Parf - 58



ಮೂಲ:


ಬಾಹ್ಯೇಂದ್ರಿಯೈಃ ಸ್ಥೂಲಪದಾರ್ಥ-ಸೇವಾಂ

ಸ್ರಕ್-ಚಂದನ-ಸ್ತ್ರ್ಯಾದಿ-ವಿಚಿತ್ರರೂಪಾಮ್ |

ಕರೋತಿ ಜೀವಃ ಸ್ವಯಮೇತದಾತ್ಮನಾ

ತಸ್ಮಾತ್ ಪ್ರಶಸ್ತಿರ್ವಪುಷೋsಸ್ಯ ಜಾಗರೇ ||




ಪ್ರತಿಪದಾರ್ಥ:

ಜೀವಃ = ಜೀವಾತ್ಮನು, ಬಾಹ್ಯೇಂದ್ರಿಯೈಃ = ಹೊರ ಇಂದ್ರಿಯಗಳಿಂದ, ಸ್ರಕ್-ಚಂದನ = ಹೂವಿನ ಮಾಲೆ ಮತ್ತು ಚಂದನ, ಸ್ತ್ರೀ-ಆದಿ-ವಿಚಿತ್ರರೂಪಾಂ = ಹೆಣ್ಣು ಮೊದಲಾಗಿ ಬೇರೆ ರೂಪವುಳ್ಳ, ಸ್ಥೂಲಪದಾರ್ಥ-ಸೇವಾಂ = ಸ್ಥೂಲಪದಾರ್ಥಗಳ ಸೇವೆಯನ್ನು, ಏತದಾತ್ಮನಾ = ಹಾಗೆ ಅಭಿಮಾನದಿಂದ ಪಡೆದಿರುವ (ಈ ಶರೀರದಿಂದಲೇ), ಸ್ವಯಂ = ತಾನೇ, ಕರೋತಿ = ಮಾಡುತ್ತಾನೆ, ತಸ್ಮಾತ್ = ಆದುದರಿಂದ, ಅಸ್ಯ ವಪುಷಃ = ಈ ಶರೀರಕ್ಕೆ, ಜಾಗರೇ = ಎಚ್ಚರಿಕೆಯ ಅವಸ್ಥೆಯಲ್ಲಿ, ಪ್ರಶಸ್ತಿಃ = ಆದ್ಯತೆ ಇರುತ್ತದೆ.




ತಾತ್ಪರ್ಯ:

ಸ್ಥೂಲ ಶರೀರವನ್ನು ಪಡೆದವನು ದೇಹಾಭಿಮಾನ ಮತ್ತು ತನ್ನ ಇಂದ್ರಿಯಗಳಿಂದ ಪ್ರೇರಿತನಾಗಿ ಹೂವು(ಹೂಮಾಲೆ), ಚಂದನ, ಸ್ತ್ರೀ ಮುಂತಾದ ಬೇರೆ ಬೇರೆ ಸ್ಥೂಲಪದಾರ್ಥಗಳ ಸೇವೆಯನ್ನು ತಾನಾಗಿಯೇ ಮಾಡುತ್ತಾನೆ. ಹಾಗಾಗಿ ಶರೀರಕ್ಕೆ ಜಾಗ್ರದಾವಸ್ಥೆಯಲ್ಲಿ ಪ್ರಾಮುಖ್ಯತೆ ಇರುತ್ತದೆ.




ವಿವರಣೆ:

ಪಂಚೀಕೃತವಾಗಿ (ಪ್ರಾಣಿವರ್ಗದಲ್ಲಿ)ಹುಟ್ಟಿರುವ ಸ್ಥೂಲಶರೀರವು ದೇಹಾತ್ಮನ ಭೋಗಕ್ಕೆ ತನ್ನ ಎಚ್ಚರಿಕೆಯ ಅವಸ್ಥೆಯಲ್ಲಿ ಆಶ್ರಯವಾಗಿರುತ್ತದೆ ಎಂದು ಹೇಳಿದ್ದನ್ನು 'ಬಾಹ್ಯೇಂದ್ರಿಯೈ...’ ಎಂಬ ಶ್ಲೋಕದಲ್ಲಿ ವಿವರಿಸುತ್ತಾರೆ. ಕಣ್ಣು, ಕಿವಿ, ಬಾಯಿ, ಚರ್ಮ ಮುಂತಾದ ಇಂದ್ರಿಯಗಳ ಮೂಲಕ ಹೊರ ಪ್ರಪಂಚದ ಪದಾರ್ಥಗಳ ಅರಿವು ಜೀವಿಗೆ ಉಂಟಾಗುತ್ತದೆ. ಬಿಸಿಲಿನ ತಾಪ, ಚಳಿ, ಹೂವಿನ ಪರಿಮಳ, ಚಂದನವನ್ನು ತೇಯ್ದಾಗ ಹೊರಡುವ ಸುಗಂಧ ಮುಂತಾದವು ಬಾಹ್ಯೇಂದ್ರಿಯಗಳ ಮೂಲಕ ಗೊತ್ತಾಗುತ್ತದೆ. ಹೆಣ್ಣಿನ ಪರ-ವಿರುದ್ಧವಾದ ಸ್ನೇಹ-ಕೋಪಗಳಿಗೂ ಜೀವಿಯು ದೇಹವನ್ನೇ ಆಶ್ರಯಿಸಬೇಕಾಗಿರುತ್ತದೆ. ಅಂದರೆ ಎಲ್ಲ ಸುಖ-ದುಃಖಗಳಿಗೂ ಸ್ಥೂಲಶರೀರದಲ್ಲಿರುವ (ಅಭಿಮಾನಪೂರ್ವಕವಾಗಿ) ಆತ್ಮನು ಅನ್ವಯವಾಗುತ್ತಾನೆ. ಇವೆಲ್ಲವೂ(ಭೋಗವು) ಜೀವಾತ್ಮನ ಎಚ್ಚರಿಕೆಯ ಸ್ಥಿತಿಯಲ್ಲಿ ಮಾತ್ರ ತಿಳಿಯುವುದರಿಂದ ಜೀವಿಗೆ ಸ್ಥೂಲಶರೀರವು ತುಂಬ ಮುಖ್ಯ ಎಂದು ನಿರೂಪಿಸುತ್ತಾರೆ.

ಇಂದ್ರಿಯಾನುಭವವು ಏಕೆ ಮುಖ್ಯ ಎಂದರೆ, ಪುನಃ ನಾವು ಚಿತ್ತಸ್ಯ ಶುದ್ಧಯೇ ಕರ್ಮ ಎಂಬ ಶ್ಲೋಕವನ್ನು ನೆನೆಪಿಸಿಕೊಳ್ಳಬೇಕಾಗುತ್ತದೆ. ಶಮದಮಾದಿ ಸಾಧನೆಯು ಸಿದ್ಧಿಸಬೇಕಾದರೆ ಅನುಭವವು ಅಗತ್ಯವಾಗಿರುತ್ತದೆ. ಜಾಗ್ರದಾವಸ್ಥೆಯಲ್ಲಿ ಎಲ್ಲ ಘಟನೆಗಳೂ ತೋರುವುದರಿಂದ ವ್ಯಾವಹಾರಿಕ ಲೋಕದಲ್ಲಿ ಶರೀರವು ಮುಖ್ಯ ಎಂಬ ಅರ್ಥದಲ್ಲಿ ಹೇಳಿದ್ದಾರೆಂದು ತಿಳಿಯಬಹುದು.

ಕಾಮೆಂಟ್‌ಗಳು

  1. ನನಗೊಂದು ಸಂದೇಹ:
    ‘ಬಾಹ್ಯೇಂದ್ರಿಯೈಃ ಸ್ಥೂಲಪದಾರ್ಥ-ಸೇವಾಂ’ ಎನ್ನುವಲ್ಲಿ ‘ಸೇವಾ’ ಪದಕ್ಕೆ service ಎನ್ನುವ ಅರ್ಥ ಬರುವುದೊ ಅಥವಾ ಸೇವನೆ ಅಂದರೆ consumption ಎನ್ನುವ ಅರ್ಥ ಬರುವುದೊ?
    ದಯವಿಟ್ಟು ತಿಳಿವು ನೀಡಲು ಕೋರುತ್ತೇನೆ.

    ಪ್ರತ್ಯುತ್ತರಅಳಿಸಿ
  2. ಸ್ಥೂಲಪದಾರ್ಥ ಎನ್ನುವುದಕ್ಕೆ ಇಲ್ಲಿ ಮೊದಲಿನಿಂದಲೂ ವಿಷಯವಸ್ತುಗಳು ಎಂಬ ಅರ್ಥವನ್ನೇ ತೆಗೆದುಕೊಂಡಿದ್ದಾರೆ. ಈ ಶ್ಲೋಕದಲ್ಲಿ ಕೊಟ್ಟಿರುವ ಮುಖ್ಯ ಉದಾಹರಣೆಯನ್ನು ಗಮನಿಸಿ: ಹೆಣ್ಣು ಮೊದಲಾದ ವಿಚಿತ್ರರೂಪಗಳಲ್ಲಿ ಅವುಗಳನ್ನು ಸೇವಿಸುತ್ತಾನೆ, ಎಂದು ಹೇಳಿರುವುದರಿಂದ 'ನೀನು ಬರೀ ಕಂಡವರ ಸೇವೆ ಮಾಡ್ಕೊಂಡು ಇರು' ಎಂದು ಬೈದಾಗ ಯಾವ ಅರ್ಥ ಹೊಮ್ಮುತ್ತದೆ ?. ಚಂದನ ಅಥವಾ ಗಂಧದ ವಿಷಯಕ್ಕೆ ಬಂದರೆ, consumption ಎನ್ನುವುದಕ್ಕಿಂತಲೂ ಸುಗಂಧವನ್ನು ಘ್ರಾಣಿಸುವುದು ಎಂದುಕೊಳ್ಳಬಹುದು. ತಿನ್ನುವ ಪದಾರ್ಥಗಳಾದರೆ 'ಸೇವನೆ' ಸರಿಯಾಗುತ್ತದೆ. ಇವೆಲ್ಲವೂ ವಿಷಯವಸ್ತುಗಳೇ ಆಗಿರುತ್ತದೆ. In general ಅಡಿಯಾಳಾಗುವುದು, ದಾಸನಾಗುವುದು ಅಥವಾ ಅದೇ ವೃತ್ತಿಯಲ್ಲಿ ತೊಡಗುವುದು....etc.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ