Part- 34




ಮೂಲ: 
ಅಕೃತ್ವಾ ಶತ್ರು ಸಂಹಾರಮಗತ್ವಾsಖಿಲಭೂಶ್ರಿಯಮ್|
ರಾಜಾsಹಮಿತಿ ಶಬ್ದಾನ್ನೋ ರಾಜಾ ಭವಿತುರ್ಮಹತಿ ||64||

ಪ್ರತಿಪದಾರ್ಥ: 
ಶತ್ರು ಸಂಹಾರಂ=ವೈರಿಗಳ ನಾಶವನ್ನು, ಅಕೃತ್ವಾ=ಮಾಡದೆ, ಅಖಿಲ_ಭೂಶ್ರಿಯಂ=ಸಮಸ್ತ ರಾಜ್ಯವನ್ನು, ಅಗತ್ವಾ=ಪಡೆಯದೆ, ಅಹಂ ರಾಜಾ ಇತಿ=ನಾನು ರಾಜ ಎಂಬ, ಶಬ್ದಾತ್=ಹೆಸರಿನಿಂದ ಮಾತ್ರ, ರಾಜಾ ಭವಿತುಂ=ಅರಸನಾಗಲು, ನ ಉ ಅರ್ಹತಿ=ಅರ್ಹನಾಗುವುದಿಲ್ಲ. 

ತಾತ್ಪರ್ಯ: 
ಶತ್ರುಗಳನ್ನು ಜಯಿಸದೆ, ರಾಜ್ಯವನ್ನು ಗೆಲ್ಲದೆ ಕೇವಲ ನಾನು ರಾಜ ಎಂದು ಹೇಳಿಕೊಂಡು ತಿರುಗುವುದರಿಂದ ಯಾರೂ ಅರಸನಾಗುವುದಿಲ್ಲ. (ರಾಜಾರ್ಹತೆಯು ಬರುವುದಿಲ್ಲ). 

ವಿವರಣೆ: 
ಒಂದು ರಾಜ್ಯದ ರಾಜ ಎನಿಸಿಕೊಳ್ಳಲು ತನ್ನ ವ್ಯಾಪ್ತಿಯ ಮುಕ್ಕಾಲು ಭಾಗದಷ್ಟು ಪ್ರಾಂತ್ಯಗಳನ್ನು ಗೆದ್ದಿರಬೇಕು ಎಂಬ ಅಲಿಖಿತ ನಿಯಮವು ಇತ್ತೆಂದು ಇತಿಹಾಸಕಾರರು ಹೇಳುತ್ತಾರೆ. ಯಾರ ಸಾಮಂತನಾಗಿಯೂ ಇರದೆ ಸ್ವತಂತ್ರ ಆಡಳಿತ ನಡೆಸುವವನನ್ನು ಸಾಮ್ರಾಟನೆಂದು ಕರೆದು ಗಜಲಕ್ಷ್ಮಿಯ ಚಿಹ್ನೆಯನ್ನು ಬಿರುದಾವಳಿಯಾಗಿ ನೀಡುವ ಪರಿಪಾಠ ಚಾಲುಕ್ಯ, ಹೊಯ್ಸಳರಲ್ಲಿ ಇದ್ದ ಬಗ್ಗೆ ದಾಖಲೆಗಳಿವೆ. ಗುರು ಎಂದೆನಿಕೊಳ್ಳಲು ಕೆಲವು ಶಿಷ್ಯರಿಗಾದರೂ ಪಾಠ ಹೇಳಿರಬೇಕಾಗುತ್ತದೆ. ಅಹಂ ಬ್ರಹ್ಮಾಸ್ಮಿ ಎಂದು ಸಾವಿರ ಬಾರಿ ಹೇಳಿಕೊಂಡ ಮಾತ್ರಕ್ಕೆ ಬ್ರಹ್ಮನಾಗುವುದಿಲ್ಲ, ಸಾಕ್ಷಾತ್ಕಾರಕ್ಕೆ ಜ್ಞಾನಿಯಾದವನಲ್ಲಿ ಶರಣಾಗಿ ತತ್ವೋಪದೇಶ ಪಡೆಯುವುದೇ ಮದ್ದು ಎಂಬರ್ಥದಲ್ಲಿ ವಿವರಿಸುತ್ತಾರೆ.

ನಾನು ಸ್ನಾತಕೋತ್ತರ ಮತ್ತು ಅದಕ್ಕೂ ಮೇಲಿನ ನಾನಾ ಪದವಿಗಳನ್ನು ಪಡೆದಿದ್ದೇನೆ ಹಾಗಾಗಿ ನಾನೊಬ್ಬ ದೊಡ್ಡ ಉಪನ್ಯಾಸಕನೆಂದು ಎಲ್ಲರೂ ಗುರುತಿಸಬೇಕು ಎಂದು ಯಾರಾದರೂ ಬಯಸಿದರೆ, ಹಾಗೆ ಕರೆಯುವ ಜನರಾದರೂ ಎಲ್ಲಿದ್ದಾರೆ ?. ಒಂದನೇ ತರಗತಿಯಲ್ಲಿ ಅಕ್ಷರ ಕಲಿಯಿಸಿಕೊಟ್ಟವರು ಗುರುವಾಗುತ್ತಾರೆ ಆದರೆ ಪಾಠವನ್ನೇ ಹೇಳದೆ ಏನೇನು ಪದವಿ ಪಡೆದರೂ ಗುರುವಾಗಲು ಸಾಧ್ಯವಿಲ್ಲ ಎಂಬ ಸಾಮಾನ್ಯ ಜ್ಞಾನ ಈ ಶ್ಲೋಕದಲ್ಲಿ ದೊರಕುತ್ತದೆ.

--.......................

ಕಾಮೆಂಟ್‌ಗಳು

  1. ಮೂಲಶ್ಲೋಕದಲ್ಲಿರುವ ರಾಜನಾಗುವವನ ಅರ್ಹತೆ ಹಾಗು ಯೋಗ್ಯತೆಯನ್ನು ನೀವು ಸರಳವಾಗಿ ವಿವರಿಸಿದ್ದೀರಿ. ಇದು ಯಾವ ಕಾಲಕ್ಕೂ ಸತ್ಯವಾದ ಮಾತು. ಆದರೆ ಇದು ಶಂಕರಾಚಾರ್ಯವಿರಚಿತ ‘ವಿವೇಕಚೂಡಾಮಣಿ’ಯಲ್ಲಿ ಬಂದದ್ದು ನನಗೆ ಸೋಜಿಗವೆನಿಸಿತು!

    ಪ್ರತ್ಯುತ್ತರಅಳಿಸಿ
  2. ಕಾಕಾ,
    ಎಂಟನೇ ಶತಮಾನದ ಕಾಲಕ್ಕಾದರೆ ರಾಜ್ಯ, ರಾಜರುಗಳೆಲ್ಲ ಇದ್ದೇ ಇದ್ದರು. ಇನ್ನೂ ಪ್ರಾಚೀನತೆಗೆ ಒಡ್ಡಿಕೊಂಡರೆ, 'ಶತ್ರು' ಎನ್ನುವುದನ್ನು ಅರಿಷಡ್ವರ್ವಕ್ಕೆ ಹೋಲಿಕೆ ಮಾಡಬಹುದು. 'ಭೂಶ್ರಿಯಮ್'ಎಂದಾಗ ಭೂದೇವಿ ಅಥವಾ ರಾಜ್ಯ ಲಕ್ಷ್ಮಿ‌ ಎಂಬ ಅರ್ಥ ಬರುವುದರಿಂದ , ಅತ್ಯಂತ ಸತ್ವಗುಣದಿಂದಲೇ ಶ್ಲೋಕವು ರಚಿತವಾಗಿದೆ ಎನ್ನಬಹುದು. ನೀವೊಂದೆರೆಡೆಡು ಕಾರಣ ಹೇಳಿದ್ದರೆ ನನ್ನ ತಲೆಗೆ ಹೊಕ್ಕಿರುವ ' ಸೋಜಿಗ'ದ ಹುಳಕ್ಕೆ ಸಮಾಧಾನವಾಗುತ್ತದೆ. :)

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ