Part - 68
ಮೂಲ : ಸರ್ವವ್ಯಾಪೃತಿ _ ಕರಣಂ _ ಲಿಂಗಮಿದಂ ಸ್ಯಾಚ್ಚಿದಾತ್ಮನಃ ಪುಂಸಃ | ವಾಸ್ಯಾದಿಕಮಿವ ತಕ್ಷ್ಣಸ್ತೇನೈವಾತ್ಮಾ ಭವತ್ಯಸಂಗೋ s ಯಮ್ || ೯೯ || ಪ್ರತಿಪದಾರ್ಥ : ತಕ್ಷ್ಣಃ = ಬಡಗಿಗೆ , ವಾಸ್ಯಾದಿಕಮ್ ಇವ = ಉಳಿ ಮೊದಲಾದವುಗಳಿಂದ , ಚಿದಾತ್ಮನಃ = ಚಿತ್ ಸ್ವರೂಪನಾದ , ಪುಂಸಃ = ಮನುಷ್ಯನಿಗೆ , ಇದಂ ಲಿಂಗಂ = ಈ ಸೂಕ್ಷ್ಮ ಶರೀರವು , ಸರ್ವವ್ಯಾಪೃತಿಕರಣಂ ಸ್ಯಾತ್ = ಸಮಸ್ತ ಪ್ರವೃತ್ತಿಗೆ ಸಾಧನವಾಗಿರುತ್ತದೆ ; ತೇನ ಏವ = ಆದುದರಿಂದಲೇ , ಅಯಮ್ ಆತ್ಮಾ = ಈ ಆತ್ಮನು , ಅಸಂಗಃ ಭವತಿ = ನಿರ್ಲಿಪ್ತನಾಗಿರುತ್ತಾನೆ . ತಾತ್ಪರ್ಯ : ಬಡಗಿಗೆ ಉಳಿ , ಸುತ್ತಿಗೆ ಮುಂತಾದ ಸಾಧನಗಳಂತೆ ಚಿದ್ರೂಪನಾದ ಆತ್ಮನಿಗೆ ಎಲ್ಲ ಪ್ರವೃತ್ತಿಗಳಿಗೂ ಸಾಧನವಾಗಿರುವುದು ಈ ಲಿಂಗಶರೀರವು . ಆದುದರಿಂದ ಆತ್ಮನು ನಿಸ್ಸಂಗನಾದವನೆಂದು ಸಂದೇಹವಿಲ್ಲದೆ ತಿಳಿಯಬಹುದು . ವಿವರಣೆ : ಬಡಗಿಯು ಎಷ್ಟೇ ಅತ್ಯುತ್ತಮ ಕೆಲಸಗಾರನಾಗಿದ್ದರೂ ಉಳಿ , ಸುತ್ತಿಗೆ ಮುಂತಾದ ಸಾಧನಗಳಿಲ್ಲದೆ ಏನೂ ಮಾಡಲಾಗುವುದಿಲ್ಲ . ಕೈಚಳಕವಿದ್ದ ಮಾತ್ರಕ್ಕೆ ಮಲಗುವ ಮಂಚ ತಾನೇ ತಯಾರಾಗುದಿಲ್ಲ , ಅದಕ್ಕೆ ಸರಿಯಾದ ಮರ , ಗರಗಸ , ನಟ್ _ ಬೋಲ್ಟ್ ಎಲ್ಲವೂ ಹೊಂದಿಕೆಯಾದಾಗ ಮಾತ್ರ ಕೆಲಸ ಮಾಡಲು ಸಾಧ್ಯವಾಗುತ್ತದೆ . ಮರಗೆಲಸಗಾರನ ತಿಳಿವಳಿಕೆಗೆ ಆಯುಧಗಳು ಸಾಧನಗಳಾಗುತ್ತವೇ ಹೊರತು , ಜ್ಞಾನಕ್ಕೆ ಪ್ರೇರಣೆಯಾಗುವುದಿಲ್ಲ . ಹಾಗೆಯೇ , ಚಿದ್ರೂಪನಾದ ಆತ್ಮನ ಎಲ್ಲ ವ್ಯಾಪಾರಕ್ಕ...