Part - 44



ಮೂಲ:
ಪರಸ್ಪರಾಂಶೈರ್ಮಿಲಿತಾನಿ ಭೂತ್ವಾ
ಸ್ಥೂಲಾನಿ ಚ ಸ್ಥೂಲಶರೀರ_ಹೇತವಃ |
ಮಾತ್ರಾ ಸ್ತದೀಯಾ ವಿಷಯಾ ಭವಂತಿ
ಶಬ್ದಾದಯಃ ಪಂಚ ಸುಖಾಯ ಭೋಕ್ತುಃ ||೭೪||

ಪ್ರತಿಪದಾರ್ಥ:
ಪರಸ್ಪರ_ಅಂಶೈಃ=ಪರಸ್ಪರ ಅಂಶಗಳಿಂದ, ಮಿಲಿತಾನಿ=ಸೇರಿಕೊಂಡಿರುವ, ಸ್ಥೂಲಾನಿ ಚ ಭೂತ್ವಾ=ಸ್ಥೂಲಗಳಾಗಿ, ಸ್ಥೂಲಶರೀರ_ಹೇತವಃ=ಸ್ಥಳಶರೀರಕ್ಕೆ ಕಾರಣವಾಗುತ್ತದೆ, ತದೀಯಾಃ ಮಾತ್ರಾಃ=ಅವುಗಳ ಸೂಕ್ಷ್ಮಾಂಶಗಳಾದ, ಶಬ್ದಾದಯಃ ಪಂಚ=ಶಬ್ದವೇ ಮೊದಲಾದ ಐದು, ಭೋಕ್ತುಃ ಸುಖಾಯ =ಭೋಗಿಸುವವನ(ಜೀವನ) ಸುಖಕ್ಕಾಗಿ, ವಿಷಯಾ ಭವಂತಿ=ವಿಷಗಳಾಗುತ್ತವೆ.

ತಾತ್ಪರ್ಯ:
ಈ ಸೂಕ್ಷ್ಮಭೂತಗಳು ಪರಸ್ಪರ ಅಂಶಗಳಲ್ಲಿ ಮಿಶ್ರವಾಗಿ ಸ್ಥೂಲಗಳಾಗಿ ಸ್ಥೂಲ ಶರೀರಕ್ಕೆ ಕಾರಣವಾಗುತ್ತವೆ. ಇವುಗಳ ಸೂಕ್ಷ್ಮಾಂಶಗಳಾದ ಅಥವಾ ಗುಣಗಳಾದ ಶಬ್ದವೇ ಮೊದಲಾದ ಐದು ಅಂಶಗಳು 'ಜೀವ'ನ ಸುಖಕ್ಕೆ ವಿಷಯಗಳಾಗುತ್ತವೆ.

ವಿವರಣೆ:
ಸಪ್ತಧಾತುಗಳು, ವಿವಿಧ ಅಂಗೋಪಾಂಗಳಿಂದ ಕೂಡಿ ನಾನು, ನನ್ನದು ಎಂಬ ಮಮಕಾರಕ್ಕೆ (ಮೋಹಕ್ಕೆ) ಆಸ್ಪದವಾಗಿರುವ ದೇಹವನ್ನು ಪಂಡಿತರು ಸ್ಥೂಲ ಶರೀರ ಎಂದು ಹೇಳಿರುವುದನ್ನು ತಿಳಿದೆವು. ಆಕಾಶಾದಿ ಪಂಚಭೂತಗಳು ಪರಸ್ಪರ ಸೇರಿಕೊಂಡು ಸ್ಥೂಲಗಳಾಗಿ ಸ್ಥೂಲ ಶರೀರಕ್ಕೆ ಕಾರಣವಾಗುತ್ತದೆ. ಶಬ್ದವೇ ಮೊದಲಾದ ಐದು ಗುಣಗಳು ಈ ಪಂಚಭೂತಗಳ ಸೂಕ್ಷ್ಮಾಂಶಗಳಾಗಿದ್ದು ಸ್ಥೂಲ ಶರೀರದ 'ಜೀವ'ನ ಸುಖಕ್ಕೆ(ಮತ್ತು ದುಃಖಕ್ಕೆ) ವಿಷಯಗಳಾಗುತ್ತವೆ ಎಂದು ಹೇಳುತ್ತಾರೆ.

ಪಂಚಭೂತಗಳು ಹಾಗೂ ಶಬ್ದಾದಿ ಪಂಚಗುಣಗಳು ಹೇಗೆ ಅಂಶಗಳಾಗಿ ಪರಸ್ಪರ ಮಿಶ್ರವಾಗಿ ಸ್ಥೂಲ ಶರೀರ ಹಾಗೂ 'ಜೀವ'ನ ಹುಟ್ಟಿಗೆ ಕಾರಣವಾಗುತ್ತವೆ ಎನ್ನುವುದನ್ನು ಕೆಲ ಶ್ಲೋಕಗಳ ಅನಂತರ ಬರುವ ಪಂಚಕೋಶಗಳ ನಿರೂಪಣೆಯಲ್ಲಿ ವಿವರಿಸಲಾಗಿದೆ. ಹಾಗಾಗಿ ಇಲ್ಲಿ ಸಪ್ತಧಾತು, ಪಂಚಭೂತ ಹಾಗೂ ಪಂಚಗುಣಗಳನ್ನು ಪೀಠಿಕೆಯಾಗಿ ತೆಗೆದುಕೊಳ್ಳಲಾಗಿದೆ ಎನ್ನಬಹುದು.
...........
ಟಿಪ್ಪಣಿ:
) ಸಪ್ತಧಾತುಗಳು: ಮಜ್ಜೆ, ಅಸ್ಥಿ, ಕೊಬ್ಬು, ಮಾಂಸ, ರಕ್ತ, ರೇತಸ್ಸು, ಚರ್ಮ
) ಪಂಚಭೂತಗಳು: ಆಕಾಶ, ವಾಯು, ಅಗ್ನಿ, ನೀರು, ಭೂಮಿ.
)ಪಂಚಗುಣಗಳು (ಸೂಕ್ಷ್ಮಾಂಶಗಳು) : ಶಬ್ದ, ಸ್ಪರ್ಶ, ರೂಪ, ರಸ, ಗಂಧ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ