Part - 50ಮೂಲ:
ವಿಷಯಾಖ್ಯ_ಗ್ರಹೋ ಯೇನ ಸುವಿರಕ್ತ್ಯಸಿನಾ ಹತಃ |
ಸ ಗಚ್ಛತಿ ಭವಾಂಭೋಧೇಃ ಪಾರಂ ಪ್ರತ್ಯೂಹ_ವರ್ಜಿತಃ ||೮೦||

ಪ್ರತಿಪದಾರ್ಥ:
ಯೇನ=ಯಾರಿಂದ, ವಿಷಯಾಖ್ಯ_ಗ್ರಹಃ=ವಿಷಯಾಭಿಲಾಷೆ ಎಂಬ ಮೊಸಳೆಯು, ಸುವಿರಕ್ತಿ_ಅಸಿನಾ=ದೃಢವೈರಾಗ್ಯವೆಂಬ ಕತ್ತಿಯಿಂದ, ಹತಃ=ಕೊಲ್ಲಲ್ಪಡುತ್ತದೆಯೋ, ಸಃ=ಆತನು, ಪ್ರತ್ಯೂಹ ವರ್ಜಿತಃ=ವಿಘ್ನಗಳಿಂದ ಬಿಡುಗಡೆಹೊಂದಿ, ಭವಾಂಭೋಧೇಃ = ಸಂಸಾರ ಸಾಗರದ, ಪಾರಂ=ತೀರವನ್ನು, ಗಚ್ಛತಿ=ಹೊಂದುತ್ತಾನೆ.

ತಾತ್ಪರ್ಯ:
ಯಾರು ದೃಢವಾದ ವೈರಾಗ್ಯ ಎನ್ನುವ ಕತ್ತಿಯಿಂದ ವಿಷಯಾಭಿಲಾಷೆ ಎಂಬ ಮೊಸಳೆಯನ್ನು ಕೊಲ್ಲುವನೋ, ಆತನು ಯಾವ ತೊಂದರೆಗಳಿಗೂ ಸಿಲುಕದೆ ಸಂಸಾರ ಸಮುದ್ರವನ್ನು ದಾಟಿ ಪರತೀರವನ್ನು ಹೊಂದುತ್ತಾನೆ.

ವಿವರಣೆ:
ರಾಜನಾಗಲು ಬಯಸುವವನು ಯುದ್ಧ ಮಾಡಬೇಕಾಗುತ್ತದೆ. ಆಗ ಕದನಕ್ಕೆ ಬೇಕಾಗುವ ಸಲಕರಣೆಗಳನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಂಡು ಸೈನ್ಯವನ್ನು ಮುನ್ನೆಡೆಸಿ ಶತ್ರುಗಳನ್ನು ನಾಶಮಾಡಿ ವಿಜಯವನ್ನು ಪಡೆಯುವುದು ವೀರೋಚಿತ ಮಾರ್ಗವಾಗಿರುತ್ತದೆ. ಅರಸನು ಧೈರ್ಯವಂತಾನಾಗಿದ್ದು, ಸಾಕಷ್ಟು ಕಾಲಾಳು, ಕುದುರೆ, ಆನೆ ಎಲ್ಲವೂ ಇದ್ದು ಸಹ ಕತ್ತಿ, ಗುರಾಣಿ ಇತ್ಯಾದಿ ಯುದ್ಧೋಪಕರಣಗಳು ತುಕ್ಕು ಹಿಡಿದು ಹಾಳಾಗಿದ್ದರೆ ಆತನು ಯಾವ ಸಮರವನ್ನು ಗೆಲ್ಲಲು ಸಾಧ್ಯವಾಗುತ್ತದೆ!. ದೇಶದಲ್ಲಿ ಸೈನಿಕರ ಸಂಖ್ಯೆ ಬಹಳಷ್ಟಿರಬೇಕು, ಜತೆಗೆ ಅವರಿಗೆ ಬೇಕಾಗುವ ಆಧುನಿಕ ಗನ್ನುಗಳು, ವಿಮಾನ, ಡಿಸ್ಟ್ರಾಯರ್ ನೌಕೆಗಳು ಇತ್ಯಾದಿ ಪೂರಕವಾಗಿದ್ದಾಗ ರಕ್ಷಣಾ ವ್ಯವಸ್ಥೆ ಸದೃಢವಾಗಿರುತ್ತದೆ ಎನ್ನಬಹುದು. ಹಾಗೆಯೆ, ಎಲ್ಲ ರೀತಿಯ ಸಾಧನಗಳನ್ನು ಮೈಗೂಡಿಸಿಕೊಂಡಿದ್ದರೂ ವಿಷಯಾಭಿಲಾಷೆಯನ್ನು ಹತ್ತಿಕ್ಕದಿದ್ದರೆ ಅಥವಾ ಅದನ್ನು ಬೇರು ಸಹಿತ ಕಿತ್ತು ಹಾಕದಿದ್ದರೆ ಸಾಕ್ಷಾತ್ಕಾರದ ಹಾದಿ ಸುಲಭವಾಗುವುದಿಲ್ಲ. ಯಾರು ಆಸೆ ಎಂಬ ಮೊಸಳೆಯನ್ನು ತೀವ್ರ ವೈರಾಗ್ಯ ಅಥವಾ ಮನೋನಿಗ್ರಹವೆಂಬ ಖಡ್ಗದಿಂದ ಕೊಲ್ಲುವನೋ, ಆತನು ಯಾವ ತೊಂದರೆಗಳಿಗೂ ಒಳಗಾಗದೆ ಸಂಸಾರ ಸಾಗರವನ್ನು ದಾಟಿ ಪರಮಪದವನ್ನು ಹೊಂದುತ್ತಾನೆ ಎಂದು ಹೇಳುತ್ತಾರೆ.
..........

ಕಾಮೆಂಟ್‌ಗಳು