Part -66

ಮೂಲ:

ಸ್ವಪ್ನೋ ಭವತ್ಯಸ್ಯ ವಿಭಕ್ತ್ಯವಸ್ಥಾ

ಸ್ವಮಾತ್ರಶೇಷೇಣ ವಿಭಾತಿ ಯತ್ರ |

ಸ್ವಪ್ನೇತು ಬುದ್ಧಿಃ ಸ್ವಯಮೇವ ಜಾಗ್ರತ್_

ಕಾಲೀನ_ನಾನಾವಿಧ_ವಾಸನಾಭಿಃ |

ಕರ್ತ್ರಾದಿಭಾವಂ ಪ್ರತಿಪದ್ಯ ರಾಜತೇ

ಯತ್ರ ಸ್ವಯಂಜ್ಯೋತಿರಯಂ ಪರಾತ್ಮಾ ||೯೭||


ಪ್ರತಿಪದಾರ್ಥ:

ಅಸ್ಯ = ಇವನ, ವಿಭಕ್ತಿ_ಅವಸ್ಥಾ = ಬೇರೆ ರೀತಿಯು, ಸ್ವಪ್ನಃ ಭವತಿ = ಸ್ವಪ್ನವೆನಿಸುತ್ತದೆ, ಯತ್ರ = ಎಲ್ಲಿ, ಸ್ವಮಾತ್ರಶೇಷೇಣ = ತಾನೊಬ್ಬನೇ ಶೇಷವಾಗಿ , ವಿಭಾತಿ = ಪ್ರಕಾಶಿಸುವನೋ, ಸ್ವಪ್ನೇತು = ಸ್ವಪ್ನದಲ್ಲಿ, ಬುದ್ಧಿಃ= ಅಂತಃಕರಣವು, ಸ್ವಯಮೇವ = ತಾನೊಂದೇ , ಜಾಗ್ರತ್_ಕಾಲೀನ= ಜಾಗ್ರದಾವಸ್ಥೆಯ, ನಾನಾವಿಧ_ವಾಸನಾಭಿಃ = ಬೇರೆ ಬೇರೆ ವಾಸನೆಗಳಿಂದ, ಕರ್ತ್ರಾದಿಭಾವಂ = ಕರ್ತೃವೇ ಮೊದಲಾದ ಭಾವವನ್ನು ಹೊಂದಿ, ರಾಜತೇ = ಪ್ರಕಾಶಿಸುತ್ತದೆ, ಯತ್ರ = ಎಲ್ಲಿ, ಅಯಂ ಪರಾತ್ಮಾ = ಈ ಪರಮಾತ್ಮನು, ಸ್ವಯಂಜ್ಯೋತಿಃ = ಸ್ವಯಂಜ್ಯೋತಿಯು.


ತಾತ್ಪರ್ಯ:

ಜೀವನಿಗೆ ಸ್ವಪ್ನವು ಜಾಗ್ರತ್ತಿಗಿಂತ ಬೇರೆಯಾದ ಅವಸ್ಥೆ ; ಅಲ್ಲಿ ಅವನು ತಾನೋಬ್ಬನೇ ತೋರಿಕೊಂಡು ಪ್ರಕಾಶಿಸುತ್ತಾನೆ. ಸ್ವಪ್ನದಲ್ಲಿ ಅಂತಃಕರಣವು ತಾನೊಂದೇ ಆಗಿ ಜಾಗ್ರದಾವಸ್ಥೆಯ ನಾನಾವಿಧವಾದ ಅನುಭವಗಳ ವಾಸನೆಯಿಂದ ಕರ್ತೃವೇ ಮೊದಲಾದ ಭಾವವನ್ನು ಹೊಂದಿ ಪ್ರಕಾಶಿಸುತ್ತದೆ; ಆದರೆ ಅಲ್ಲಿ ಪರಮಾತ್ಮನು ಸ್ವಯಂಜ್ಯೋತಿಯಾಗಿರುತ್ತಾನೆ.


ವಿವರಣೆ:

ಶರೀರವು ಸಾಮಾನ್ಯವಾಗಿ ಮೂರು ಅವಸ್ಥೆಗಳನ್ನು ಅನುಭವಿಸುತ್ತದೆ. ಜಾಗ್ರತ್ತು(ಎಚ್ಚರಿಕೆ), ಸ್ವಪ್ನ (ಕನಸು) ಹಾಗೂ ಸುಷುಪ್ತಿ (ಗಾಢ ನಿದ್ರಾವಸ್ಥೆ),ಇವು ಅವಸ್ಥಾತ್ರಯ ಎಂದು ಪ್ರಸಿದ್ಧವಾಗಿದೆ. ಸ್ಥೂಲ ಶರೀರವು ಜಾಗ್ರತ್ತಿಗೆ ಆಶ್ರಯವಾದರೆ ಸೂಕ್ಷ್ಮ ಶರೀರವು ಸ್ವಪ್ನಕ್ಕೆ ಉಪಾಧಿಯಾಗುತ್ತದೆ. ಎಚ್ಚರಿಕೆಯ ಅವಸ್ಥೆಯಲ್ಲಿ ಶರೀರಕ್ಕೆ ಉಂಟಾಗುವ ಅನುಭವವು ಬಾಹ್ಯೇಂದ್ರಿಯಗಳ ಮೂಲಕ ಕೂಡಲೇ ತಿಳಿಯುತ್ತದೆ. ಅಂತಃಕರಣವು ಎಂದರೆ, ಮನಸ್ಸು ಮೊದಲಾದವು ಕನಸಿನಲ್ಲಿ ಅನುಭವಗಳಿಗೆ ಆಶ್ರಯವಾಗುತ್ತದೆ. ಅಲ್ಲಿ ಬಾಹ್ಯೇಂದ್ರಿಗಳ ಚಟುವಟಿಕೆ ಇರುವುದಿಲ್ಲ. ಹಾಗಾಗಿ ಸೂಕ್ಷ್ಮಶರೀರಕ್ಕೆ ಸ್ವಪ್ನಾವಸ್ಥೆಯೇ ಉಪಾಧಿ ಎಂದು ಹೇಳುತ್ತಾರೆ. ಜಾಗ್ರತ್ತಿನ ಎಲ್ಲ ಅನುಭವಗಳು ಕನಸಿನಲ್ಲಿ ಒಂದಿಲ್ಲೊಂದು ರೂಪದಲ್ಲಿ ಬಂದು , ಎಚ್ಚರಿಕೆಯಲ್ಲಿ ನಡೆಸಿದ ಎಲ್ಲ ಕಾರ್ಯಗಳಿಗೂ ತಾನೇ ಕಾರಣ ಎಂಬ ಭಾವವು ಮೂಡುತ್ತದೆ. ಎಚ್ಚರಿಕೆ ಹಾಗೂ ಕನಸಿನ ಅವಸ್ಥೆಗೆ ಆತ್ಮನೇ ಆಧಾರವಾದರೂ ಎರಡೂ ಸ್ಥಿತಿಯಲ್ಲಿ ಅವಿದ್ಯೆಯು ಪ್ರಬಲವಾಗಿರುವುದರಿಂದ ಸುಷುಪ್ತಿಯು (ಏನೂ ತಿಳಿಯದ ಗಾಢ ನಿದ್ರಾವಸ್ಥೆ) ಆತ್ಮನ ಆಶ್ರಯಕ್ಕೆ ಹೆಚ್ಚು ಪೂರಕವಾಗಿದ್ದು ಅಲ್ಲಿ ಎರಡೂ ಅವಸ್ಥೆಗಳಿಂದ ಬೇರೆಯಾಗಿದ್ದುಕೊಂಡು ತಾನು(ಆತ್ಮನು) ಪ್ರಕಾಶಿಸುತ್ತಾನೆ ಎಂದು ನಿರೂಪಿಸುತ್ತಾರೆ.


ಎಚ್ಚರಿಕೆಯಲ್ಲಿ ಇಂದ್ರಿಯಗಳು ಶರೀರದ ಅನುಭವಕ್ಕೆ ಕಾರಣವಾದರೆ ಸ್ವಪ್ನದಲ್ಲಿ ಅಂತಃಕರಣವು ಕಾರಣವಾಗುತ್ತದೆ. ಯಾವ ಚಟುವಟಿಕೆಗಳೂ ಇಲ್ಲವಾಗುವ ಗಾಢ ನಿದ್ರೆಯಲ್ಲಿ (ಧ್ಯಾನದಲ್ಲಿ) ಅಂದರೆ ಸುಷುಪ್ತಿಯಲ್ಲಿ ಆತ್ಮನು ಲೀನವಾಗಿರುತ್ತಾನೆ. ಆದರೆ, ಸುಷುಪ್ತಿಯಲ್ಲೂ ಶರೀರಕ್ಕೆ ಶಾರೀರದ ಅನುಭವವು ತಿಳಿಯದೇ ಹೋಗುವುದರಿಂದ ಅಲ್ಲೂ ಅವಿದ್ಯೆಯು ಇಣುಕುತ್ತದೆ. ಹಾಗಾಗಿ ನಾಲ್ಕನೆಯ ಅವಸ್ಥೆ ಎಂದರೆ ತುರೀಯಾವಸ್ಥೆಯಲ್ಲಿ ಅವಿದ್ಯೆ ಎಂಬ ಉಪಾಧಿಯು ನಾಶವಾಗಿ ಶರೀರದ ಚೇತನವು ಆತ್ಮನಲ್ಲಿ ಲೀನವಾಗುತ್ತದೆ. ಬಳಿಕ ಎಲ್ಲವೂ ನಿರುಪಾಧಿಕವಾಗಿ ತೋರುತ್ತದೆ ಮತ್ತು ಆತ್ಮನು ತಾನೊಂದೇ ಆಗಿರುತ್ತಾನೆ ಎಂದು ಹೇಳುತ್ತಾರೆ.

.....................





ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ