ವಿವೇಕ ಚೂಡಾಮಣಿ ಭಾಗ -೮



ಗ್ರಂಥದ ಮುಂದುವರಿದ ಭಾಗ

अर्थस्य निश्चयो दृष्टो  विचारेण हितोक्तितः।
न स्नानेन न दानेन प्राणायाम शतेनवा ॥१३॥

ಅರ್ಥಸ್ಯ ನಿಶ್ಚಯೋ ದೃಷ್ಟೋ ವಿಚಾರೇಣ ಹಿತೋಕ್ತಿತಃ|
(= ಒಳ್ಳೆಯ ವಚನಗಳನ್ನು ಕೇಳಿ ವಿಚಾರಮಾಡುವುದರಿಂದಲೇ ಆತ್ಮಾರ್ಥ ನಿಶ್ಚಯವು)
ನ ಸ್ನಾನೇನ ನ ದಾನೇನ ಪ್ರಾಣಾಯಾಮ ಶತೇನವಾ ||೧೨||
(=ಸ್ನಾನ, ದಾನ ಮತ್ತು ನೂರಾರು ಪ್ರಾಣಾಯಾಮಗಳಿಂದಲ್ಲ)

ಸದ್ಗುರುಗಳಾದವರ ಒಳ್ಳೆಯ ಮಾತುಗಳನ್ನು , ಉಪದೇಶಗಳನ್ನು ಆಲಿಸುವುದರ ಜೊತೆಗೆ ಅಂತಹ ವಿಚಾರಗಳನ್ನು ಒರೆಗೆ ಹಚ್ಚಿ ತಿಳಿದುಕೊಂಡು ವಿವೆಚನೆಯಿಂದ ನಿರ್ಣಯಿಸಿಕೊಳ್ಳುವ ಆತ್ಮಾರ್ಥವು ಮಿಗಿಲಾದುದು.
ಇಂತಹ ಆತ್ಮಾರ್ಥಜ್ಞಾನವು ಕೇವಲ ಸ್ನಾನ, ದಾನ ಮತ್ತು ನೂರಾರು ಬಾರಿ ಪ್ರಾಣಾಯಾಮಗಳನ್ನು ಮಾಡುವುದರಿಂದ ಸಿದ್ಧಿಸುವುದಿಲ್ಲ ಎಂದು ತಿಳಿಸುತ್ತಾರೆ.

ಆಕ್ಷೇಪ : ’ವಸ್ತುಸಿದ್ಧಿರ್ವಿಚಾರೇಣ’ ಎಂದು ಈಗಾಗಲೇ ತಿಳಿದಿರುವುದರಿಂದ ಸದ್ಗುರುಗಳ ಆಪ್ತವಚನದ ಅಗತ್ಯವಿದೆಯೆ ?

ಸಮಾಧಾನ :  ಹಗ್ಗವನ್ನೇ ಹಾವೆಂದು ತಿಳಿದು ಭ್ರಮೆಯಲ್ಲಿದ್ದಾಗ ವಾಸ್ತವದ ಅರಿವು ತಂತಾನೇ ಮೂಡುವುದು ಕಷ್ಟವಾಗುತ್ತದೆ. ಆಪ್ತರೊಬ್ಬರು ಹಿತವಾದ ಮಾತುಗಳಿಂದ ಸಂದರ್ಭವನ್ನು ವಿವರಿಸಿದಾಗ ಮನಸ್ಸು ತಿಳಿಯಾಗುತ್ತದೆ. ಭ್ರಮೆಯು ತೊಲಗುತ್ತದೆ.

ಶ್ಲೋಕದ ಎರಡನೆಯ ವಾಕ್ಯವನ್ನು ಯೋಗಗುರು ’ಬಾಬಾ ರಾಮದೇವರು ’ ಗಮನಿಸಿದರೆ, ಬಹುಶಃ ಅವರಿಗೆ ಕಡುಕೋಪ ಬರಬಹುದು. ವೇದಾಂತದ ವಿಚಾರವೇ ಹಾಗೆ !. ಅರ್ಜುನನು ಮೀನಿನ ಕಣ್ಣಿಗೆ ಬಾಣವನ್ನು ಹೊಡೆಯುವಾಗ ಆತನ ಗುರಿಯಿದ್ದುದು ಕಣ್ಣಿನೆಡೆಗೆ ಮಾತ್ರ !. ಕಣ್ಣೊಂದನ್ನು ಬಿಟ್ಟು ಆತನಿಗೆ ಬೇರೇನೂ ಕಾಣಿಸುತ್ತಿರಲಿಲ್ಲ. ಮೀನಿನ ಉಳಿದ ಅಂಗಾಗಗಳೆಲ್ಲಾ ಆತನಿಗೆ ನಿರ್ಲಕ್ಷ್ಯ ಅಥವಾ ಮಿಥ್ಯೆ. ಆತನ ಗುರಿಯೊಂದೇ ಸತ್ಯ !. ಹೀಗೆ ಆತ್ಮಜ್ಞಾನದ ಅನ್ವೇಷಣೆಯಲ್ಲಿ ತೊಡಗುವವರಿಗೆ ಅದೊಂದೇ ಪರಮಗುರಿಯಾಗಿರಬೇಕಾಗುತ್ತದೆ. ಉಳಿದುವೆಲ್ಲಾ ಆ ಗುರಿಯನ್ನು ತಲುಪುವ ನಿಟ್ಟಿನಲ್ಲಿ ನಿಮಿತ್ತವಾಗುತ್ತದೆ.
ಸ್ನಾನ, ದಾನಾದಿಗಳು ಮತ್ತು ಪ್ರಾಣಾಯಾಮಗಳಾವುವೂ ಆತ್ಮಜ್ಞಾನಾರ್ಥಿಯ ಪರಮಗುರಿಯಲ್ಲ. ಹಾಗಾಗಿ ಇವುಗಳಿಂದ ಪ್ರಯೋಜನವಿಲ್ಲ ಎಂದು ಹೇಳುತ್ತಾರೆ.

ಆಕ್ಷೇಪ:       ಸ್ನಾನ, ದಾನ ಮತ್ತು ಪ್ರಾಣಾಯಾಮಗಳೆಲ್ಲಾ ಬಳಕೆಗೆ ಬಾರದ್ದೇ ? (ವ್ಯರ್ಥವೇ ?) .
ಸಮಾಧಾನ : ಮತ್ತೊಮ್ಮೆ ’ಚಿತ್ತಸ್ಯ ಶುದ್ಧಯೇ ಕರ್ಮ’ ಎನ್ನುವುದನ್ನು ಮನನ ಮಾಡಿಕೊಳ್ಳಬೇಕಾಗುತ್ತದೆ.

ಸ್ನಾನದಲ್ಲಿ ನಿತ್ಯಸ್ನಾನ (ದಿನವೂ ಮೈತೊಳೆದುಕೊಳ್ಳುವುದು. ಶುಚಿತ್ವಕ್ಕಾಗಿ.), ಸೇತುಸ್ನಾನ (’ಸೇತು ಬಂಧೇತು ರಾಮೇಶಮ್’ ಎಂದು ಕೇಳಿದ್ದೆವೆ. ಗಂಡುಮಗುವನ್ನು ಪಡೆಯಲು ರಾಮೇಶ್ವರದ ಪುಣ್ಯತೀರ್ಥಗಳಲ್ಲಿ ಮೀಯವುದು ಎಂಬ ಶಾಸ್ತ್ರಾರ್ಥವಿದೆ), ಗಂಗಾಸ್ನಾನ (ಗಂಗಾನದಿಯಲ್ಲಿ ಮಿಂದು ಬಂದರೆ ಎಲ್ಲಾ ಪಾಪಗಳೂ ನಿವಾರಣೆ (ಚಿತ್ತಶುದ್ಧಿ!) ಎಂಬ ವಚನವಿದೆ) ಗಳೆಂಬ ಫಲಮೂಲವಾದ ಮೂರು ಪ್ರಸಿದ್ಧ ಕ್ರಿಯೆಗಳಿವೆ. ವಿಚಾರವೇ ಇಲ್ಲದೆ, ಆತ್ಮಶುದ್ಧಿಯೇ ಇಲ್ಲದೆ ಎಷ್ಟು ಕೋಟಿ ತೀರ್ಥಗಳಲ್ಲಿ ಮಿಂದು ಬಂದರೆ ಏನು ಪ್ರಯೋಜನ ?. ಅಜ್ಞಾನವೇ ಎಲ್ಲೆಲ್ಲೂ ಮುಸುಕಿರುವಾಗ ಕತ್ತಲೆಯಲ್ಲದೆ ಬೆಳಕು ಕಾಣುವುದಿಲ್ಲ.  ಕೊಳೆತುಹೋಗುವಷ್ಟು ಸಂಪತ್ತಿದೆ (Tax saving purpose !)   ಎಂದು ದಾನ ಮಾಡುವುದಕ್ಕಿಂತಲೂ ನಿಸ್ವಾರ್ಥ ಭಾವನೆಯಿಂದ ಕೊಡುವ ಚಿಕ್ಕಾಸೇ ಮಿಗಿಲಾದ ದಾನವೆನಿಸಿಕೊಳ್ಳುತ್ತದೆ. ಕರ್ಮಾನುಷ್ಠಾನಕ್ಕಾಗಿ ಮಾಡುವ ಪ್ರಾಣಾಯಾಮವು ಏಕಾಗ್ರತೆ , ಸಹಿಷ್ಣುತೆಗಳಿಗೆ ಮೂಲವಾದರೂ ಕೇವಲ ಅದನ್ನೇ ಹಲವು ನೂರು ಬಾರಿ ಮಾಡುವುದರಿಂದ ಆತ್ಮಾರ್ಥವು ಸಿದ್ಧಿಸುವುದಿಲ್ಲ ಎಂದು ತಿಳಿಸುತ್ತಾರೆ. ಸ್ನಾನ , ದಾನ ಮತ್ತು ಪ್ರಾಣಾಯಾಮಗಳು ನಮ್ಮ ಸುಖ-ಸವಲತ್ತುಗಳನ್ನೇ ಮೇಲಾಗಿಟ್ಟುಕೊಂಡು ನೆಡೆಸುವಂತಹುದಾಗಿರುತ್ತದೆ. ಈಗಿನ ಕಾಲದಲ್ಲಿ ’ಪ್ರಾಣಾಯಾಮ ಮಾಡಿದರೆ ಬಿ.ಪಿ. , ಶುಗರ್ರು, ಹಿಡಿದಲ್ಲಿರುತ್ತೆ’ ಎನ್ನುವ ಮೂಲೋದ್ದೇಶವಿಲ್ಲದೆ ಅದನ್ನು ಆಚರಿಸುವವರು ವಿರಳಾತಿವಿರಳ ಎನ್ನಬಹುದು !.
(ಪ್ರಾಣಾಯಾಮ ಮತ್ತು ಅದರ ಸಮಗ್ರ ವಿಚಾರಗಳು ಅಂತರಜಾಲದಲ್ಲಿ ಸಾಕಷ್ಟು ಲಭ್ಯವಿದೆ. ಆಸಕ್ತರು ಜಾಲಾಡಬಹುದು).

ಹಿತೋಕ್ತಿಗಾಗಿ ಯಾರನ್ನು ಆಶ್ರಯಿಸಬೇಕು ಎನ್ನುವುದನ್ನು ಶಂಕರರು ಮುಂದಿನ ಶ್ಲೋಕದಲ್ಲಿ ನಿರೂಪಿಸುತ್ತಾರೆ.

अधिकारिणमाशास्ते फलसिद्धिर्विशेषतः ।
उपाया देशकालाद्याः सन्तस्यां सहकारिणः॥१४||

ಅಧಿಕಾರಿಣಮಾಶಾಸ್ತೇ ಫಲಸಿದ್ಧಿರ್ವಿಶೇಷತಃ |
(= ಫಲಸಿದ್ಧಿಗಾಗಿ (=ಆತ್ಮವಿದ್ಯೆ) ಗುರುವಿನ ಬಳಿ ಸಾರುವುದು)
ಉಪಾಯಾ ದೇಶಕಾಲಾದ್ಯಾಃ ಸಂತ್ಯಸ್ಯಾಂ ಸಹಕಾರಿಣಃ || ೧೪||
(=ದೇಶ, ಕಾಲ, ಉಪಾಯಗಳು ಫಲಸಿದ್ಧಿಗೆ(=ಅಸ್ಯಾಂ) ಸಹಾಯಕವಾಗುತ್ತದೆ)

 ಆತ್ಮವಿದ್ಯೆಯ ಸಿದ್ಧಿಗಾಗಿ (ಫಲಸಿದ್ಧಿ ಎನ್ನುವುದನ್ನು ವಿಶೇಷವಾಗಿ ಗಮನಿಸಬೇಕು. ಇದು ಫಲಾಪೇಕ್ಷೆಯಲ್ಲ !) ಗುರುವನ್ನೇ ಆಶ್ರಯಿಸಬೇಕು ಮತ್ತು ಅಂತಹ ಸಾಧನೆಗೆ  ಕಾಲ (Time),  ದೇಶ ( Space) ಮತ್ತು ಉಪಾಯ (Method) ಗಳು ನೆರವಿಗೆ ಬರುತ್ತವೆ ಎಂದು ತಿಳಿಸುತ್ತಾರೆ. ಶ್ರೀ ಶಂಕರರು  ದೇಶ, ಕಾಲ, ಉಪಾಯಗಳು ಭಿನ್ನವಾಗಿರುತ್ತವೆ ಎಂಬುದನ್ನು ಒಪ್ಪಿದ್ದಾರೆ ಎಂಬುದು ಇಲ್ಲಿ ತಿಳಿಯುತ್ತದೆ. ಶಂಕರರು ಇದನ್ನು ಹೇಳಿದ ಕಾಲಕ್ಕೂ ಈಗಿನ ಕಾಲಕ್ಕೂ ತಳುಕು ಹಾಕಿದರೆ ದೊಡ್ಡ ವ್ಯತ್ಯಾಸವೇನೂ ಕಂಡುಬರುವುದಿಲ್ಲ. ಇಂತಹ ವಾಕ್ಯಗಳು ವಾಸ್ತವದ ಅರಿವಿನಿಂದ ಮತ್ತು ವಿಶಾಲ ಮನೋಭಾವದಿಂದ (ಉದಾರತೆ) ಬಂದಿರುವುದೆದು ತಿಳಿಯಬಹುದು. ದೇಶ, ಕಾಲೋಪಾಯಗಳು ಸಹಾಯಕವೆಂದು ಹೇಳುತ್ತಾರೆಯೇ ಹೊರತು ಅದನ್ನೇ ಸಾಧನವೆಂದು ನಿರೂಪಿಸುವುದಿಲ್ಲ.  ಉತ್ತಮ ಗುರುವು ದೊರೆಯದಿದ್ದರೆ ದೇಶ, ಕಾಲಗಳೆಲ್ಲಾ ಅಪ್ರಯೋಜಕ ಎನ್ನುವುದು ಸೂಕ್ಷ್ಮ ವಿಚಾರ.

ಇಲ್ಲಿ ಶಂಕರರು ಯಾವುದನ್ನೂ ಸಂಪೂರ್ಣ ನಿರಾಕರಿಸುವುದಿಲ್ಲ. ಯಾವ ಸಾಧನೆಗೆ ಯಾವ ಸಾಧನಗಳು ಅಗತ್ಯ ಎನ್ನುವುದನ್ನು ವಿವರಿಸುತ್ತಾ ಮನುಷ್ಯನು ತನ್ನ ಪರಮಗುರಿಯೆಡೆಗೆ ಹೇಗೆ ಸಾಗಬೇಕು ಎನ್ನುವುದನ್ನು ತಿಳಿಸುತ್ತಾರೆ. ವೇದಾಂತಿಗಳಿಗೆ ಇರಬೇಕಾದ ಮೂಲ ಗುಣವೇ ಇದು !.  "ನಾನು ಯಾವುದನ್ನೂ ನಿರಾಕರಿಸದೇ ನನ್ನನ್ನು ಯಾವುದೂ ನಿರಾಕರಿಸದಿರುವಂತೆ ಆಗಲಿ " (* ನಿರಾಕರೋದನಿರಾಕರಣಮಸ್ತ್ವನಿರಾಕರಣಂ ಮೇ ಅಸ್ತು  - ಛಾಂದೋಗ್ಯ ಉಪನಿಷತ್ತು. ಶಾಂತಿಮಂತ್ರ) ಎನ್ನುವುದನ್ನು ವೇದಾಂತಿಗಳೂ ತಿಳಿದಿರಬೇಕಾಗುತ್ತದೆ. ಕೆಲವು ಸೂಪರ್ ’ಅಹಂ ಬ್ರಹ್ಮಾಸ್ಮಿ’ಗಳಿಗೆ ತಾವು ನಂಬಿರುವ ತತ್ತ್ವವನ್ನು ಬಿಟ್ಟರೆ ಉಳಿದುದೆಲ್ಲವೂ ಸುಳ್ಳು ಎನ್ನುವ ಗುಣವಿರುತ್ತದೆ. ಇದನ್ನು ಶಂಕರರು ತಮ್ಮ ವಿಚಾರಗಳಿಂದಲೇ ಖಂಡಿಸುತ್ತಾರೆ. ’ಗುರಿಗೆ ಏನು ಬೇಕೋ ಅದನ್ನು ನಂಬು, ಉಳಿದ ವಿಚಾರಗಳನ್ನು ಪುರಸ್ಕರಿಸು’ ಎನ್ನುವ ಸೂಚನೆಯನ್ನು ಅಲ್ಲಲ್ಲಿ ನೀಡಿರುತ್ತಾರೆ.  ಅತ್ಮವಿದ್ಯೆಯ ಅರಿವಿಗೆ ಇಯತ್ತಾಪ್ರಮಾಣ ಎನ್ನುವುದು ಅಗತ್ಯ. ’ಇದಕ್ಕೆ ಇಷ್ಟೇ’ ಎನ್ನುವ ಯೋಗ್ಯತಾಸ್ವೀಕಾರದ ಅರಿವು ಆಸಕ್ತನಿಗೆ ಇರಬೇಕಾಗುತ್ತದೆ.  ಉಗುರನ್ನು ಕತ್ತರಿಸಲು ಸಣ್ಣ ’ನಯಿಲ್ ಕಟರ್’ ಸಾಕು, ಕೊಡಲಿಯ ಅಗತ್ಯವೇನೂ ಇಲ್ಲವಲ್ಲಾ !. ನಯಿಲ್ ಕಟರ್ರೂ ಕಬ್ಬಿಣದ್ದೇ, ಕೊಡಲಿಯೂ ಕಬ್ಬಿಣದ್ದೇ "ಇದನ್ನೆ ಅದನ್ನಾಗಿ ಮಾಡೋಣ" ಎನ್ನುವುದು ಗಾಂಪರಗುಂಪಿನ ಮಾತಾಗುತ್ತದೆ. ನಮ್ಮ ಉದ್ದೇಶಕ್ಕೆ, ಗುರಿಗೆ ಏನು ಬೇಕೋ ಅದನ್ನು ಅನುಸರಿಸುವುದು ಉತ್ತಮವಾದುದು . ಯಾವುದಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಗ್ರಹಿಸುವುದರಿಂದ , ನಂಬುವುದರಿಂದ ಗುರಿಯೆಡೆಗೆ ಸಾಗುವುದು ಸುಗಮ ಎಂದು ಸೂಚಿಸಿರುತ್ತಾರೆ.  ರುಚಿಯಾಗಿದೆ ಎಂದು ಸೇರುಗಟ್ಟಲೆ ತಿನ್ನುವುದು ನಂತರ ತಿಂದಿದ್ದು ಅರಗದೆ  ಕಕ್ಕವುದು !.  ಪೌಷ್ಟಿಕವಾದ , ಉತ್ತಮವಾದ ಆಹಾರವನ್ನು ಕೊಂಚವೇ ತಿನ್ನುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ.

ಆತ್ಮವಿದ್ಯೆಯನ್ನು ತಿಳಿಸಿಕೊಡುವ ಗುರುವು-ಅಧಿಕಾರಿಯು ಹೇಗಿರಬೇಕು? ಆತನ ಲಕ್ಷಣಗಳೇನು ? ಎನ್ನುವುದನ್ನು ಮುಂದಿನ ಕಂತಿನಲ್ಲಿ ತಿಳಿಯೋಣ.

------------------------------------------

ಟಿಪ್ಪಣಿ :

ಛಾಂದೋಗ್ಯ ಉಪನಿಷತ್ತಿನ ಶಾಂತಿಮಂತ್ರ
-------------------------------------------

 आप्यायन्तु ममाङ्गानि वाक्प्राणश्चक्षुः
श्रोत्रमथो बलमिन्द्रियाणि च सर्वाणि ।
सर्वम् ब्रह्मौपनिषदम् माऽहं ब्रह्म
निराकुर्यां मा मा ब्रह्म
निराकरोदनिराकरणमस्त्वनिराकरणम् मेऽस्तु ।
तदात्मनि निरते य उपनिषत्सु धर्मास्ते
मयि सन्तु ते मयि सन्तु ।
ॐ शान्तिः शान्तिः शान्तिः 

ವಂದನೆಗಳೊಂದಿಗೆ.

ಕಾಮೆಂಟ್‌ಗಳು

  1. ಬರೀ ಬಹಿರ್ಶುದ್ಧಿಗಿ೦ತಾ ಚಿತ್ತಶುದ್ಧಿಯೇ ಮುಖ್ಯ ಎನ್ನುವ ಶ೦ಕರರ ವಿಚಾರವನ್ನು ಸು೦ದರವಾಗಿ ತಿಳಿಸಿಕೊಟ್ಟಿದ್ದೀರಿ.ಉಪಯುಕ್ತ ಮಾಹಿತಿಗೆ ವ೦ದನೆಗಳು.

    ಪ್ರತ್ಯುತ್ತರಅಳಿಸಿ
  2. ಈ ಸಲ ನೀವು ನೀಡಿದ practical ಉದಾಹರಣೆಗಳು ಮನೋಜ್ಞವಾಗಿದ್ದವು. ಇತರ ಮೂಲಗಳಿಂದ ಎತ್ತಿಕೊಂಡ ಶ್ಲೋಕಗಳೂ ಸಹ ಅರ್ಥಗ್ರಹಣಕ್ಕೆ ತುಂಬ ಸಹಾಯಕಾರಿಯಾದವು. ನಿಮಗೆ ಅನೇಕ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  3. ಮೊದಲಿನಿಂದಲೂ ಓದುತ್ತಿದ್ದೇನೆ. ಅತ್ಯುತ್ತಮವಾಗಿ ಬರುತ್ತಿದೆ. Complexity ಇಲ್ಲದೆ ಹೇಳುತ್ತಿದ್ದೀರಿ. ಅಭಿನಂದನೆಗಳು. ಆದರೆ,
    ನೀವು ದೇವನಾಗರಿಯಲ್ಲಿ ಬರೆಯುತ್ತಿರುವ ಶ್ಲೋಕಗಳು ಆ ಲಿಪಿಗೆ ಸ್ವಲ್ಪ ಹೊರತಾಗಿ ಕಾಣುತ್ತಿದೆ(ವಿಂಡೋಸ್ ನಲ್ಲಿ). ಇದು IME ಸಮಸ್ಯೆಯೋ ಅಥವಾ ನೀವು ಕಣ್ಣಾಡಿಸದೇ ಆಗಿರುವುದೋ ಗೊತ್ತಿಲ್ಲ !. ಒಮ್ಮೆ ಪರೀಕ್ಷಿಸಿ.
    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  4. ವಿಜಯಶ್ರೀ ಅವರೇ,

    ನಿಮ್ಮ ಒಳ್ಳೆಯ ಮಾತುಗಳಿಗೆ ನನ್ನಿ. ಬರುತ್ತಿರಿ.

    ಪ್ರತ್ಯುತ್ತರಅಳಿಸಿ
  5. ಸೀತಾರಾಮರೆ,

    ನಿಮ್ಮ ಆಸಕ್ತಿಯೇ ನನ್ನ ಆಸಕ್ತಿಯೂ ಕೂಡ !. ಮತ್ತೆ ಬನ್ನಿ.

    ಪ್ರತ್ಯುತ್ತರಅಳಿಸಿ
  6. ಸುನಾಥ ಕಾಕಾ,

    ನಿಮ್ಮ ಪ್ರೋತ್ಸಾಹಕ್ಕೆ ಅನೇಕ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  7. ಶ್ರೀನಿವಾಸರೆ,

    ನೀವು ಹೇಳಿದ್ದು ಸರಿಯಾಗಿದೆ. ನಾನು Linux/Ubuntu ಬಳಸುತ್ತಿದ್ದೇನೆ. ಅದರಲ್ಲಿ i-bus input method ಬಳಸುತ್ತಿದ್ದು, ಉಬುಂಟುವಿನಲ್ಲಿ ದೇವನಾಗರಿಯು ಸರಿಯಾಗಿ ಮೂಡುತ್ತಿದೆ. ಆದರೆ ವಿಂಡೋಸ್ ನಲ್ಲಿ ಅದು ಕೊಂಚ ವ್ಯತ್ಯಾಸವಾಗಿ ಕಾಣುತ್ತಿದೆ. ಇದನ್ನು ನಾನೂ ಗಮನಿಸಿದ್ದೇನೆ. ಗೂಗಲ್ ಟ್ರಾನ್ಸಲಿಟರೇಶನ್ ಬಳಸಿ ಸರಿಪಡಿಸುತ್ತಿದ್ದೇನೆ. ಮುಂದೆ ವಿಂಡೋಸ್ ನಲ್ಲೂ ವ್ಯತ್ಯಾಸವಾಗಲಾರದು ಎಂದುಕೊಳ್ಳುತ್ತೇನೆ.
    ನಿಮ್ಮ ಪ್ರೋತ್ಸಾಹಕ್ಕೆ ಅನೇಕ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  8. ಒಳ್ಳೆಯ ವಿಚಾರವನ್ನು ಚೆನ್ನಾಗಿ ವಿವರಿಸಿದ್ದೀರಿ..

    ಪ್ರತ್ಯುತ್ತರಅಳಿಸಿ
  9. vikeka ಎಂದರೆ ವಿವೇಕ ಎಂದರ್ಥವೆ..
    ನೀವು ಬ್ಲಾಗಿಗೆ ಹಾಕಿರುವ ಚಿತ್ರದಲ್ಲಿ ಆ ರೀತಿ ಇದೆ

    ಪ್ರತ್ಯುತ್ತರಅಳಿಸಿ
  10. ಗೌಡ್ರೆ, (ವಿಚಲಿತ!)

    ತಪ್ಪನ್ನು ತಿಳಿಸಿ ನನ್ನಲ್ಲಿ ವಿವೇಕವನ್ನು ಮೂಡಿಸಿದಿರಿ ನೀವು. ನಿಮಗೆ ಅನೇಕ ಕೋಟಿ ಧನ್ಯವಾದಗಳು. ತಿದ್ದಿದ್ದೇನೆ.

    ಪ್ರತ್ಯುತ್ತರಅಳಿಸಿ
  11. ಇತ್ತೀಚಿಗೆ ತುಸು ಗಡಿಬಿಡಿಯಲ್ಲಿರುವುದರಿಂದ ಕೆಲಕಾಲ ಇತ್ತ ತಲೆಹಾಕಲಾಗಿರಲಿಲ್ಲ. ನಿಮ್ಮ ಸರಣಿ ಸೊಗಸಾಗಿ ಮೂಡಿಬರುತ್ತಿದೆ, ಮುಂದುವರೆಸಿ.

    ಶಂಕರರು ಆತ್ಮಜ್ಞಾನಕ್ಕೆ ಸಾಧಕವಲ್ಲದ ಬೇರೆಲ್ಲವೂ ವ್ಯರ್ಥವೆಂಬ ನಿಲುವು ಹೊಂದಿದ್ದಾರೆಂಬ ಮಾತಿದೆ (ಈ ಮೊದಲು ನಾನು ಪಾತಂಜಲದ ಬಗೆಗಿನ ಶಂಕರರ ನಿಲುವಿನ ಬಗ್ಗೆ ಪ್ರಸ್ತಾವಿಸಿದ್ದು ತಮಗೆ ನೆನಪಿರಬಹುದು). ಹೀಗಿದ್ದಮೇಲೆ ನಿತ್ಯಕರ್ಮಗಳೂ, ಯೋಗವೂ, ಭಕ್ತಿಯೂ ವ್ಯರ್ಥವಲ್ಲವೇ ಎಂಬ ಪ್ರಶ್ನೆಯೂ, ಅಂದಮೇಲೆ ಶಂಕರರೇ ರಚಿಸಿದ ಸುಂದರ ಭಕ್ತಿರಚನೆಗಳ ಬಗೆಗಿನ ಆಕ್ಷೇಪಗಳೂ ಏಳುತ್ತದೆ. ಇವಕ್ಕೆ ತಾರ್ಕಿಕವಾದ ನಿವಾರಣೆ/ಸಮಾಧಾನ, ವಿವೇಕ ಚೂಡಾಮಣಿಯ ಈ ಶ್ಲೋಕಗಳಲ್ಲಿದೆ ಎಂದು ನನ್ನ ಅನಿಸಿಕೆ. ಈ ಯೋಚನೆಯ ಸರಣಿ ಹೀಗೆ: ನಿತ್ಯಸ್ನಾನವು ಆತ್ಮಜ್ಞಾನ/ಮೋಕ್ಷಸಾಧಕವೇ? ಅಲ್ಲ. ಹಾಗಿದ್ದರೆ ಅದೇಕೆ? ಏಕೆಂದರೆ, ವ್ಯವಹಾರಪ್ರಪಂಚದಲ್ಲಿ ಕಟ್ಟುಬಿದ್ದ ಜೀವವು ಅದರಿಂದ ವಿಮುಕ್ತಿ ದೊರೆಯುವ ವರೆಗೂ ವ್ಯವಹಾರಪ್ರಚಂಚದ ನಿಯಮಗಳಿಗೆ ಕಟ್ಟುಬಿದ್ದು ನಡೆಯಬೇಕಾಗುತ್ತದೆ. ಸ್ನಾನಾದಿಗಳು ದೇಹಶುದ್ಧಿಗೂ, ಜಪ ತಪಾದಿಗಳು ಚಿತ್ತಶುದ್ಧಿಗೂ ಅಗತ್ಯವೆಂಬುದು ವ್ಯಾವಹಾರಿಕ ಸತ್ಯ. ಆದ್ದರಿಂದ ಅದಕ್ಕೆ ನಾವು ಬದ್ಧ. ಹೀಗೆಯೇ ಯೋಗವೂ! ಆದರೆ ಯಾವುದು ಮುಖ್ಯವೆಂದರೆ ಇವೆಲ್ಲಾ ವ್ಯಾವಹಾರಿಕ ಸತ್ಯಗಳೇ ಹೊರತು ಕೇವಲ ಸತ್ಯ (ಪಾರಮಾರ್ಥಿಕ ಸತ್ಯ)ವಲ್ಲ ಎಂಬ ಅರಿವು. ಈ ಅರಿವು, ಮುಂದೊಮ್ಮೆ ಚೇತನವು ಪಕ್ವವಾದಾಗ, ಪರಮಾರ್ಥಜ್ಞಾನಕ್ಕೆ ಸೇತುವಾಗುತ್ತದೆ. ಸರಿ, ನಾವು ವ್ಯಾವಹಾರಿಕ ಪ್ರಪಂಚಕ್ಕೆ ಕಟ್ಟುಬಿದ್ದಿರುವ ವರೆಗೂ ಅದರ ನೀತಿನಿಯಮಗಳೇ ಮುಖ್ಯವೆಂದಮೇಲೆ ಅವೆಲ್ಲವೂ ಮಿಥ್ಯವೆಂಬ ಅರಿವು ತಾನೇ ಏಕೆ ಬೇಕು? ಎಂದರೆ, ಈ ಅರಿವು ಸದಾ ಜಾಗೃತವಾಗಿಲ್ಲದಿದ್ದರೆ, ಜೀವವು ಈ ಕರ್ಮಗಳ ಬಂಧದಲ್ಲೇ ಸಿಕ್ಕು ಮೈಮರೆತುಬಿಡುತ್ತದೆ, ದಾರಿ ತಪ್ಪಿಬಿಡುತ್ತದೆ, ನಿತ್ಯಕರ್ಮಗಳನ್ನೇ ಹಟ ಹಿಡಿದು ನಡೆಸುತ್ತಾ ಅದರ ಪರಮೋದ್ದೇಶವನ್ನು ಮರೆಯುತ್ತದೆ, ಯೋಗವೇ ಮೋಕ್ಷವೆಂದುಕೊಳ್ಳುತ್ತದೆ; ಆದ್ದರಿಂದ ನಿನ್ನ ವ್ಯಾವಹಾರಿಕ ಕರ್ಮಗಳನ್ನು ಚಾಚೂ ತಪ್ಪದೇ ನಡೆಸುತ್ತಿದ್ದರೂ ಇವೆಲ್ಲಾ ಕೇವಲ ವ್ಯಾವಹಾರಿಕ ಸತ್ಯ ಮತ್ತು ಪರಮಾರ್ಥದಲ್ಲಿ ಇದು ವ್ಯರ್ಥವೆಂಬ ಅರಿವು ಸದಾ ಇರಬೇಕು, ಇದೊಂದೇ ಮುಕ್ತಿಗೂ ವ್ಯಾವಹಾರಿಕ ಜಗತ್ತಿಗೂ ಇರುವ ಸೇತುವೆ - ಇದು ಬಹುತೇಕ ನನಗೆ ತಿಳಿದಂತೆ ಶಂಕರರ ದರ್ಶನ.

    ಮತ್ತೊಂದು ವಿಷಯ: "ಉಪಾಯಾ ದೇಶಕಾಲಾದ್ಯಾಃ" ಎಂಬುದನ್ನು ದೇಶ, ಕಾಲ ಮತ್ತು ಉಪಾಯಗಳು ಎಂದು ಅರ್ಥೈಸಿದ್ದೀರಿ. ಆದರೆ ಅದು ದೇಶ ಕಾಲಾದಿ ಉಪಾಯಗಳು ಎಂದಾಗಬೇಕಲ್ಲವೇ (ಅಂದರೆ ದೇಶವೂ ಒಂದು ಉಪಾಯ, ಕಾಲವೂ ಒಂದು ಉಪಾಯ, ಮತ್ತು ಇತರ ಉಪಾಯಗಳು)

    ಪ್ರತ್ಯುತ್ತರಅಳಿಸಿ
  12. ಮಂಜುನಾಥರೆ,

    "ಶಂಕರರು ಆತ್ಮಜ್ಞಾನಕ್ಕೆ ಸಾಧಕವಲ್ಲದ ಬೇರೆಲ್ಲವೂ ವ್ಯರ್ಥವೆಂಬ ನಿಲುವು ಹೊಂದಿದ್ದಾರೆಂಬ ಮಾತಿದೆ " ಎಂದು ಹೇಳಿದಿರಿ.

    ಹಾಗೇನೂ ಇಲ್ಲ. ಕೆಲವು ಸಮದರ್ಶಿಗಳು ಎಲ್ಲವನ್ನೂ ಸಪಾಟು ಮಾಡಿ ಇಸ್ತ್ರಿ ಮಾಡಿರುವುದರಿಂದ ಆ ರೀತಿಯ ವಿಚಾರಗಳು ಹರಿದಾಡಿವೆ. ದೇವರನ್ನು ಸೀಮಿತ ಮಾಡಿಕೊಂಡು ನೋಡುವುದರಿಂದ ಆಗಿರುವ ಎಡವಟ್ಟು ಇದು ಎನ್ನಬಹುದು. ನಿಮ್ಮ ಮುಂದಿನ ವಿವರಣೆಯಲ್ಲಿಯೇ ಶಂಕರರ ತತ್ವವು ಕಾಣಸಿಗುತ್ತದೆ. ಸುಂದರವಾದ ವಿವರಣೆಯನ್ನು ನೀಡೀದ್ದೀರಿ.

    ಪ್ರಾಥಮಿಕ ಶಾಲೆಯಲ್ಲಿ ಮಗ್ಗಿ ಕಲಿತದ್ದು ಮುಂದೆ ಸಹಕಾರಿಯಾಗುತ್ತದೆ. ಮಗ್ಗಿಯೇ integratioನ್ನೋ calculuಸ್ಸೋ ಆಗುವುದಿಲ್ಲ, ಅಲ್ಲವೇ ?. ಪದವಿ ತರಗತಿಗೆ ಬಂದು ನನಗೆ ಮಗ್ಗಿಯೇ ಬರೋದಿಲ್ಲ ನೀವು calculusಹೇಳಿಕೊಡ್ತಾ ಇದ್ದೀರಲ್ಲಾ ಎಂದರೆ "ಅಪ್ಪಾ ಮಹಾನುಭಾವ, ಹೋಗಿ ಮಗ್ಗಿ ಕಲಿತು ಪದವಿಯ ವರೆಗಿನ ಎಲ್ಲಾ ಲೆಕ್ಕಗಳನ್ನೂ ಕಲಿತು ಬಾ" ಎನ್ನಬೇಕಾಅಗುತ್ತದೆ :). ಆತ್ಮವಿದ್ಯೆಯ ಶಾಲೆಯಲ್ಲಿ ಅದೇ ಮುಖ್ಯ ವಿಚಾರ ಉಳಿದುದೆಲ್ಲವೂ ನಗಣ್ಯ !.ಶಂಕರರ ಬ್ರಹ್ಮಸೂತ್ರಗಳ ಭಾಷ್ಯವೂ ಇದನ್ನೇ‌ಹೇಳುತ್ತದೆ. ಪಾಮರರಿಗೆ ನೇರ ಆತ್ಮವಿದ್ಯೆಯ ದಾರಿ ಸಾಧ್ಯವಿಲ್ಲ, ಅದಕ್ಕೆಂದೇ ಶಂಕರರು ತಮ್ಮ ಭಕ್ತಿ ರಚನೆಗಳ ಮೂಲಕ ( ಇದ್ದ ಬದ್ದ ದೇವರನ್ನೆಲ್ಲಾ ಅವರು ಕೊಂಡಾಡಿದ್ದಾರೆ, ಎಲ್ಲರೂ ಹೀಗೆ ಮಾಡಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ) ಕರ್ಮ-ಭಕ್ತಿ ಮಾರ್ಗವನ್ನು ಎಲ್ಲರಿಗೂ ತೆರೆದಿಟ್ಟಿದ್ದ್ದಾರೆ.
    ಎರಡು ದೋಣಿಯ ಮೇಲೆ ಕಾಲಿಟ್ಟವ ಗೊಂದಲದಲ್ಲೇ ಮುಳುಗಿಹೋಗುತ್ತಾನೆ !.
    ಹೀಗಾಗಿ "ಇದಕ್ಕೆ ಇಷ್ಟು ಸಾಕು" ಎನ್ನುವುದನ್ನು ಶಂಕರರು ಪ್ರತಿಪಾದಿಸಿದ್ದಾರೆ ಎನ್ನುವುದು ತಿಳಿದುಬರುತ್ತದೆ.

    ಉಪಾಯಾ ದೇಶಕಾಲಾದ್ಯಾಃ ಎನ್ನುವುದನ್ನು ನೀವು ಹೇಳಿರುವ ರೀತಿಯೂ ಸಮಂಜಸವಾಗಿದೆ. ಸಂಕೀರ್ಣತೆಯ ಭಯದಿಂದ ತೆಳುವಾಗಿ ಹೇಳಿದ್ದೇನೆ.

    ನಿಮ್ಮ ಎಂದಿನ ಉತ್ಸಾಹ ಮತ್ತು ಪ್ರೋತ್ಸಾಹಕ್ಕೆ ಅನೇಕ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ