ಭಾಗ-೧೩

ಗ್ರಂಥದ ಮುಂದುವರಿಕೆ :-

सहनं सर्वदुखानां अप्रतीकारपूर्वकम् ।
चिन्ताविलापरहितं सा तितिक्षा निगद्यते ॥२५॥

ಸಹನಂ ಸರ್ವದುಃಖಾನಾಂ ಅಪ್ರತೀಕಾರಪೂರ್ವಕಮ್ |
(=ದುಃಖಗಳಿಗೆ ಪ್ರತಿಕ್ರಿಯೆ ತೋರದೆ (ದೂರದೆ) ಎಲ್ಲವನ್ನೂ ಸಹಿಸಿಕೊಳ್ಳುವುದು)
ಚಿಂತಾವಿಲಾಪರಹಿತಂ ಸಾ ತಿತಿಕ್ಷಾ ನಿಗದ್ಯತೇ ||೨೫||
(=ಚಿಂತೆ-ಶೋಕಗಳಿಂದ ಮುಕ್ತನಾಗುವುದೇ ತಿತಿಕ್ಷೆಯು)

ನಾಲ್ಕನೆಯದು ತಿತಿಕ್ಷಾ

ಹೊರಗಿನ ವಿಷಯಗಳು ಯಾವಾಗ ಚಿತ್ತಕ್ಕೆ ಬಾಧಿಸುವುದಿಲ್ಲವೋ ಆಗ ಚಳಿ-ಮಳೆ-ಬಿಸಿಲು ಮುಂತಾದವುಗಳಲ್ಲಿ ವ್ಯತ್ಯಾಸವು ತಿಳಿಯುವುದಿಲ್ಲ, ದ್ವಂದ್ವವೂ ಇರುವುದಿಲ್ಲ.  ಕಾಲಕ್ಕನುಸಾರವಾಗಿ ಅವುಗಳು ವಿಕೋಪದಿಂದ ಬಂದರೂ ಸಹ ಅದನ್ನೂ ಸಹಿಸಿಕೊಳ್ಳುವುದು ತಿತಿಕ್ಷೆ ಎಂದು ಮೇಲಿನ ಶ್ಲೋಕದಲ್ಲಿ ಆಚಾರ್ಯರು ಹೇಳಿರುತ್ತಾರೆ. ಸಹಿಸಿಕೊಂಡಿರುವುದು ಎಂದರೆ , ಬಂದೊದಗಿದ್ದಕ್ಕೆ ಸಾಕಷ್ಟು ಗೊಣಗಿ, ಸಿಡುಕಿ ನಂತರ ’ಅಯ್ಯೋ ನನಗ್ಯಾಕೆ’ ಎಂದು ಸುಮ್ಮನಾಗುವುದಲ್ಲ ! , ಬದಲಾಗಿ ಅಪ್ರತೀಕಾರಪೂರ್ವಕವಾಗಿ ಎಂದರೆ ಯಾವುದೇ ಪ್ರತಿಕ್ರಿಯೆಯನ್ನು ತೋರದೆ ಆಗಿದ್ದಕ್ಕೆ ಚಿಂತಿಸದೆ, ಶೋಕಿಸದೆ ದುಃಖಗಳನ್ನು ಸಹಿಸಿಕೊಂಡಿರುವುದು ಎಂದು ಅರ್ಥ.  ಪ್ರತೀಕಾರವನ್ನು ತೋರದೆ ಸಹಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸವೇನೋ ನಿಜ ಆದರೆ ಅಂತಹ ಕಷ್ಟದ ಕೆಲಸವನ್ನೇ ಆತ್ಮಾಭ್ಯಾಸಿಯು ಮಾಡಬೇಕಿರುವುದು ಎನ್ನುವುದು ಮೇಲಿನ ವಾಕ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.  ಇಲ್ಲಿ ಗಾಂಧೀಜಿಯವರ ತತ್ವವೊಂದನ್ನು ನೆನಪಿಸಿಕೊಳ್ಳಬಹುದು. "ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರು ಬದಲಾಗಿ ನೀನು ಹೊಡೆಯಬೇಡ" ಎಂಬ ಮಾತು. ಸಂತರ ಗುಣವೇ ಇದು ಎನ್ನಬಹುದು.  ಅಂತರಂಗ ಮತ್ತು ಬಹಿರಂಗಗಳೆರಡರಲ್ಲೂ ಸಹನಶಕ್ತಿ ಇರಬೇಕಾಗುತ್ತದೆ. ಗೆಳೆಯರೊಬ್ಬರು ಲಕ್ಷ ರೂಪಾಯಿ ಪಡೆದುಕೊಂಡು ಸಮಯಕ್ಕೆ ಸರಿಯಾಗಿ ಕೊಡದಿದ್ದಾಗ ಬಾಯಿ ಮಾತಿಗೆ ’ಇರಲಿ ಬಿಡಯ್ಯಾ ನಿಧಾನವಾಗಿ ಕೊಡುವಿಯಂತೆ’ ಎಂದು ಹೇಳಿ ಮನಸಿನಲ್ಲಿ ’ಇವನ ಮನೆ ಹಾಳಾಗ’ ಎಂದು ಜರಿಯುವುದು ಸಹನೆಯ ಲಕ್ಷಣವೇನೂ ಅಲ್ಲ !.  ದುಃಖ-ಶೋಕಾದಿಗಳಿಂದ ಕೂಡಿರುವ ಮನಸ್ಸಿಗೆ ಆತ್ಮವಿಚಾರವು ದಕ್ಕುವುದಿಲ್ಲ ಎಂದು ಹೇಳುತ್ತಾ ಸರ್ವದುಃಖಗಳನ್ನೂ ಸಹಿಸಿಕೊಂಡು, ನುಂಗಿಕೊಂಡು ಸಾಧನೆ ಮಾಡಬೇಕು ಎಂದು ತಿಳಿಸುತ್ತಾರೆ.
’ದುಃಖಾನಾಂ’ ಎಂದು ಬಹುವಚನದಲ್ಲಿ ಹೇಳಿರುವುದು ’ತಾಪತ್ರಯ’ ಗಳ ಕುರಿತಾಗಿ.  ಅಧಿಭೂತವಾದ, ಅಧಿದೈವವಾದ  ಮತ್ತು ಆಧ್ಯಾತ್ಮಿಕ ವಾಗಿ ಒದಗಿ ಬರುವ ಹೊಸ-ಹೊಸ (ನವನವ ಜನಿತ) ದುಃಖಗಳನ್ನು ತಾಪತ್ರಯಗಳು ಎಂದು ಹೇಳಲಾಗಿದೆ. ಭೌತಿಕವಾಗಿ (Physical), ಮಾನಸಿಕವಾಗಿ(Mental) ಮತ್ತು ಆಕಸ್ಮಿಕವಾಗಿ(Accidental) ಒದಗಿ ಬರುವ ಯಾವುದೇ ದುಃಖಶೋಕಾದಿಗಳಿಗೂ ಬಾಗದೆ , ಪ್ರತಿಕ್ರಿಯೆಯನ್ನೂ ತೋರದೆ ಸಹಿಸಿಕೊಂಡು (ಸಹಿಕೊಳ್ಳುವುದನ್ನೂ ಹೇಳಿಕೊಳ್ಳದೆ !)  ಸಾಧನೆಯ ಹಾದಿಯಲ್ಲಿ ಸಾಗುವುದನ್ನು ತಿತಿಕ್ಷೆ ಎಂದು ನಿರೂಪಿಸುತ್ತಾರೆ. ಹೀಗೆ ಸಹಿಸಿಕೊಳ್ಳುವುದು ಅಭ್ಯಾಸವಾಗಿಬಿಟ್ಟರೆ ಅದು ಸಾಧಕನ ಸಹಜ ಲಕ್ಷಣವೇ ಆಗಿಬಿಡುತ್ತದೆ.  ಡಯಾಬಿಟಿಸ್ಸಿಗೆ ಉಪ್ಪು-ಸಿಹಿ ಯನ್ನು ತಿನ್ನದೆ ಹತೋಟಿಯಲ್ಲಿಟ್ಟುಕೊಂಡಿರಬೇಕು ಎಂದು ವೈದ್ಯರು ಹೇಳುವುದನ್ನು ಅಂತರಂಗ-ಬಹಿರಂಗಗಳೆರಡಲ್ಲೂ ಸಾಧಿಸುತ್ತಾ ಬಂದಾಗ ಮುಂದೊಂದು ದಿವಸ ಸಿಹಿ ತುಂಬಿದ ಕೊಳಗವನ್ನೇ ಮುಂದೆ ತಂದಿಟ್ಟರೂ ಅದರ ಕಡೆಗೆ ಗಮನ ಹರಿಯಲಾರದು !.  ಹೃದಯದ ಕಾಯಿಲೆಯಿದ್ದವರಿಗೆ ಕೊಬ್ಬಿನಂಶವನ್ನು ಹೆಚ್ಚು ಸೇವಿಸಬೇಡಿ ಎಂದು ಹೇಳಿರುತ್ತಾರೆ. ಅವರೇನೋ ಬಾಹ್ಯವಾಗಿ ತಿನ್ನುವುದನ್ನು ಬಿಟ್ಟಿರುತ್ತಾರೆ ಆದರೆ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿರುತ್ತಾರೆ. ಇದು ಮನುಷ್ಯನನ್ನು ಮಾನಸಿಕವಾಗಿ ಕುಗ್ಗಿಸುತ್ತದೆ.  ಇಲ್ಲೂ ಸಹ ’ಶಮ’ ಎನ್ನುವುದು ಸಾಧಿತವಾಗಿದ್ದಾಗ ತಿತಿಕ್ಷೆಯು ತಾನೇ ಬರುವುದರಿಂದ ಇವೆಲ್ಲವೂ ಒಂದೇ ದಾರಕ್ಕೆ ಪೋಣಿಸಿರುವ ಹೂವುಗಳು ಎಂದು ತಿಳಿಯಬೇಕಾಗುತ್ತದೆ.


ಐದನೆಯದು ಶ್ರದ್ಧೆ

शास्त्रस्य गुरुवाक्यस्य सत्यबुद्ध्यावधारणा ।
सा श्रद्धा कथिता सद्भिर्यया वस्तूपलभ्यते ॥२६॥

ಶಾಸ್ತ್ರಸ್ಯ ಗುರುವಾಕ್ಯಸ್ಯ ಸತ್ಯಬುದ್ಧ್ಯಾವಧಾರಣಾ |
(= ಶಾಸ್ತ್ರದಲ್ಲೂ ಗುರುವಾಕ್ಯದಲ್ಲೂ ಧೃಡವಾದ ಗ್ರಹಿಕೆಯನ್ನಿಟ್ಟುಕೊಳ್ಳುವುದು)
ಸಾ ಶ್ರದ್ಧಾ ಕಥಿತಾ ಸದ್ಭಿಃ ಯಯಾ ವಸ್ತೂಪಲಭ್ಯತೇ ||೨೬||
(= ಆತ್ಮವಸ್ತುವಿನ ಸಿದ್ಧಿಗಾಗಿ ನಂಬಿಕೆಯನ್ನಿಟ್ಟುಕೊಳ್ಳುವುದೇ ಶ್ರದ್ಧೆಯು)

’ಶಾಸ್ತ್ರಗಳಲ್ಲೂ ಗುರುವಿನ ಮಾತಿನಲ್ಲೂ ಸತ್ಯಬುದ್ಧಿಯಿಂದ ನಂಬಿಕೆಯನ್ನಿಟ್ಟುಕೊಂಡು ಆತ್ಮವಸ್ತುವಿನ ಚಿಂತನೆಯಲ್ಲಿ ತೊಡಗುವುದನ್ನು ಶ್ರದ್ಧೆ ಎಂದು ಸತ್ಪುರುಷರು ಹೇಳುತ್ತಾರೆ ’ ಎಂದು ಆಚಾರ್ಯರು ಶ್ರದ್ಧೆಯ ನಿರೂಪಣೆಯನ್ನು ಮಾಡುತ್ತಾರೆ.  ಬ್ರಹ್ಮದ ವಿಷಯದಲ್ಲಿ ಶಾಸ್ತ್ರವೂ ಗುರುವೂ ಹೇಳುವುದನ್ನು ಸತ್ಯವೆಂಬ ನಿಶ್ಚಿತ ಬುದ್ಧಿಯಿಂದ ಗ್ರಹಿಸಿ ಇಟ್ಟುಕೊಳ್ಳುವುದನ್ನು ಶ್ರದ್ಧೆ ಎಂದು ಹೇಳುತ್ತಾರೆ. ’ಶ್ರದ್ಧಾವಾನ್ ಲಭತೇ ಜ್ಞಾನಂ’ ಎನ್ನುವ ವಾಕ್ಯ ಬಹು ಪ್ರಸಿದ್ಧವಾದುದು. ಗೀತೆಯಲ್ಲೂ ಸಹ " ಶ್ರದ್ಧೆಯಿಲ್ಲದಿರುವ ಮನುಷ್ಯರು ಧರ್ಮವನ್ನೂ ಬಿಟ್ಟು ನನ್ನನ್ನೂ ಹೊಂದದೆ ಮತ್ತೆ-ಮತ್ತೆ ಈ ಇಹದ ಬಂಧನಕ್ಕೆ ಬೀಳುತ್ತಿದ್ದಾರೆ (೯.೩)" ಎಂಬ ವಾಕ್ಯವು ಬರುತ್ತದೆ. ಇಲ್ಲಿ ಶಾಸ್ತ್ರ ಎಂದರೆ ’ತತ್ವಮಸಿ’ ’ಪ್ರಜ್ಞಾನಾಂ ಬ್ರಹ್ಮ’  ಮುಂತಾದ ಔಪನಿಷದ ಶಾಸ್ತ್ರಗಳೆಂದು ಸದ್ಗುರುಗಳು ವ್ಯಾಖ್ಯಾನಿಸಿರುತ್ತಾರೆ. ಇದನ್ನು ಅನುಸರಿಸುವುದರಿಂದ ಬರುವುದೇ ಗುರುವಾಕ್ಯ.  ಬ್ರಹ್ಮವು ಸತ್ಯ ಮತ್ತು ನನ್ನಲ್ಲೇ ಪರಬ್ರಹ್ಮನಿದ್ದಾನೆ ಎಂಬ ಅನುಭವವನ್ನು ಪಡೆದುಕೊಳ್ಳುವುದನ್ನೇ ’ಸತ್ಯ’ ಎಂಬ ಪದದಿಂದ ಸೂಚಿಸಿದ್ದಾರೆ ಎಂದು ಹೇಳುತ್ತಾರೆ. ಅಳಿಯುವ ವಿಷಯವೆಲ್ಲವೂ ಅಸತ್ಯ ಅಥವಾ ಮಿಥ್ಯೆ ಎನ್ನುತ್ತಾರೆ. ಮಿಥ್ಯೆ ಎಂದರೆ ಸಂಪೂರ್ಣ ಅಸತ್ಯವೆಂದು ಗ್ರಹಿಸದೆ ’ಮಿಥ್ಯಾವಚನಃ ಅನಿರ್ವಚನೀಯ ಶಬ್ದಃ’ ಎಂದು ತಿಳಿಯಬೇಕಾಗುತ್ತದೆ. ಯಾವುದನ್ನು ವಿವರಿಸಲಾಗುವುದಿಲ್ಲವೋ ಅಥವಾ ಯಾವುದು ಸ್ಥಿತ್ಯಂತರಗಳಿಂದ ಬದಲಾವಣೆಯನ್ನು ಹೊಂದುತ್ತಾ ನಿರ್ಧಿಷ್ಟರೂಪವನ್ನು ತಳೆಯಲಾರದೇ ಹೋಗುತ್ತದೆಯೋ ಅದನ್ನು ’ಮಿಥ್ಯೆ’ (ಜಗನ್ಮಿಥ್ಯಾ) ಎಂದು ಗ್ರಹಿಸಬೇಕಾಗುತ್ತದೆ.
ಮೊದಲಿಗೆ ಹೇಳಿಕೊಡುವುದನ್ನು ಶ್ರದ್ಧೆಯಿಂದ ಕೇಳಬೇಕಾಗುತ್ತದೆ ಮತ್ತು ಕಲಿಬೇಕಾಗುತ್ತದೆ. ಶ್ರದ್ಧೆಯು ಇಲ್ಲದಿದ್ದರೆ ವಿಷಯದ ಸ್ವೀಕಾರ ಮನೋಭಾವವೂ ಹುಟ್ಟುವುದಿಲ್ಲ. ಶ್ರದ್ಧೆ ಮತ್ತು ನಂಬಿಕೆಯಿಂದ ಗುರುವಾಕ್ಯದಂತೆ ನಡೆಯಬೇಕು ಎಂದರೆ ವಿಚಾರವಾದಕ್ಕೆ ಎಳ್ಳುನೀರು ಬಿಟ್ಟಂತಾಗುತ್ತದೆ ಅಲ್ಲವೇ ? ಎಂದರೆ, ವಿಷಯ ಸ್ವೀಕಾರವೇ ಇಲ್ಲದೆ ವಿಚಾರವಾದರೂ ಎಲ್ಲಿಂದ ಬಂದೀತು !?. ಹಾಗಾಗಿ ಮೊದಲಿಗೆ ಶಾಸ್ತ್ರವನ್ನೂ ಗುರುವಾಕ್ಯವನ್ನೂ ಸ್ವೀಕರಿಸುವವರಾಗಬೇಕು ನಂತರವಷ್ಟೇ ವಿಚಾರಕ್ಕೆ ಅವಕಾಶವಾಗುತ್ತದೆ ಎಂದು ತಿಳಿಯಬಹುದು. ಚಿಕ್ಕಮಕ್ಕಳಂತೂ ತಂದೆ-ತಾಯಿ ಹೇಳಿಕೊಡುವುದನ್ನು ಪ್ರಶ್ನಾತೀತವಾಗಿ ಕಲಿತುಬಿಡುತ್ತವೆ. ಅಂತಹ ನಂಬಿಕೆಯ ಮೇಲೆಯೆ ಜೀವನವೂ ಸಾಗುತ್ತದೆ. ಭಾರತದಲ್ಲಿ ನಿತ್ಯವೂ ಒಂದಿಲ್ಲೊಂದು ಕಡೆ ಬಾಂಬ್ ದಾಳಿಗಳು ಆಗುತ್ತಲೇ ಇರುತ್ತವೆ, ಜನಗಳು ಸಾಯುತ್ತಲೇ ಇರುತ್ತಾರೆ ಆದರೂ ಸಹ ಎಂದಿನಂತೆ ವಹಿವಾಟುಗಳು ನಡೆಯುತ್ತವೆ, ಪ್ರವಾಸಗಳು ಜರುಗುತ್ತಲೇ ಇರುತ್ತದೆ !. ಜೀವನಶ್ರದ್ಧೆಯೇ ಮಾನವನ ಧನಾತ್ಮಕ ಅಂಶ ಎನ್ನಬಹುದು. ನಂಬಿಕೆಯ ಮೇಲೆ ಯಾವುದೋ ಹೋಟೆಲಿಗೆ ಹೋಗಿ ಏನೋ ತಿಂದು (ಅಲ್ಲಿ ಏನಾದರೂ ಕಂಟಾಮಿನೇಶನ್ ಆಗಿದೆಯೇ ಎನ್ನುವುದನ್ನೂ ಯೋಚಿಸದೆ !) ಬರುತ್ತೇವೆ. ಹೋಟೆಲಿನ ನಾವೀನ್ಯತೆ, ಅಂದ-ಚೆಂದಗಳಿಗೆ ಮನಸೋತು ಯಾವುದನ್ನೂ ಪ್ರಶ್ನಿಸದೆ ಗಾಂಭೀರ್ಯದಿಂದ ಹೋಗಿ ತಿಂದು ಕೇಳಿದಷ್ಟು ಬಿಲ್ಲನ್ನೂ ಜೊತೆಗೆ ಟಿಪ್ಸನ್ನೂ ಕೊಟ್ಟು ಬರುತ್ತೇವೆ. ಇದೇ ನಂಬಿಕೆ ಶ್ರಧ್ಧೆಯನ್ನು (ಶ್ರದ್ ಧಾ =ಚೆನ್ನಾಗಿ ಇಡುವುದು) ಅನುಭವದಿಂದ ಬಂದಿರುವ ಶಾಸ್ತ್ರದಲ್ಲಿ  ಗುರುವಾಕ್ಯದಲ್ಲಿ ಇಟ್ಟುಕೊಳ್ಳಬಾರದೇಕೆ ?!. ಒಂದು ವಿಷಯವನ್ನು ಸ್ವೀಕರಿಸದೆ ಅದನ್ನು ತಿರಸ್ಕರಿಸಲೂ ಸಾಧ್ಯವಿಲ್ಲ ಎಂದು ಹೇಳಬಹುದು.
ಕಠೋಪನಿಷತ್ತಿನ ಆರಂಭದಲ್ಲೇ ಪ್ರಸಂಗವೊಂದು ಬರುತ್ತದೆ. ನಚಿಕೇತನ ತಂದೆಯಾದ ವಾಜಶ್ರವಸನು ವಿಶ್ವವನ್ನೇ ಆಳಬೇಕೆಂಬ ಬಯಕೆಯಿಂದ ವಿಶ್ವಜಿತ್ ಎಂಬ ಯಾಗವನ್ನು ಮಾಡುತ್ತಾನೆ. ಯಾಗದ ಕೊನೆಯಲ್ಲಿ ಸರ್ವವನ್ನೂ ದಾನಮಾಡಬೇಕಾದಾಗ (ಯಾಗದ ನಿಯಮ) ಆತನು, ಬೆಳೆಯನ್ನು ಬೆಳೆಯಲಾಗದ ಒಣಭೂಮಿ, ಬರಡು ಹಸುಗಳು ಮುಂತಾದ ಬಳಕೆಗೆ ಬಾರದ ವಸ್ತುಗಳನ್ನೇ ದಾನ ಮಾಡುತ್ತಾನೆ. ’ಅಕ್ಕಿಯ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ’ ಎನ್ನುವ ಮನೋಭಾವ ಆತನದ್ದು. ಶ್ರದ್ಧೆಯಿಲ್ಲದ ಕಾರ್ಯದಿಂದ ತಂದೆಯು ಏನನ್ನು ತಾನೇ ಸಾಧಿಸಿಯಾನು ಎನ್ನುವುದು ನಚಿಕೇತನಿಗೆ ಬರುವ ಸಂಶಯ. ಇದಕ್ಕಾಗಿ ತನ್ನನ್ನೇ ಸಮರ್ಪಿಸಿಕೊಳ್ಳುವವರೆವಿಗೂ ನಚಿಕೇತನು ಮುಂದಡಿಯಿಡುತ್ತಾನೆ. ಇಲ್ಲಿ ಮಗನ ಶ್ರದ್ಧೆಯನ್ನೂ ತಂದೆಯ ಅಶ್ರದ್ಧೆಯನ್ನೂ ಕಾಣಬಹುದಾಗಿರುತ್ತದೆ.  

ಶ್ರದ್ಧೆಯ ವಿಷಯವಾಗಿ ರಾಮಕೃಷ್ಣ ಪರಮಹಂಸರು ಸೊಗಸಾದ ವಿವರಣೆಯೊಂದನ್ನು ಕೊಡುತ್ತಾರೆ.
 "ಲಂಕೆಯಲ್ಲಿದ್ದ ರಾಮಾನುಯಾಯಿಯೊಬ್ಬನಿಗೆ ರಾಮಕ್ಷೇತ್ರವನ್ನು ನೋಡಲು ಬಯಕೆಯಾಯಿತಂತೆ. ಆದರೆ, ಸಾಗರವನ್ನು ದಾಟಲು ಸಾಧ್ಯವಾಗದೆ ವಿಭೀಷಣನಲ್ಲಿಗೆ ಬಂದು ಕಷ್ಟವನ್ನು ಹೇಳಿಕೊಂಡನಂತೆ.
 ವಿಭೀಷಣನು ಕೈಯಲ್ಲಿ ಏನನ್ನೋ ಹಿಡಿದು ಒಂದೆರೆಡು ಮಂತ್ರಗಳನ್ನು ಹೇಳಿ ಆ ವಸ್ತುವನ್ನು  ಅನುಯಾಯಿಯ ಪಂಚೆಯ ತುದಿಗೆ ಕಟ್ಟಿ ’ ಮಂತ್ರಿಸಿದ ವಸ್ತುವೊಂದನ್ನು ನಿನ್ನ ಪಂಚೆಗೆ ಕಟ್ಟಿದ್ದೇನೆ. ಅದರ ಪ್ರಭಾವದಿಂದ ನೀನು ಸಲೀಸಾಗಿ ಸಾಗರವನ್ನು ದಾಟಬಹುದು’ ಎಂದು ಹೇಳಿ ಕಳುಹಿಸಿದನಂತೆ. ರಾಮನನ್ನು ಕಾಣುವ ತವಕದಲ್ಲಿ ಮತ್ತು ಅದೇ ಧ್ಯಾನದಲ್ಲಿ ಹೊರಟ ಆತನು ಸಾಗರದ ಮೇಲೆ ನೆಡೆದುಕೊಂಡೇ ಮುಕ್ಕಾಲುದಾರಿ ಕ್ರಮಿಸಿದನಂತೆ. ವಿಭೀಷಣನು ಅದೆಂತಹ ಮಾಯಾವಸ್ತುವನ್ನು ಮಂತ್ರಿಸಿ ಕಟ್ಟಿರಬಹುದೆಂದು ಯೋಚಿಸಿದ ಆತನು ಪಂಚೆಯ ತುದಿಯ ಗಂಟನ್ನು ಬಿಚ್ಚಿ ನೋಡಿ ಬೆರಗಾದನಂತೆ !. ಅಲ್ಲಿದ್ದುದು ಕೇವಲ ಒಂದು ಕಲ್ಲು ಮಾತ್ರ !. ’ಇದು ಇಷ್ಟೆಯೇ’ ಎಂದು ಉದ್ಗಾರ ತೆಗೆಯುತ್ತಲೇ ಆತನು ಸಾಗರದಲ್ಲಿ ಮುಳುಗಿಹೋದನಂತೆ " . ನಂಬಿಕೆಯ ಸೋರೆ ಬುರುಡೆಗೆ ಒಂದು ತೂತು ಬಿದ್ದರೂ ಸಹ ಅದರಲ್ಲಿ ನೀರು ತುಂಬಿಕೊಳ್ಳುತ್ತದೆ, ಈಜುವುದಕ್ಕೆ ಬಳಸಲು ಆಗುವುದಿಲ್ಲ.

ಮುಂದಿನ ಕಂತಿನಲ್ಲಿ  ಇನ್ನಷ್ಟು ತಿಳಿಯೋಣ.
.......................................

ಒಂದು ಮಾತು : ವಿವೇಕ ಚೂಡಾಮಣಿಯ ವಿವರಣೆಯ ಜೊತೆಗೆ ಇಲ್ಲಿ ಬರುತ್ತಿರುವ ಪ್ರತಿಕ್ರಿಯೆಗಳನ್ನೂ ಸೇರಿಸಿ ಓದಿಕೊಂಡರೆ ವಿಚಾರವು ಇನ್ನಷ್ಟು ಸ್ಪಷ್ಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ.  ಪ್ರತಿಕ್ರಿಯೆಗಳು ವಿವರಣೆಗೆ ಮತ್ತಷ್ಟು ಹೊಳಪು ನೀಡುತ್ತಿರುವುದರಿಂದ ಅದನ್ನೂ ಪೂರಕವಾಗಿ ಸೇರಿಸಿಕೊಂಡು ಓದಿ ಎಂದು ಕೋರುತ್ತೇನೆ.
.................................

ವಂದನೆಗಳೊಂದಿಗೆ....

ಕಾಮೆಂಟ್‌ಗಳು

  1. ತರ್ಕದ ಚರ್ಚೆಯಲ್ಲಿ "willing suspension of disbilief" ಎಂಬ ಪರಿಕಲ್ಪನೆಯೊಂದಿದೆ. ವಿಷಯಗ್ರಹಣವಿಲ್ಲದೆ ವಿಚಾರವಾಗಲಿ, ಅದರ ವಿರೋಧವಾಗಲಿ, ನಂಬಿಕೆ/ಅಪನಂಬಿಕೆಯಾಗಲಿ ಎಲ್ಲಿಂದ ಬಂತು. ವಿಷಯಗ್ರಹಣಕ್ಕಾಗಿ ಕೊನೇಪಕ್ಷ ಅದಷ್ಟುಕಾಲ ವಿರೋಧಿಸುವ ತವಕವನ್ನು ಹತ್ತಿಕ್ಕಬೇಕಾಗುತ್ತದೆ. "ಸತ್ಯಬುಧ್ಯಾವಧಾರಣಾ" ಅನ್ನುವುದರ ಆಶಯ ಇದು. "ಶ್ರದ್ಧೆಯು ಇಲ್ಲದಿದ್ದರೆ ವಿಷಯದ ಸ್ವೀಕಾರ ಮನೋಭಾವವೂ ಹುಟ್ಟುವುದಿಲ್ಲ. ಶ್ರದ್ಧೆ ಮತ್ತು ನಂಬಿಕೆಯಿಂದ ಗುರುವಾಕ್ಯದಂತೆ ನಡೆಯಬೇಕು" ಎಂದು ತಾವು ಅದನ್ನು ಸೊಗಸಾಗಿ ತಿಳಿಗೊಳಿಸಿದ್ದೀರಿ.

    ಬೌದ್ಧಮತವನ್ನು ಖಂಡಿಸುವ ಮೊದಲು ಅದನ್ನು ಕಲಿಯಲೋಸುಗ ಬೌದ್ಧಗುರುವಿಗೆ ಶಿಷ್ಯನಾಗಿ ಸೇವಿಸಿದ ಕುಮಾರಿಲಭಟ್ಟರ ಕತೆಯೂ ನೆನಪಿಗೆ ಬರುತ್ತದೆ.

    ಲೇಖನಮಾಲೆ ಎಂದಿನಂತೆ ಸೊಗಸಾಗಿ ಮೂಡಿಬಂದಿದೆ. ಮುಂದುವರೆಸಿ.

    ಪ್ರತ್ಯುತ್ತರಅಳಿಸಿ
  2. ಸಾಧಿಸಲು ದುಸ್ಸಾಧ್ಯವಾದ ಗುಣವೆಂದರೆ ‘ತಿತಿಕ್ಷೆ’. ಬಹುಶಃ ಇದು ಯೋಗಿಯ ಕೊನೆಯ ಮೆಟ್ಟಿಲು?

    ಪ್ರತ್ಯುತ್ತರಅಳಿಸಿ
  3. ಮಂಜುನಾಥರೆ,

    ವಿಷಯಗ್ರಹಿಕೆ ಇಲ್ಲದೆ ವಿಚಾರವೂ ಬರಲೆ ಸಾಧ್ಯವೆ? . ಆದರೂ ನಮ್ಮಲ್ಲಿ ಕೆಲವು 'ವಿಕಾರ'ವಾದಿಗಳು ವಿತಂಡವಾದದ ಕೆಲಸಗಳನ್ನು ಮಾಡುತ್ತಲೇ‌ ಇರುತ್ತಾರೆ. ಸ್ವೀಕರಿಸದೆ ತಿರಸ್ಕರಿಸುವುದು ಅರಿವಿನ ದಾರಿಗೆ ಹಾನಿಯಾದಂತಯೇ ಸರಿ.

    ಪ್ರತ್ಯುತ್ತರಅಳಿಸಿ
  4. ಕಾಕಾ,

    ಅಭ್ಯಾಸವು ಸಾಧಕನ ಸಹಜ ಲಕ್ಷಣವೇ ಆಗುತ್ತದೆ ಎನ್ನುವುದಕ್ಕೆ ಆರ್. ಗಣೇಶರು ರಮಣಮಹರ್ಷಿಗಳ ಜೀವನಚರಿತ್ರೆಯಿಂದ ಒಂದು ಉದಾಹರಣೆ ಕೊಡುತ್ತಾರೆ. ರಮಣ ಮಹರ್ಷಿಗಳಿಗೆ ಒಮ್ಮೆ ಶಸ್ತ್ರಚಿಕಿತ್ಸೆ ಆಗಬೇಕಾಗಿ ಬಂದಾಗ ವೈದ್ಯರಿಗೆ ಅವರು "ನನಗೆ ನೀವು ಅನಸ್ತೇಶಿಯಾ ಕೊಡುವ ಅಗತ್ಯವೇನೂ ಇಲ್ಲ, ಹಾಗೇ ಸರ್ಜರಿ ಮಾಡಿ" ಎಂದರಂತೆ !. ವೈದ್ಯರು ಮೂರ್ಚೆ ಹೋಗುವುದೊಂದು ಬಾಕಿ !. ರಮಣರು ಹೇಳಿದ್ದು " ನಾನು ದೇಹವೇ ಅಲ್ಲದಿರುವಾಗ ಆ ದೇಹಕ್ಕೆ ಏನಾದರೆ ನನಗೇನು " ಎನ್ನುವ ಅರ್ಥದಲ್ಲಿ ಎಂದು ವಿವರಿಸುತ್ತಾರೆ.

    ತಿತಿಕ್ಷೆಯು ಕಠಿಣವಾದುದು ಎನ್ನುವುದರಲ್ಲಿ ಎರಡು ಮಾತಿಲ್ಲ.

    ಪ್ರತ್ಯುತ್ತರಅಳಿಸಿ
  5. ತಿತಿಕ್ಷೆಯ ಕುರಿತ ನಿಮ್ಮ ವಿವರಣೆ ಉದಾಹರಣೆ ಸಹಿತ ಅರ್ಥಪೂರ್ಣ.
    ಆದರೆ ನಿರಂತರವಾಗಿ ಕಾಟ, ಕೀಟಲೆಯಲ್ಲಿ ತೊಡಗುವುದನ್ನೇ ತಮ್ಮ ಉಪವೃತ್ತಿಯನ್ನಾಗಿ ಮಾಡಿಕೊಂಡವರೆದುರು ತಿತಿಕ್ಷೆ ಗೆಲ್ಲುವುದೇ ಎನ್ನುವುದು ಅನುಮಾನ...
    ಏನಂತೀರಿ?

    ಪ್ರತ್ಯುತ್ತರಅಳಿಸಿ
  6. ರಶ್ಮಿ ಅವರೇ,

    :-) ಕಾಟ ಕೊಡುವುದು ಕೀಟಲೆ ಮಾಡುವುದೇ ಅವರ 'ಸಹಜ' ಲಕ್ಷಣವಾಗಿಬಿಡಬಹುದು :). ಅವರಿಗೆ ತಿತಿಕ್ಷೆಯೇ ಹೆದರ್ಬೇಕಾಗುತ್ತದೆ !. ಇದು ಆತ್ಮಾಭ್ಯಾಸಿಗಳಿಗೆ ಇರಬೇಕಾದ ಗುಣವಾದುದರಿಂದ ಅಂತಹವರ ಗೊಡವೆಯೇ ಬೇಡ ಬಿಡಿ.
    ನಿಮ್ಮ ಒಳ್ಳೆಯ ಮಾತುಗಳಿಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  7. `ತಿತಿಕ್ಷೆ' ಮತ್ತು `ಶ್ರದ್ಧೆ'ಯ ಬಗ್ಗೆ ಬಹಳ ಚೆನ್ನಾಗಿ ತಿಳಿಸಿದ್ದೀರಿ ಸರ್, ಧನ್ಯವಾದಗಳು. ಮು೦ದಿನದರ ನಿರೀಕ್ಷೆಯಲ್ಲಿರುವೆ.ನನ್ನ ಬ್ಲಾಗ್ ಗೆ ಭೇಟಿಕೊಡಿ.

    ಪ್ರತ್ಯುತ್ತರಅಳಿಸಿ
  8. ವಿವೇಕ್ ಚೂಡಾಮಣಿಗೆ ನಿಮ್ಮ ವ್ಯಾಖ್ಯಾನವು ತುಂಬಾ ಚೆನ್ನಾಗಿ ಬರುತ್ತಿದೆ. ಯಾವ ಆಕರಗಳನ್ನು ಬಳಸಿದ್ದೀರಿ ಎಂದು ದಯವಿಟ್ಟು ತಿಳಿಸಿ, ನಾನೂ ಆ ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತೇನೆ.

    ಪ್ರತ್ಯುತ್ತರಅಳಿಸಿ
  9. ಕೃಷ್ಣಮೂರ್ತಿಗಳೆ,

    ಚೂಡಾಮಣಿಯ ಆರಂಭದಲ್ಲೇ ನಾನು ಆಕರಗಳನ್ನು ಹೇಳಿದ್ದೇನೆ. ಆದರೂ ಇಲ್ಲೂ ಒಮ್ಮೆ ಹೇಳುತ್ತೇನೆ. ಸದ್ಗುರು ಚಂದ್ರಶೇಖರ ಭಾರತಿಗಳ ಸಂಸ್ಕೃತ ವ್ಯಾಖ್ಯಾನ ಮತ್ತು ಆರ್. ಗಣೇಶರ ಪ್ರವಚನ ಮಾಲಿಕೆಯ ಸಾರಾಂಶವ್ಅನ್ನು ಇಟ್ಟುಕೊಂಡು ನನ್ನದೂ ಒಂದಷ್ಟು ’ಒಗ್ಗರಣೆ’ ಸೇರಿಸಿ ಬರೆಯುತ್ತಿದ್ದೇನೆ. ಇದರಲ್ಲಿ ನನ್ನ ವ್ಯಾಖ್ಯಾನದ ಪಾತ್ರವೇನೂ ಇಲ್ಲ. ಸಂಗ್ರಹಿಸಿದ್ದನ್ನು, ಗ್ರಹಿಸಿದ್ದನ್ನು ಬರೆಯುವುದಷ್ಟೆ ನನ್ನ ಕೆಲಸ. ನೀವು ಮೂಲ ಆಕರಗಳನ್ನೂ ಅಭ್ಯಾಸ ಮಾಡಬಹುದು. ನಿಮ್ಮ ಅಭಿನಂದನೆಗಳು ಅಭಿವಂದನೆಗಳೆಲ್ಲಾ ’ಗುರುಗಳಿಗೇ’ ಸಲ್ಲಬೇಕು.

    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ