Part -56

ಮೂಲ:

ತ್ವಜ್ಮಾಂಸ_ರುಧಿರ_ಸ್ನಾಯು_ಮೇದೋ_ಮಜ್ಜಾಸ್ಥಿ_ಸಂಕುಲಮ್ |

ಪೂರ್ಣಂ ಮೂತ್ರಪುರೀಷಾಭ್ಯಾಂ ಸ್ಥೂಲಂ ನಿಂದ್ಯಮಿದಂ ವಪುಃ ||೮೬||


ಪ್ರತಿಪದಾರ್ಥ:

ತ್ವಕ್_ಮಾಂಸ =ಚರ್ಮ_ಮಾಂಸ, ರುಧಿರ = ರಕ್ತ, ಸ್ನಾಯು =(ಮಾಂಸ) ಖಂಡ, ಮೇದಃ = ಕೊಬ್ಬು, ಮಜ್ಜಾ = ಮಜ್ಜೆ, ಅಸ್ಥಿ = ಮೂಳೆ, ಸಂಕುಲಮ್ = (ಇವುಗಳಿಂದ) ಕೂಡಿರುವ, ಮೂತ್ರ ಪುರೀಷಾಭ್ಯಾಂ = ಮಲಮೂತ್ರಗಳಿಂದ, ಪೂರ್ಣಂ = ತುಂಬಿರುವ, ಸ್ಥೂಲಂ=ಸ್ಥೂಲವು, ನಿದ್ಯಂ = ನಿಂದನೆಗೆ ಅರ್ಹವಾದ, ಇದಂ ವಪುಃ = ಈ ಶರೀರ.


ತಾತ್ಪರ್ಯ:

ಚರ್ಮ, ಮಾಂಸ, ರಕ್ತ, ಸ್ನಾಯು, ಕೊಬ್ಬು, ಮಜ್ಜೆ ಮತ್ತು ಮೂಳೆಗಳಿಂದ ಕೂಡಿ ಮಲಮೂತ್ರಾದಿಗಳಿಂದ ತುಂಬಿರುವ ದೇಹವೆಂಬ ಈ ಸ್ಥೂಲ ಶರೀರವು ಕೂಡ ನಿಂದನೆಗೆ ಅರ್ಹವಾದುದೇ ಆಗಿದೆ.


ವಿವರಣೆ:

ದೇಹಾಸಕ್ತಿಯ ನಿಂದನೆಯ ಬಳಿಕ ಸ್ಥೂಲ ಶರೀರವೂ ಹೇಗೆ ನಿಂದ್ಯಯೋಗ್ಯವಾಗಿದೆ ಎನ್ನುವುದನ್ನು ಈ ಶ್ಲೋಕದಲ್ಲಿ ವಿವರಿಸುತ್ತಾರೆ. ಚರ್ಮ, ಮಾಂಸ, ಮಜ್ಜೆ (Bone marrow fluid) ಇತ್ಯಾದಿಗಳಿಂದ ಕೂಡಿರುವ ದೇಹವನ್ನು ಸ್ಥೂಲ ಶರೀರವೆಂದು ತಿಳಿಯಲಾಗಿದೆ. ಇಂತಹ ಶರೀರವೂ ಮಲಮೂತ್ರಾದಿಗಳಿಂದ ತುಂಬಿರುವುದರಿಂದ ನಿಂದನೆಗೆ ಅರ್ಹವಾದುದಾಗಿದೆ. ಶರೀರದ ಮೇಲಿನ ಆಸಕ್ತಿಯನ್ನು ತ್ಯಜಿಸಲು ಇದು ಮುಖ್ಯ ಕಾರಣವಾಗುತ್ತದೆ ಎಂದು ಹೇಳುತ್ತಾರೆ.

ಯಾರಿಗೆ ತನ್ನ ದೇಹದಿಂದ ಹುಟ್ಟುವ ಬೆವರಿನ ವಾಸನೆಯು ಬಾಧಿಸಿ ಅಸಹ್ಯವೆನಿಸುವುದಿಲ್ಲವೋ, ಅವನಿಗೆ ಯಾವುದರ ಬಗ್ಗೆಯೂ ವೈರಾಗ್ಯ ಬರಲು ಸಾಧ್ಯವಿಲ್ಲ ಎಂಬ ಗುರುವಾಕ್ಯದ** ಅನುಸಾರ, ಮನುಷ್ಯ ದೇಹದಿಂದ ಉತ್ಪತ್ತಿಯಾಗುವ ಮಲಮೂತ್ರಾದಿಗಳ ಬಗ್ಗೆ ಪ್ರತಿಯೊಬ್ಬರಿಗೂ ಜಿಗುಪ್ಸೆ ಇದ್ದೇ ಇರುತ್ತದೆ, ಯಾರೂ ಅದನ್ನು ಮುಟ್ಟುವುದಾಗಲೀ ಸೇವಿಸುವುದಕ್ಕಾಗಲೀ (ಸ್ವಮೂತ್ರಪಾನವನ್ನು ವ್ಯಾವಹಾರಿಕ ಲೋಕಕ್ಕೆ ಸೀಮಿತಗೊಳಿಸಿ) ಇಷ್ಟಪಡುವುದಿಲ್ಲ. ಶರೀರ ಪೋಷಣೆ ಅಥವಾ ದೇಹಾಸಕ್ತಿಯ ಬಗ್ಗೆ ಹತೋಟಿ ಸಾಧಿಸಬೇಕಾದರೆ ಇಂತಹ ಜಿಗುಪ್ಸಾ ಭಾವವು ಅತ್ಯಗತ್ಯವಾಗಿರುತ್ತದೆ. ಆ ದೃಷ್ಟಿಯಿಂದಲೇ ಇಲ್ಲಿ ತ್ವಜ್ಮಾಂಸ...ಮೂತ್ರಪುರೀಷಾ...ಎಂಬ ಉದಾಹರಣೆಗಳನ್ನು ನೀಡಿದ್ದಾರೆ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ಸ್ಥೂಲ ಶರೀರದ ವರ್ಣನೆಯು ಹಿಂದಿನ ಶ್ಲೋಕದಲ್ಲಿ ಬಂದಿದ್ದರೂ ಪುನರುಕ್ತಿದೋಷವಾಗುವುದಿಲ್ಲ, ಏಕೆಂದರೆ ಇಲ್ಲಿ ನಿಂದನೆ ಮತ್ತು ಅದರ ಮೂಲಕ ಹುಟ್ಟಬೇಕಾದ ವೈರಾಗ್ಯದ ಮುನ್ಸೂಚನೆಯಿದೆ ಎಂದು ವಿದ್ವಾನ್ (ಮಹಾಮಹೋಪಾಧ್ಯಾಯರೂ, ಕೀರ್ತಿಶೇಷರೂ ಆದ) ಎನ್. ರಂಗನಾಥ ಶರ್ಮರು ತಮ್ಮ ವಿವರಣೆಯಲ್ಲಿ ಹೇಳಿರುತ್ತಾರೆ.

.........

ಟಿಪ್ಪಣಿ:

** ಸ್ವದೇಹಾಶುಚಿಗಂಧೇನ ನ ವಿರಜ್ಯೇತ ಯಃ ಪುಮಾನ್ |

ವೈರಾಗ್ಯಕಾರಣಂ ತಸ್ಯ ಕಿಮನ್ಯದುಪದಿಷ್ಯಾತಾಮ್ ||

(ವಿಷ್ಣುಪುರಾಣ. ಚಂದ್ರಶೇಖರ ಭಾರತೀ ಸ್ವಾಮಿಗಳ ವ್ಯಾಖ್ಯಾನದಿಂದ)

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ