Part -31

ಮೂಲ
ಶಬ್ದಜಾಲಂ ಮಹಾರಣ್ಯಂ ಚಿತ್ತಭ್ರಮಣಕಾರಣಮ್|
ಅತಃ ಪ್ರಯತ್ನಾಜ್ಜ್ಞಾ ತವ್ಯಂ ತತ್ತ್ವಜ್ಞಾತ್ತತ್ತ್ವಮಾತ್ಮನಃ||61||

ಪ್ರತಿಪದಾರ್ಥ

ಶಬ್ದಜಾಲಂ = ಪದಗಳ ಗುಂಪು (ಹೆಣಿಗೆ),  ಮಹಾರಣ್ಯಂ = ದಟ್ಟವಾಗಿರುವುದು, ಚಿತ್ತಭ್ರಮಣಕಾರಣಮ್ = ಮನಸ್ಸಿನ ಭ್ರಮೆಗೆ ಕಾರಣವು, ಅತಃ = ಆದುದರಿಂದ, ಪ್ರಯತ್ನಾತ್ = ಪ್ರಯತ್ನಪೂರ್ವಕವಾಗಿ, ತತ್ವಜ್ಞಾತ್ = ತಿಳಿದವರಿಂದ, ಆತ್ಮನಃ ತತ್ತ್ವಂ = ಆತ್ಮಜ್ಞಾನವನ್ನು , ಜ್ಞಾತವ್ಯಂ = ಅರಿಯಬೇಕು.

ತಾತ್ಪರ್ಯ
ಶಾಸ್ತ್ರಗಳ ಶಬ್ದಸಮೂಹವು ದಟ್ಟಾರಣ್ಯದಂತೆ ಕಾಣುವುದರಿಂದ ಮನಸ್ಸಿಗೆ ಭ್ರಮೆಯನ್ನು ಉಂಟುಮಾಡುತ್ತದೆ. ಹಾಗಾಗಿ ಆತ್ಮಜ್ಞಾನಿಯಿಂದಲೇ ತತ್ತ್ವೋಪದೇಶವನ್ನು ಪಡೆಯಬೇಕು ( ಅರಿಯಬೇಕು).

ವಿವರಣೆ
ಶಾಸ್ತ್ರಾರ್ಥಗಳ ಅಪಾರ ಶಬ್ದಸಮೂಹವು ಅಧ್ಯಯನಕ್ಕೆ ತೊಡಗಿದವನಿಗೆ ಬಹು ಕಷ್ಟವೆನಿಸಿ ಮನಸ್ಸಿಗೆ ನಕಾರಾತ್ಮಕ ಪ್ರಚೋದನೆಯನ್ನು ನೀಡಬಹುದು. ಅದರಿಂದ ಸಾಧಕನ ಬ್ರಹ್ಮ ಸಾಕ್ಷಾತ್ಕಾರದ ದಾರಿಗೆ ತೊಡಕಾಗಬಹುದು. ವೇದ, ವೇದಾಂತಗಳು ಆಕರ್ಷಣೀಯ ಉಪಮೆ, ಅಲಂಕಾರ ಛಂದಸ್ಸುಗಳಿಂದ ಕೂಡಿರುವುದರಿಂದ ಗಂಭೀರ ಅಧ್ಯಯನಕಾರರಿಗೆ ಆಹ್ಲಾದವನ್ನು ನೀಡಿ ಅದರಲ್ಲೇ ತಲ್ಲೀನರಾಗುವಂತೆ ಮಾಡುತ್ತದೆ. ಇದರಿಂದ ಮೋಕ್ಷಾಪೇಕ್ಷಿಯ ಉದ್ದೇಶಿತ ಕಾರ್ಯವು ನೆರವೇರುವುದಿಲ್ಲ. ಹಾಗಾಗಿ ನೇರವಾಗಿ ಸ್ವಾನುಭವಿಯಿಂದಲೇ ಯತಾರ್ಥ ಜ್ಞಾನವನ್ನು ಪಡೆಯಲು  ಮುಂದಾಗಬೇಕು. ವಿಚಾರ ಮಾಡದೆ ಶಾಸ್ತ್ರಾರ್ಥಗಳನ್ನು ಗ್ರಹಿಸುವುದರಿಂದ ಮನಸ್ಸು ಗೊಂದಲದ ಗೂಡಾಗುತ್ತದೆ ಎಂದು ಹೇಳುತ್ತಾರೆ.

ಆಕಸ್ಮಿಕವಾಗಿ ದಟ್ಟವಾದ ಕಾಡಿನೊಳಗೆ ಹೊಕ್ಕ ವ್ಯಕ್ತಿಗೆ ಮುಂದಿನ‌ ದಾರಿ ಕಾಣದೆ ದಿಕ್ಕು ತೋಚದಂತೆ ಆದಾಗ, ಯಾರಾದರೂ ಕಾಡಿನ ಆಂತರ್ಯ ತಿಳಿದವರು ಮಾತ್ರವೆ ಆತನನ್ನು ಕಾಪಾಡಬಹುದು. ಹೋಳಿಗೆ ಮಾಡುವ ವಿಧಾನದ ಬಗ್ಗೆ ಅದರ ತಯಾರಕನು ಹೇಳುವಷ್ಟು ನಿಖರವಾಗಿ ಕಿರಾಣಿ ಅಂಗಡಿ ಮಾಲೀಕನು ಹೇಳಲಾರನು. ಹಾಸನ, ಮಂಡ್ಯದವರು ರಾಗಿ ಮುದ್ದೆ ತಿನ್ನುವಷ್ಟು ಸಲೀಸಾಗಿ ಬಾಗಲಕೋಟೆಯ ಮಂದಿ ತಿನ್ನಲಾರರು. ಅವರು ರೊಟ್ಟಿ ಕಡಿಯುವ ರಭಸ ನೋಡಿಯೇ ಉಡುಪಿಯವರ ಹಲ್ಲು ಉದುರಿಹೋಗಬಹುದು !. ಹಣ ದುಪ್ಪಟ್ಟು ಮಾಡಿಕೊಡುತ್ತೇವೆ  ಎನ್ನುವವರ ಮಾತಿನ ಮೋಡಿಗೆ ಸಿಲುಕಿ ಅದರ ಬಲೆಯೊಳಗೆ ಬಿದ್ದು ಪರಿತಪಿಸುವುದಕ್ಕಿಂತಲೂ ಅನುಭವಿಗಳಿಂದ ತಿಳಿದು ಹೂಡಿಕೆ ಮಾಡುವುದು ಉತ್ತಮ. 
------------+------------------+----------


ಕಾಮೆಂಟ್‌ಗಳು