Part -60

ಮೂಲ:

ಸ್ಥೂಲಸ್ಯ ಸಂಭವ -ಜರಾ-ಮರಣಾನಿ ಧರ್ಮಾಃ 

ಸ್ಥೌಲ್ಯಾದಯೋ ಬಹುವಿಧಾಃ ಶಿಶುತಾದ್ಯವಸ್ಥಾಃ |

ವರ್ಣಾಶ್ರಮಾದಿ-ನಿಯಮಾ ಬಹುssಮಯಾಃ ಸ್ಯುಃ

ಪೂಜಾವಮಾನ-ಬಹುಮಾನ-ಮುಖಾ ವಿಶೇಷಾಃ ||೯೦||


ಪ್ರತಿಪದಾರ್ಥ :

ಸ್ಥೂಲಸ್ಯ = ಸ್ಥೂಲಶರೀರಕ್ಕೆ , ಸಂಭವ-ಜರಾ-ಮರಣಾನಿ = ಹುಟ್ಟು-ಮುಪ್ಪು-ಸಾವು (ಇವು) , ಸ್ಥೌಲ್ಯಾದಯಃ=ಸ್ಥೂಲತ್ವ ಮೊದಲಾದ, ಬಹುವಿಧಾಃ=ಬಹು ವಿಧವಾದ, ಧರ್ಮಾಃ=ಲಕ್ಷಣಗಳು ; ಶಿಶುತಾದಿ-ಅವಸ್ಥಾಃ=ಶಿಶುತ್ವ ಮೊದಲಾದ ಅವಸ್ಥೆಗಳು, ವರ್ಣಾಶ್ರಮಾದಿ-ನಿಯಮಾಃ = ವರ್ಣಾಶ್ರಮಗಳೇ ಮೊದಲಾದ ನಿಯಮಗಳು, ಬಹುಧಾ-ಆಮಯಾಃ=ನಾನಾವಿಧವಾದ ರೋಗಗಳು, ಪೂಜಾ-ಅವಮಾನ-ಬಹುಮಾನ-ಮುಖಾಃ=ಪೂಜೆ-ಅವಮಾನ-ಬಹುಮಾನ-ಮುಂತಾದ, ವಿಶೇಷಾಃ=ವಿಶೇಷಗಳು, ಸ್ಯುಃ=ಇವೆ.


ತಾತ್ಪರ್ಯ:


ಹುಟ್ಟು-ಮುಪ್ಪು-ಸಾವು ಮುಂತಾದವು ಸ್ಥೂಲ ಶರೀರದ ಧರ್ಮ ಅಥವಾ ಲಕ್ಷಣಗಳು. ಬಾಲ್ಯ, ಕೌಮಾರ, ಯೌವನ ಮೊದಲಾದವು ಅದರ ಅವಸ್ಥೆಗಳು. ಇದಕ್ಕೆ ಜಾತಿ ಹಾಗೂ ಆಶ್ರಮ ನಿಯಮಗಳಿದ್ದು ನಾನಾ ಬಗೆಯ ರೋಗಗಳನ್ನು ಅನುಭವಿಸುತ್ತದಲ್ಲದೆ ಸತ್ಕಾರ, ತಿರಸ್ಕಾರ, ಹೊಗಳಿಕೆ ಮೊದಲಾದ ವಿಶೇಷಗಳೂ ಇವೆ.


ವಿವರಣೆ:

ಸ್ಥೂಲಶರೀರದ ಅಂತರ್ಬಾಹ್ಯ ಸಂಸಾರವನ್ನು ಈ ಶ್ಲೋಕದಲ್ಲಿ ವಿವರವಾಗಿ ತೆರೆದಿಡುತ್ತಾರೆ.  ಹುಟ್ಟುವುದು, ಬದುಕುವುದು (ಇರುವುದು) , ಬೆಳೆಯುವುದು, ಹೊಂದಿಕೊಳ್ಳುವುದು (ಪರಿಣಮಿಸುವುದು), ಕ್ಷಯವಾಗುವುದು ಮತ್ತು ಸಾಯುವುದು (ನಾಶವಾಗುವುದು) ಇವು ಶರೀರದ ಆರು ವಿಕಾರಗಳೆಂದು ಮಹರ್ಷಿ ಯಾಸ್ಕರು ತಮ್ಮ  ಉಪನಿಷದ್ಭಾಷ್ಯಗಳಲ್ಲಿ ಹೇಳಿರುತ್ತಾರೆ. ಸ್ಥೂಲ ಶರೀರದ ಸಂಸಾರವು ಹೊರ ಮತ್ತು ಒಳ ಎಂದು ವಿಭಾಗವಾಗುತ್ತದೆ. ಬಾಹ್ಯದಲ್ಲಿ ಹುಟ್ಟುವುದು, ಅವಯವ ವೃದ್ಧಿ, ಮುಪ್ಪು, ಸಾವು ಮುಂತಾದವು ಗಣನೆಗೆ ಬಂದರೆ ಶರೀರವು ಅಂತರಂಗದಲ್ಲಿ ಸುಖ, ದುಃಖ, ಕರ್ತೃತ್ವ , ಭೋಕ್ತೃತ್ವ  (ಸ್ವೀಕಾರ, ಭೋಗಿಸುವುದು)ಕ್ಕೆ  ಆಧಾರವಾಗುತ್ತದೆ. ಯಾರು ಸ್ಥೂಲದೇಹದ ಬಾಹ್ಯ ಲಕ್ಷಣಗಳನ್ನು ತನ್ನದೆಂದೇ (ಆತ್ಮನೆಂದು) ತಿಳಿಯುವನೋ ಆತನು ಅಂತರ್ಲಕ್ಷಣಗಳಿಗೆ ಗುರಿಯಾಗುವುದರ ಮೂಲಕ ದೇಹಾಭಿಮಾನಕ್ಕೆ  ಕಾರಣನಾಗುತ್ತಾನೆ. ಇದು ಆತ್ಮಸಾಕ್ಷಾತ್ಕಾರದ  ದಾರಿಗೆ ತೊಡಕಾಗುತ್ತದೆ. ಶರೀರಕ್ಕೆ  ಬಾಲ್ಯ , ಕೌಮಾರ , ಯೌವನ , ವಾರ್ಧಕ್ಯ ಎಂಬ ಅವಸ್ಥೆಗಳೂ ಅನ್ವಯವಾಗುತ್ತದೆ. ಶರೀರವು ಜಾಗ್ರತ್ತಿನಲ್ಲಿ ಅಂತಹ ಕಾಲದಲ್ಲಿ  ಘಟಿಸುವ  ಎಲ್ಲ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತದೆ ಮತ್ತು ಅನುಭವಿಸಬೇಕಾಗುತ್ತದೆ. 


ಸ್ಥೂಲದೇಹಕ್ಕೆ  ಬ್ರಾಹ್ಮಣ, ಕ್ಷತ್ರಿಯ, ವೈಶ್ಯ , ಶೂದ್ರ ಎಂಬ ವರ್ಣ(ಜಾತಿ) ಗಳಿದ್ದು  ಬ್ರಹ್ಮಚರ್ಯ, ಗೃಹಸ್ಥ , ವಾನಪ್ರಸ್ಥ ಮತ್ತು ಸಂನ್ಯಾಸ ಎಂಬ ಆಶ್ರಮಾಚರಣೆಗಳು ಮತ್ತು ಗೋತ್ರ ಸೂತ್ರಾದಿ  ಕುಲಾಚಾರ ನಿಯಮಗಳೂ ಇರುತ್ತವೆ.  ಇನ್ನು ರೋಗ ರುಜಿನಗಳಂತೂ ಶರೀರದ ಅಥವಾ  ಜೀವಿತಕಾಲದ ಭಾಗವಾಗಿಯೇ ಸಾಗುತ್ತದೆ. ಸನ್ಮಾನ-ಅವಮಾನಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಚೆನ್ನಾಗಿ ಭಾಷಣ ಮಾಡಿದಾಗ ಅಭಿಮಾನಪೂರ್ವಕವಾಗಿ  ಪ್ರಶಸ್ತಿ -ಕಿರೀಟಗಳನ್ನು ಕೊಟ್ಟವರು ಇನ್ನಾವುದೋ ಅತ್ಯಂತ ತುರ್ತಿನ ಸಂದರ್ಭದಲ್ಲಿ ಅತಿಥಿಯು ಬರಲಾಗುವುದಿಲ್ಲ ಎಂದು ಹೇಳಿದರೆ 'ಇವರಿಗೂ ಅಹಂಕಾರ ಬಂತೆ'  ಎಂದು ತಿರುಗಿಸಿಕೊಂಡು ಹೋಗುವುದು ನಮಗೆ ಗೊತ್ತೇ ಇದೆ. ಸತ್ಕಾರ-ತಿರಸ್ಕಾರಗಳಿಗೆ ಶರೀರವೂ ಆಗಾಗ ಗುರಿಯಾಗುತ್ತಲೇ ಇರುತ್ತದೆ.


ಇದಕ್ಕೆ ಪೂರಕವಾಗಿ ಆರ್. ಗಣೇಶರು ಸಂಗ್ರಹಿಸಿರುವ 'ಬ್ರಹ್ಮಪುರಿಯ ಭಿಕ್ಷುಕ'  (ಕಗ್ಗದ ಗುರು ಡಿ.ವಿ.ಜಿ. ಜೀವನದ ಪ್ರಸಂಗಗಳು )  ಪುಸ್ತಕದಲ್ಲಿನ ಬರೆಹವೊಂದನ್ನು  ಗಮನಿಸಬಹುದು. ಆಗ ಗುಂಡಪ್ಪನವರಿಗೆ ಮೂಲವ್ಯಾಧಿ ಬಹುವಾಗಿ ಕಾಡುತ್ತಿತ್ತಂತೆ. ಉಪನ್ಯಾಸ , ಭಾಷಣಗಳಿಗೆ ಹೋಗಲಾಗದ ಅಥವಾ ಹೋದರೂ ಕುಳಿತುಕೊಳ್ಳಲಾಗದ ಸ್ಥಿತಿ !. ಹೀಗಿರುವಾಗ ಒಂದು ಸಂಘಟನೆಯ ಕೆಲ ಜನರು ಡಿ.ವಿಜಿ. ಅವರ ಮನೆಗೆ ಬಂದು ಕಾರ್ಯಕ್ರಮಕ್ಕೆ ಆಮಂತ್ರಣವಿತ್ತು ಅವರನ್ನೇ ಮುಖ್ಯ ಭಾಷಣಕಾರರಾಗಿ ಬರಲೇಬೇಕೆಂದು ಕೋರಿದರಂತೆ. ಗುಂಡಪ್ಪನವರು ಬಹುವಿಧವಾಗಿ ನಯವಿನಯದಿಂದ ಅವರ ಆಹ್ವಾನವನ್ನು ತಿರಸ್ಕರಿಸಿ, ನಾನು ಬರುವುದಿಲ್ಲ ಒತ್ತಾಯ ಮಾಡದೆ ತಾವು ಹೊರಡಿ ಎಂದರಂತೆ. ಆದರೂ ಪಟ್ಟುಬಿಡದ ಆಯೋಜಕರಿಗೆ ತಮ್ಮ ರೋಗದ ಲಕ್ಷಣವನ್ನು ವಿವರಿಸಿದರಂತೆ. ಸಂಘಟಕರು ಚಕಿತರಾಗಿ, ಅರೇ ನಿಮಗೂ ಮೂಲವ್ಯಾಧಿ ಕಾಯಿಲೆ ಬಂತೇ ಎಂದು ಕೇಳಿದರಂತೆ. ಆಗ ಗುಂಡಪ್ಪವನರು  ಅಲಂಕಾರ ಶಾಸ್ತ್ರಾನುಸಾರ ಕಾವ್ಯಮಯವಾಗಿ  'ಗುಂಡಪ್ಪನಾದೊಡೇಂ ಕುಂಡೆಯದು ನೋಯದೇಂ ' ಎಂದು ಹೇಳಿ ಅವರನ್ನು ಸಮಾಧಾನಪಡಿಸಿ ಕಳುಹಿಸಿದರಂತೆ. ಹೀಗೆ ಯಾವ ಶರೀರಕ್ಕೆ ಅವಸ್ಥೆಗಳು, ರೋಗಗಳು ತಪ್ಪುವುದಿಲ್ಲ ? .  


ಶರೀರಕ್ಕೆ ಸಂಸ್ಕಾರಗಳು ಅಗತ್ಯವಾದುದು, ಬ್ರಹ್ಮಚರ್ಯಾದಿ ನಿಯಮಗಳನ್ನು ಮತ್ತು ಜಾತಾದಿ ಹದಿನಾರು ಕರ್ಮಗಳನ್ನು ಆಚರಿಸುವುದರಿಂದ ಚಿತ್ತಶುದ್ಧಿಯಾಗುತ್ತದೆ. ಇದರಿಂದ ಜ್ಞಾನದಮಾರ್ಗ ದೊರೆಯುತ್ತದೆ ಎಂಬ ವಿಚಾರಕ್ಕಾದರೂ (ಅಥವಾ ಭ್ರಮೆಯಿಂದಲಾದರೂ) ಅವುಗಳನ್ನು ಶ್ರದ್ಧೆಯಿಂದ ನಿಯತವಾಗಿ ಆಚರಿಸಬೇಕು ಆದರೆ ಪೂಜಾವಮಾನಾದಿಗಳು ಸುಖ-ದುಃಖಗಳಿಗೆ ಕಾರಣವಾಗುವುದರಿಂದ ಅದನ್ನು ಆದರಿಸಬೇಕಿಲ್ಲ ಎಂಬ ಅರ್ಥದಲ್ಲಿ  ಶ್ಲೋಕದ ಸಾಲನ್ನು ಹೇಳಲಾಗಿದೆ ಎಂದು  ಸದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳು ವ್ಯಾಖ್ಯಾನ ಮಾಡಿರುತ್ತಾರೆ.  

----


ಟಿಪ್ಪಣಿ:

' ಜರಾ' ಎನ್ನುವ ಶಬ್ದದಿಂದ ಮೊದಲು ವಾರ್ಧಕಾವಸ್ಥೆಯನ್ನು ಹೇಳಿದರೂ ಬಾಲ್ಯ, ಯೌವನಾದಿಗಳನ್ನು ಪರಿಗಣಿಸಿ ಅರ್ಥಮಾಡಿಕೊಳ್ಳುವುದರಲ್ಲಿ ಯಾವ ದೋಷವೂ ಇಲ್ಲ. ವಾರ್ಧಕ್ಯದಲ್ಲಿ  ಶರೀರವು ಹೆಚ್ಚು (ವಿಶೇಷತಃ ಮಾನಸಿಕವಾಗಿ) ಬಾಧಿತವಾಗುದರಿಂದ ಹಾಗೆ ಹೇಳಲಾಗಿದೆ ಎಂದು ಚಂದ್ರಶೇಖರ ಭಾರತಿ ಸ್ವಾಮಿಗಳು ವ್ಯಾಖ್ಯಾನದಲ್ಲಿ ಸ್ಪಷ್ಟಪಡಿಸಿರುತ್ತಾರೆ.

------------------------- 





ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ