Part - 41


ಮೂಲ:
ಯದ್ಬೋದ್ಧವ್ಯಂ ತವೇದಾನೀಮಾತ್ಮಾ ನಾತ್ಮ_ವಿವೇಚನಮ್ |
ತದುಚ್ಯತೇ ಮಯಾ ಸಮ್ಯಕ್ ಶ್ರುತ್ವಾssತ್ಮನ್ಯವಧಾರಯ ||೭೧||

ಪ್ರತಿಪದಾರ್ಥ:
ಯತ್=ಯಾವ, ಆತ್ಮಾನಾತ್ಮವಿವೇಚನಮ್=ಆತ್ಮನಾತ್ಮಗಳ ವಿವೇಚನೆಯು, ಇದಾನೀಂ=ಈಗ, ತವ ಬೋದ್ಧವ್ಯಂ=ನೀನು ತಿಳಿಯಬೇಕಾಗಿದೆಯೋ, ತತ್=ಅದು, ಮಯಾ=ನನ್ನಿಂದ, ಉಚ್ಯತೇ=ಹೇಳಲ್ಪಡುತ್ತದೆ, ಸಮ್ಯಕ್=ಚೆನ್ನಾಗಿ, ಶ್ರುತ್ವಾ=ಕೇಳಿ, ಆತ್ಮನಿ=ಮನಸ್ಸಿನಲ್ಲಿ, ಅವಧಾರಯ=ನಿಶ್ಚಯಿಸಿಕೊಳ್ಳುವವನಾಗು.

ತಾತ್ಪರ್ಯ:
ಇದೀಗ ಯಾವ ಆತ್ಮಾನಾತ್ಮವಿವೇಚನೆಯನ್ನು ನೀನು ತಿಳಿದುಕೊಳ್ಳಬೇಕಾಗಿದೆಯೋ, ಅದನ್ನು ಹೇಳುತ್ತೇನೆ. ಚೆನ್ನಾಗಿ ಕೇಳುವ ಮೂಲಕ ಮನಸ್ಸಿನಲ್ಲಿ ನಿಶ್ಚಯಿಸಿಕೊಳ್ಳುವವನಾಗು.

ವಿವರಣೆ:
ವೇದಾಂತದ ವಿಚಾರಗಳನ್ನು ಗುರುಮುಖೇನ ಉಪದೇಶಿಸಿಕೊಂಡು ಬದುಕಿದ್ದಾಗಲೇ ಮೋಕ್ಷವನ್ನು (ಜೀವನ್ಮುಕ್ತಿ) ಪಡೆಯಬೇಕು ಎಂದು ಗುರುವು ಶಿಷ್ಯನಿಗೆ (ವಿದ್ವಾಂಸ) ಹೇಳಿದ್ದನ್ನು ಹಿಂದಿನ ಶ್ಲೋಕದಲ್ಲಿ ತಿಳಿದೆವು. ವೇದಾಂತದ ವಿಷಯಗಳೆಂದರೆ ಆತ್ಮಾನಾತ್ಮ ವಿವೇಚನೆಯನ್ನು ಮಾಡುವುದು ಮತ್ತು ಆತ್ಮಬೋಧೆಯಾಗುತ್ತಲೇ ಜ್ಞಾನವೂ ಪ್ರಾಪ್ತವಾಗುತ್ತದೆ ಎಂಬ ಅರ್ಥದಲ್ಲಿ ಹೇಳಿರುತ್ತಾರೆ. ಹಾಗಾಗಿ ಮೋಕ್ಷಕ್ಕೆ ಕಾರಣವಾಗುವ ವಿವೇಕವನ್ನು ನಾನು ನಿನಗೆ ಹೇಳುತ್ತೇನೆ. ಅದನ್ನು ನೀನು ಚೆನ್ನಾಗಿ ಕೇಳಿ ಮನಸ್ಸಿನಲ್ಲಿ ದೃಢಪಡಿಸಿಕೊಳ್ಳಬೇಕು. ಮನನ_ನಿಧಿಧ್ಯಾಸನಗಳ ತರುವಾಯ ನಿರ್ವಾಣ ಸುಖವು ಅನುಭವಕ್ಕೆ ಬರುತ್ತದೆ ಎಂದು ಪ್ರಸ್ತುತ ಶ್ಲೋಕದಲ್ಲಿ ಗುರುವು ಶಿಷ್ಯನಿಗೆ ಹೇಳುತ್ತಾರೆ.

ಇದು ಮುಂದಿನ ಸುಮಾರು ೪೦೦ ಶ್ಲೋಕಗಳಲ್ಲಿ ವಿವರಿಸಿರುವ ಆತ್ಮಬೋಧೆಯ ವಿಚಾರಕ್ಕೆ ಸಣ್ಣ ಪೀಠಿಕೆ ಎನ್ನಬಹುದು. ಇಲ್ಲಿಂದ ಮಂದೆ ಸ್ಥೂಲಶರೀರದ ವರ್ಣನೆ, ವಿಷಯ ನಿಂದೆ, ಅಧ್ಯಾಸ ನಿರೂಪಣೆ, ಮಾಯೆಯ ನಿರೂಪಣೆ, ಅನಾತ್ಮ ಮತ್ತು ಆತ್ಮೈಕ್ಯ ತತ್ತ್ವದ ಬೋಧನೆ, ಪಂಚಕೋಶಗಳ ವಿವರಣೆ ಮುಂದಾಗಿ ಎಲ್ಲವೂ ಗುರು_ಶಿಷ್ಯ ಸಂವಾದದ ಧಾಟಿಯಲ್ಲಿ ಸಾಗುತ್ತದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ