ಭಾಗ-೧೮


मूलम् = ಮೂಲ

स्वामिन्नमस्ते नतलोकबन्धो 
करुण्यसिन्धो पतितं भवाब्धौ ।
मामुद्धरात्मीयकटाक्षदृष्ट्या 
ऋज्व्याऽतिकारुण्यसुधाभिवृष्ट्या ॥೩೬||

ಸ್ವಾಮಿನ್ನಮಸ್ತೇ ನತಲೋಕ ಬಂಧೋ
ಕಾರುಣ್ಯಸಿಂಧೋ ಪತಿತಂ ಭವಾಬ್ಧೌ  |
ಮಾಮುದ್ಧರಾತ್ಮೀಯ-ಕಟಾಕ್ಷದೃಷ್ಟ್ಯಾ
ಋಜ್ವ್ಯಾಽತಿಕಾರುಣ್ಯ-ಸುಧಾಭಿವೃಷ್ಟ್ಯಾ || ೩೬||

ಪ್ರತಿಪದಾರ್ಥ:

(ನತಲೋಕಬಂಧೋ =ನಮಿಸುತ್ತಿರುವ ಜನರ ಬಂಧುವೆ, ಕಾರುಣ್ಯ ಸಿಂಧೋ = ಕರುಣಾಸಾಗರನೆ, ಸ್ವಾಮಿನ್ = ಸ್ವಾಮಿಯೆ-ಗುರುವೆ, ತೇ =ನಿನಗೆ, ನಮಃ= ನಮನಗಳು ;  ಭವಾಬ್ಧೌ =ಸಂಸಾರಸಾಗರದಲ್ಲಿ , ಪತಿತಂ = ಬಿದ್ದಿರುವ-ನೊಂದಿರುವ, ಮಾಂ- ನನ್ನನ್ನು, ಋಜ್ವ್ಯಾ = ಸರಳವಾದ-ಒಳ್ಳೆಯದಾದ, ಅತಿಕಾರುಣ್ಯ -ಸುಧಾಭಿವೃಷ್ಟ್ಯಾ = ಕರುಣೆಯೆಂಬ ಅಮೃತವನ್ನು ಸುರಿಸುತ್ತಿರುವ, ಆತ್ಮೀಯ-ಕಟಾಕ್ಷ-ದೃಷ್ಟ್ಯಾ = ನಿನ್ನ ಅನುಗ್ರಹದ ದೃಷ್ಟಿಯಿಂದ, ಉದ್ಧರ = ಉಧ್ಧಾರಮಾಡು. )

ತಾತ್ಪರ್ಯ :

ನಮಿಸುತ್ತಿರುವ ಜನಗಳ ಬಂಧುವೂ ಕರುಣಾಸಾಗರನೂ ಆದ ಗುರುವೇ ನಿನಗೆ ನಮಸ್ಕಾರವು. ಸಂಸಾರಸಾಗರದಲ್ಲಿ ಬಿದ್ದು ಭ್ರಮೆಗೊಳಗಾಗಿರುವ ನನ್ನನ್ನು ನಿನ್ನ ಕರುಣಾಮೃತವನ್ನು ಸುರಿಸುತ್ತಿರುವ ಕಣ್ಣುಗಳಿಂದ ದಿಟ್ಟಿಸಿ- ಅನುಗ್ರಹಿಸಿ ಉದ್ಧಾರಮಾಡು.

ವಿವರಣೆ:

ಜ್ಞಾನಾರ್ಥಿಯು ಬ್ರಹ್ಮದ ಅರಿವನ್ನು ಪಡೆಯುವ ವಿಷಯವನ್ನು ಮತ್ತು ಪರಿಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಬ್ರಹ್ಮಜ್ಞಾನಿಯಾದ ಗುರುವಿನ ಬಳಿಸಾರಿಬೇಕು ಎಂದು ಆಚಾರ್ಯರು ಹೇಳಿ ಮುಂದೆ ಶಿಷ್ಯನು ಗುರುವಿನ ಮುಂದೆ ತನ್ನ ಅಪೇಕ್ಷೆಯನ್ನು ಹೇಗೆ ನಿವೇದಿಸಿಕೊಳ್ಳಬೇಕು ಎನ್ನುವುದನ್ನು ’ಸ್ವಾಮಿನ್ ನಮಸ್ತೆ..’ ಎಂಬ ಶ್ಲೋಕದಲ್ಲಿ ವಿವರಿಸಿರುತ್ತಾರೆ. ಗುರುವಿನ ಮುಂದೆ ಹೇಳಿಕೊಳ್ಳುವುದೆಂದರೆ ಅದು ಪೂರ್ವಯೋಜಿತವೋ ಮುಖಸ್ತುತಿಯೋ ಆಗಿರದೆ ಸಾಧನ ಚತುಷ್ಟಯ ಸಂಪನ್ನತೆಯಿಂದ ತಾನಾಗೆ ಹೊರಬರುವ ಭಾವವಾಗಿರಬೇಕು ಎನ್ನುವುದು ಬಹುಮುಖ್ಯ ವಿಚಾರ. ವೈರಾಗ್ಯ ಬಂದ ಮಾತ್ರಕ್ಕೆ ಆತ ಜ್ಞಾನಿಯಾಗುವುದಿಲ್ಲ ಅಥವಾ ’ನಾನು ಸರ್ವಗುಣ ಸಂಪನ್ನನಾಗಿದ್ದೇನೆ ಆದುದರಿಂದ ಗುರುವೇ ನನ್ನನ್ನು ಅರಸಿ ಬರುತ್ತಾನೆ’ ಎನ್ನುವ ಭಾವವೂ ಅನುಚಿತವಾದುದಾಗಿರುತ್ತದೆ. ಗುರುವಿನ ಉಪದೇಶ ಮತ್ತು ಅನುಗ್ರಹವಿಲ್ಲದೆ ಜ್ಞಾನವು ಲಭಿಸುವುದಿಲ್ಲ ಅಥವಾ ಗುರುವಿಲ್ಲದ ಜ್ಞಾನಕ್ಕೆ ಬೆಲೆಯಿರುವುದಿಲ್ಲ ಎಂದು ತಿಳಿಯಬಹುದು. ಗುರುವಿನ ಮುಂದೆ ಮಂಡಿಯೂರಿ ಬಾಗಬೇಕಾಗುತ್ತದೆ ಮತ್ತು ಹಾಗೆ ಬಾಗುವುದು ಪೂಜ್ಯರಲ್ಲಿ ತೋರುವ ಅನುರಾಗ , ಮನೋಧರ್ಮ ಎನ್ನಬಹುದು. ಗುರುವಿನಿಂದ ಕಲಿಯಬೇಕಾದರೆ ಇಂತಹ ದೈನ್ಯತೆ ಇರಬೇಕಾಗುತ್ತದೆ. ಗುರುವು ಸುಮ್ಮನೆ ಕಲಿಸಿ ಕೊಡುವುದಿಲ್ಲ. ಯಾವ ಆಮಿಷಕ್ಕೂ ಬಲಿಯಾಗುವುದಿಲ್ಲ.  ’ನಾನಿಷ್ಟು ಫೀಜು ಕಟ್ಟಿದ್ದೇನೆ, ಕ್ಯಾಪಿಟೇಶನ್ ಶುಲ್ಕ ಕೊಟ್ಟಿದ್ದೇನೆ, ದೂಸರಾ ಮಾತನಾಡದೆ ನನಗೆ ಸರ್ಟಿಫಿಕೇಟ್ ಕೊಡಿ’ ಎಂದು ಕೇಳುವಂತಿಲ್ಲ !. ಬ್ರಹ್ಮಜಿಜ್ಞಾಸೆಯು ಗುರುವು ಮನಸು ಮಾಡಿದರೆ ಮಾತ್ರ ಆರಂಭವಾಗುವಂತಹುದು ಮತ್ತು ಸಾಧನ ಚತುಷ್ಟಯ ಸಂಪನ್ನನಾದ ಜ್ಞಾನಾರ್ಥಿಯನ್ನು ತನ್ನ ಶಿಷ್ಯನೆಂದು ಒಪ್ಪಿದರೆ ಮಾತ್ರ ಒಲಿದು ಬರುವಂತಹುದು.  
ಒಮ್ಮೆ ಗುರುವು ಬಂದವನನ್ನು ಶಿಷ್ಯನೆಂದು ಸ್ವೀಕರಿಸಿದರೆ ಆತನು ಎಲ್ಲರಿಗಿಂತಲೂ ಹೆಚ್ಚು ಮಾನ್ಯನಾಗುತ್ತಾನೆ. ಗುರುವು ತನ್ನ ಸಾಧನೆಯ ಸಮಸ್ತವನ್ನೂ ಶಿಷ್ಯನಿಗೆ ಧಾರೆ ಎರೆಯುತ್ತಾನೆ. ಅರ್ಜುನನೂ ಸಹ ಕೃಷ್ಣನ ಮುಂದೆ ’ನಾನು ನಿನ್ನ ಶಿಷ್ಯ’ ಎಂದು ಹೇಳುತ್ತಾನೆ. ಶಿಷ್ಯವೃತ್ತಿಯು ಎಷ್ಟು ಮಹತ್ತರವಾದುದು ಎನ್ನುವುದನ್ನು ಅರ್ಜುನನ ಮಾತಿನ ಭಾವದಲ್ಲಿ ತಿಳಿಯಬಹುದು. ’ನತಲೋಕ ಬಂಧೋ’ ಎಂದರೆ  ದೈನ್ಯತೆಯಿಂದ ನಮಿಸಿ ಬರುತ್ತಿರುವ ಜನಗಳ ಆಪ್ತಮಿತ್ರನಂತೆ , ಬಾಂಧವನಂತೆ ಎಂದು ಅರ್ಥ.  ಅರ್ಜುನನು ವಿಷಾದದಲ್ಲಿ ಮುಳುಗಿದ್ದಾಗ ಕೃಷ್ಣನು ’ ಅಳಬೇಡ ಪಾರ್ಥ, ನಾನು ನಿನ್ನ ಗೆಳೆಯ’ ಎಂದು ಸಾಂತ್ವನ ಹೇಳುತ್ತಾನೆ. ಆಪ್ತವಚನದಿಂದ ಸಂತೈಸುವ ಗೆಳೆಯನಂತಹ ಗುಣವು ಗುರುವಿನದು ಎಂದು ತಿಳಿಯಬಹುದು. ಗುರುವು ಕರುಣೆಯ ಸಾಗರದಂತಿರಬೇಕು ಎನ್ನುವುದನ್ನು ಈ ಹಿಂದಿನ ಕಂತುಗಳಲ್ಲಿ ತಿಳಿದಿದ್ದೇವೆ.  ಮುಂದೆ, ’ಪತಿತಂ ಭವಾಬ್ಧೌ’ ಎಂದು ಶಿಷ್ಯನು ಹೇಳಿಕೊಳ್ಳುತ್ತಾನೆ. ಹುಟ್ಟು-ಯೌವನ-ಮುಪ್ಪು-ರೋಗ-ಸಾವು ಮುಂತಾದ ಜಂಜಡಗಳಿಂದ ಅನರ್ಥವಾದ ವಿಷಯಗಳಲ್ಲಿ ಸಿಲುಕಿ ಸಂಸಾರಸಾಗರದಲ್ಲಿ ಬಿದ್ದು ನೊಂದಿರುವ ತನ್ನನ್ನು ಉದ್ಧಾರ ಮಾಡು ಎಂದು ಶಿಷ್ಯನು ಕೇಳಿಕೊಳ್ಳುತ್ತಾನೆ.  ಹೀಗೆ ಬಂದವನು ಶಿಷ್ಯನಾಗಿ ಸ್ವೀಕೃತವಾಗಬೇಕಾದರೆ ಗುರುವಿನ ಕಾರುಣ್ಯಪೂರ್ಣವಾದ ನೋಟವು ಆತನ ಮೇಲೆ ಬೀಳಬೇಕು ಅಥವಾ ಅನುಗ್ರಹವಾಗಬೇಕು ಎನ್ನುವುದನ್ನು ’ ಋಜ್ವ್ಯಾ-ಅತಿಕಾರುಣ್ಯ-ಸುಧಾಭಿವೃಷ್ಟ್ಯಾ-ಆತ್ಮೀಯ ಕಟಾಕ್ಷ-ದೃಷ್ಟ್ಯಾ’ ಎಂಬಲ್ಲಿ ಹೇಳಿರುತ್ತಾರೆ.  ಒಳ್ಳೆಯದಾದ ಸರಳವಾದ ಕರುಣೆಯಿಂದ ತುಂಬಿದ ಗುರುವಿನ ಆಪ್ತವಾದ ನೋಟವು ಶಿಷ್ಯನಾಗುವವನ ಮೇಲೆ ಬಿದ್ದಾಗ ಹಣ್ಣು ಮಾಗಿ ಕೆಳಗೆ ಬಿದ್ದಂತಾಗುತ್ತದೆ. ’ಆತ್ಮೀಯ ಕಟಾಕ್ಷ ದೃಷ್ಟಿ’ ಎನ್ನುವುದು ’ಋಜುಸ್ವಭಾವದ ಅಥವಾ ಸರಳವಾದ ಕರುಣಾಪೂರಿತ ಅನುಗ್ರಹ’ ಎಂದು ಶ್ರೀ ಚಂದ್ರಶೇಖರ ಭಾರತಿಗಳು ತಮ್ಮ ವ್ಯಾಖ್ಯಾನದಲ್ಲಿ ಹೇಳಿರುತ್ತಾರೆ.  ಗುರುವನ್ನು ಕಂಡೊಡನೆಯೆ ಶಿಷ್ಯನಾಗುವವನು ಹೇಗೆ ನಿವೇದಿಸಿಕೊಳ್ಳಬೇಕು ಅನ್ನುವುದನ್ನು ಆಚಾರ್ಯರು ಮೇಲಿನ ಶ್ಲೋಕದಲ್ಲಿ ವಿವರಿಸಿರುತ್ತಾರೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ....

-------------------------------------------------------------------

ಕೊ: ಗುರುದೃಷ್ಟಿಯು ಪಾಮರರ ಮೇಲೆ ಬೀಳಬಾರದು ಎನ್ನುವ ಮಾತನ್ನು ಕೇಳಿರುತ್ತೇವೆ.  ಅದಕ್ಕಾಗಿ ಗುರುವಿನ ಆಗಮನವಾದಾಗ ತುಂಬಿದಕೊಡವನ್ನು ಗುರುವಿನ ನೋಟಕ್ಕೆ ತಾಗುವಂತೆ ಹಿಡಿದು ಬರಮಾಡಿಕೊಳ್ಳುವುದು ವಾಡಿಕೆ. ಗುರುದೃಷ್ಟಿಯ ವಿಚಾರವನ್ನು ಇಲ್ಲಿ ಆಚಾರ್ಯರ ನಿರೂಪಣೆಯಲ್ಲಿ ತಿಳಿದಾಗ ಪಾಮರರ ಮೇಲೆ ಗುರುವಿನ ನೋಟವು ಬಿದ್ದರೆ ಏನಾದರೂ ಆಗಲು ಸಾಧ್ಯವೆ ? ಎಂದು ಯೋಚಿಸಬೇಕಾಗುತ್ತದೆ. ಸಾಧನ ಚತುಷ್ಟಯ ಸಂಪನ್ನನಿಗೇ ಗುರುವಿನ ಅನುಗ್ರಹವು ಒಲಿದು ಬರುವುದರಿಂದ ಅನ್ಯರು ಬೆದರುವ ಅಗತ್ಯವಿಲ್ಲವೆನಿಸುತ್ತದೆ. ನೆಮ್ಮದಿಯಿಂದ ಇಹಭೋಗಗಳನ್ನು ಅನುಭವಿಸಬಹುದಲ್ಲವೆ  ? ! :).
ಮಂಗಳಕರ ಮತ್ತು ಶುಭಸೂಚಕವಾಗಿಯೂ ಪೂರ್ಣಕುಂಭವನ್ನು ಹಿಡಿಯುವ ವಾಡಿಕೆ ಇದೆ.

ವಂದನೆಗಳೊಂದಿಗೆ....

ಕಾಮೆಂಟ್‌ಗಳು

  1. ಶಿಷ್ಯನು ಗುರುವಿನ ಬಗೆಗೆ ಇಟ್ಟುಕೊಳ್ಳಬೇಕಾದ ಭಕ್ತಿಯ ಈ ಶಂಕರಶ್ಲೋಕವನ್ನು ಪ್ರತಿಪದಾರ್ಥ ಸಹಿತವಾಗಿ ಉತ್ತಮ ವ್ಯಾಖ್ಯಾನದೊಡನೆ ವಿವರಿಸಿರುವಿರಿ. ವಿವೇಕಚೂದಾಮಣಿಯ ಈ ವಿವರಣೆಗಾಗಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಕಳೆದೆರಡು ಸಂಚಿಕೆಯಿಂದ ಇತ್ತ ತಲೆಹಾಕಲಾಗಿರಲಿಲ್ಲ. ಬರಹವು ಸೊಗಸಾಗಿ ಮೂಡಿಬರುತ್ತಿದೆ. ಗುರು-ಶಿಷ್ಯ ಸಂಬಂಧವನ್ನು ಕುರಿತಾದ ಈ ಕಂತು ಬಹು ಪ್ರಸ್ತುತ. ಅದನ್ನು ಇಂದಿನ ಸ್ಥಿತಿಗೆ ಸಮೀಕರಿಸಿರುವುದೂ ಬಹು ಪ್ರಸ್ತುತ. ವಿದ್ಯಾವಿಕ್ರಯ ಮಹಾಪಾಪವೆಂದು ಪರಿಗಣಿಸುತ್ತಿದ್ದ ಕಾಲವೊಂದಿತ್ತು. ಇವತ್ತು ಅದು ನಗೆಪಾಟಲು

    ಪ್ರತ್ಯುತ್ತರಅಳಿಸಿ
  3. ಮುಂದೆ ಗುರಿ ಹಿಂದೆ ಗುರು' ಎಂಬ ಕಾಲವೊಂದಿತ್ತು,ಈಗ ಹೇಗಿದೆ ಎಂಬುದು ತಿಳಿದಿದೆಯಲ್ಲವೇ.
    ಇಂತಹ ಕಾಲದಲ್ಲಿ ಪ್ರಸ್ತುತ ಬರಹ.

    ಪ್ರತ್ಯುತ್ತರಅಳಿಸಿ
  4. ಸುಬ್ರಹ್ಮಣ್ಯರೇ, ವರ್ಣಮಾತ್ರಂ ಗುರುಃ ಎಂಬ ಉಲ್ಲೇಖ ಇದ್ದರೂ ನಿಜವಾದ ಗುರು ಯಾರು ಎಂದರೆ ಆತ್ಮಜ್ಞಾನಕ್ಕೆ ಕಾರಣೀಭೂತನಾಗುವವನು, ಸಾಧನಾ ಚತುಷ್ಟಯವನ್ನರಿತು ಸಹಜ ವೈರಾಗ್ಯದಿಂದ ಬಳಿಬಂದ ವಟುವನ್ನು ಶಿಷ್ಯನೆಂದು ಪರಿಗ್ರಹಿಸಿ ಮುಂದಿನ ಹಂತವನ್ನು ಬೋಧಿಸುವಾತನೇ ಗುರು. ಚಂದ್ರನಲ್ಲಿಗೆ ಹೋಗಿ ಬಂದವರಿಗೆ ಮಾತ್ರ ಚಂದ್ರನಲ್ಲಿಳಿದಾಗಿನ ಅನುಭವ ಇರುತ್ತದೆಯೇ ಹೊರತು ಚಂದ್ರ ಹಾಗಂತೆ ಹೀಗಂತೆ ಎಂದು ಬರೆಯುವುದು ಆಡುವುದೂ ಬರೇ ಬೊಗಳೆಯಾಗುತ್ತದೆ ಹೇಗೋ ಸಾಮಾನ್ಯ ಮನುಷ್ಯ ಜನ್ಮದಲ್ಲಿದ್ದು ಕಂಡರಿಯದ ಆ ಆನಂದಮಯ ಕೋಶವನ್ನು ನಾವು ವರ್ಣಿಸುವುದಾದರೆ ಅದು ಹಾಗೇ ಆಗುತ್ತದೆ. ಆನಂದಮಯ ಲೋಕದಲ್ಲಿ ದಿವ್ಯಾನುಭೂತಿ ಇದೆ ಎಂಬ ಸತ್ಯವನ್ನು ಕೇಳಿದ್ದೇವೆಯೇ ಬಿಟ್ಟರೆ ಅದರ ಅನುಭೂತಿ ನಮಗೊದಗಿಲ್ಲ, ಹಾಗೆಲ್ಲಾ ಎಲ್ಲರಿಗೂ ದಕ್ಕುವುದೂ ಇಲ್ಲ! ಅಂತಹ ದಿವ್ಯಾನುಭೂತಿಯನ್ನು ಪಡೆದ ಗುರು ಯಾರನ್ನೋ ತನ್ನ ಶಿಷ್ಯನನ್ನಾಗಿ ಒಪ್ಪಬೇಕಾದರೆ ಶಿಷ್ಯನಲ್ಲಿ ಆ ದೈನ್ಯಭಾವ, ವಿನಮ್ರ ಭಾವ ಇರಬೇಕಾದ್ದು ಅಗತ್ಯ. ’ದೇಹಿ’ ಎಂದವರಿಗೆ ಭಿಕ್ಷೆಯೇ ಹೊರತು ’ಎಲವೋ’ ಎಂದವರನ್ನು ಮುಂದೆ ಹೋಗಲು ಹೇಳುತ್ತೇವೆ ಹೇಗೋ ಹಾಗೆಯೇ ಮುಮುಕ್ಷುತ್ವವನ್ನರಸಿ ಬರುವಾತ ಆತ್ಮಜ್ಞಾನದ ಭಿಕ್ಷುಕನಾಗಿರುತ್ತಾನೆ, ಬ್ರಹ್ಮಜ್ಞಾನಿಯಾದ ಗುರುವಿನಲ್ಲಿ ಆತ ಬೇಡುವುದು ಜ್ಞಾನ ಭಿಕ್ಷೆಯನ್ನು. " ಜ್ಜಾನ ವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂ ದೇಹೀ ಚ ಪಾರ್ವತಿ " ಎಂದು ಶಂಕರರು ಕಾಶಿಯಲ್ಲಿ ಅನ್ನಪೂರ್ಣೆಯಲ್ಲಿ ಬೇಡಿದರಲ್ಲವೇ? ವಿವೇಕ ಚೂಡಾಮಣಿಯ ಸಾರವನ್ನು ಉಣಬಡಿಸುವ ಕಾರ್ಯ ಹೀಗೇ ಮುಂದೆಸಾಗಲಿ ಎಂದು ಹಾರೈಸುತ್ತೇನೆ.

    ಪ್ರತ್ಯುತ್ತರಅಳಿಸಿ
  5. ಸ೦ಗ್ರಹ ಯೋಗ್ಯವಾದ ಉತ್ತಮ ಲೇಖನ, ಹೀಗೆ ತಿಳಿಸುತ್ತಿರಿ. ನನ್ನ ಬ್ಲಾಗ್ ಗೆ ಬನ್ನಿ.

    ಪ್ರತ್ಯುತ್ತರಅಳಿಸಿ
  6. ಚೆಂದದ ವಿವರಣೆ...ಜ್ಞಾನದ ಭಂಡಾರವೇ ಅಡಗಿರುವ ವಿವೇಕ ಚುಡಾಮಣಿ ಯನ್ನ ಸರಳವಾಗಿ ನಮಗೆಲ್ಲ ಉಣಬಡಿಸುತ್ತಿರುವ ತಮಗೆ ವಂದನೆಗಳು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ