Part -57


ಮೂಲ:

ಪಂಚೀಕೃತೇಭ್ಯೋ ಭೂತೇಭ್ಯಃ ಸ್ಥೂಲೇಭ್ಯಃ ಪೂರ್ವಕರ್ಮಣಾ |

ಸಮುತ್ಪನ್ನಮಿದಂ ಸ್ಥೂಲಂ ಭೋಗಾಯತನಮಾತ್ಮನಃ |

ಅವಸ್ಥಾ ಜಾಗರಸ್ತಸ್ಯ ಸ್ಥೂಲಾರ್ಥಾನುಭವೋ ಯತಃ ||೮೭||


ಪ್ರತಿಪದಾರ್ಥ:

ಪಂಚೀಕೃತೇಭ್ಯಃ=ಪಂಚೀಕರಣವಾದ, ಸ್ಥೂಲೇಭ್ಯಃ=ಸ್ಥೂಲವಾದ, ಭೂತೇಭ್ಯಃ=ಭೂತಗಳಿಂದ, ಪೂರ್ವಕರ್ಮಣಾ=ಹಿಂದಿನ ಕರ್ಮಗಳಿಂದ, ಸಮುತ್ಪನ್ನಂ=ಚೆನ್ನಾಗಿ ಹುಟ್ಟಿದ, ಇದಂ ಸ್ಥೂಲಂ=ಈ ಸ್ಥೂಲ (ಶರೀರವು), ಆತ್ಮನಃ=ಆತ್ಮನ, ಭೋಗಾಯತನಂ=ಅನುಭವಕ್ಕೆ ಆಶ್ರಯವಾಗಿದೆ, ತಸ್ಯ=ಅದಕ್ಕೆ, ಜಾಗರಃ=ಜಾಗ್ರತ್ತು, ಅವಸ್ಥಾ=ಅವಸ್ಥೆಯಾಗಿದೆ, ಯತಃ=ಏಕೆಂದರೆ, ಸ್ಥೂಲ_ಅರ್ಥ_ಅನುಭವಃ=ಸ್ಥೂಲವಸ್ತುಗಳ ಅನುಭವವವು ಆಗುತ್ತದೆ.


ತಾತ್ಪರ್ಯ:

ಪಂಚೀಕೃತವಾದ ಸ್ಥೂಲಭೂತಗಳಿಂದ ಉತ್ಪನ್ನವಾಗಿರುವ ಈ ಸ್ಥೂಲಶರೀರವು ಪೂರ್ವಕರ್ಮಾನುಸಾರ ಹುಟ್ಟಿ ಆತ್ಮನ ಭೋಗಕ್ಕೆ ಆಶ್ರಯವಾಗಿದೆ. ಶರೀರದ ಎಚ್ಚರಿಕೆಯ ಅವಸ್ಥೆಯಲ್ಲಿ ಸ್ಥೂಲವಸ್ತುಗಳ ಅನುಭವವು ಉಂಟಾಗುತ್ತದೆ.


ವಿವರಣೆ:

ಈ ಶ್ಲೋಕವನ್ನು ಬಿಡಿಯಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ.

ಪಂಚೀಕರಣ : (ಪಂಚೀಕೃತೇಭ್ಯೋ ಭೂತೇಭ್ಯಃ ಸ್ಥೂಲೇಭ್ಯಃ) = ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ ಇವುಗಳನ್ನು ಜಗತ್ತಿನಲ್ಲಿ ಪಂಚಭೂತಗಳೆಂದು ಗುರುತಿಸಲಾಗಿದೆ. ಸೃಷ್ಟಿಪೂರ್ವದಲ್ಲಿ (ಹಾಗೆ ಸುಮ್ಮನೆ: ಬಿಗ್ ಬ್ಯಾಂಗ್ ಗಿಂತಲೂ ಮೊದಲು ಎಂದುಕೊಳ್ಳೋಣ) ಸೂಕ್ಷ್ಮರೂಪದಲ್ಲಿ ಅಂದರೆ ತತ್ ಕ್ಷಣ ಇದು ನೆಲ, ಗಾಳಿ ಬೀಸುತ್ತಿದೆ ಎಂದು ಗುರುತಿಸಲು ಆಗದಂತಹ ರೂಪದಲ್ಲಿ ಇರುತ್ತವೆ ಎಂದು ಹೇಳಲಾಗಿದೆ. ಹೀಗೆ ಸೂಕ್ಷ್ಮರೂಪದಲ್ಲಿರುವ ಪಂಚಭೂತಗಳ ಅಂಶಗಳು ( ೧ ಎನ್ನುವ ಅಂಕಿ ಭೂತವಾದರೆ ೧/೨ ಅರ್ಧ ಎನ್ನುವುದು ೧ ಎನ್ನುವುದರ ಅಂಶವಾಗುತ್ತದೆ: ಸಾಮಾನ್ಯ ಗಣಿತ) ಪರಸ್ಪರ ಮಿಳಿತವಾದಾಗ ಸ್ಥೂಲ(ಆಕಾರವಿರುವ) ರೂಪದ ಶರೀರವು ಹುಟ್ಟುತ್ತದೆ. ಶರೀರವು ಮಾತ್ರವೇ ಸೃಷ್ಟಿಯಾಗುತ್ತದೆ ಎಂದಲ್ಲ, ಇದೇ ಕ್ರಿಯೆಯಲ್ಲಿ ಜಗತ್ತಿನ ಜೀವ ಜಡ ವಸ್ತುಗಳು ಆಕಾರ ಪಡೆಯುತ್ತಾ ಹೋಗುತ್ತದೆ. ಲಾವಾರಸವು ಉಕ್ಕಿ ಹರಿದು ಗಟ್ಟಿಯಾಗಿ ಶತಮಾನಗಳ ಕಾಲಕ್ಕೂ ಉಳಿಯುವ ಶಿಲಾಬಂಡೆಯನ್ನು ಸೃಜಿಸುವಂತೆ ಎಲ್ಲವೂ ಉತ್ಪನ್ನವಾಗುತ್ತದೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಇವೇ ಪಂಚಭೂತಗಳಲ್ಲಿರುವ ಅಂಶಗಳು ಅಥವಾ ಗುಣಗಳು. ಅನುಭವಜನ್ಯವಾಗುವ ಮುನ್ನ ಇವುಗಳನ್ನು ಸೂಕ್ಷ್ಮಾಂಶ ಎಂದು ಹೇಳಲಾಗುತ್ತದೆ. ಪಂಚಭೂತಗಳಲ್ಲಿ ಪ್ರತಿಯೊಂದು ಭೂತವೂ ಎರಡೆರೆಡು ಭಾಗವಾಗುತ್ತವೆ. ಹೀಗೆ ಭಾಗವಾದ ಬಳಿಕ ಭೂತವು ಅಂಶರೂಪವಾಗುತ್ತದೆ , ಹಾಗಾಗಿ ಪಂಚಭೂತಗಳ ರೂಪಕ್ಕೆ ತನ್ಮಾತ್ರಾಂಶಗಳೇ ಕಾರಣ ಎನ್ನುವುದು ಸಾಂಖ್ಯದರ್ಶನದ ಪ್ರಮುಖ ನಿರೂಪಣೆಯಾಗಿದೆ. ಎರಡರ ಒಂದೊಂದು ಭಾಗವೂ ನಾಲ್ಕಾಗಿ ವಿಭಜನೆಯಾಗುತ್ತದೆ(ಒಟ್ಟು ೮) . ಅನಂತರ ಒಂದೊಂದು ವಿಭಾಗೀಕೃತ ಭೂತದ ಅರ್ಧಾಂಶವು ಮಿಕ್ಕ ನಾಲ್ಕು ಭೂತಗಳ ಅಂಶಗಳೊಂದಿಗೆ(/) ಸೇರಿ ಒಂದು ಸ್ಥೂಲಭೂತವಾಗುತ್ತದೆ (/+/+/+/+/೮ ಈ ಮಾದರಿಯಲ್ಲಿ). ಹಾಗಾಗಿ ಪಂಚಭೂತಗಳ ಸಾಕ್ಷಿರೂಪಕ್ಕೆ ಅವುಗಳಲ್ಲಿರುವ ಸೂಕ್ಷ್ಮಾಂಶಗಳೇ ಕಾರಣವಾಗುತ್ತವೆ ಎಂದು ತಿಳಿಯಬಹುದು.

ಉದಾ: ಪಂಚಭೂತಗಳಲ್ಲಿ ಪೃಥ್ವಿಯೂ ಒಂದು. ಇಡೀ ಭೂಮಿಯನ್ನು ಎರಡು ಭಾಗ ಮಾಡಿದರೆ ಅದರಲ್ಲಿ ಅರ್ಧ ಭಾಗವು ಪ್ರಧಾನಾಂಶ(ಗಂಧ)ವಾದರೆ, ಉಳಿದರ್ಧ ಭಾಗವು ಮಿಕ್ಕ ನಾಲ್ಕು ಭೂತಗಳ ಅಂಶಗಳಿಂದ(ಶಬ್ದ+ಸ್ಪರ್ಶ+ರೂಪ+ರಸ)ಸಮ್ಮಿಶ್ರವಾಗಿರುತ್ತದೆ. ಹಾಗೆಯೇ 'ರಸ'ವನ್ನು ಮೂಲಾಂಶವಾಗಿಟ್ಟುಕೊಂಡಾಗ ರಸಕ್ಕೆ ಶಬ್ದ+ಸ್ಪರ್ಶ+ರೂಪ ಸೇರಿ ಜಲ(ಅಪ್)ದ ಸೃಷ್ಟಿಯಾಗುತ್ತದೆ. ಹೀಗೆ ಸೂಕ್ಷ್ಮವು ಸ್ಥೂಲವಾದಾಗ ಅದರಿಂದ ನಾನು, ನನ್ನದು ಎನ್ನುವ ಮಮಕಾರಕ್ಕೆ ಕಾರಣವಾಗುವ ಸ್ಥೂಲಶರೀರವೂ ಉತ್ಪನ್ನವಾಗುತ್ತದೆ ಎನ್ನುವುದು ವೇದಾಂತಾರ್ಥ ವಿಚಾರವಾಗಿದೆ. ಶರೀರದ ಹುಟ್ಟಿಗೆ ಕಾರಣವಾಗುವ ಧಾತು_ ಅಂಶಗಳನ್ನು ಮತ್ತು ಅವುಗಳ ಗುಣವನ್ನು ಬಿಡಿಬಿಡಿಯಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲದ ಕಾರಣ ಅದನ್ನು ಅನಿರ್ವಚನೀಯ(ಎಂದಾಕ್ಷಣ 'ಮಾಯಾಮಾತ್ರಂ' ಎನ್ನುವುದು ಸಾಧಿತವಾಗುತ್ತದೆ) ಎನ್ನಲಾಗಿದೆ ಎಂಬ ವಾಕ್ಯ ಉಪನಿಷತ್ತುಗಳಲ್ಲಿ ಬರುತ್ತದೆ. ನಾವು ಯಾವುದೇ ವಸ್ತುವನ್ನು ಅದರ ಗುಣದ ಮೂಲಕ ಮಾತ್ರವೇ ವಿವರಿಸಬಹುದೆ ಹೊರತು, ಅಸ್ತಿತ್ವದಿಂದಲ್ಲ. ಸಕ್ಕರೆಯನ್ನು ಎಷ್ಟು ಬಾರಿ ಸಕ್ಕರೆ ಎಂದು ಕೂಗಿ ಹೇಳಿದರೂ ವ್ಯತ್ಯಾಸ ತಿಳಿಯುವುದಿಲ್ಲ. ಸಿಹಿಯ ಕಾರಣದಿಂದ ವಿವರಿಸಿದಾಗ ಸಕ್ಕರೆ ಏನೆಂದು ಗೊತ್ತಾಗುತ್ತದೆ. ಹಾಗೆಯೇ ಶರೀರವನ್ನು ಅನುಭವಕ್ಕೆ ಒಡ್ಡಿಕೊಂಡಾಗ ಪಂಚಭೂತಗಳ ಸಾಕ್ಷಿಯು ದೊರಕುತ್ತದೆ.

ಪೂರ್ವಕರ್ಮಣಃ_ಸಮುತ್ಪನ್ನಂ : ವ್ಯಾವಹಾರಿಕ ಜಗತ್ತಿನಲ್ಲಿ ನಾನಾ ವಿಧವಾದ ಪ್ರಾಣಿ, ಪಕ್ಷಿ ಜೀವಿಗಳ ಸೃಷ್ಟಿಯು ಪಂಚತನ್ಮಾತ್ರಾಂಶಗಳಿಂದ ಕೂಡಿರುವ ಭೂತಗಳಿಂದಲೇ ಆಗಿದ್ದು, ಅವುಗಳ ಪಾಪ_ಪುಣ್ಯಗಳ ಅನುಸಾರ ಶರೀರಭೇದವನ್ನು ಹೊಂದಿವೆ. ಗ್ರಂಥದ ಆರಂಭದಲ್ಲೆ ನಾವು 'ಜಂತೂನಾಂ ನರಜನ್ಮ ದುರ್ಲಭಮ್' ಎಂದು ತಿಳಿದಿದ್ದು, ಕೋಟಿ ಜನ್ಮಗಳ ಪುಣ್ಯಶೇಷವಿಲ್ಲದೆ ಮುಕ್ತಿಯೂ ಸಾಧ್ಯವಿಲ್ಲ ಎಂದು ಹೇಳಿರುವುದರಿಂದ ಬೇರೆ ಜನ್ಮಗಳಲ್ಲಿ ವಿವಿಧ ರೂಪದಲ್ಲಿ ಭೂಮಿಗೆ ಬಂದು (ಮಳೆಹನಿಯ ರೂಪದಲ್ಲದರೂ ಬಿದ್ದು !) ಸುಖ_ದುಃಖಗಳಿಗನುಸಾರ ಕರ್ಮಗಳನ್ನು ನಡೆಸಿ, ಅದರಿಂದ ಸಂಪಾದಿಸುವ ಪುಣ್ಯ ಪಾಪಗಳನ್ನು ಮುಂದಿನ ಜನ್ಮಕ್ಕೆ ಸಂದಾಯವಾಗಿ ಪಡೆದು, ಕಡೆಯಲ್ಲಿ ಮೋಕ್ಷಕ್ಕೆ ಬೇಕಾದ ಸಾಧನೆಯನ್ನು ಸಿದ್ಧಿಸಿಕೊಳ್ಳುವ ಜನ್ಮದಲ್ಲಿ ಹುಟ್ಟುವುದನ್ನು 'ಸಮುತ್ಪನ್ನಂ' ಎಂಬ ವಿಶೇಷಣದಿಂದ ಗುರುತಿಸಲಾಗಿದೆ ಎಂಬ ಅರ್ಥದಲ್ಲಿ ತಿಳಿಯಬಹುದು.

ಹೀಗೆ ಹುಟ್ಟುವ ಶರೀರಕ್ಕೆ ಅನೇಕ ವಿಷಯ ವಸ್ತುಗಳ ಅನುಭವವು ಆಗುತ್ತದೆ. ಇಂದ್ರಿಯಗಳ ಮೂಲಕ ಎಲ್ಲವೂ ತಿಳಿಯುತ್ತಾ ಹೋಗುತ್ತದೆ. ಇಂತಹ ಅರಿವು ಶರೀರದ ಜಾಗ್ರದಾವಸ್ಥೆಯಲ್ಲಿ (ಎಚ್ಚರವಿದ್ದಾಗ) ಚೆನ್ನಾಗಿ ಆಗುತ್ತದೆ ಮತ್ತು ಆಗಲೇ ಸುಖ_ದುಃಖಗಳಿಗೂ ಕಾರಣವಾಗುತ್ತದೆ. ಪೂರ್ವಾರ್ಜಿತ ಕರ್ಮಫಲದಿಂದ ಹುಟ್ಟಿರುವ ಸ್ಥೂಲಶರೀರದ ಆತ್ಮನು, ಶರೀರವು ಎಚ್ಚರಿಕೆಯಲ್ಲಿದ್ದಾಗ ಕೇವಲ ವಿಷಯ ವಸ್ತುಗಳ ಭೋಗಕ್ಕೆ (ಸುಖದುಃಖಾದಿ) ಆಶ್ರಯವಾಗುತ್ತಾನೆ ಎಂದು ಹೇಳುತ್ತಾರೆ. ವಿಷಯವಸ್ತುಗಳ ಅನುಭವಕ್ಕೆ ಗುರಿಯಾದಾಗ ಅನಾತ್ಮವೆನ್ನಿಸಿಕೊಳ್ಳುವುದು , ಅದನ್ನು ಮೀರಿದಾಗ ಆತ್ಮವಸ್ತುವೆನಿಸಿಕೊಳ್ಳುತ್ತದೆ ಎಂದು ತಿಳಿಯಬಹುರದು. ಈ ಮೂಲಕ ಆತ್ಮಾನಾತ್ಮ ವಿವೇಕವನ್ನೂ ಇಲ್ಲಿ ವಿಷದಪಡಿಸುತ್ತಾರೆ.

............

ಕಾಮೆಂಟ್‌ಗಳು