Part - 59

ಮೂಲ:

ಸರ್ವೋsಪಿ ಬಾಹ್ಯಸಂಸಾರಃ ಪುರುಷಸ್ಯ ಯದಾಶ್ರಯಃ |

ವಿದ್ಧಿ ದೇಹಮಿದಂ ಸ್ಥೂಲಂ ಗೃಹವದ್ ಗೃಹಮೇಧಿನಃ || ೮೯||


ಪ್ರತಿಪದಾರ್ಥ:

ಪುರುಷಸ್ಯ = ಪುರುಷನಿಗೆ (ಮನುಷ್ಯ), ಸರ್ವಃ ಅಪಿ ಬಾಹ್ಯಸಂಸಾರಃ = ಎಲ್ಲ ಹೊರಗಿನ ವ್ಯವಸ್ಥೆಯೂ(ಸಂಸಾರವು), ಯದಾಶ್ರಯಃ = ಯಾವುದನ್ನು ನೆಚ್ಚಿಕೊಂಡಿದೆಯೋ, ಇದಂ ಸ್ಥೂಲಂ ದೇಹಂ = ಇಂತಹ ಸ್ಥೂಲ ಶರೀರವನ್ನು, ಗೃಹಮೇಧಿನಃ = ಗೃಹಸ್ಥನ, ಗೃಹವತ್ = ಮನೆಯಂತೆ, ವಿದ್ಧಿ = ತಿಳಿ.


ತಾತ್ಪರ್ಯ:

ಮನುಷ್ಯನ (ಬಾಹ್ಯಸಂಸಾರ) ಹೊರಗಿನ ಎಲ್ಲ ಆಗುಹೋಗುಗಳು ಯಾವುದನ್ನು ನೆಚ್ಚಿಕೊಂಡಿದೆಯೋ, ಅಂಥ ಈ ಸ್ಥೂಲಶರೀರವನ್ನು ಗೃಹಸ್ಥನ ಮನೆ ಎಂದು ತಿಳಿ.


ವಿವರಣೆ:

ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಸೂರು ಎನ್ನುವುದು ತುಂಬ ಮುಖ್ಯವಾದುದು. ಎಲ್ಲರೂ ಅವರ ಅನುಕೂಲ, ಆದಾಯದ ಇತಿಮಿತಿಯ ಅನುಸಾರ ಮನೆಯನ್ನು ಕಟ್ಟಿಕೊಳ್ಳುತ್ತಾರೆ. ಬದುಕಿರುವಾಗ ನಾನು ನಿರ್ಮಿಸಿದ ಮನೆ, ನನ್ನ ಇಚ್ಚೆಗೆ ತಕ್ಕಂತೆಯೇ ಅಲಂಕೃತಗೊಂಡ ಗೃಹವಿದು ಎಂಬ ಭಾವ ಇದ್ದೇ ಇರುತ್ತದೆ. ಏನೇ ಅಹಂಭಾವವಿದ್ದರೂ ಜಗತ್ತನ್ನು ಬಿಟ್ಟು ತೆರಳುವಾಗ ಮನೆ, ಮಂದಿರಗಳಾವುದೂ ನಮ್ಮ ಜತೆ ಬರುವುದಿಲ್ಲ. ಯಾರೂ ಅದನ್ನು ತನ್ನ ಆತ್ಮವೆಂದು ಪೋಷಿಸುವುದಿಲ್ಲ (ಪೋಷಣೆ ಸರ್ವಥಾ ಸಲ್ಲದು ಎನ್ನುವುದು ಪರೋಕ್ಷ ನಿರೂಪಣೆ). ಹಾಗೆಯೇ ಸೂಕ್ಷ್ಮ ಭೂತಗಳಿಂದ ರೂಪುಗೊಂಡ ಈ ಸ್ಥೂಲಶರೀರದಲ್ಲಿ 'ನಾನು' ‘ನನ್ನದು' ಎಂಬ ಅಭಿಮಾನವನ್ನು ಎಂದಿಗೂ ಮಾಡಬಾರದು ಎಂದು ಹೇಳುತ್ತಾರೆ.

ಸ್ಥೂಲದೇಹದಿಂದ ಆತ್ಮನನ್ನು ಬೇರೆಯಾಗಿ ನೋಡುವ ಬಗೆಯನ್ನು ಇಲ್ಲಿ ನಿರೂಪಿಸುತ್ತಾರೆ. ಸಂಸಾರಿಯಾಗಿದ್ದು ಮನೆಯನ್ನು ಅವಲಂಬಿಸಿದವನು ಹೆಂಡತಿ ಮಕ್ಕಳು ಎಂದು ಕುಟುಂಬಕ್ಕೆ ಆಶ್ರಯವಾಗುತ್ತಾನೆ. ಸಂಸಾರವೇ ಬೇಡ ಎಂದು ಹೊರಟರಿಗೆ ಮನೆಯ ಚಿಂತೆಯೂ ಇರುವುದಿಲ್ಲ. ತನ್ನ ಮನೆ, ಕುಟುಂಬವನ್ನೇ ಸರ್ವಸ್ವವೆಂದು ತಿಳಿಯುವವನು ಅಲ್ಲಿ ಒದಗಿ ಬರುವ ಎಲ್ಲ ಸುಖ ದುಃಖಾದಿಗಳಿಗೂ ಪಾಲುದಾರನಾಗುತ್ತಾನೆ, ಅದರಿಂದ ಪರಿತಪಿಸುವುದೂ ಆಗುತ್ತದೆ. ಹಾಗಾಗಿ ಸ್ಥೂಲದೇಹವನ್ನೇ ನೆಚ್ಚಿಕೊಂಡು ಆತ್ಮ ಸಾಧನೆಗೆ ಹೊರಡುವುದು ಪ್ರಯೋಜನಕಾರಿಯಲ್ಲ ಎಂಬ ಅರ್ಥದಲ್ಲಿ ಹೇಳಿರುತ್ತಾರೆ. 

......................

ಕಾಮೆಂಟ್‌ಗಳು