Part -30

ಮೂಲ

ಅವಿಜ್ಞಾತೇ ಪರೇ ತತ್ವೇ ಶಾಸ್ತ್ರಾಧೀತಿಸ್ತು ನಿಷ್ಫಲಾ |
ವಿಜ್ಞಾತೇsಪಿ ಪರೇ ತತ್ವೇ ಶಾಸ್ತ್ರಾಧೀತಿಸ್ತು ನಿಷ್ಫಲಾ ||60||

ಪ್ರತಿಪದಾರ್ಥ

ಅವಿಜ್ಞಾತೇ ತು = ತಿಳಿದುಕೊಳ್ಳದ, ಅರಿವುಂಟಾಗದ. ಪರೇತತ್ವೇ = ಪರತತ್ವ (ಕೇವಲ ಜ್ಞಾನ) , ಶಾಸ್ತ್ರಾಧೀತಿಃ = ಶಾಸ್ತ್ರಾಧ್ಯಯನವು, ನಿಷ್ಫಲಾ = ಉಪಯೋಗವಿಲ್ಲದ್ದು. ವಿಜ್ಞಾತೇ ಅಪಿ = ತಿಳಿದುಕೊಂಡರೂ, 

ತಾತ್ಪರ್ಯ

ಪರತತ್ವವನ್ನು (ಜ್ಞಾನ) ತಿಳಿವು ಉಂಟಾಗದಿದ್ದರೆ ಶಾಸ್ತ್ರಾಧ್ಯಯನವು ವ್ಯರ್ಥವು , ಅಂತೆಯೇ ಜ್ಞಾನೋದಯದ(ಪರತತ್ತ್ವ) ಬಳಿಕ ಶಾಸ್ತ್ರಾಧ್ಯಯನಗಳು ನಿರರ್ಥಕ.

ವಿವರಣೆ

ವಿರೋಧಾಭಾಸದ ರೀತಿಯಲ್ಲಿ ಮೇಲಿನ‌ ಶ್ಲೋಕದ ರಚನೆಯು ಕಂಡುಬರುತ್ತದೆ. 

ಸಾಧನಾ ಚತುಷ್ಟಯ ಸಂಪನ್ನನಾಗಿ, ಶಾಸ್ತ್ರ ವಿದ್ಯೆಗಳಲ್ಲಿ ಪಾರಂಗತನಾಗಿದ್ದರೂ ಒಬ್ಬನಲ್ಲಿ ಬ್ರಹ್ಮ(ಜ್ಞಾನಿ)ವಾಗುವ ಇಚ್ಚೆ ಹುಟ್ಟದಿದ್ದರೆ ಆತನ ಅಧ್ಯಯನ ಸಾಧನೆಗಳೆಲ್ಲವೂ ನಿಷ್ಪ್ರಯೋಜಕವಾಗುತ್ತವೆ. ಹಾಗೆಯೇ ಜ್ಞಾನೋದಯವಾಗಿ ಅಥವಾ ಬ್ರಹ್ಮವೇ ತಾನಾದ ಬಳಿಕ ವೇದ, ವೇದಾಂತ-ಶಾಸ್ತ್ರಾರ್ಥಗಳೆಲ್ಲವೂ ಉಪಯೋಗಕ್ಕೆ ಬಾರದಂತಾಗುತ್ತದೆ. ಅಭ್ಯಾಸ, ಸಾಧನೆ-ಅಧ್ಯಯನಗಳೆಲ್ಲವೂ ಜ್ಞಾನಿಯಾಗಲು ಮಾತ್ರ, ಅದು ಸಾಕ್ಷಾತ್ಕಾರವಾದ ಬಳಿಕ (ಒಡನೆಯೇ, ತತ್ಕ್ಷಣ) ಮಿಕ್ಕಿದ್ದಲ್ಲವೂ ( ಹಾಗೆ ಕಾಣುವ) ಅರ್ಥವಿಹೀನವಾಗುತ್ತದೆ ಅಥವಾ ನಿರರ್ಥಕವಾಗುತ್ತದೆ ಎಂದು ಆಚಾರ್ಯರು ಹೇಳುತ್ತಾರೆ.

ಒಂದು ಚಲನಚಿತ್ರದ ಎಲ್ಲ ರೂಪಗಳೂ ಚೆನ್ನಾಗಿದ್ದಾಗ ನಾವು ಅದರ ಆಸ್ವಾದನೆಯಲ್ಲಿ ಮುಳುಗುತ್ತೇವೆ. ಸ್ಟಾರ್ ನಟರೇ ಅಭಿನಯಿಸಿರಬಹುದು, ಮೆಚ್ಚಿನ‌ ಸಂಗೀತಗಾರರೇ ಹಾಡಿರಬಹುದು. ಒಟ್ಟಾರೆ ಸಿನಿಮಾ ನಮಗಿಷ್ಟವಾದಾಗ ಪ್ರತ್ಯೇಕತೆ ಗೌಣವಾಗುತ್ತದೆ. ಕಾದಂಬರಿಯೊಂದನ್ನು ಓದಿ ಮುಗಿಸಿದ ಬಳಿಕ ನಮಗೆ ಅದರ ಹುರುಳು ಗೊತ್ತಾಗತ್ತದೆ, ಬಳಿಕ ಅದರಲ್ಲಿನ ವಿವರಗಳಿಗಿಂತ ತಿರುಳೇ ಮನಸ್ಸಿನಲ್ಲಿ‌ ಉಳಿಯುತ್ತದೆ. ಹೋಟೆಲ್ನಲ್ಲಿ ಬಗೆಬಗೆಯ ತಿಂಡಿಗಳನ್ನು ತಿನ್ನುವಾಗ ರುಚಿ ಮುಖ್ಯವಾಗುತ್ತದೆಯೇ ಹೊರತು ಅದನ್ನು ತಂದಿಟ್ಟ ಸರ್ವರ್ ಅಥವಾ ಅಡುಗೆಯವರ  ಹೆಸರನ್ನು ಯಾರೂ ಕೇಳುವುದಿಲ್ಲ. ಶುದ್ಧ ಸಂಗೀತದ ಲಯದಲ್ಲಿ ತಲ್ಲೀನನಾದವನಿಗೆ ಸಾಹಿತ್ಯವು ಅನಪೇಕ್ಷಿತವಾಗುತ್ತದೆ. ಹಾಗೆಯೇ ಆತ್ಮ‌ ಸಾಕ್ಷಾತ್ಕಾರದ ಬಳಿಕ ಅಧ್ಯಯನ-ಸಾಧನೆಗಳ ಅಗತ್ಯ ಇರುವುದಿಲ್ಲ‌ ಎಂದು ವಿವರಿಸುತ್ತಾರೆ.
....
( ಮುಂದಿನ‌ ಕಂತಿನಲ್ಲಿ‌ ಇನ್ನಷ್ಟು ತಿಳಿಯೋಣ)
ಕಾಮೆಂಟ್‌ಗಳು