Part - 40


ಮೂಲ:
ತತಃ ಶ್ರುತಿಸ್ತನ್ಮನನಂ ಸತತ್ತ್ವ
ಧ್ಯಾನಂ ಚಿರಂ ನಿತ್ಯನಿರಂತರಂ ಮುನೇಃ|
ತತೋsವಿಕಲ್ಪಂ ಪರಮೇತ್ಯ ವಿದ್ವಾನ್
ಇಹೈವ ನಿರ್ವಾಣಸುಖಂ ಸಮೃಚ್ಛತಿ ||೭೦||

ಪ್ರತಿಪದಾರ್ಥ:
ತತಃ=ಅನಂತರ, ಶ್ರುತಿ=ವೇದಾಂತವಾಕ್ಯ ಶ್ರವಣ, ತತ್_ಮನನಂ=ಅದರ ಮನನ, ಚಿರಂ=ಶಾಶ್ವತವಾದ, ನಿತ್ಯನಿರಂತರಂ= ನಿತ್ಯವೂ ನಿರಂತರವೂ ಆದ, ಸತತ್ತ್ವ_ಧ್ಯಾನಂ=ಆತ್ಮ ಚಿಂತನ, ಮುನೇಃ=ಮುನಿಗೆ , ತತಃ=ಅನಂತರ, ಪರಮ್ ಅವಿಕಲ್ಪಂ=ಪರಮ_ನಿರ್ವಿಕಲ್ಪ ಸಮಾಧಿಯನ್ನು, ಏತ್ಯ=ಹೊಂದಿ, ವಿದ್ವಾನ್=ವಿದ್ವಾಂಸನು, ಇಹ ಏವ=ಇಲ್ಲಿಯೇ, ನಿರ್ವಾಣಸುಖಂ=ನಿರ್ವಾಣಸುಖವನ್ನು, ಸಮೃಚ್ಛತಿ=ಹೊಂದುವನು.

ತಾತ್ಪರ್ಯ:
ಅನಂತರ ವೇದಾಂತವಾಕ್ಯಗಳ ಶ್ರವಣ_ಮನನ ಮತ್ತು ನಿತ್ಯ_ನಿರಂತರವಾಗಿ ಮಾಡುವ ಆತ್ಮೋದ್ಧಾರದ ಚಿಂತನವು ಮುನಿಗೆ(ವಿದ್ವಾಂಸ) ಇನ್ನಿತರ ಸಾಧನಗಳಾಗುತ್ತವೆ. ಬಳಿಕ ವಿದ್ವಾಂಸನು ಶ್ರೇಷ್ಠವಾದ ನಿರ್ವಿಕಲ್ಪ ಸಮಾಧಿಯನ್ನು ಪಡೆದು, ಬದುಕಿರುವಾಗಲೇ ನಿರ್ವಾಣಸುಖವನ್ನು ಹೊಂದುತ್ತಾನೆ.

ವಿವರಣೆ:
ಸಾಧನ ಚತುಷ್ಟಯ ಸಂಪನ್ನನಾಗಿ ಸರ್ವಕರ್ಮಗಳನ್ನೂ ಬಿಟ್ಟ ಬಳಿಕ (ಅತ್ಯಂತ ವೈರಾಗ್ಯ) ಮುಮುಕ್ಷು ಎನ್ನಿಸಿಕೊಳ್ಳುವ ವಿದ್ವಾಂಸನು ಅನಂತರ ಗುರುಮುಖೇನ ವೇದಾಂತ ವಾಕ್ಯಗಳನ್ನು ಕೇಳುವುದು ಮತ್ತು ಅದರ ಅರ್ಥ ಸಹಿತ ಅಧ್ಯಯನಕ್ಕೆ ತೊಡಗಬೇಕಾಗುತ್ತದೆ. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಟ್ಟಲು ಪ್ರತಿನಿತ್ಯವೂ ಶ್ರುತಿ ಶ್ರವಣ_ಮನನವನ್ನು ತಪ್ಪದೇ ಬಹುಕಾಲದವರೆಗೆ ಮಾಡುತ್ತಿರಬೇಕು('ಚಿತ್ತವ್ಯಾಪಾರಕ್ಕೆ ಅವಕಾಶ ಕೊಡದೆ' ಎಂಬ ವಾಕ್ಯವನ್ನು ಸದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳು ಉಲ್ಲೇಖಿಸುತ್ತಾರೆ). ಚಿರಕಾಲ ತತ್ತ್ವ ಚಿಂತನೆಯಲ್ಲಿ ತೊಡಗುವುದರಿಂದ ಧ್ಯಾನವು ಸಿದ್ಧಿಸಿ (ಅನೇಕ ಸಂವತ್ಸರಗಳಲ್ಲೋ, ಜನ್ಮಗಳಲ್ಲೋ) ಶ್ರೇಷ್ಠವಾದ ನಿರ್ವಿಕಲ್ಪ ಸಮಾಧಿಯೊಂದಿಗೆ ಇಲ್ಲಿಯೇ (ಬದುಕಿದ್ದಾಗಲೇ) ನಿರ್ವಾಣಸುಖವನ್ನು (ಬ್ರಹ್ಮಾನಂದವನ್ನು) ಅನುಭವಿಸುತ್ತಾನೆ ಎಂದು ಗುರುವು ಶಿಷ್ಯನಿಗೆ ಹೇಳುತ್ತಾರೆ.

ಜೀವನ್ಮುಕ್ತಿಯೇ ವೇದಾಂತದ ನಿರ್ಣಾಯಕ ಸಂದೇಶ ಎನ್ನುವುದನ್ನು ನಾವು ಶ್ಲೋಕದಲ್ಲಿ ಕಾಣಬಹುದಾಗಿರುತ್ತದೆ. ವಿದೇಹ ಮುಕ್ತಿ (ಮರಣದ ಬಳಿಕ)ಯು ಇಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯದೇ ಗೌಣವೆನಿಸಿಕೊಳ್ಳುತ್ತದೆ. ಪರಮಾರ್ಥ ಸಿದ್ಧಿಸುವವರೆಗೂ ನಿರಂತರವಾಗಿ ಶ್ರವಣ_ಮನನಾದಿಗಳನ್ನು ಮಾಡುತ್ತಿರಬೇಕು ಎನ್ನುವುದನ್ನು, ಇಷ್ಟೊಂದು ಸಂವತ್ಸರಗಳು ಸಾಧನೆಯಲ್ಲಿ ತೊಡಗಿದರೂ ಇನ್ನೂ ಜೀವನ್ಮುಕ್ತಿ ಎನ್ನುವುದರ ಅನುಭವ ಆಗಲಿಲ್ಲವಲ್ಲ ಎಂದು ಕಾಲಮಿತಿಯ ಬಗ್ಗೆ ಚಿಂತಿಸುವವರ ಕುರಿತಾಗಿ ಹೇಳಿದ್ದಾಗಿರುತ್ತದೆ. ಇರುವುದು ನಾಲ್ಕೇ ವೇದಗಳು. ದಿನಕ್ಕೊಂದರಂತೆ ಕಲಿತರೂ ನಾಲ್ಕು ದಿನ ಸಾಕು ಎಂದು ಅಧ್ಯಯನಕ್ಕೆ ಹೋದ ಗೆಳೆಯನು ಐದನೆಯ ದಿನವಾದರೂ ಹಿಂದಿರುಗಿ ಬರಲಿಲ್ಲವಲ್ಲ ಎಂದು ಹಲುಬುವ ಮೂರ್ಖನ ಸ್ಥಿತಿ ಬರಬಾರದು ಎಂಬ ಸೂಚನೆ ಇಲ್ಲಿದೆ.
..............

ಟಿಪ್ಪಣಿ

*ಸವಿಕಲ್ಪ ಸಮಾಧಿ (Trance state): ಈ ಸ್ಥಿತಿಯಲ್ಲಿ 'ನಾನು ಇದ್ದೇನೆ' ಎಂಬ ಪ್ರಜ್ಞೆ ಇರುತ್ತದೆ, ಆದರೆ ಯಾವ ಬಾಹ್ಯಾವಲಂಬನೆಯೂ ಇರುವುದಿಲ್ಲ. ಇದನ್ನು ತುರೀಯಾವಸ್ಥೆ ಎಂದು ಹೇಳಲಾಗಿದೆ.
*ನಿರ್ವಿಕಲ್ಪ ಸಮಾಧಿ : ಈ ಸ್ಥಿತಿಯಲ್ಲಿ ಪರಿಶುದ್ಧ ಪ್ರಜ್ಞೆ(eternal conciousness) ಯೊಂದನ್ನು ಬಿಟ್ಟು ಮತ್ತೇನೂ ಇರುವುದಿಲ್ಲ. ತುರೀಯಾತೀತ ಅವಸ್ಥೆ ಎಂದೂ ಕರೆಯುತ್ತಾರೆ. ಅಲ್ಲಮಪ್ರಭುವು ಇದನ್ನೇ ಶೂನ್ಯ ಸಂಪಾದನೆ(ಬಯಲು) ಎಂದರು. ಜಿ.ಕೃಷ್ಙಮೂರ್ತಿ ಅವರು choiceless awareness ಎಂದು ಕರೆದಿದ್ದಾರೆ.
...............------

ಕಾಮೆಂಟ್‌ಗಳು

 1. ಚೆನ್ನಾಗಿದೆ. ಮೂಲ, ಪ್ರತಿಪದಾರ್ಥವು, ಈಗಾಗಲೇ ಹಲವು ಪುಸ್ತಕಗಳಲ್ಲಿ ಬಂದಿರುವವೇ ಆಗಿದೆ. ಅದನ್ನೇ ಇಲ್ಲಿ ಕಾಪಿ ಮಾಡಿದಂತೆ ಆಗುವುದಿಲ್ಲವೇ ?. ಅದರ ಹೊರತಾಗಿ ವಿವರಣೆಯು ಎಲ್ಲರಿಗೂ ಅರ್ಥವಾಗುವಂತೆ ಇದೆ. ಶುಭಾಶಯಗಳು.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಪ್ರಸಾದ್ ಅವರೆ,
   ಮೂಲ, ಪ್ರತಿಪದಾರ್ಥವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಶಂಕರರಾದಿಗಿ ಎಲ್ಲರೂ ಅದಕ್ಕೆ ತಮ್ಮ ಭಾಷ್ಯವನ್ನು ಬರೆದಿದ್ದಾರೆಯೇ ಹೊರತು ಹೊಸತೇನನ್ನೂ ಸೃಷ್ಟಿಸಿಲ್ಲ. ಅದ್ಯ=ಇಂದು, ಯತ್=ತಾವ ಎಂದೇ ಬರೆಯಬೇಕಾಗುತ್ತದೆ. ಇದನ್ನು ಕಾಪಿ ಎನ್ನಲು ಸಾಧ್ಯವಿಲ್ಲ. ಇನ್ನು ವಿವರಣೆಯಲ್ಲೂ , ಹಲವು ಗ್ರಂಥಗಳ ಆಧಾರವನ್ನೇ ನಾನೂ ನಂಬಿಕೊಂಡಿದ್ದೇನೆ. ಪ್ರಾಕ್ಟಿಕಲ್ ಉದಾಹರಣೆಗಳನ್ನು ಕೊಡುವಾಗ ಮಾತ್ರ ನಾನೆಷ್ಟು ಅರ್ಥಮಾಡಿಕೊಂಡಿದ್ದೇನೆ ಎನ್ನುವುದನ್ನು ನಿರೂಪಿಸಬಹುದು. ಹಾಗಾಗಿ ನೀವು ಚಿಂತೆ ಮಾಡದೆ ಓದಿ, ಅಭಿಪ್ರಾಯ ತಿಳಿಸಿ. ಕತೆ, ಕಾದಂಬರಿ, ನಾಟಕ, ಕಾವ್ಯಗಳನ್ನಾದರೆ ಹೊಸತನ್ನು ಸೃಜಸಬಹುದು. ವೇದಾಂತವು ಹಾಗಲ್ಲ.
   ಧನ್ಯವಾದ

   ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ