ವಿವೇಕಚೂಡಾಮಣಿ/ಭಾಗ-70

 

ಮೂಲ:

ಅಂತಃಕರಣಮೇತೇಷು ಚಕ್ಷುರಾದಿಷು ವರ್ಷ್ಮಣಿ |

ಅಹಮಿತ್ಯಭಿಮಾನೇನ ತಿಷ್ಠತ್ಯಾಭಾಸ_ತೇಜಸಾ ||೧೦೨||


ಅಹಂಕಾರಃ ಸ ವಿಜ್ಞೇಯಃ ಕರ್ತಾ ಭೋಕ್ತಾಭಿಮಾನ್ಯಯಮ್|

ಸತ್ವಾದಿಗುಣಯೋಗೇನ ಚಾವಸ್ಥಾತ್ರಯಮಶ್ನುತೇ ||೧೦೩||


ವಿಷಯಾಣಾಮಾನುಕೂಲ್ಯೇ ಸುಖೀ ದುಃಖೀ ವಿಪರ್ಯಯೇ |

ಸುಖಂ ದುಖಂ ಚ ತದ್ಧರ್ಮಃ ಸದಾನಂದಸ್ಯ ನಾತ್ಮನಃ ||೧೦೪||


ಪ್ರತಿಪದಾರ್ಥ:

ಅಂತಃಕರಣಂ = ಅಂತಃಕರಣವು, ಏತೇಷು ಚಕ್ಷುರಾದಿಷು = ಈ ಕಣ್ಣುಗಳೇ ಮೊದಲಾದವುಗಳಲ್ಲಿಯೂ, ವರ್ಷ್ಮಣಿ = ಮತ್ತು ಶರೀರದಲ್ಲಿಯೂ, ಅಹಮ್ ಇತಿ = ನಾನು ಎಂಬ, ಅಭಿಮಾನೇನ = ಅಭಿಮಾನದಿಂದ, ಆಭಾಸ_ತೇಜಸಾ = ಆತ್ಮನ ಪ್ರತಿಚ್ಛಾಯೆಯೊಂದಿಗೆ, ತಿಷ್ಠತಿ = ಇರುತ್ತದೆ. (೧೦೨)


ಸಃ = ಅದೇ , ಅಹಂಕಾರಃ = ಅಹಂಕಾರವೆಂದು, ವಿಜ್ಞೇಯಃ = ತಿಳಿಯಬೇಕು; ಅಯಂ = ಇದು, ಕರ್ತಾ = ಕರ್ತೃವೆಂದೂ, ಭೋಕ್ತಾ = ಭೋಕ್ತೃವೆಂದೂ, ಅಭಿಮಾನೀ = ಅಭಿಮಾನಿಯೆಂದೂ ತಿಳಿಯಬೇಕು; ಸತ್ತ್ವಾದಿಗುಣಯೋಗೇನ = ಸತ್ವವೇ ಮೊದಲಾದ ಗುಣಗಳ ಸಂಬಂಧದಿಂದ, ಅವಸ್ಥಾತ್ರಯಂ ಚ = ಮೂರು ಅವಸ್ಥೆಗಳನ್ನು, ಅಶ್ನುತೇ = ಪಡೆಯುತ್ತದೆ. (೧೦೩)


ವಿಷಯಾಣಾಂ = ವಿಷಯಗಳ , ಅನುಕೂಲ್ಯೇ = ಅನುಕೂಲತೆಯಲ್ಲಿ, ಸುಖೀ = ಸುಖಿಯೆಂದೂ, ವಿಪರ್ಯಯೇ = ಪ್ರತಿಕೂಲ ಸ್ಥಿತಿಯಲ್ಲಿ, ದುಃಖೀ = ದುಃಖಿಯೆಂದೂ ತಿಳಿಯಲಾಗುತ್ತದೆ ; ಸುಖಂ ದುಃಖಂ ಚ = ಸುಖವೂ ದುಃಖವೂ , ತತ್_ಧರ್ಮಃ , ಅದರ ಧರ್ಮವು, ಸದಾನಂದಸ್ಯ = ನಿತ್ಯಾನಂದ ಸ್ವರೂಪನಾದ, ಆತ್ಮನಃ = ಆತ್ಮನ, = ಧರ್ಮವಲ್ಲ . (೧೦೪)


ತಾತ್ಪರ್ಯ:

ಅಂತಃಕರಣವು ಕಣ್ಣು ಮೊದಲಾದವು ಮತ್ತು ಶರೀರದಲ್ಲಿಯೂ 'ನಾನು' ಎಂಬ ಅಭಿಮಾನವನ್ನು ಪಡೆದು ಆತ್ಮನ ಪ್ರತಿಚ್ಛಾಯೆಯೊಂದಿಗೆ ಕೂಡಿ ಇರುತ್ತದೆ.(೧೦೨)


ಯಾವುದು ಶರೀರದಲ್ಲಿ ಅಭಿಮಾನವನ್ನು ಪಡೆದು ಕರ್ತೃವೂ ಭೊಕ್ತೃವೂ ಆಗುತ್ತದೆಯೋ ಮತ್ತು ಸತ್ವವೇ ಮೊದಲಾದ ಗುಣಗಳ ಸಂಬಂಧದಿಂದ ಮೂರು ಅವಸ್ಥೆಗಳನ್ನು ಪಡೆಯುತ್ತದೆಯೋ ಅದನ್ನೇ ಅಹಂಕಾರವೆಂದು ತಿಳಿಯಬೇಕು.(೧೦೩)


ಇಂದ್ರಿಯ ವಿಷಯಗಳು ಅನುಕೂಲವಾಗಿರುವಾಗ ಅದು ಸುಖಿಯಾಗಿದ್ದು, ವಿಪರೀತವಾದಾಗ ದುಃಖಿಯಾಗುತ್ತದೆ. ಹೀಗೆ ಸುಃಖದುಃಖಗಳು ಅಹಂಕಾರದ ಪ್ರತೀಕವಾಗಿರುತ್ತದೆಯೆ ಹೊರತು ಆತ್ಮನ ಧರ್ಮವಾಗಿರುವುದಿಲ್ಲ. (೧೦೪)


ವಿವರಣೆ:

ಪ್ರಾಣದ ಧರ್ಮವನ್ನು ವಿವರಿಸಿದ ಬಳಿಕ ಅಹಂಕಾರದ ನಿರೂಪಣೆಗೆ ಮುಂದಾಗುತ್ತಾರೆ. ಮೇಲಿನ ಮೂರು ಶ್ಲೋಕಗಳಲ್ಲಿ ಅಹಂಕಾರ ಅಥವಾ 'ನಾನು' ಎಂಬ ಅಭಿಮಾನವು ಹೇಗೆ ಆತ್ಮನಿಂದ ಬೇರೆಯಾಗಿ ಉಳಿದುಕೊಳ್ಳುತ್ತದೆ ಎನ್ನುವುದನ್ನು ಹೇಳುತ್ತಾರೆ. ಅಂತಃಕರಣ ಚತುಷ್ಟಯವನ್ನು ನಾವು ತಿಳಿದಿದ್ದೇವೆ. ಅಹಂಕಾರವೇ ಇದರಲ್ಲಿ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ನನ್ನ ಕಣ್ಣು, ನನ್ನ ದೇಹ ಎಂಬ ಅಭಿಮಾನವು ಹುಟ್ಟಿ ಆತ್ಮನ ಛಾಯೆಯಂತೆ ತೋರುತ್ತದೆ. ಇದನ್ನು 'ಚಿದಾಭಾಸ' ಎಂದು ವೇದಾಂತ ದರ್ಶನದಲ್ಲಿ ಹೇಳಿರುತ್ತಾರೆ. ಚಿದ್ವಸ್ತುವಿನ ಮುಂದೆ ಅದರ ಪ್ರಕಾಶದಂತೆ ತೋರಿಕೊಳ್ಳುವ ಕ್ರಿಯೆಯನ್ನು ಚಿದಾಭಾಸ ಎನ್ನಲಾಗುತ್ತದೆ. ಇದು ನಿಜವಾದ ಚೈತನ್ಯ ಶಕ್ತಿಯಾಗಿರುವುದಿಲ್ಲ.

ಹುಣ್ಣಿಮೆಯ ಚಂದ್ರನು ಪ್ರಕಾಶಮಾನವಾಗಿ ಬೆಳಗುವಾಗ ಮಕ್ಕಳು ಚಂದಮಾಮನೇ ಹಾಲಿನಂತೆ ಹೊಳೆಯುತ್ತಿದ್ದಾನೆ ಎಂದು ತಿಳಿಯುವುದು ಸ್ವಾಭಾವಿಕ. ಸೂರ್ಯನ ಬೆಳಕು ಪ್ರತಿಫಲಿಸಿ ತಿಂಗಳನು ಪ್ರಕಾಶವನ್ನು ಹೊರಹಾಕುತ್ತಿದ್ದಾನೆ ಎನ್ನುವುದು ನಿಜ ಸಂಗತಿಯಾಗಿರುತ್ತದೆ. ಚಂದ್ರನು ಸ್ವಯಂಪ್ರಕಾಶನಲ್ಲ, ರವಿಯ ಛಾಯೆಯಲ್ಲಿ ಬೆಳಗುವಂತೆ ತೋರಿಕೊಳ್ಳುತ್ತಾನೆ.


ಹೀಗೆ ಚೈತನ್ಯದ ಬಿಂಬದಂತೆ ತೋರುವ ಅಂತಃಕರಣವನ್ನೇ ಅಹಂಕಾರವೆಂದು ತಿಳಿಯಬೇಕು ಎನ್ನುತ್ತಾರೆ. ಇದು ಕರ್ತಾ ಮತ್ತು ಭೋಕ್ತಾ (ನಾನು ಮಾಡುತ್ತೇನೆ , ನಾನು ಭೋಗಿಸುತ್ತೇನೆ) ಎಂಬ ಅಭಿಮಾನವುಳ್ಳದ್ದಾಗಿದ್ದು, ಗುಣತ್ರಯ (ಸತ್ವ_ರಜೋ_ತಮ) ಹಾಗೂ ಅವಸ್ಥಾತ್ರಗಳ (ಜಾಗ್ರತ್ತು, ಸ್ವಪ್ನ, ಸುಷುಪ್ತಿ) ಸಂಬಂಧದಿಂದ ಆಗಾಗ ಮಿತಿಮೀರಿ ತೋರಿಕೊಳ್ಳುತ್ತದೆ ಎಂದು ಹೇಳುತ್ತಾರೆ.


ಹಿತವಾದ ಮಾತನ್ನು ಕೇಳಿದಾಗ ಅಥವಾ ಅಂದುಕೊಂಡಂತೆ ಕಾರ್ಯವು ಕೈಗೂಡಿದಾಗ ಅದು ನಮ್ಮ ಸುಖ_ಸಂತೋಷಗಳಿಗೆ ಕಾರಣವಾಗುತ್ತದೆ. ಕಷ್ಟಕಾಲ ಬಂದಾಗ ದುಃಖವಾಗುತ್ತದೆ. ಯಾವ ಕಿವಿಯು ಆನಂದ ಕೊಡುವ ವಿಷಯವನ್ನು ಕೇಳುತ್ತದೆಯೋ ಅದೇ ಕಿವಿಯು ಕೆಟ್ಟ ಸಮಾಚಾರವನ್ನು ಕೇಳುತ್ತದೆ. ಮನಸ್ಸು_ಬುದ್ಧಿಗಳೂ ಹಾಗೆಯೇ ವರ್ತಿಸುತ್ತವೆ. ಇದು ಅಂತಃಕರಣಕ್ಕೆ ಸಂಬಂಧಿಸಿದ್ದೇ ಹೊರತು ಆತ್ಮನಿಗಲ್ಲ ಎನ್ನುವುದು ತಾತ್ಪರ್ಯ. ನಿತ್ಯಾನಂದ ಸ್ವರೂಪನಾದ ಆತ್ಮನಿಗೆ ಇದರ ಅಂಟು_ನಂಟುಗಳಿರುವುದಿಲ್ಲ ಎಂದು ಹೇಳುತ್ತಾರೆ.

...................

ಕಾಮೆಂಟ್‌ಗಳು