Part - 54

 

ಮೂಲ:

ಶರೀರಪೋಷಣಾರ್ಥೀಸನ್ ಯ ಆತ್ಮಾನಂ ದಿದೃಕ್ಷತಿ |

ಗ್ರಾಹಂ ದಾರು_ಧಿಯಾ ಧೃತ್ವಾ ನದೀಂ ತರ್ತುಂ ಸ ಗಚ್ಛತಿ ||೮೪||


ಪ್ರತಿಪದಾರ್ಥ:

ಯಃ= ಯಾರು, ಶರೀರಪೋಷಣಾರ್ಥೀಸನ್ = ದೇಹ ಪೋಷಣೆಯನ್ನು ಬಯಸುವವನಾಗಿ, ಆತ್ಮಾನಂ = ಆತ್ಮನನ್ನೂ, ದಿದೃಕ್ಷತಿ = ಕಾಣಲು ಅಪೇಕ್ಷಿಸುವವನೂ, ಸಃ = ಅವನು, ಗ್ರಾಹಂ = ಮೊಸಳೆಯನ್ನು, ದಾರು_ಧಿಯಾ = ಮರವೆಂದು ತಿಳಿದು, ಧೃತ್ವಾ = ಹಿಡಿದುಕೊಂಡು, ನದೀಂ = ನದಿಯನ್ನು, ತರ್ತುಂ = ದಾಟಲು, ಗಚ್ಛತಿ = ಹೋಗುತ್ತಾನೆ.


ತಾತ್ಪರ್ಯ:

ಯಾರು ಶರೀರಪೋಷಣೆಯನ್ನು ಮಾಡುತ್ತಾ ಆತ್ಮಜ್ಞಾನವನ್ನೂ ಪಡೆಯಲು ಬಯಸುವನೋ, ಅವನು ಮೊಸಳೆಯನ್ನು ಮರವೆಂದು ತಿಳಿದು ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ನದಿಯನ್ನು ದಾಟಲು ಹೋದಂತಾಗುತ್ತದೆ.


ವಿವರಣೆ:

ದೇಹ ಪೋಷಣೆಯನ್ನು ಮಾಡುವುದರಿಂದ ಅದರೊಳಗಿರುವ ಆತ್ಮನನ್ನೂ ತೃಪ್ತಿಪಡಿಸಿದಂತಾಗುತ್ತದೆ ಎಂಬ ಭಾವನೆಯುಳ್ಳವರು ಸ್ವಸ್ವರೂಪವನ್ನು ತಿಳಿಯಲು ಶಕ್ತರಾಗುವುದಿಲ್ಲ, ಏಕೆಂದರೆ ಶರೀರ ತೃಪ್ತಿಯಿಂದ ಆತ್ಮನು ಪೋಷಿತನಾಗುವುದಿಲ್ಲ ಎಂದು ಸದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳು ತಮ್ಮ ವ್ಯಾಖ್ಯಾನದಲ್ಲಿ ಸ್ಪಷ್ಟಪಡಿಸಿರುತ್ತಾರೆ. ನದಿಯನ್ನು ದಾಟಲು ಬಯಸುವವರು ದೋಣಿ ಮುಂತಾದ ಸಾಧನವನ್ನು ಬಳಸುತ್ತಾರೆ. ಯಾವುದೂ ದೊರಕದಿದ್ದರೆ ಮರದ ದಿಮ್ಮಿಗಳನ್ನು ಉಪಯೋಗಿಸಿ ತೆಪ್ಪವನ್ನು ಕಟ್ಟುವ ಪದ್ಧತಿಯೂ ಇದೆ. ಕಷ್ಟಕಾಳದಲ್ಲಿ ಕಟ್ಟಿಗೆಯ ತುಂಡನ್ನು ಆಧಾರವಾಗಿಸಿಕೊಂಡು ಹೊಳೆಯನ್ನು ದಾಟಿದವರೂ ಇದ್ದಾರೆ. ಆದರೆ, ಯಾರೂ ಮೊಸಳೆಯನ್ನು ಹಿಡಿದುಕೊಂಡು ನದಿಯನ್ನು ದಾಟಲು ಅಪೇಕ್ಷಿಸುವುದಿಲ್ಲ. ಹಾಗೆ ಮಾಡುವವರು ದಾರಿಯ ಮಧ್ಯದಲ್ಲೆ ಮೊಸಳೆಯ ಬಾಯಿಗೆ ಆಹುತಿಯಾಗಬೇಕಾಗುತ್ತದೆ. ಇಲ್ಲಿ ಮೊಸಳೆಯನ್ನು ಶರೀರ ಪೋಷಣೆಗೂ, ಕಟ್ಟಿಗೆಯನ್ನು ಸ್ವಸ್ವರೂಪಾನುಸಂಧಾನಕ್ಕೂ ಹೋಲಿಕೆ ಮಾಡಲಾಗಿದೆ. ಶರೀರದ ಮೇಲಿನ ಅಭಿಮಾನವು ಚೆನ್ನಾಗಿ ನೆಲೆಯಾದರೆ ಅದು ಮುಮುಕ್ಷುವನ್ನೂ ಸಂಸಾರದಲ್ಲಿ ಮುಳುಗಿಸಿ ನಾಶ ಮಾಡುತ್ತದೆ ಎನ್ನುವುದು ತಾತ್ಪರ್ಯ.


ಹಾಗಾದರೆ ಶರೀರವನ್ನು ಶೋಷಿಸಬೇಕೆ ಎಂಬ ಆಕ್ಷೇಪ ಸಹಜವಾಗಿ ಬರುತ್ತದೆ. ಅದಕ್ಕಾಗಿ ಆರಂಭದಲ್ಲೇ ನಿತ್ಯಾನಿತ್ಯವಿವೇಕವನ್ನು ಹೇಳಲಾಗಿದೆ. ಯಾವುದು ನಿತ್ಯ ಮತ್ತು ಅನಿತ್ಯ ಎನ್ನುವುದನ್ನು ಮೊದಲು ಸರಿಯಾಗಿ ತಿಳಿದುಕೊಳ್ಳಬೇಕು, ಬಳಿಕ ಅನುಸಂಧಾನಕ್ಕೆ ಮುಂದಾಗಬೇಕು ಎನ್ನುತ್ತಾರೆ. ತಾತ್ಕಾಲಿಕವಾಗಿ (ಅನಿತ್ಯ) ಶರೀರಕ್ಕೆ ಆಹಾರ ಇತ್ಯಾದಿಗಳನ್ನು ಕೊಡಬೇಕಾಗುತ್ತದೆ. ಹಸಿವಾದಾಗ ತಿನ್ನವುದು ಸಹಜ ಪ್ರಕ್ರಿಯೆ. ಎಷ್ಟು ತಿನ್ನಬೇಕು? ಏನು ತಿನ್ನಬೇಕು ಎನ್ನುವುದೂ ಇಲ್ಲಿ ಮುಖ್ಯವಾಗುತ್ತದೆ. ತಾಯಿಯು ಮಗುವಿನ ಹಠವನ್ನು ತಿಳಿದು ಅದಕ್ಕೆ ಎಷ್ಟು ಬೇಕೋ ಅಷ್ಟೇ ಕೊಡುವಂತೆ ಶರೀರಕ್ಕೂ ಒದಗಿಸಬೇಕಾಗುತ್ತದೆ. ಹಸಿವನ್ನು ರೋಗವೆಂದುಕೊಂಡರೆ ಆಹಾರವನ್ನು ಔಷಧದ ರೂಪದಲ್ಲಿ ಕೊಡಬೇಕು ಎಂಬ ಪ್ರಸಿದ್ಧ ವಾಕ್ಯದ ಅನುಸಾರ, ಹದವರಿತು ಸಾಧನೆಗಾಗಿ ಮಾತ್ರ ದೇಹ ಪೋಷಣೆ ಮಾಡಿಕೊಳ್ಳಬೇಕು ಆತ್ಮ ಸಾಕ್ಷಾತ್ಕಾರಕ್ಕೆ ಅಲ್ಲ ಎಂಬರ್ಥದಲ್ಲಿ ಹೇಳುತ್ತಾರೆ.

..........


ಕಾಮೆಂಟ್‌ಗಳು