Part - 53


ಮೂಲ:

ಅನುಕ್ಷಣಂ ಯತ್ಪರಿಹೃತ್ಯ ಕೃತ್ಯಂ

ಅನಾದ್ಯವಿದ್ಯಾಕೃತ_ಬಂಧಮೋಕ್ಷಣಮ್ |

ದೇಹಃ ಪರಾರ್ಥೋsಯಮಮುಷ್ಯ ಪೋಷಣೇ

ಯಃ ಸಜ್ಜತೇ ಸ ಸ್ವಮನೇನ ಹಂತಿ ||೮೩||


ಪ್ರತಿಪದಾರ್ಥ:

ಯತ್=ಯಾವ, ಅನುಕ್ಷಣಂ=ಪ್ರತಿಕ್ಷಣವೂ, ಕೃತ್ಯಂ=ಮಾಡಬೇಕಾಗಿರುವ, ಅನಾದಿ_ಅವಿದ್ಯಾಕೃತ_ಬಂಧಮೋಕ್ಷಣಂ=ಅನಾದಿಯಾದ ಅವಿದ್ಯೆಯಿಂದ ಮಾಡಲ್ಪಟ್ಟ ಸಂಸಾರಬಂಧದ ಬಿಡುಗಡೆಯನ್ನು, ಪರಿಹೃತ್ಯ=ಬಿಟ್ಟು, ಅಯಃ ದೇಹಃ=ಈ ದೇಹವು, ಪರಾರ್ಥಃ=ಪರಪ್ರಯೋಜನವಾದ್ದು, ಯಃ=ಯಾವನು, ಅಮುಷ್ಯ=ಇದರ, ಪೋಷಣೇ=ಪೋಷಣೆಯಲ್ಲಿ, ಸಜ್ಜತೇ=ಆಸಕ್ತನಾಗುತ್ತಾನೋ, ಸಃ=ಅವನು, ಅನೇನ=ಇದರಿಂದ, ಸ್ವಂ=ತನ್ನನ್ನು, ಹಂತಿ=ಕೊಂದುಕೊಳ್ಳುತ್ತಾನೆ.


ತಾತ್ಪರ್ಯ:

ಪ್ರತಿಕ್ಷಣವೂ ಆಲೋಚಿಸಿ ವಿಷಯವಸ್ತುಗಳನ್ನು ತ್ಯಜಿಸಿ ಸಂಸಾರ ಬಂಧನದಿಂದ ಬಿಡುಗಡೆಗೆ ಯತ್ನಿಸದೆ ಬೇರೆಯವರಿಗೆ ಪ್ರಯೋಜನವಾಗುವ ಈ ಶರೀರದ ಪೋಷಣೆಯಲ್ಲೇ ಯಾರು ಆಸಕ್ತನಾಗುವನೋ, ಆತನು ಅದರಿಂದಲೇ ತನ್ನ ನಾಶಕ್ಕೆ ಕಾರಣವಾಗುತ್ತಾನೆ.


ವಿವರಣೆ:

ವಿಷಯವಸ್ತುಗಳಿಂದ ಸರ್ವಥಾ ವಿಮುಖರಾಗಬೇಕು ಎಂದು ಬಗೆಬಗೆಯಾಗಿ ತಿಳಿಸಿದ ಬಳಿಕ ಗುರುವು ದೇಹಾಸಕ್ತಿಯ ನಿಂದೆಗೆ ಮುಂದಾಗುತ್ತಾರೆ. 'ಅನುಕ್ಷಣ' ಎಂಬಲ್ಲಿ ತತ್ ಕ್ಷಣ ಮತ್ತು ಪ್ರತಿಕ್ಷಣ (ಯಾವಾಗಲೂ) ಎಂಬ ಎರಡು ಅರ್ಥವನ್ನೂ ಕಲ್ಪಿಸಿಕೊಳ್ಳಬಹುದು ಎಂದು ವ್ಯಾಖ್ಯಾನಕಾರರು ಹೇಳಿರುತ್ತಾರೆ. ವಿಷಯದಿಂದ ಆ ಕೂಡಲೇ ಬಿಡುಗಡೆ ಹೊಂದಬೇಕು ಅಥವಾ ಸದಾ ಬಿಡುಗಡೆಯ ಧ್ಯಾನದಲ್ಲೆ ಇರಬೇಕು ಎಂಬುದು ತಾತ್ಪರ್ಯ. ಹೀಗೆ ಮಾಡದೆ ಯಾರು ಕೇವಲ ತನ್ನ ಶರೀರ ಪೋಷಣೆಯಲ್ಲೇ ತೊಡಗುವನೋ ಅವನು ದೇಹವನ್ನು ಪೋಷಿಸುವ ಕಾರ್ಯದಲ್ಲೇ ಮಗ್ನನಾಗಿ ಸಂಪೂರ್ಣ ನಾಶವಾಗುತ್ತಾನೆ ಎಂದು ಹೇಳುತ್ತಾರೆ.

ಇಂದ್ರಿಯಗಳಿಂದ ಕೂಡಿರುವ ಶರೀರವು ವಾಸ್ತವ ಜಗತ್ತಿನಲ್ಲಿ ಅನ್ಯ ಜನರಿಂದಲೇ ಹೆಚ್ಚು ಗುರುತಿಸಲ್ಪಡುತ್ತದೆ. ಆತ್ಮರತಿ(ನಾನೆಷ್ಟು ಸುಂದರನಾಗಿದ್ದೇನೆ, ನನ್ನ ಕಣ್ಣು, ಮೂಗು ಇತ್ಯಾದಿ ಭಾವನೆ) ಎನ್ನುವುದು ಮನುಷ್ಯನಿಗೆ ನೂರರಲ್ಲಿ ಇಪ್ಪತ್ತು ಭಾಗ ಇದ್ದರೂ ಬೇರೆಯವರ ಹೊಗಳಿಕೆಯೇ ಪ್ರಧಾನವಾಗಿ ಕೆಲಸ ಮಾಡುತ್ತದೆ. ತಾವೆಷ್ಟೆ ಒಳ್ಳೆಯ ಉಡುಪು ಧರಿಸಿದ್ದರೂ ಮನಸ್ಸಿಗೆ ತೃಪ್ತಿ ಇರುವುದಿಲ್ಲ, ಆದರೆ ಆತ್ಮೀಯ ಗೆಳೆಯ/ಗೆಳತಿಯರು ಅದನ್ನು ಸುಂದರವೆಂದು ಬಣ್ಣಿಸಿದಾಗ ಮನಸ್ಸು ಅರಳುತ್ತದೆ. ನಂಬಿಕೆಯೂ ಹುಟ್ಟುತ್ತದೆ. ಭವಿಷ್ಯದಲ್ಲಿ ಅನ್ಯರ ಹೊಗಳಿಕೆಗೆ ದಾಸರಾಗುವುದಕ್ಕೂ ಇದೇ ಕಾರಣವಾಗುತ್ತದೆ. 'ಪರೋಪಕಾರಾರ್ಥಮಿದಂ ಶರೀರಮ್' ಎಂಬ ಪ್ರಸಿದ್ಧ ವಾಕ್ಯವನ್ನು ಇಲ್ಲಿ ಗಮನಿಸಿದಾಗ ಶರೀರದ ಬಗ್ಗೆ ನಮಗೆ ಒಳ್ಳೆಯ ಭಾವನೆಯು ಸಹಜವಾಗಿ ಹುಟ್ಟುತ್ತದೆ. ಇನ್ನೊಬ್ಬರಿಗೆ ಸಹಾಯ ಮಾಡುವುದಕ್ಕಾಗಿಯೇ ಈ ಶರೀರವಿರುವುದು ಎಂಬ ಅರ್ಥವು ವ್ಯಾವಹಾರಿಕ ಜಗತ್ತಿನಲ್ಲಿ ಸತ್ಯವೆನಿಸುತ್ತದೆ. ಆದರೆ, ದೇಹವನ್ನು ಹದವಾಗಿಟ್ಟುಕೊಂಡು ಇಂದ್ರಿಯಗಳಿಗೆ ದಾಸನಾಗಿದ್ದರೆ ಆತ್ಮಜ್ಞಾನ ಸಿದ್ಧಿಸುವುದಿಲ್ಲ ಹಾಗಾಗಿ ಶರೀರದ ಮೇಲಿನ ಎಲ್ಲ ರೀತಿಯ ಮಮಕಾರವನ್ನು ಬಿಡಬೇಕು ಎಂಬ ಅರ್ಥದಲ್ಲಿ ಪಾರಮಾರ್ಥಿಕ ಸತ್ಯವನ್ನು ತೆರೆದಿಡುತ್ತಾರೆ. ಅಕ್ಕಪಕ್ಕದಲ್ಲಿ ಜಯಕಾರ ಹಾಕುವವರು ಇರದಿದ್ದರೆ ಇಂದಿನ ಮಂತ್ರಿ ಮಹೋದಯರಿಗೆ ತಮ್ಮ ಅಸ್ತಿತ್ವದ ಬಗ್ಗೆಯೇ ಅನುಮಾನ ಹುಟ್ಟುತ್ತದೆ, ಹಾಗಾಗಿ ಅವರಿಗೆ ತನ್ನ ಜತೆಗೆ ಪರರನ್ನೂ ಪೋಷಿಸುವ ಅಗತ್ಯವಿರುತ್ತದೆ. ಗ್ರಹಗಳು ತನ್ನನ್ನು ಸುತ್ತುತ್ತಿರುವ ಕಾರಣ ತಾನೊಬ್ಬ ಮಹಾನ್ ವ್ಯಕ್ತಿ ಎಂಬ ಯಾವ ಭ್ರಮೆಯೂ ಸೂರ್ಯನಿಗಿರುವುದಿಲ್ಲ, ಇದು ನಿರ್ಣಾಯಕ ಸತ್ಯ. ಹೀಗೆ ಆಲೋಚನೆ ಮಾಡದೆ ಹೋದರೆ ಮುಮುಕ್ಷವು ಪರತತ್ವದಿಂದ ವಂಚಿತನಾಗುವುದಲ್ಲದೆ ಸ್ವಯಂ ನಾಶಕ್ಕೂ ಕಾರಣನಾಗುತ್ತಾನೆ ಎಂದು ಹೇಳುತ್ತಾರೆ.

........................


ಕಾಮೆಂಟ್‌ಗಳು