Part - 51


ಮೂಲ:
ವಿಷಮ_ವಿಷಯ ಮಾರ್ಗೇ ಗಚ್ಛತೋsನಚ್ಛಬುದ್ದೇಃ
ಪ್ರತಿಪದಮಭಯಾತೋ ಮೃತ್ಯುರಪ್ಯೇಷ ವಿದ್ಧಿ |
ಹಿತ_ಸುಜನ_ಗುರೂಕ್ತ್ಯಾಗಚ್ಛತಃ ಸ್ವಸ್ಯ ಯುಕ್ತ್ಯಾ
ಫ್ರಭವತಿ ಫಲಸಿದ್ಧಿಃ ಸತ್ಯಮಿತ್ಯೇವ ವಿದ್ಧಿ ||೮೧||

ಪ್ರತಿಪದಾರ್ಥ:
ವಿಷಮ ವಿಷಯ ಮಾರ್ಗೇ=ದುರಿತವಾದ ವಿಷಯಮಾರ್ಗದಲ್ಲಿ, ಗಚ್ಛತಃ=ಹೋಗುತ್ತಿರುವ, ಅನಚ್ಛಬುದ್ಧೇಃ=ಮಲಿನಬುದ್ಧಿಯುಳ್ಳವನ, ವಿಷಃ ಮೃತ್ಯುಃ ಅಪಿ =ಈ ಸಾವೂ ಕೂಡ, ಪ್ರತಿಪದಂ= ಹೆಜ್ಜೆಹೆಜ್ಜೆಗೂ, ಅಭಿಯಾತಃ=ಹಿಂಬಾಲಿಸುತ್ತಿರುವುದು, ವಿದ್ಧಿ=ತಿಳಿದುಕೊ:, ಹಿತ ಸುಜನ ಗುರು ಉಕ್ತ್ಯಾ = ಆತ್ಮೀಯರು ಗುರುಗಳು ಉತ್ತಮರ ಮಾತಿನಿಂದಲೂ, ಸ್ವಸ್ಯ ಯುಕ್ತ್ಯಾ = ತನ್ನ ಯುಕ್ತಿಯಿಂದಲೂ, ಗಚ್ಛತಃ=ನಡೆಯುತ್ತಿರುವವನಿಗೆ, ಫಲಸಿದ್ಧಿಃ=ಮೋಕ್ಷಸಿದ್ಧಿಯು, ಪ್ರಭವತಿಃ=ಉಂಟಾಗುತ್ತದೆ, ಸತ್ಯಂ = ಸತ್ಯವು, ಏವಂ ವಿದ್ಧಿ = ಹೀಗೆ ಎಂದು ತಿಳಿ:

ತಾತ್ಪರ್ಯ:
ದುರಿತವಾದ ವಿಷಯಮಾರ್ಗದಲ್ಲಿ ಹೋಗುತ್ತಿರುವ ಮಲಿನ ಬುದ್ಧಿಯುಳ್ಳವನನ್ನು ಮೃತ್ಯುವು ಹೆಜ್ಜೆಹೆಜ್ಜೆಗೂ ಹಿಂಬಾಲಿಸುತ್ತಿರುತ್ತದೆ. ಆತ್ಮೀಯರು, ಗುರುಗಳು ಹಾಗೂ ಜ್ಞಾನಿಗಳ ಉಪದೇಶದಿಂದ ಮತ್ತು ಸ್ವಂತ ಬುದ್ಧಿಯಿಂದ ನಡೆಯುವವನಿಗೆ ಮೋಕ್ಷರೂಪವಾದ ಫಲವು ಸಿದ್ಧಿಸುತ್ತದೆ. ಇದೇ ಸತ್ಯ ಎಂದು ತಿಳಿದುಕೊ.

ವಿವರಣೆ:
ವಿಷಯನಿಂದನೆಯ ಪರಾಕಾಷ್ಠೆಯನ್ನು ನಾವು ಈ ಶ್ಲೋಕದಲ್ಲಿ ಕಾಣಬಹುದಾಗಿರುತ್ತದೆ. ಯಾರು ಶಬ್ದಾದಿ ಐದು ಗುಣಗಳ ಸೆಳೆತಕ್ಕೆ ಸಿಲುಕಿ ವಿಷಯವಸ್ತುಗಳ ಕಡೆಗೆ ಗಮನ ಹರಿಸುವನೋ ಆತನು ಸಾಧನೆಯ ಹಾದಿಯಲ್ಲಿ ಇದ್ದರೂ ಮಲಿನ ಬುದ್ಧಿಯುಳ್ಳವನಾಗುತ್ತಾನೆ. ಅಂತಹ ಕೆಟ್ಟ ದಾರಿಯಲ್ಲಿ ಹೋಗುವವನನ್ನು ಸಾವು ಯಾವಾಗಲೂ ಹಿಂಬಾಲಿಸುತ್ತಿರುತ್ತದೆ. ಹಾಗಾಗಿ ಹಿತವಚನವನ್ನು ನುಡಿಯುವ ಆಪ್ತರು, ಗುರುಗಳು ಹಾಗೂ ಸುಜನರಾದ ಜ್ಞಾನಿಗಳ ಉಪದೇಶಾಮೃತವನ್ನು ಕೇಳಬೇಕು, ಬಳಿಕ ನಿನ್ನ ಸ್ವಂತ ಬುದ್ಧಿಯನ್ನು ನಂಬಿ ಮುನ್ನೆಡೆದರೆ ಖಂಡಿತ ಮೋಕ್ಷವು ದೊರಕುತ್ತದೆ. ಇದೇ ಸತ್ಯ , ಬೇರೆ ಇನ್ನೇನೂ ಇಲ್ಲ ಎಂದು ಹೇಳುತ್ತಾರೆ.

ಇಂದ್ರಿಯಗಳನ್ನು ಸೆಳೆಯುವ ವಿಷಯವಸ್ತುಗಳು ಬುದ್ಧಿ ಭ್ರಮಣೆಗೆ ಕಾರಣವಾಗುತ್ತದೆ. ಅದರಿಂದ ಸಾಲು ಸಾಲು ಅನರ್ಥಗಳೇ ಘಟಿಸುತ್ತಾ ಹೋಗುತ್ತದೆ. ಕಪ್ಪೆಯು ಹಾವಿನ ಹೊಟ್ಟೆಯನ್ನು ಸೇರುವ ಸಂದರ್ಭದಲ್ಲಿಯೂ ನೊಣ ಇತ್ಯಾದಿ ಕೀಟಕ್ಕಾಗಿ ತನ್ನ ನಾಲಗೆಯನ್ನು ಚಾಚುತ್ತದೆಯಂತೆ. ಹಾಗಾಗಿ ಶಬ್ದಾದಿ ಪಂಚಗುಣಗಳ ಮೋಹಕ್ಕೆ ಒಳಗಾಗುವುದು ಅತ್ಯಂತ ಭಯಂಕರವಾದ ಮಾರ್ಗವಾಗಿದ್ದು ಆ ದಾರಿಯಿಂದ ವಿಮುಖರಾಗುವುದೊಂದೇ ಮೋಕ್ಷಕ್ಕೆ ಕಾರಣವಾಗುವ ಸತ್ಯಸಂಗತಿ ಎಂದು ಹೇಳುತ್ತಾರೆ.
..................

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ