಂದೇ ಹೆಚ್ಚಿನ ಅಂಶವನ್ನು ಸೇರಿಸಬಹುದೇನೊ? ನನಗೆ ಕೇಡು ಮಾಡುವವನಿಗೂ ಒಳ್ಳೆಯದೇ ಆಗಲಿ ಎಂದು ಹೃತ್ಪೂರ್ವಕವಾಗಿ ಆಶಿಸುವುದು ತಿತಿಕ್ಷೆ ಎಂದು ಹೇಳಬಹುದು. ‘ಸುಧಾ’ ವಾರಪತ್ರಿಕೆಯಲ್ಲಿ ಅನೇಕ ವರ್ಷಗಳ ಹಿಂದೆ ಪ್ರಕಟವಾದ ‘ತಿತಿಕ್ಷೆ’ ಎನ್ನುವ ಕಥೆಯಲ್ಲಿ ಈ ಮಾತನ್ನು ಸ್ಪಷ್ಟಗೊಳಿಸಲಾಗಿತ್ತು.

    ಪ್ರತ್ಯುತ್ತರಅಳಿಸಿ
  2. ದುಃಖವನ್ನು ಪ್ರತೀಕಾರ ತೋರದೆ ಸಹಿಸಿಕೊಳ್ಳುವುದು (ಅದನ್ನೂ ಹೇಳಿಕೊಳ್ಳದೆ) ಯೋಗಿಯ ಉತ್ತಮ ಲಕ್ಷಣ ಎನ್ನುತ್ತಾರೆ. ನೀವು ಹೇಳಿದಂತೆ 'ಕೇಡು ಮಾಡಿದವನಿಗೂ (ಅಥವಾ ಬಯಸಿದವನಿಗೆ) ಒಳ್ಳೆಯದಾಗಲಿ' ಎನ್ನುವುದು ಜ್ಞಾನಿಯ ಲಕ್ಷಣವೇ ಆಗುತ್ತದೆ. ಅದು ಗುರುವಿನ ಕಾರುಣ್ಯ ಭಾವದ ರೂಪವಾಗಿರುತ್ತದೆ. ನೀವು ಸೇರಿಸಿರುವ ಅಂಶವು ಯಥೋಚಿತವಾಗಿದೆ ಮತ್ತು ಅದರಿಂದ ತಿತಿಕ್ಷೆಯ ವಿವರಣೆ ಇನ್ನಷ್ಟು ತಿಳಿಯಾದಂತಾಗಿದೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ