Part - 67

ಮೂಲ:

ಧೀಮಾತ್ರ ಕೋಪಾಧಿರಶೇಷಸಾಕ್ಷೀ

ನ ಲಿಪ್ಯತೇ ತತ್ಕೃತ_ಕರ್ಮಲೇಶೈಃ |

ಯಸ್ಮಾದಸಂಗಸ್ತತ ಏವ ಕರ್ಮಭಿಃ_

ರ್ನ ಲಿಪ್ಯತೇ ಕಿಂಚಿದುಪಾಧಿನಾ ಕೃತೈಃ || ೯೮||


ಪ್ರತಿಪದಾರ್ಥ:

ಧೀಮಾತ್ರಕ_ಉಪಾಧಿಃ = ಕೇವಲ ಅಂತಃಕರಣವೆಂಬ ಉಪಾಧಿಯನ್ನು ಹೊಂದಿದವನಾದ, ಅಶೇಷ ಸಾಕ್ಷೀ = ಎಲ್ಲದಕ್ಕೂ ಸಾಕ್ಷಿಯಾದ , (ಆತ್ಮನು) ; ತತ್ಕೃತ_ಕರ್ಮ_ಲೇಶೈಃ = ಅಂತಃಕರಣದಿಂದಾದ ಕರ್ಮಲೇಶದಿಂದಲೂ, ನ ಲಿಪ್ಯತೇ = ಲಿಪ್ತನಾಗುವುದಿಲ್ಲ , ಯಸ್ಮಾತ್ = ಯಾವ ಕಾರಣದಿಂದ, ಅಸಂಗಃ = ಸಂಗರಹಿತನೊ, ತತಃ ಏವ= ಆ ಕಾರಣದಿಂದಲೇ , ಉಪಾಧಿನಾ = ಉಪಾಧಿಯಿಂದ , ಕೃತೈಃ = ಮಾಡಲಾದ , ಕರ್ಮಭಿಃ = ಕರ್ಮಗಳಿಂದ , ಕಿಂಚಿತ್ = ಸ್ವಲ್ಪವಾದರೂ , ನ ಲಿಪ್ಯತೇ = ಲಿಪ್ತನಾಗುವುದಿಲ್ಲ .


ತಾತ್ಪರ್ಯ:

ಕೇವಲ ಅಂತಃಕರಣವೆಂಬ ಉಪಾಧಿಯನ್ನು ಹೊಂದಿರುವ ಸರ್ವಸಾಕ್ಷಿಯಾದ ಆತ್ಮನಿಗೆ ಬುದ್ಧಿಯಿಂದ ಮಾಡಲಾಗುವ ಕರ್ಮಗಳು ಸಂಬಂಧಪಡುವುದಿಲ್ಲ (ಅಂಟುವುದಿಲ್ಲ). ಅವನು (ಆತ್ಮನು) ಸರ್ವಸಂಗ ಶೂನ್ಯವಾಗಿರುವ ಕಾರಣದಿಂದಲೇ ಉಪಾಧಿಯಿಂದ ಮಾಡಲಾಗುವ ಕರ್ಮಲೇಪವು ಕಿಂಚಿತ್ತೂ ಇರುವುದಿಲ್ಲ.


ವಿವರಣೆ:

ಕನಸಿನಲ್ಲಿ (ಸ್ವಪ್ನಾವಸ್ಥೆಯಲ್ಲಿ) ಅಂತಃಕರಣವು ಅನುಭವಗಳಿಗೆ ಸಾಕ್ಷಿಯಾಗುತ್ತದೆ , ಅಲ್ಲಿ ಎಲ್ಲ ಅವಸ್ಥೆಗಳಿಗೂ ಸಾಕ್ಷಿಯಾಗುವ ಆತ್ಮನು ಬೇರೆಯೇ ಆಗಿದ್ದುಕೊಂಡು ಪ್ರಕಾಶಿಸುತ್ತಿರುತ್ತಾನೆ ಎಂದು ಹಿಂದಿನ ಶ್ಲೋಕದಲ್ಲಿ ತಿಳಿದೆವು. ಕೇವಲ ಸಾಕ್ಷಿರೂಪವಾಗಿ ಇರುವುದರಿಂದಲೇ ಆತ್ಮನಿಗೆ ಎಚ್ಚರಿಕೆ ಮತ್ತು ಕನಸಿನಲ್ಲಿ ಶರೀರಕ್ಕೆ ಆಗುವ ಅನುಭವಗಳು ಅಂಟುವುದಿಲ್ಲ ಎಂದು ಹೇಳುತ್ತಾರೆ. ಸೂರ್ಯನ ಬೆಳಕಿನಿಂದಲೇ ಜಗತ್ತಿನ ಜೀವರಾಶಿಯು ಪ್ರೇರಣೆ ಪಡೆದುಕೊಳ್ಳುತ್ತದೆ. ಆದರೆ, ಬೆಳಕನ್ನೀಯುವ ರವಿಗೆ ಯಾವ ಅಂಟು_ನಂಟುಗಳಿವೆ. ಅನಿಮಿತ್ತವಾಗಿ ನಿತ್ಯವೂ, ಯಾವಾಗಲೂ ಬೆಳಗುತ್ತಿದ್ದು ಜಗತ್ತಿನ ಆಗುಹೋಗುಗಳಿಗೆ ಸಾಕ್ಷಿರೂಪದಂತೆ ಕಂಡರೂ ಭಾಸ್ಕರನಿಗೆ ಧರೆಯ ಮೇಲಿನ ಯಾವ ಕಾರ್ಯಕಲಾಪಗಳ ಬಗ್ಗೆಯೂ ಸಂಬಂಧವಿರುವುದಿಲ್ಲ. ಹಾಗೆಯೇ, ಶರೀರದ ಎಲ್ಲ ಅವಸ್ಥೆಗಳಿಗೂ ಸಾಕ್ಷಿಯಾದರೂ ಆತ್ಮನು ಸರ್ವಸಂಗ ಶೂನ್ಯನಾದ ಕಾರಣ ಯಾವ ಕರ್ಮಲೇಪವು ಅಂಟುವುದಿಲ್ಲ ಎಂದು ಹೇಳುತ್ತಾರೆ.


ಕರ್ಮಗಳನ್ನು ಮಾಡುವವನಿಗೆ ಅದರ ಸಂಬಂಧವಿರುತ್ತದೆ, ಕೇವಲ ನೋಡುವವನಿಗೆ ಅಲ್ಲ ಎಂದು ಸರಳವಾಗಿ ತಿಳಿಯಬಹುದು. ಹಾಗಾದರೆ, ವಿಷಯವಸ್ತುಗಳನ್ನು ನೋಡುವುದರಿಂದಲೂ ಆತ್ಮಸಾತ್ಕಾರಕ್ಕೆ ತೊಡಕಾಗುತ್ತದೆ ಎಂದು ಹಿಂದಿನ ಶ್ಲೋಕದಲ್ಲಿ ತಿಳಿದ ಬಗ್ಗೆ ಆಕ್ಷೇಪ ಬರುತ್ತದೆ. ನೋಡುವುದು ಎಂದರೆ ಸರ್ವಸಂಗ ಶೂನ್ಯನಾದ ಆತ್ಮನು ಮಾತ್ರ ಎಂದು ನಾವಿಲ್ಲಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ವ್ಯಾವಹಾರಿಕ ಲೋಕದಲ್ಲಿ ಕೆಟ್ಟದ್ದನ್ನು ನೋಡಿದಾಗ ಅದನ್ನು ಸಂಬಂಧಪಟ್ಟವರಿಗೆ ವರದಿ ಮಾಡುವ ಕರ್ತವ್ಯ ಪ್ರಜ್ಞೆ ಇರಬೇಕಾಗುತ್ತದೆ. ದಾರಿಯಲ್ಲಿ ಯಾರೋ ಇನ್ಯಾರನ್ನೋ ಕೊಲೆ ಮಾಡಿದ್ದನ್ನು ನೋಡಿದರೆ, ಸಾಕ್ಷಿರೂಪನಾದವನು ಪೊಲೀಸರಿಗೆ ತಿಳಿಸಿ ತನ್ನ ಪ್ರಾಮಾಣಿಕ ಕರ್ತವ್ಯವನ್ನು ಮಾಡಬೇಕಾಗುತ್ತದೆ. ಸಾಕ್ಷಿಯು ಆಗಿಹೋದುದರ ಬಗ್ಗೆ ಹೇಳಿಕೆ ನೀಡಬಹುದು ಆದರೆ ಆತನೇ ಕೊಲೆಗಾರನಾಗಲು ಸಾಧ್ಯವಿಲ್ಲ. ಸಾಕ್ಷಿಯೇ ಇಲ್ಲದೆ ನ್ಯಾಯಾಲಯದಲ್ಲಿ ವಕೀಲರು ವಾದ_ಪ್ರತಿವಾದ ಮಾಡಲು ಸಾಧ್ಯವಿಲ್ಲ. ಯಾವ ಕರ್ಮಲೇಪವೂ ಇಲ್ಲದೆ ಆತ್ಮನು ಎಲ್ಲದಕ್ಕೂ ಸಾಕ್ಷಿಯಾಗುತ್ತಾನೆ ಎನ್ನುವುದನ್ನು ಹೀಗೆ ತಿಳಿಯಬಹುದು.

...........


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ