Part -60
ಮೂಲ: ಸ್ಥೂಲಸ್ಯ ಸಂಭವ -ಜರಾ-ಮರಣಾನಿ ಧರ್ಮಾಃ ಸ್ಥೌಲ್ಯಾದಯೋ ಬಹುವಿಧಾಃ ಶಿಶುತಾದ್ಯವಸ್ಥಾಃ | ವರ್ಣಾಶ್ರಮಾದಿ-ನಿಯಮಾ ಬಹುssಮಯಾಃ ಸ್ಯುಃ ಪೂಜಾವಮಾನ-ಬಹುಮಾನ-ಮುಖಾ ವಿಶೇಷಾಃ ||೯೦|| ಪ್ರತಿಪದಾರ್ಥ : ಸ್ಥೂಲಸ್ಯ = ಸ್ಥೂಲಶರೀರಕ್ಕೆ , ಸಂಭವ-ಜರಾ-ಮರಣಾನಿ = ಹುಟ್ಟು-ಮುಪ್ಪು-ಸಾವು (ಇವು) , ಸ್ಥೌಲ್ಯಾದಯಃ=ಸ್ಥೂಲತ್ವ ಮೊದಲಾದ, ಬಹುವಿಧಾಃ=ಬಹು ವಿಧವಾದ, ಧರ್ಮಾಃ=ಲಕ್ಷಣಗಳು ; ಶಿಶುತಾದಿ-ಅವಸ್ಥಾಃ=ಶಿಶುತ್ವ ಮೊದಲಾದ ಅವಸ್ಥೆಗಳು, ವರ್ಣಾಶ್ರಮಾದಿ-ನಿಯಮಾಃ = ವರ್ಣಾಶ್ರಮಗಳೇ ಮೊದಲಾದ ನಿಯಮಗಳು, ಬಹುಧಾ-ಆಮಯಾಃ=ನಾನಾವಿಧವಾದ ರೋಗಗಳು, ಪೂಜಾ-ಅವಮಾನ-ಬಹುಮಾನ-ಮುಖಾಃ=ಪೂಜೆ-ಅವಮಾನ-ಬಹುಮಾನ-ಮುಂತಾದ, ವಿಶೇಷಾಃ=ವಿಶೇಷಗಳು, ಸ್ಯುಃ=ಇವೆ. ತಾತ್ಪರ್ಯ: ಹುಟ್ಟು-ಮುಪ್ಪು-ಸಾವು ಮುಂತಾದವು ಸ್ಥೂಲ ಶರೀರದ ಧರ್ಮ ಅಥವಾ ಲಕ್ಷಣಗಳು. ಬಾಲ್ಯ, ಕೌಮಾರ, ಯೌವನ ಮೊದಲಾದವು ಅದರ ಅವಸ್ಥೆಗಳು. ಇದಕ್ಕೆ ಜಾತಿ ಹಾಗೂ ಆಶ್ರಮ ನಿಯಮಗಳಿದ್ದು ನಾನಾ ಬಗೆಯ ರೋಗಗಳನ್ನು ಅನುಭವಿಸುತ್ತದಲ್ಲದೆ ಸತ್ಕಾರ, ತಿರಸ್ಕಾರ, ಹೊಗಳಿಕೆ ಮೊದಲಾದ ವಿಶೇಷಗಳೂ ಇವೆ. ವಿವರಣೆ: ಸ್ಥೂಲಶರೀರದ ಅಂತರ್ಬಾಹ್ಯ ಸಂಸಾರವನ್ನು ಈ ಶ್ಲೋಕದಲ್ಲಿ ವಿವರವಾಗಿ ತೆರೆದಿಡುತ್ತಾರೆ. ಹುಟ್ಟುವುದು, ಬದುಕುವುದು (ಇರುವುದು) , ಬೆಳೆಯುವುದು, ಹೊಂದಿಕೊಳ್ಳುವುದು (ಪರಿಣಮಿಸುವುದು), ಕ್ಷಯವಾಗುವುದು ಮತ್ತು ಸಾಯುವುದು (ನಾಶವಾಗುವುದು) ಇವು ಶರೀರದ ಆರು ವಿಕಾರಗಳೆಂದು ಮಹರ್ಷಿ ಯಾಸ್ಕರು ತಮ್ಮ ...