Part - 64
ಮೂಲ:
ವಾಗಾದಿ ಪಂಚ ಶ್ರವಣಾದಿ ಪಂಚ
ಪ್ರಾಣಾದಿ ಪಂಚಾಭ್ರಮುಖಾನಿ ಪಂಚ |
ಬುದ್ಧ್ಯಾದ್ಯ ವಿದ್ಯಾಪಿ ಚ ಕಾಮ_ಕರ್ಮಣೀ
ಪುರ್ಯಷ್ಟಕಂ ಸೂಕ್ಷ್ಮಶರೀರಮಾಹುಃ ||೯೫||
ಪ್ರತಿಪದಾರ್ಥ:
ವಾಗಾದಿ ಪಂಚ = ವಾಕ್ಕು ಮೊದಲಾದ ಐದು, ಶ್ರವಣಾದಿ ಪಂಚ = ಕಿವಿ ಮೊದಲಾದ ಐದು, ಪ್ರಾಣಾದಿ ಪಂಚ = ಪ್ರಾಣವೇ ಮೊದಲಾದ ಐದು, ಅಭ್ರಮುಖಾನಿ ಪಂಚ = ಆಕಾಶವೇ ಮೊದಲಾದ ಐದು, ಬುದ್ಧ್ಯಾದಿ = ಬುದ್ಧಿಯೇ ಮೊದಲಾದ, ಅವಿದ್ಯಾ =ಅವಿದ್ಯೆ (ಅಜ್ಞಾನ), ಕಾಮ_ಕರ್ಮಣೀ = ಕಾಮ ಮತ್ತು ಕರ್ಮ, ಪುರ್ಯಷ್ಟಕಂ = ಈ ಎಂಟು ಪುರಗಳನ್ನು , ಸೂಕ್ಞ್ಮ ಶರೀರಂ = ಸೂಕ್ಷ್ಮ ಶರೀರವೆಂದು , ಆಹುಃ = ಹೇಳುತ್ತಾರೆ.
ತಾತ್ಪರ್ಯ:
ವಾಕ್ ಮೊದಲಾದ ಐದು, ಕಿವಿ ಮೊದಲಾದ ಐದು, ಪ್ರಾಣವೇ ಮೊದಲಾದ ಐದು , ಆಕಾಶವೇ ಮೊದಲಾದ ಐದು, ಬುದ್ಧಿ ಮೊದಲಾದ ನಾಲ್ಕು , ಅವಿದ್ಯಾ , ಕಾಮ ಮತ್ತು ಕರ್ಮ; ಈ ಎಂಟು ಪುರಗಳಿಂದ ಆಗಿರುವುದನ್ನು ಸೂಕ್ಷ್ಮ ಶರೀರವೆಂದು ಹೇಳುತ್ತಾರೆ.
ವಿವರಣೆ:
ಆತ್ಮಾನಾತ್ಮ ವಿವೇಕವನ್ನು ಹೇಳುತ್ತೇನೆ ಕೇಳು ಎಂದು ಆರಂಭಿಸಿದ ಗುರುವು ಮೊದಲಿಗೆ ಸೂಕ್ಷ್ಮ ವು ಸ್ಥೂಲವಾಗುವುದನ್ನು ವರ್ಣಿಸಿ, ವಿಷಯನಿಂದನೆ, ದೇಹಾಸಕ್ತಿಯ ನಿಂದನೆಯ ಮೂಲಕ ಶರೀರವು ಆತ್ಮನಿಂದ ಬೇರೆಯಾದುದು ಎಂಬುದನ್ನು ನಿರೂಪಿಸುತ್ತಾರೆ. ಸೂಕ್ಷ್ಮ ಶರೀರವು ಕರ್ಮೇಂದ್ರಿಯಗಳು ಹಾಗೂ ಜ್ಞಾನೇಂದ್ರಿಯಗಳ ಹಂಗಿಗೆ ಒಳಪಡುವುದರಿಂದ ಆತ್ಮನ ಸಾಕ್ಷಾತ್ಕಾರಕ್ಕೆ ಅದು ಸಾಧನವಾಗುವುದಿಲ್ಲ. ಬುದ್ಧಿ, ಮನಸ್ಸು ಮೊದಲಾದವು ಹೊಯ್ದಾಟದಲ್ಲಿ ತೊಡಗುವುದರಿಂದ ಅದನ್ನೂ ನಂಬುವ ಹಾಗಿಲ್ಲ. ಪಂಚಪ್ರಾಣಗಳು ಶರೀರಪೋಷಣೆಯಲ್ಲೇ ನಿರತವಾಗುವುದರಿಂದ ಅವುಗಳಿಂದಲೂ ಉಪಯೋಗವಿಲ್ಲ. ಈ ಕೋಲಾಹಲವು ಅವಿದ್ಯೆ (ಅಜ್ಞಾನ)ಗೆ ದಾರಿಯಾಗುತ್ತದೆ. ಮೋಹ, ಮತ್ಸರ, ಕಾಮಗಳನ್ನು ಉತ್ತೇಜಿಸುತ್ತದೆ. ಇದರಿಂದ ಅರ್ಥವಿಲ್ಲದ ನೂರಾರು ಕರ್ಮಗಳನ್ನು ಮಾಡಿ ಆತ್ಮಜ್ಞಾನದಿಂದ ಅಪೇಕ್ಷಿಯು (ಸಾಧಕನು) ವಂಚಿತನಾಗುತ್ತಾನೆ ಎನ್ನುವುದನ್ನು ಪುರ್ಯಷ್ಟಕ ಎಂದೇ ಪ್ರಸಿದ್ಧವಾಗಿರುವ ಈ ಶ್ಲೋಕದಲ್ಲಿ ವಿವರಿಸಿರುತ್ತಾರೆ.
ಸೂಕ್ಷ್ಮ ಶರೀರದಲ್ಲಿ ಜೀವಾತ್ಮನಿದ್ದರೂ ಅದನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ ಸಾಧಕನು ದೇಹದ ಮೇಲಿನ ಎಲ್ಲ ಆಸಕ್ತಿಯನ್ನು ಬಿಡಬೇಕು (ಕೊನೆಗೆ ದೇಹವನ್ನೇ ಬಿಡಬೇಕು ಎಂಬ ಅರ್ಥವೂ ಇದೆ !) , ತದನಂತರ ಮಾತ್ರವೇ ಆತ್ಮನ ಅರಿವು ಉಂಟಾಗುತ್ತದೆ ಎಂದು ಸೂತ್ರಭಾಷ್ಯದ** ಆಧಾರವನ್ನು ಇಟ್ಟುಕೊಂಡು ವ್ಯಾಖ್ಯಾನ ಮಾಡುವ ಮೂಲಕ ದೇಹವೇ ಅನಾತ್ಮವಸ್ತು ಎಂಬುದನ್ನು ನಿರೂಪಿಸುತ್ತಾರೆ.
ಪುರ್ಯಷ್ಟಕ :
೧) ಕಿವಿ_ಕಣ್ಣು_ಮೂಗು_ನಾಲಗೆ_ಚರ್ಮ (ಜ್ಞಾನೇಂದ್ರಿಯ)
೨) ವಾಕ್ಕು (ಬಾಯಿ_ಮಾತು)_ ಕೈ_ಕಾಲು_ಜನನೇಂದ್ರಿಯ_ವಿಸರ್ಜನೇಂದ್ರಿಯ (ಕರ್ಮೇಂದ್ರಿಯ)
೩)ಮನಸ್ಸು_ಬುದ್ಧಿ_ಚಿತ್ತ_ಅಹಂಕಾರ (ಅಂತಃಕರಣ ಚತುಷ್ಟಯ)
೪)ಪೃಥ್ವಿ_ಅಪ್ (ನೀರು)_ಬೆಂಕಿ_ಗಾಳಿ_ಆಕಾಶ (ಪಂಚಭೂತಗಳು)
೫)ಪ್ರಾಣ_ಅಪಾನ_ವ್ಯಾನ_ಉದಾನ_ಸಮಾನ(ಪಂಚಪ್ರಾಣಗಳು)
೬) ಅವಿದ್ಯಾ
೭) ಕಾಮ
೮) ಕರ್ಮ
............................................
ಟಿಪ್ಪಣಿ:
** ಪುರ್ಯಷ್ಟಕೇನ ಲಿಂಗೇನ ಪ್ರಾಣಾದ್ಯೇನ ಸ ಯುಜ್ಯತೇ |
ತೇನ ಬದ್ಧಸ್ಯ ವೈ ಬಂಧೋ ಮೋಕ್ಷೋ ಮುಕ್ತಸ್ಯ ತೇನಚ ||
(ಪುರ್ಯಷ್ಟಕರೂಪವಾದ ಪ್ರಾಣಾದಿ ಸೂಕ್ಷ್ಮ ಶರೀರದಿಂದ ವ್ಯಕ್ತಿಯು ಕೂಡಿರುತ್ತಾನೆ; ಅದಕ್ಕೇ ಬದ್ದನಾಗುವುದರಿಂದ ಅವನಿಗೆ ಬಂಧನವಿರುತ್ತದೆ. ಅದರಿಂದ ಮುಕ್ತನಾದಾಗ ಮೋಕ್ಷವಾಗುತ್ತದೆ )
.........................
ವಿವರಣೆಗಾಗಿ ಧನ್ಯವಾದಗಳು.
ಪ್ರತ್ಯುತ್ತರಅಳಿಸಿ
ಪ್ರತ್ಯುತ್ತರಅಳಿಸಿನಿಮಗೂ ಧನ್ಯವಾದ.