Part -36



ಮೂಲ:
ತಸ್ಮಾತ್ ಸರ್ವಪ್ರ ಯತ್ನೇನ ಭವಬಂಧ_ವಿಮುಕ್ತಯೇ |
ಸ್ಮೈರೇವ ಯತ್ನಃ ಕರ್ತವ್ಯೋ ರೋಗಾದವಿವ ಪಂಡಿತೈಃ ||೬೬||

ಪ್ರತಿಪದಾರ್ಥ:
ತಸ್ಮಾತ್=ಆದುದರಿಂದ, ಸರ್ವಪ್ರ ಯತ್ನೇನ=ಎಲ್ಲ ರೀತಿಯ ಯತ್ನದಿಂದಲೂ, ಭವಬಂಧ_ವಿಮುಕ್ತಯೇ=ಸಂಸಾರ ಬಂಧದ ಬಿಡುಗಡೆಗಾಗಿ, ರೋಗಾದೌ ಇವ=ರೋಗಾದಿಗಳಲ್ಲಿ ಹೇಗೋ ಹಾಗೆ, ಪಂಡಿತೈಃ ಸ್ವೈಃ ಏವ=ಪಂಡಿತರಾದ ತಮ್ಮಿಂದಲೇ, ಯತ್ನಃ=ಯತ್ನವು, ಕರ್ತವ್ಯಃ=ಮಾಡುವುದು.

ತಾತ್ಪರ್ಯ:
ವೈದ್ಯರು, ಪಂಡಿತರು ತಮಗೆ ರೋಗಾದಿಗಳು ಬಂದಾಗ ಹೇಗೆ ತಾವೇ ಅದರಿಂದ ಗುಣಮುಖರಾಗಲು(ಬಿಡಿಸಿಕೊಳ್ಳಲು) ಎಲ್ಲ ರೀತಿಯ ಯತ್ನಗಳನ್ನು ಮಾಡುವರೋ, ಹಾಗೆಯೇ ಸಂಸಾರ ಬಂಧದಿಂದ ಬಿಡಿಸಿಕೊಳ್ಳಲು ತಾವೇ ಯತ್ನಿಸಬೇಕು.

ವಿವರಣೆ:
ವೈದ್ಯರು ರೋಗಿಗಳ ವ್ಯಾಧಿಯ ಉಪಶಮನಕ್ಕೆ ಅವರಿಗೆ ಮದ್ದನ್ನು ನೀಡಿ ಗುಣಪಡಿಸಬಹುದು. ಆದರೆ, ತಮಗೇ ಕಾಯಿಲೆ ಬಂದಾಗ ಸ್ವಯಂ ವೈದ್ಯ ಮಾಡಿಕೊಳ್ಳುವುದು ಅನಿವಾರ್ಯವಾಗಬಹುದು ಅಥವಾ ತಮ್ಮ ರೋಗದ ಬಗ್ಗೆ ತಾವೇ ನಿರ್ಣಯಿಸಿಕೊಳ್ಳಬೇಕಾಗುತ್ತದೆ (ಮತ್ತೊಬ್ಬ ವೈದ್ಯರ ಬಳಿಗೇ ತೆರಳಬೇಕಾಗುತ್ತದೆ). ವೈದ್ಯ ವಿದ್ಯೆ ತಿಳಿದಿರುವುದರಿಂದ ತಮ್ಮ ಶರೀರ ಪ್ರಕೃತಿಗೆ ಹೊಂದುವ ಮದ್ದನ್ನು ತೆಗೆದುಕೊಂಡು ಅವರು ಗುಣಮುಖರಾಗುತ್ತಾರೆ. ಹಾಗೆಯೇ, ವೇದ, ಶಾಸ್ತ್ರಾಧ್ಯಯನಗಳನ್ನು ಮಾಡಿಕೊಂಡು, ಶಮಾದಿ ಷಟ್ಕ (ಇದನ್ನು ಈಗಾಗಲೇ ವಿವರಿಸಲಾಗಿದೆ)ದಲ್ಲಿ ಹಿಡಿತ ಸಾಧಿಸಿಯೂ ತನ್ನನ್ನು ತಾನು ಸಂಸಾರ ಬಂಧದಿಂದ ಬಿಡಿಸಿಕೊಳ್ಳದಿದ್ದರೆ ಏನು ಪ್ರಯೋಜನ?. ಆದುದರಿಂದ ಪ್ರಯತ್ನಪೂರ್ವಕವಾಗಿ ಸಾಕ್ಷಾತ್ಕಾರದೆಡೆಗೆ ಸಾಗಬೇಕು ಎಂದು ಹೇಳುತ್ತಾರೆ.
.................................................

ಕಾಮೆಂಟ್‌ಗಳು