ವಿವೇಕ ಚೂಡಾಮಣಿ/ಭಾಗ-70

 

ಮೂಲ:

ಉಚ್ಛ್ವಾಸ_ನಿಃಶ್ವಾಸ_ವಿಜೃಂಭಣ_ಕ್ಷುತ್

ಪ್ರಸ್ಯಂದನಾದ್ಯುತ್ಕ್ರಮಣಾದಿಕಾಃ ಕ್ರಿಯಾಃ |

ಪ್ರಾಣಾದಿ_ಧರ್ಮಾಣಿ ವದಂತಿ ತಜ್ಞಾಃ

ಪ್ರಾಣಸ್ಯ ಧರ್ಮಾವಶನಾಪಿಪಾಸೇ ||೧೦೧|


ಪ್ರತಿಪದಾರ್ಥ:

ಉಚ್ಛ್ವಾಸ_ನಿಃಶ್ವಾಸ = ಉಸಿರನ್ನು ಒಳಗೆಳೆದುಕೊಳ್ಳುವುದು ಮತ್ತು ಬಿಡುವುದು, ವಿಜೃಂಭಣ = ಆಕಳಿಕೆ, ಕ್ಷುತ್ = ಸೀನುವುದು, ಪ್ರಸ್ಯಂದನಾದಿ = ಸ್ರವಿಸುವುದೇ ಮೊದಲಾದ, ಉತ್ಕ್ರಮಣಾದಿಕಾಃ ಕ್ರಿಯಾಃ = ಶರೀರವನ್ನು ಬಿಡುವುದು ಇತ್ಯಾದಿ ಕರ್ಮಗಳನ್ನು, ತಜ್ಞಾಃ = ಪ್ರಾಣವಿದರು, ಪ್ರಾಣಾದಿ_ಧರ್ಮಾಣಿ = ಪ್ರಾಣವೇ ಮೊದಲಾದವುಗಳ ಧರ್ಮವೆಂದು, ವದಂತಿ = ಹೇಳುತ್ತಾರೆ; ಅಶನಾ_ಪಿಪಾಸೇ = ಹಸಿವು, ಬಾಯಾರಿಕೆಗಳು, ಪ್ರಾಣಸ್ಯ = ಪ್ರಾಣದ, ಧರ್ಮೌ = ಧರ್ಮಗಳು.


ತಾತ್ಪರ್ಯ:

ಉಸಿರನ್ನು ಒಳಗೆಳೆಯುವುದು ಮತ್ತು ಹೊರ ಬಿಡುವುದು, ಆಕಳಿಕೆ ಸೀನು ಸ್ರಾವ ಶರೀರತ್ಯಾಗ ಇವೇ ಮೊದಲಾದ ಕ್ರಿಯೆಗಳನ್ನು ಪ್ರಾಣವಿದರು ಪ್ರಾಣವೇ ಮೊದಲಾದವುಗಳ ಧರ್ಮವೆಂದು ಹೇಳುತ್ತಾರೆ. ಹಸಿವು ಬಾಯಾರಿಕೆಗಳೂ ಪ್ರಾಣದ ಧರ್ಮಗಳು.


ವಿವರಣೆ:

ಉಸಿರಾಟ, ಹಸಿವು, ಬಾಯಾರಿಕೆ ಎಲ್ಲವೂ ಪ್ರಾಣದ ಧರ್ಮವೇ ಹೊರತು ಆತ್ಮನಿಗೆ ಸಂಬಂಧಿಸಿದ್ದಲ್ಲ ಎಂದು ಈ ಶ್ಲೋಕದಲ್ಲಿ ಹೇಳುತ್ತಾರೆಪಂಚಪ್ರಾಣಗಳ  ಬಗ್ಗೆ ನಾವು ಹಿಂದಿನ ಶ್ಲೋಕದಲ್ಲಿ ತಿಳಿದುಕೊಂಡಿದ್ದೇವೆ. ಶರೀರತ್ಯಾಗವೂ ಒಳಗೊಂಡಂತೆ ಸಾಮಾನ್ಯವಾದ ಸೀನು, ಆಕಳಿಕೆ ಮುಂತಾದವು ಈ ಪ್ರಾಣಾದಿಗಳ ಪರಿಣಾಮದಿಂದ ಉಂಟಾಗುತ್ತವೆ ಎನ್ನುತ್ತಾರೆ. ಬಂಗಾರವನ್ನು ಬಳಸಿ ಮಾಡುವ ಆಭರಣವು ವಿನ್ಯಾಸ, ಆಕಾರದಿಂದ ಮಾತ್ರ ಕಂಠಹಾರ, ವಕ್ಷಹಾರ ಇತ್ಯಾದಿಯಾಗಿ ಭೇದವನ್ನು ಪಡೆಯುತ್ತದೆ. ಅದರಂತೆ ಹಸಿವು , ಬಾಯಾರಿಕೆ ಎಲ್ಲವೂ ಪ್ರಾಣಾದಿಗಳ ವ್ಯವಹಾರವಾಗಿದ್ದು ಜಾಗ್ರದಾವಸ್ಥೆಯಲ್ಲಿ ಆತ್ಮನಿಗೆ ಸಂಬಂಧಿಸಿರುವಂತೆಯೇ ತೋರುತ್ತದೆ ಎಂದು ಹೇಳುತ್ತಾರೆ. ಇದನ್ನು ಅನುಭವಜನ್ಯವಾಗಿ ಹೇಳಬೇಕಾದರೆ ಅವಸ್ಥಾತ್ರಯದ ಸುಷುಪ್ತಿಯಯನ್ನು ಪರಿಗಣಿಸಬೇಕಾಗುತ್ತದೆ. ಗಾಢ ನಿದ್ರೆಯಲ್ಲಿ ಕುರುಡುತನ, ಕಿವುಡು, ಹಸಿವು, ಬಾಯಾರಿಕೆಗಳು ಯಾರಿಗೂ ಕಾಡುವುದಿಲ್ಲ. ತನ್ನ ಇರುವಿಕೆಯ ಬಗ್ಗೆಯೂ ತಿಳಿಯುವುದಿಲ್ಲ. ಸುಷುಪ್ತಿಯಲ್ಲಿ ಕಳ್ಳನಿಗೆ ಮತ್ತು ಕುಳ್ಳನಿಗೆ ತನ್ನ ಚೋರತ್ವ ಮತ್ತು ಕುಬ್ಜತ್ವದ ಅರಿವು ಉಂಟಾಗುವುದಿಲ್ಲ. ಎಚ್ಚರಗೊಂಡ ತಕ್ಷಣ ನೀರು ಕುಡಿಯುಬೇಕು ಅಥವಾ ಮೂತ್ರವಿಸರ್ಜಸಬೇಕು ಎಂದು ಅನಿಸುವುದು ಸಾಮಾನ್ಯ ಸಂಗತಿ. ಇವೆಲ್ಲವೂ ಎಚ್ಚರಿಕೆಯ ಅವಸ್ಥೆಯಲ್ಲಿ ಆಗುವುದರಿಂದ ಪ್ರಾಣಾದಿಗಳ ಉಪಾಧಿಯನ್ನು ಹೇಳುತ್ತಾರೆ.

..........

ಟಿಪ್ಪಣಿ:

'ಕ್ಷುತ್' ಎಂಬ ಪದಕ್ಕೆ ಬಹಳಷ್ಟು ವಿದ್ವಾಂಸರು ಸೀನುವುದು ಎಂದೇ ಅರ್ಥ ಹೇಳಿದ್ದಾರೆ. ನಿಘಂಟಿನಲ್ಲಿಯೂ ಹಾಗೇ ಇದೆ. ಪ್ರಕರಣ ಗ್ರಂಥದ ಶ್ಲೋಕ ರಚನೆಗಳಲ್ಲಿ ಪುನರುಕ್ತಿ ದೋಷವನ್ನು ಗಣಿಸುವುದರಿಂದ ಕ್ಷುತ್ = ಸೀನು, ಅಶನಾ = ಹಸಿವು ಎಂದು ತಿಳಿಯುವುದು ಸೂಕ್ತ.


ಅಡಿ ಟಿಪ್ಪಣಿ:

ಸದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳು ತಮ್ಮ ಸಂಸ್ಕೃತ ವ್ಯಾಖ್ಯಾನದಲ್ಲಿ 'ಕ್ಷುತಂ ಕೃಕರಸ್ಯ' (ಸೀನು ಕೃಕರನದು) ಎಂದು ಸ್ಪಷ್ಟವಾಗಿ ಹೇಳಿರುತ್ತಾರೆ. ಅದನ್ನು ಕನ್ನಡಕ್ಕೆ ಅನುವಾದಿಸುವಾಗ ತಾತ್ಪರ್ಯದಲ್ಲಿ ಹಸಿವು ಎಂದು ಹೇಳಿ, ವಿವರಣೆಯಲ್ಲಿ 'ಸೀನು' ಎಂದು ಬರೆದಿರುತ್ತಾರೆ. ಆಕಸ್ಮಿಕವಾಗಿ ವ್ಯತ್ಯಾಸವಾಗಿರಬಹುದು. ಮೂಲವನ್ನು ಪರಿಶೀಲಿಸುವವರಿಗಾಗಿ ಈ ಮಾಹಿತಿ ಕೊಟ್ಟಿದ್ದೇನೆ.

ಕಾಮೆಂಟ್‌ಗಳು