Part - 45


ಮೂಲ:
ಯ ಏಷು ಮೂಢಾ ವಿಷಯೇಷು ಬದ್ಧಾ
ರಾಗೋರುಪಾಶೇನ ಸುದುರ್ದಮೇನ |
ಆಯಾಂತಿ ನಿರ್ಯಾಂತ್ಯಧ ಊರ್ಧ್ವಮುಚ್ಚೈಃ
ಸ್ವಕರ್ಮದೂತೇನ ಜವೇನ ನೀತಾ ||೭೫||

ಪ್ರತಿಪದಾರ್ಥ:
ಯೇ ಮೂಢಾಃ=ಯಾವ ಮೂರ್ಖರು, ಏಷು ವಿಷಯೇಷು=ಈ ವಿಷಯಗಳಲ್ಲಿ, ಸುದುರ್ದಮೇನ=ಪ್ರಬಲವಾದ, ರಾಗೋರುಪಾಶೇನ=ರಾಗವೆಂಬ ಬಲವಾದ ಪಾಶದಿಂದ, ಬದ್ಧಾಃ=ಬಂಧಿತರಾಗಿರುತ್ತಾರೋ, ಸ್ವಕರ್ಮ=ತಮ್ಮ ಕರ್ಮವೆಂಬ, ದೂತೇನ=ದೂತನಿಂದ, ಜವೇನ ನೀತಾ = ಶೀಘ್ರವಾಗಿ ಒಯ್ಯಲ್ಪಟ್ಟು, ಉಚ್ಚೈಃ=ವಿಷೇಶವಾಗಿ, ಊರ್ಧ್ವಂ ನಿರ್ಯಾಂತಿ = ಮೇಲಕ್ಕೆ ಹೋಗುತ್ತಾರೆ, ಅಧಃ ಆಯಾಂತಿ = ಕೆಳಕ್ಕೆ ಬರುತ್ತಾರೆ.

ತಾತ್ಪರ್ಯ:
ಯಾವ ಮೂರ್ಖರು ಈ (ಇಂದ್ರಿಯ ಗ್ರಾಹ್ಯ) ವಿಷಯಗಳಲ್ಲಿ ಪ್ರಬಲವಾದ 'ರಾಗ' ಎಂಬ ಪಾಶದಲ್ಲಿ ಬಂಧಿತರಾಗುತ್ತಾರೋ ಅವರು ಸ್ವಕರ್ಮವೆಂಬ ದೂತನಿಂದ ವೇಗವಾಗಿ ಒಯ್ಯಲ್ಪಟ್ಟು ಮೇಲಕ್ಕೂ, ಕೆಳಕ್ಕೂ ಅಲೆಯುತ್ತಿರುತ್ತಾರೆ.

ವಿವರಣೆ:
ಸ್ಥೂಲ ಶರೀರದ ವರ್ಣನೆಯ ಬಳಿಕ , ದೇಹದ ಇಂದ್ರಿಯಗಳನ್ನು ಪ್ರಚೋದಿಸುವಂತಹ ವಿಷಯಗಳ ಬಗ್ಗೆ ಅನಾಸಕ್ತಿಯನ್ನು ತಾಳುವುದು ಹೇಗೆ ಮತ್ತು ಅಂತಹ ವಿಷಯಗಳು ಯಾವುವು ಎಂಬುದನ್ನು ಆ ವಿಷಯಗಳ ನಿಂದನೆಯ ಮೂಲಕವೇ ಇಲ್ಲಿ ತೋರ್ಪಡಿಸುತ್ತಾರೆ. ಜ್ಞಾನೇಂದ್ರಿಯ_ಕರ್ಮೇಂದ್ರಿಯಗಳನ್ನು ಉತ್ತೇಜಿಸಿ ಮಮಕಾರ ಹುಟ್ಟಿಸುವ ವಿಷಯಗಳಲ್ಲಿ 'ರಾಗ'ವು ಅತ್ಯಂತ ಪ್ರಬಲವಾದುದು ಮತ್ತು ಯಾರು (ಆತನನ್ನು ಮೂರ್ಖ ಎಂದು ಸಂಬೋಧಿಸುತ್ತಾರೆ) ಅದರ ಪಾಶದಲ್ಲಿ ಬಂಧಿತರಾಗುತ್ತಾರೋ ಅವರು ಸ್ವಕರ್ಮಗಳ ಫಲದಿಂದ ಮೇಲಿನ ಮತ್ತು ಅಧೋಲೋಕಗಳ ಯಾತ್ರೆಯನ್ನು ಮಾಡುತ್ತಲೇ ಇರುತ್ತಾರೆ ಎಂದು ಹೇಳುತ್ತಾರೆ.

ರಾಗ ಎಂದರೆ ಬಣ್ಣ ಅಥವಾ ಆಕರ್ಷಣೆ ಎಂದುಕೊಂಡರೆ ವಿರಾಗ ಎನ್ನುವುದು ಅದರ ವಿರುದ್ಧಾರ್ಥಕವಾಗಿ ಬರುತ್ತದೆ. ತೋರಿಕೆಯ ನಡತೆ, ಮಾತಿಗೆ ಮರುಳಾಗಿ ಅದರ ಬಂಧನಕ್ಕೆ ಸಿಲುಕಿದವರು ನಷ್ಟವನ್ನು ಅನುಭವಿಸದೆ ಹೊರಬಂದ ಉದಾಹರಣೆ ಈ ಜಗತ್ತಿನಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಹಗ್ಗದಿಂದ ಬಲವಾಗಿ ಬಂಧಿಸಲ್ಪಟ್ಟ ಪಶುವು ಬಿಡಿಸಿಕೊಳ್ಳಲಾಗದೆ ಹೇಗೆ ನಿಂತಲ್ಲೇ ಸುತ್ತುತ್ತದೆಯೋ ಹಾಗೆ, ರಾಗದ ಪಾಶಕ್ಕೆ ಸಿಲುಕುವ ಮೂಢರು ತಾವು ಮಾಡುವ ಕರ್ಮಗಳ ಫಲವಾಗಿ ಮೋಕ್ಷವು ಸಿಗದೆ ಸ್ವರ್ಗಾದಿ ಮೇಲಿನ ಲೋಕಗಳು ಮತ್ತು ಅಧೋಲೋಕವನ್ನು ಕಾಣುತ್ತಲೇ ಇರುತ್ತಾರೆ ಎಂದು ಹೇಳುತ್ತಾರೆ. ಸ್ವಕರ್ಮ ಎಂದರೆ ಈ ಜನ್ಮದಲ್ಲಿ ಮಾಡುವ ಪಾಪ_ಪುಣ್ಯ ಕಾರ್ಯಗಳೆಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ಪುಣ್ಯಕಾರ್ಯಗಳ ಫಲವಾಗಿ ಸ್ವರ್ಗಪ್ರಾಪ್ತಿಯಾದರೆ ಪಾಪವು ಅಧೋಗತಿಗೆ ತಳ್ಳುತ್ತದೆ. ಸಾಕ್ಷಾತ್ಕಾರಕ್ಕೆ ಸ್ವರ್ಗಸುಖದಿಂದಲೂ ವೈರಾಗ್ಯ ಬೇಕು ಎನ್ನುವುದನ್ನು ನಾವು ಈಗಾಗಲೇ 'ತದ್ವೈರಾಗ್ಯಂ ' ಎಂಬ ಶ್ಲೋಕದಲ್ಲಿ ತಿಳಿದಿದ್ದೇವೆ. ಹಾಗಾಗಿ 'ರಾಗ'ದ ಪ್ರಭಾವದಿಂದ ನಡೆಸುವ ಕರ್ಮಗಳು ಜನ್ಮಾಂತರಕ್ಕೆ ಕಾರಣವಾಗುತ್ತವೆಯೇ ಹೊರತು ಆತ್ಮಜ್ಞಾನಕ್ಕೆ ಅಲ್ಲ ಎನ್ನುವುದನ್ನು ಈ ಶ್ಲೋಕದ ಮೂಲಕ ತಿಳಿಯಬಹುದು.
............

ಕಾಮೆಂಟ್‌ಗಳು