Part-26
ಮೂಲ :
ಗುರೋವಾಚ
ಧನ್ಯೋಸಿ ಕೃತಕೃತ್ಯೋಸಿ ಪಾವಿತಂ ತೇ ಕುಲಂ ತ್ವಯಾ |
ಯದವಿದ್ಯಾ ಬಂಧಮುಕ್ತ್ವಾ ಬ್ರಹ್ಮೀಭವತುಮಿಚ್ಛಸಿ| ೫೧|
ಪ್ರತಿಪದಾರ್ಥ:
(ಗುರು ಉವಾಚ= ಗುರುವು ಹೇಳಿದನು, ಧನ್ಯಃ, ಅಸಿ= ನೀನು ಧನ್ಯನಾಗಿರುವೆ, ಕೃತಕೃತ್ಯಃ, ಅಸಿ = ಕೃತಾರ್ಥನಾಗಿರುವೆ, ತ್ವಯಾ = ನಿನ್ನಿಂದ, ತೇ ಕುಲಂ = ನಿನ್ನ ಕುಲವು, ಪಾವಿತಂ = ಪವಿತ್ರವಾಯಿತು, ಯತ್ = ಯಾವ (ಕಾರಣದಿಂದ), ಅವಿದ್ಯಾ ಬಂಧಮುಕ್ತ್ವಾ = ಅಜ್ಞಾನದ ಬಿಡುಗಡೆಯ ಮೂಲಕ, ಬ್ರಹ್ಮೀಭವಿತುಂ ಇಚ್ಛಸಿ = ಬ್ರಹ್ಮವಾಗಲೆಂದು )
ತಾತ್ಪರ್ಯ:
ಗುರುವು ಹೇಳಿದನು:
ನೀನು ಧನ್ಯನು, ಕೃತಕೃತ್ಯನು. ನಿನ್ನ ಕುಲವು ನಿನ್ನಿಂದ ಪಾವನವಾಯಿತು. ಏಕೆಂದರೆ, ಅಜ್ಞಾನ ಅಥವಾ ಅವಿದ್ಯಾಬಂಧನದಿಂದ ಬಿಡಿಸಿಕೊಂಡು ಬ್ರಹ್ಮವಾಗಲು ಬಯಸುತ್ತಿರುವೆ
ವಿವರಣೆ:
ತಿಳಿವಳಿಕೆಯನ್ನು ಬಯಸಿ ಬರುವ ಶಿಷ್ಯನು ಕೇಳಿದ ಪ್ರಶ್ನೆಗಳಿಂದ ಗುರುವಿನ ಮನಸ್ಸು ತುಂಬಿಬರುತ್ತದೆ. ಅವೇನು ಸಾಮಾನ್ಯ ಪ್ರಶ್ನೆಗಳೆ ?. ಪ್ರಶ್ನೆಗಳ ತೂಕದಿಂದಲೆ ಅಪೇಕ್ಷಿಯ ವಿದ್ವತ್ತನ್ನೂ, ಇಲ್ಲಿಯವರೆಗಿನ ಆತನ ಸಾಧನೆಯನ್ನೂ ಗುರುವು ಅಳೆದುಬಿಡುತ್ತಾನೆ. ಬ್ರಹ್ಮದ ಅರಿವನ್ನು ಪಡೆಯಲು ಬಯಸುತ್ತಿರುವ ನಿನ್ನ ಜನ್ಮ ಇಂದಿಗೆ ಸಾರ್ಥಕವಾಯಿತು ಹಾಗೂ ನಿನ್ನ ಕುಲವು ಪಾವನವಾಯಿತು ಎಂದು ಶಿಷ್ಯನನ್ನು ಪ್ರಶಂಸಿಸುತ್ತಾರೆ. ಏಕೆಂದರೆ ಅವಿದ್ಯೆ-ಅಜ್ಞಾನದಲ್ಲೆ ಸಿಲುಕಿ ಒದ್ದಾಡುವ ಜೀವಿಗಳಿಂತಲೂ ಭಿನ್ನವಾಗಿ ಇಲ್ಲಿ ಶಿಷ್ಯನು ಗುರುವಿಗೆ ಕಾಣುತ್ತಾನೆ. ಈತ ನೇರವಾಗಿ ನನ್ನ ಬಳಿಬಂದು ಬ್ರಹ್ಮದ ಬಗೆಗೆ ಅತ್ಯಂತ ಸ್ಪಷ್ಟವಾಗಿ ಅಳುಕಿಲ್ಲದೆ ಕೇಳುತ್ತಿದ್ದಾನೆ ಎಂದಮೇಲೆ ಸಾಧನಾ ಚತುಷ್ಟಯವನ್ನು ಮುಗಿಸಿಕೊಂಡೇ ಬಂದಿದ್ದಾನೆ ಎಂಬುದೂ ಗುರುವಿಗೆ ತಿಳಿದುಬಿಡುತ್ತದೆ. ಹಾಗಾಗಿ ಶಿಷ್ಯನನ್ನು ಹೊಗಳುತ್ತಾರೆ. ಇಲ್ಲಿ ಹೊಗಳಿಕೆ ಎನ್ನುವುದು ಕೇವಲ ಮುಖಸ್ತುತಿಯಾಗಿರದೆ ಹೃದಯದಿಂದ ಬಂದ ಆನಂದದ ನುಡಿಗಳಾಗಿರುತ್ತವೆ.
ಅವಿದ್ಯೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಅನಕ್ಷರತೆಗೂ ಅವಿದ್ಯೆಗೂ ಸಂಬಂಧವಿಲ್ಲ. ಜಗತ್ತನ್ನು ಸತ್ಯ ಎಂದು ನಂಬಿ ಭವಬಂಧನದಲ್ಲಿ ಸಿಲುಕುವ ಪ್ರಕ್ರಿಯೆಯನ್ನು ಇಲ್ಲಿ ಅವಿದ್ಯೆ ಅಥವಾ ಅಜ್ಞಾನ ಎಂದು ತಿಳಿದುಕೊಳ್ಳಬೇಕಾಗುತ್ತದೆ. ತಮ್ಮ ಪ್ರೀತಿಪಾತ್ರವಾದ ಆಸಕ್ತಿಯ ವಿಷಯದ ಬಗ್ಗೆಯೆ ಯಾರಾದರೂ ಪ್ರಶ್ನೆ ಮಾಡಿದರೆ ಹೇಳುವವನ ಉತ್ಸಾಹ ಇಮ್ಮಡಿಯಾಗುತ್ತದೆ. ನುರಿತ ಅಡುಗೆಭಟ್ಟನ ಬಳಿ ಹೋಗಿ ಬಿಸಿಬೇಳೆ ಬಾತ್ ಮಾಡುವ ಬಗೆಯನ್ನು ಕೇಳಿದರೆ, ಆತ ಸಹಜ ಸಂತೋಷದಿಂದ ಅದರ ವಿಧಾನವನ್ನು ವಿವರಿಸುತ್ತಾನೆ. ನಿಮ್ಮದು ಸ್ಯಾಮ್ಸಂಗ್ ಮೊಬೈಲ್ ಫೋನಾದರೆ ಆ ಕಂಪೆನಿಗೆ ಕರೆಮಾಡಿ ಸಮಸ್ಯೆಯನ್ನು ಹೇಳಿಕೊಳ್ಳಬೇಕಾಗುತ್ತದೆ. ಆಪಲ್ ಸಂಸ್ಥೆಗೆ ದೂರು ನೀಡಿದರೆ ಅವರ ಪ್ರತಿಕ್ರಿಯೆ ನಕರಾತ್ಮಕವಾಗಿರುತ್ತದೆ.
ನಮ್ಮಲ್ಲಿ ಏಳುವ ಇನ್ನೊಂದು ಸಹಜ ಪ್ರಶ್ನೆಯೆಂದರೆ, ಜ್ಞಾನಿಯಾಗುವುದರಿಂದ ಏನು ಪ್ರಯೋಜನ ಎಂದು. ನೇರ ವ್ಯಾವಹಾರಿಕ ಅಥವಾ ಲಾಭದಾಯಕ ಪ್ರಯೋಜನವಿಲ್ಲದಿದ್ದರೂ ಲೋಕಕ್ಕೆ ಜ್ಞಾನಿಗಳಿಂದ ನೆಮ್ಮದಿ ಸಿಗುತ್ತದೆ. ಪ್ರತಿನಿತ್ಯ ಹುಟ್ಟುವ ಸೂರ್ಯನು ಹೇಗೆ ಲೋಕಕ್ಕೆ ಬೆಳಕನ್ನು ನೀಡುತ್ತಾನೆಯೋ ಅದೇ ರೀತಿ ಜ್ಞಾನಿಯೂ ಸಹ. ಬಾಣಭಟ್ಟನ ಕಾವ್ಯಗಳಲ್ಲಿ ಹಾವುಗಳು ನವಿಲಿನ ಪುಕ್ಕಗಳ ಸಂದಿಯಲ್ಲಿ ವಿಶ್ರಮಿಸುವುದು, ಆನೆಗಳು ಸಿಂಹದ ಕೇಸರವನ್ನು ಜಗ್ಗುತ್ತಾ ಆಟವಾಡುವುದು ಮುಂತಾದ ವರ್ಣನೆಗಳನ್ನು ನೋಡಬಹುದು. ಹಾಗೆಯೆ ಜ್ಞಾನಿಯ ಉಪಸ್ಥಿತಿಯು ಲೋಕಕ್ಕೆ ನೆಮ್ಮದಿ ತರಬಲ್ಲದು ಎಂದು ತಿಳಿಯಬೇಕಾಗುತ್ತದೆ.
(ಸದ್ಗುರು ಚಂದ್ರಶೇಖರ ಭಾರತಿ ಸ್ವಾಮಿಗಳ ವ್ಯಾಖ್ಯಾನದಿಂದ ..)
ಆಕ್ಷೇಪ: ಬ್ರಹ್ಮವಾಗಲು ಬಯಸುವುದು ಎಂದರೆ ಅದು ಹೊಸದಾಗಿ ಬರುವುದು ಎಂದರ್ಥವಾಗುವುದಿಲ್ಲವೆ? . ಅಲ್ಲಿಗೆ ಬ್ರಹ್ಮಸ್ವರೂಪವಾದ ಮೋಕ್ಷವೂ ಅನಿತ್ಯವಾಯಿತು.
ಸಮಾಧಾನ: ಇಲ್ಲ. ಸಕಲ ಜೀವಜಂತುಗಳೂ ಬ್ರಹ್ಮವೆ. ಆದರೆ, ಅದರ ತಿಳಿವಳಿಕೆಗಾಗಿ ಸಾಧನೆ ಎನ್ನುವುದು ಬೇಕಷ್ಟೆ. ಬ್ರಹ್ಮವು ನಿತ್ಯವಾದುದು, ಅವಿದ್ಯೆಯ ಬಂಧವು ತೊಲಗಿದಾಗ ಅರಿವಿನ ಬೆಳಕು ಕಾಣುತ್ತದೆ
——
ಮೂಲ
ಋಣಮೋಚನ ಕರ್ತಾರಃ ಪಿತುಃ ಸಂತಿ ಸುತಾದಯಃ |
ಬಂಧಮೋಚನ ಕರ್ತಾ ತು ಸ್ವಸ್ಮಾದನ್ಯೋ ನ ಕಶ್ಚನ |೫೨|
ಪ್ರತಿಪದಾರ್ಥ:
(ಸುತಾದಯಃ = ಮಗನೇ ಮೊದಲಾದವರು, ಪಿತುಃ = ತಂದೆಗೆ, ಋಣಮೋಚನ ಕರ್ತಾರಃ = ಋಣದಿಂದ ಬಿಡುಗಡೆ ಮಾಡಲು ಇದ್ದಾರೆ, ತು = ಆದರೆ, ಬಂಧಮೋಚನ ಕರ್ತಾ = ಅವಿದ್ಯಾಬಂಧನದಿಂದ ಬಿಡುಗಡೆ ಮಾಡುವವನು, ಸ್ವಸ್ಮಾತ್ = ತನಗಿಂತಲೂ, ಅನ್ಯಃ = ಬೇರೆಯಾದವನು, ಕಶ್ಚನ ನ = ಯಾರೊಬ್ಬನೂ ಇಲ್ಲ)
ತಾತ್ಪರ್ಯ:
ಪಿತೃಋಣವನ್ನು ತೀರಿಸಲು ಮಕ್ಕಳಿರುತ್ತಾರೆ. ಆದರೆ ಅವಿದ್ಯಾಬಂಧನದಿಂದ ಬಿಡುಗಡೆ ಮಾಡಲು ತನ್ನನ್ನು ಬಿಟ್ಟರೆ (ಸ್ವಪ್ರಯತ್ನ) ಇನ್ನಾರೂ ಇಲ್ಲ.
ವಿವರಣೆ
ಗುರುವು ಮುಂದುವರಿದು ಹೇಳುತ್ತಾ, ಶಾಸ್ತ್ರದಲ್ಲಿ ಹೇಳಿರುವಂತೆ ದೇವಋಣ, ಪಿತೃಋಣಗಳನ್ನು ನಾನಾ ಕರ್ಮಾಚರಣೆಗಳ ಮೂಲಕ ತೀರಿಸಬಹುದಾಗಿರುತ್ತದೆ. ಆದರೆ ಜಗತ್ತು ಸತ್ಯ, ಇಲ್ಲಿರುವುದೆಲ್ಲ ಭೋಗವಸ್ತುಗಳು ಹಾಗೂ ಸಂಸಾರಕ್ಕಾಗಿಯೆ ಇವೆಲ್ಲವೂ ನಿರ್ಮಿತವಾಗಿದೆ ಎಂಬ ಅಜ್ಞಾನದಿಂದ ಬಿಡುಗಡೆ ಮಾಡಲು ತನ್ನ ಹೊರತು ಮತ್ತಾರಿಗೂ ಸಾಧ್ಯವಿಲ್ಲ. ತನ್ನ ಅಂತಃಕರಣದಿಂದ ಬಂದಂತಹ ಭ್ರಾಂತಿಯನ್ನು ತಾನೇ ಹೋಗಲಾಡಿಸಿಕೊಳ್ಳಬೇಕೆ ಹೊರತು ಮತ್ತೊಬ್ಬರಿಂದ ಸಾಧ್ಯವಿಲ್ಲ.
ಗುರುವು ಶಿಷ್ಯನಿಗೆ ಪಾಠವನ್ನು ಹೇಳಬಹುದೆ ಹೊರತು ತಾನೇ ಪರೀಕ್ಷೆ ಬರೆದು ಶಿಷ್ಯನನ್ನು ಉತ್ತೀರ್ಣನನ್ನಾಗಿ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡುವುದು ಶಿಕ್ಷಣನೀತಿಗೆ ವಿರುದ್ಧವಾದುದು ಮತ್ತು ಅದರಿಂದ ಶಿಷ್ಯನಿಗೆ ನಷ್ಟವೆ ಹೆಚ್ಚು. ಕರಿದ ಎಣ್ಣೆ ಪದಾರ್ಥಗಳನ್ನು ತಿನ್ನುವುದರಿಂದ ಕೊಬ್ಬು ಹೆಚ್ಚುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಿದ್ದರೂ ತಿನ್ನುವುದನ್ನೇನೂ ಬಿಡುವುದಿಲ್ಲ. ಎಲ್ಲಿಯವರೆಗೆ ? . ಒಮ್ಮೆ ಎದೆನೋವು ಕಾಣಿಸಿಕೊಳ್ಳುವವರೆಗೆ. ಬಳಿಕ ಎಲ್ಲವನ್ನೂ ಬಿಡಬೇಕಾಗುತ್ತದೆ.
ಮುಂದಿನ ಬಾಗದಲ್ಲಿ ಇನ್ನಷ್ಟು ತಿಳಿಯೋಣ
-----------
( ಈಗ ಕೊಡುವುದು ಚುನಾವಣೆ ಭರವಸೆಯಲ್ಲ. ರೆಗ್ಯುಲರಾಗಿ ಬರೆಯುತ್ತೇನೆ ಎಂಬ ಬ್ಲಾಗ್ ಭರವಸೆ. ನಿಮ್ಮ ಪ್ರೋತ್ಸಾಹ ಎಂದಿನಂತಿರಲಿ :) )
ವಿವೇಕ ಚೂಡಾಮಣಿ ಎನ್ನುವ ಪದವನ್ನು ರೀಡಿಂಗ್ ಲಿಸ್ಟಿನಲ್ಲಿ ಕಂಡೊಡನೆ ಸಂತೋಷವಾಯಿತು. ನಿಮ್ಮ ವ್ಯಾಖ್ಯಾನವನ್ನು ಓದಿ ಮತ್ತಿಷ್ಟು ಸಂತೋಷವಾಯಿತು. ತಿಳಿಯಾದ ವ್ಯಾಖ್ಯಾನ. ‘ಶಿಷ್ಯಾಃ ಛಿನ್ನಸಂಶಯಾಃ’.
ಪ್ರತ್ಯುತ್ತರಅಳಿಸಿಕಾಕಾ
ಪ್ರತ್ಯುತ್ತರಅಳಿಸಿThank U Very much :)
ರೆಗ್ಯುಲರ್ರಾಗಿ ಓದಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. :)
ಪ್ರತ್ಯುತ್ತರಅಳಿಸಿAll the best :)
ಪ್ರತ್ಯುತ್ತರಅಳಿಸಿ