Part - 29


ಮೂಲ

ವಾಗ್ವೈಖರೀ ಶಬ್ದಝರೀ ಶಾಸ್ತ್ರವ್ಯಾಖ್ಯಾನ - ಕೌಶಲಮ್|
ವೈದುಷ್ಯಂ ವಿದುಷಾಂ ತದ್ವದ್ ಭುಕ್ತಯೇ ನ ತು ಮುಕ್ತಯೇ ||59||

ಪ್ರತಿಪದಾರ್ಥ

ವಾಗ್ವೈಖರೀ = ಮಾತಿನ ಬೆಡಗು, ಶಬ್ದಝರೀ = ಪದಗಳ ಹರಿವು (ಪ್ರಯೋಗ) , ಶಾಸ್ತ್ರ ವ್ಯಾಖ್ಯಾನ ಕೌಶಲಮ್ = ಶಾಸ್ತ್ರಗಳನ್ನು ವಿವರಿಸುವ ಬುದ್ಧಿಮತ್ತೆ, ತದ್ವತ್ = ಹಾಗೇ, ವೈದುಷ್ಯಾಂ ವಿದುಷಾಂ ವಿದ್ವಾಂಸರ  ಪಾಂಡಿತ್ಯವು, ಭುಕ್ತಯೇ = ಭೋಗಕ್ಕಾಗಿ, ನ ತು ಮುಕ್ತಯೇ = ಮೋಕ್ಷಕ್ಕಾಗಿ ಅಲ್ಲ.

ತಾತ್ಪರ್ಯ


ಪಂಡಿತರ ಅಥವಾ ವಿದ್ವಾಂಸರ ಮಾತಿನ ಚಾತುರ್ಯ, ಬೆರಗು-ಬೆಡಗು, ಪದಪ್ರಯೋಗದ ಸೌಂದರ್ಯ-ಲಾಲಿತ್ಯ, ಶಾಸ್ತ್ರ ವಿವರಣೆಯ ಕುಶಲತೆ, ಇವೆಲ್ಲವೂ ಭೋಗಕ್ಕೆ ಸಾಧನವಾಗಬಲ್ಲುದೇ ಹೊರತು ಮುಕ್ತಿಗೆ ಆಗುವುದಿಲ್ಲ.


ವಿವರಣೆ
ಅಧ್ಯಯನ-ಅಧ್ಯಾಪನದಿಂದ ಸಂಪಾದಿಸಿದ ವಿಷಯ ಜ್ಞಾನವು ಹೊಟ್ಟೆಪಾಡನ್ನು ನಡೆಸುವುದರ ಜತೆಗೆ ಶಿಷ್ಯರಿಗೆ ಕಲಿಯಿಸಿಕೊಡಲೂ ಸಹಾಯಕವಾಗುತ್ತದೆ. ಶಾಸ್ತ್ರ, ವೇದ-ವೇದಾಂತಗಳನ್ನು  ಓದಿ ಪಾಂಡಿತ್ಯ ಪಡೆದಿರುವ ಪಂಡಿತರ ಮಾತಿನ ಚತುರತೆ, ವಿಷಯ ಮಂಡನೆ ಮತ್ತು ಅನೇಕ ಮನ ಮೋಹಕ ಪದಪುಂಜಗಳ ಪ್ರಯೋಗದ ಮೂಲಕ ಅಲಂಕಾರ, ಛಂದಸ್ಸುಗಳ ಸಹಿತ ವಿವರಿಸುವ ವಿಧಾನ, ಇವೆಲ್ಲವೂ ಭೋಗಕ್ಕಾಗಿ ಉಪಯೋಗವಾಗುತ್ತದೆಯೇ ಹೊರತು ಸಾಕ್ಷಾತ್ಕಾರಕ್ಕೆ ಅಲ್ಲ ಎಂದು ಶಂಕರರು ಹೇಳುತ್ತಾರೆ. ಅನೇಕ ವರ್ಷಗಳ ಕಠಿಣ ಅಧ್ಯಯನ, ತಪಸ್ಸಿನಿಂದ ಪಡೆದ ವಿಷಯ ಜ್ಞಾನವು ಕೇವಲ ಭೋಗಕ್ಕಾಗಿಯೇ ಈ ಜಗತ್ತಿನಲ್ಲಿ ಬಳಸ್ಪಡುತ್ತಿದೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.ಒಬ್ಬ ವ್ಯಕ್ತಿಯು ಸಂಶೋಧಕನೋ, ವಿಜ್ಞಾನಿಯೋ ಅಥವಾ ತತ್ವಜ್ಞಾನಿಯಾಗಿದ್ದಾನೆ ಎಂದರೆ ಆತನು ತನ್ನ ಹೊಟ್ಟೆಪಾಡು ನಡೆಸಿಕೊಂಡೇ ಅದನ್ನೆಲ್ಲಾ ತಿಳಿದುಕೊಂಡಿದ್ದಾನೆ ಎನ್ನಬೇಕಾಗುತ್ತದೆ. ಬದುಕಲು ಅನ್ನಾಹಾರಗಳು ಅವಶ್ಯಕವೇ ಆಗಿದೆ. ಸಮಾಜಕ್ಕೆ ಉಪಯೋಗವಾಗುವ ಕೆಲಸಗಳನ್ನು ಮಾಡಬೇಕೆಂದರೂ ವ್ಯಕ್ತಿಯು ಜೀವಂತವಾಗಿರಲೇಬೇಕು. ಹೇಗೆ ಸಿನಿಮಾ,ಸಂಗೀತ, ಸೌಂದರ್ಯಗಳು ರಂಜನೆಗಾಗಿ ಮಾತ್ರ (ವೀಣಾಯಾಂ..) ಎಂದು ಹಿಂದಿನ ಶ್ಲೋಕದಲ್ಲಿ ತಿಳಿದುಕೊಂಡೆವೋ ಹಾಗೆಯೆ ಪಾಂಡಿತ್ಯವು 'ಪ್ರದರ್ಶನ' ಎಂಬುದಕ್ಕೆ ಸರಿಸಾಟಿಗಬಲ್ಲುದೇ ಹೊರತು ಕೇವಲ ಜ್ಞಾನಪ್ರಾಪ್ತಿಗೆ ಅಲ್ಲ ಎನ್ನುತ್ತಾರೆ.
ಇದೊಂದು ರೀತಿ ಬಾಣವನ್ನು ನೇರವಾಗಿ ಗುರಿಯಿಟ್ಟು ಎದೆಗೇ ಹೊಡೆದಂತೆ !. ಅಯ್ಯೋ ನಾವು ಕಲಿತಿರುವ ವಿದ್ಯೆ, ಅಧ್ಯಯನಗಳೆಲ್ಲ ಸ್ವಾರ್ಥಕ್ಕೆ ಮಾತ್ರ ಎನ್ನುವಷ್ಟು ಕೆಳಮಟ್ಟದ್ದೆ ಎಂಬ ಆಲೋಚನೆ ಬರುತ್ತದೆ. ಮನುಷ್ಯನು ಜಂತೂವೇ ಆಗಿದ್ದು (ಪ್ರಾಣಿ), ತನ್ನ ಜಾತಿಯ ಪ್ರಾಣಿಗೆ ಮಾಡುವ ಉಪಕಾರವು ಸ್ವಾರ್ಥವೇ ಆಗುತ್ತದೆ ಎಂದು ಸದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳು ವಿವರಿಸುತ್ತಾರೆ. ಇವೆಲ್ಲವೂ 'ಕೇವಲ ಜ್ಞಾನ' (eternal knowledge) ದ ಮುಂದೆ ನಿಷ್ಪ್ರಯೋಜಕವಾಗುತ್ತವಯೇ ಹೊರತು ವಾಸ್ತವ ಜಗತ್ತಿನಲ್ಲಿ ಅಲ್ಲ ಎನ್ನುವುದನ್ನು ನಾವು ಮನಗಾಣಬೇಕಾಗುತ್ತದೆ.ಗುರುವು ಸ್ವಾನುಭವದ ನೆಲೆಯಲ್ಲಿ ನಿಂತು ಕೇವಲ ಜ್ಞಾನದ ಬಗ್ಗೆ ಹೇಳುವುದರಿಂದ ಜಗತ್ತಿನ  ವಿಷಯಗಳೆಲ್ಲವೂ ಮಾಯಾ-ಭೋಗವೇ ಎನಿಸಿಬಿಡುತ್ತದೆ.
---------
(ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ....)


ಕಾಮೆಂಟ್‌ಗಳು

  1. ಭಗವತ್ಪಾದರ ಬೆಳಕು ನೀಡುವ ಶ್ಲೋಕ, ಅದಕ್ಕೆ ನಿಮ್ಮ ಸಮರ್ಥ ವಿವರಣೆ ಇವು ಆನಂದವನ್ನು ಕೊಡುತ್ತವೆ. ಅರ್ಧದಲ್ಲಿ ನಿಂತಂತಹ ಈ ಪ್ರವಾಹವು ಇನ್ನು ನಿಲ್ಲದೆ ಮುಂದೆ ಹರಿಯಲಿ ಎಂದು ಆಶಿಸುತ್ತೇನೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ದಿನಕ್ಕೊಂದು ಸೂಕ್ತಿಯಂತೆ ಬರೆಯಲು ನಿರ್ಧರಿಸಿದ್ದೇನೆ. ನಿಮ್ಮ ಹಾರೈಕೆಯ ಫಲದಿಂದ ಮುಂದೆ ಸಾಗುತ್ತಲಿರುತ್ತದೆ.

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ