ವಿವೇಕ ಚೂಡಾಮಣಿ - ಭಾಗ ೨



ಶ್ರೀ ಶಂಕರಾಚಾರ್ಯರ ಹಲವು ಪ್ರಕರಣ ಗ್ರಂಥಗಳಲ್ಲಿ ವಿವೇಕ ಚೂಡಮಣಿಯು ಅತ್ಯಂತ ವಿಶಿಷ್ಟವಾದುದಾಗಿದೆ. ಆರಂಭದಿಂದ ಅಂತ್ಯದವರೆವಿಗೂ ಎಲ್ಲಿಯೂ ದಿಕ್ಕು ತಪ್ಪದೆ ವೇದೋಪನಿಷತ್ತುಗಳ ಸಾರವನ್ನು ತುಂಬಾ ಸರಳವಾದ ಭಾಷೆಯಲ್ಲಿ ತಿಳಿಸುತ್ತಾ ನಿರ್ದಿಷ್ಟವಾದ ಗುರಿಯನ್ನು ಮುಟ್ಟುತ್ತದೆ. ರಾಜಕಾರಣಿಗಳ ಭಾಷಣದಂತೆ ಎಲ್ಲೋ ಆರಂಭವಾಗಿ ಮತ್ತೆಲ್ಲೋ ಮುಗಿಯುವಂತಾಗದೆ, ಆತ್ಮ ಸಂಸ್ಕಾರದ ಅರಿವಿನಿಂದ ಆರಂಭವಾಗಿ ಮುಕ್ತಿಯೆಡೆಗೆ ಸಾಗುವ ದಾರಿಯ ವಿಚಾರಗಳು ಆಸಕ್ತರನ್ನು ಸಲೀಸಾಗಿ ಓದುವಂತೆ ಹಿಡಿದಿಡುತ್ತದೆ. ಇಂತಹ ಗ್ರಂಥಗಳ ವಿಚಾರಗಳನ್ನು ತಿಳಿಯುವುದು ಮತ್ತು ಅದನ್ನು ವರ್ತಮಾನಕ್ಕೆ ಅನ್ವಯವಾಗುವಂತೆ ವಿವರಿಸುವುದು ತುಸು ಕಷ್ಟವಾದರೂ, ವಿವೇಕ ಚೂಡಾಮಣಿಯಲ್ಲಿ ಬಳಸಿರುವ ಭಾಷೆಯ ಲಾಲಿತ್ಯ, ವಿಚಾರಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವಂತಯೇ ಇದೆ.  ಈಗಾಗಲೇ ಚೂಡಾಮಣಿಯ ಕನ್ನಡದ ವಿವರಣೆಗಳಿರುವ ಹಲವು ಪುಸ್ತಕಗಳು ಹೊರಬಂದಿದ್ದು, ಅದರಲ್ಲಿ ಪ್ರಮುಖವಾಗಿ ಶ್ರೀ ಚಂದ್ರಶೇಖರ ಭಾರತಿಗಳ ವ್ಯಾಖ್ಯಾನವನ್ನು ಮತ್ತು ಶ್ರೀ ಆರ್. ಗಣೇಶರ ಪ್ರವಚನ ಮಾಲಿಕೆಯನ್ನು ನನ್ನ ಅಧ್ಯಯನಕ್ಕೆ ಇಟ್ಟುಕೊಂಡಿದ್ದೇನೆ.  ಇಲ್ಲಿ ಬರುವ ವಿಚಾರಗಳು ಮತ್ತೆಲ್ಲೋ ಬಂದಿರಲೂಬಹುದು ಅಥವಾ ಬಂದಿಲ್ಲದೆಯೂ ಇರಬಹುದು, ಸಾಧ್ಯವಾದಷ್ಟು ಅಧ್ಯಯನಪರವಾದ ಹೊಸ ವಿಚಾರಗಳನ್ನು ಬರೆಯಲು ಯತ್ನಿಸುತ್ತೇನೆ.  ಸರಳ ಸಂಸ್ಕೃತ ಭಾಷೆಯಲ್ಲಿ ಸುಮಾರು ೫೮೧ ಸೂಕ್ತಿಗಳೊಂದಿಗೆ ಹಲವು ಅಲಂಕಾರಗಳನ್ನು ಬಳಸಿ ರಚಿತವಾಗಿರುವ ಈ ಗ್ರಂಥವು ಕೇವಲ ಪಾವಿತ್ರ್ಯತೆಗಾಗಿಯಾಗಲೀ ಅಥವಾ ಜಗದ್ಗುರುಗಳಿಂದ ಹೇಳಲ್ಪಟ್ಟಿದೆ ಎಂದಾಗಲೀ ಮಹತ್ವವನ್ನು ಪಡೆಯದೆ , ಬದುಕಿನ ಅನೇಕ ಗೊಂದಲಗಳನ್ನು ನಿವಾರಿಸಿ ಮನಸಿಗೆ ನೆಮ್ಮದಿಯನ್ನೂ ವಿವೇಕವನ್ನೂ ತಂದುಕೊಡುವ ಗ್ರಂಥವಾಗಿದೆ. ಆಧುನಿಕ ಜಗತ್ತಿನ  ವಿಜ್ಞಾನ-ತಂತ್ರಜ್ಞಾನ ಶಾಸ್ತ್ರಗಳಲ್ಲಿ ಹೇಳಲ್ಪಡುತ್ತಿರುವ ವಿಚಾರಗಳು ನಮ್ಮ ಭಾರತೀಯ ಬೇರಿನದೇ ಆದ ಉಪನಿಷತ್ಸಾರಗಳಲ್ಲಿ ಹೇಗೆ ಸೂಕ್ಷ್ಮವಾಗಿ ಅಡಕವಾಗಿದೆ ಎಂಬುದನ್ನು ಈ ಗ್ರಂಥದ ಅಧ್ಯಯನದ ಮೂಲಕ ತಿಳಿಯಬಹುದಾಗಿದೆ.

ಗ್ರಂಥದ ಆರಂಭದ ಶ್ಲೋಕವು ಹೀಗಿದೆ


सर्व वेदांतसिद्धांत गोचरं तमगोचरम् ।
गोविन्दं परमानन्दं सद्गुरुं प्रणतोस्म्हम् ॥१॥




ಸರ್ವವೇದಾಂತ ಸಿದ್ಧಾಂತ ಗೋಚರಂ ತಂ ಅಗೋಚರಮ್ |
ಗೋವಿದಂ ಪರಮಾನಂದಂ ಸದ್ಗುರುಂ ಪ್ರಣತೋಸ್ಮ್ಯಹಮ್ ||೧||

ಗ್ರಂಥದ ಆರಂಭದಲ್ಲಿ ಶ್ರೀ ಶಂಕರರು ಗೋವಿಂದನಿಗೆ ತಮ್ಮ ನೆನೆಕೆಗಳನ್ನು ಸಲ್ಲಿಸಿದ್ದಾರೆ.  ಶಂಕರಾಚಾರ್ಯರ ದೀಕ್ಷಾ ಗುರುಗಳ ಹೆಸರು ಗೋವಿಂದ ಭಗವಾತ್ಪಾದರೆಂದು ತಿಳಿಯಲಾಗಿದೆ. ಹಾಗೆಯೇ ಶ್ರೀ ಕೃಷ್ಣನು ಶಂಕರರ ಕುಲದೇವತೆಯೆಂದೂ ಗ್ರಂಥಾಂತರದಲ್ಲಿ ತಿಳಿದುಬರುತ್ತದೆ. ಅವರ ಹುಟ್ಟೂರಾದ ಕೇರಳ ರಾಜ್ಯದ ಕಾಲಟಿಯಲ್ಲಿ ಪೂರ್ಣಾ(ಪೆರಿಯಾರ್) ನದಿಯ ದಡದಲ್ಲಿ ಇರುವ ಶ್ರೀ ಕೃಷ್ಣನ ದೇವಾಲಯವನ್ನು ಇಂದಿಗೂ ಕಾಣಬಹುದು. ಗೋವಿಂದನೆಂದರೆ ಗೋಪಾಲನೂ ಆಗುವನು, ಬೆಟ್ಟಗಳ ಒಡೆಯನೂ ಆಗುವನು ಹಾಗೆಯೇ ಗುರು ಗೋವಿಂದ ಭಗವತ್ಪಾದರೂ ಆಗುವರು.
ಗುರುವಿನ ವಿಚಾರಕ್ಕೆ ಬಂದರೆ , ಶಂಕರರು ಸಹಜವಾಗಿ ಗ್ರಂಥದ ಮೊದಲಲ್ಲಿ ತಮ್ಮ ಗುರುಗಳನ್ನು ನೆನೆಪಿಸಿಕೊಂಡಿದ್ದಾರೆ.
 ಆ ಗುರುಗಳಾದರೂ ಎಂತಹವರು ?  ಅವರು ಕಣ್ಣಿಗೆ ಕಾಣುವವರಲ್ಲ,  ಬುದ್ಧಿಗೆ ತಿಳಿಯುವವರಲ್ಲ, ಮಾತಿಗೆ ಸಿಲುಕುವವರಲ್ಲ,  ಅವರ ದೇಹಕ್ಕೆ ಯಾವ ಆದರಣೆಯೂ ಇಲ್ಲ, ಅದು ಅಗೋಚರವಾದುದು ಮತ್ತು ಅಲೌಕಿಕವಾದು. ಹಾಗಾದರೆ ಶಂಕರರು ತಮ್ಮ ಗುರುಗಳನ್ನು ಕಂಡಿದ್ದಾದರೂ ಹೇಗೆ ? ಯಾವ ರೂಪದಲ್ಲಿ ಕಂಡುಕೊಂಡರು ?.
ಶಂಕರರಿಗೆ ತಮ್ಮ ಗುರುಗಳು ಕಾಣಿಸಿದ್ದು ಅರಿವಿನ ರೂಪದಲ್ಲಿ ಮತ್ತು ಜ್ಞಾನದ ಬೆಳಕಿನಲ್ಲಿ. ಜಗತ್ತಿನ ಎಲ್ಲಾ ಲೌಕಿಕ-ಪಾರಮಾರ್ಥಿಕ ಸಿದ್ಧಾಂತ-ವೇದಾಂತಗಳ ರೂಪದಲ್ಲಿ ಕಂಡರು .

ದೇಹಕೆ ಸಿಲುಕದ
ಮನಸಿಗೆ ನಿಲುಕದ
ಅರಿವಿಗೆ ತೋರುವ
ಗುರು ಗೋವಿಂದಗೆ
ತಲೆ ಬಾಗಿಸುವೆ        

     ಎಂದು ಹೇಳುತ್ತಾ ಗುರುವನ್ನು ಅರಿವಿನ ರೂಪದಲ್ಲಿ ಕಂಡೆ ಎಂದು ಸಾರುತ್ತಾರೆ.  ಯಾವ ವೇದಾಂತ-ಸಿಧ್ಧಾಂತಗಳು ನನ್ನ ಅರಿವಿಗೆ ಕಾರಣವಾದವೋ ಅದೇ ನನ್ನ ಗುರುವು ಮತ್ತು ಆ ತತ್ತ್ವಜ್ಞಾನವೇ ಗೋವಿಂದ ಗುರುಗಳೆಂದು
ಸೂಚ್ಯವಾಗಿ ಹೇಳುತ್ತಾರೆ. ಮಾತು-ಮನಸಿಗೆ ನಿಲುಕದೆ ವೇದಾಂತ-ಸಿದ್ಧಾಂತದ ಮೂಲಕ ಎಲ್ಲರಿಗೆ ಕಾಣುವಂತಹ ಅರಿವಿನ ಗುರುವಾದ ಗೋವಿಂದರಿಗೆ ನಮಿಸುತ್ತೇನೆ ಎಂದು ಶಂಕರರು ಆರಂಭಿಸುತ್ತಾರೆ.  ಗುರು ಅನ್ನುವ ಪದಕ್ಕಾಗಲೀ ಅಥವಾ ಗುರುವಿನ ಲೌಕಿಕ ದೇಹಕ್ಕಾಗಲೀ ಹೆಚ್ಚು ಮಹತ್ವವಿಲ್ಲವೆಂಬುದನ್ನು ಶಂಕರರು ಈ ಸೂಕ್ತದ ಮೂಲಕ ಸೂಕ್ಷ್ಮವಾಗಿ ಹೇಳುತ್ತಾರೆ. ’ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’ ಎಂಬ ದಾಸರ ಪದವೊಂದಿದೆ.  ಗುರುವಿನ ಗುಲಾಮನಾಗುವುದು ಎಂದರೆ ಗುರುವಿನಲ್ಲಿರುವ ಅರಿವಿನ ಗುಲಾಮನಾಗುವುದು ಎಂದೇ ಅರ್ಥ. ಕೇವಲ ಗುರುವಿನ ಬಾಹ್ಯ ದೇಹದ ಸೇವೆ ಮಾಡಿಕೊಂಡು ಸಮಯ ತಳ್ಳಿದರೆ ತಿಳಿವು ಮೂಡುವುದಿಲ್ಲ , ಅದರೊಟ್ಟಿಗೆ ಆ ಸದ್ಗುರುವಿನಲ್ಲಿ ಅಡಕವಾಗಿರುವ ವಿದ್ಯೆಯನ್ನೂ ಸಂಪಾದಿಸಬೇಕು ಅಂತಹ ವಿದ್ಯೆಯೇ ನಿಜವಾದ ಗುರುವಿನ ರೂಪ ಎಂದು  ಶಂಕರರು ಹೇಳುತ್ತಾರೆ.

ಕನ್ನಡದ ಮೇರು ಕಲಾವಿದ ರಾಜಕುಮಾರರು ಇಂದು ನಮ್ಮೊಂದಿಗಿಲ್ಲದಿರಬಹುದು, ಆದರೆ ಅವರ ಚಿತ್ರಗಳು, ಅಭಿನಯ ಅವರ ಹಾಡುಗಾರಿಕೆಯಿಂದ ಎಲ್ಲಾ ಕಾಲದಲ್ಲೂ ಅವರು ಜೀವಂತವಾಗಿರುತ್ತಾರೆ ಅದರ ಮೂಲಕವೇ ಅವರು ಗೋಚರಿಸುತ್ತಾರೆ. ಹಾಗೆಯೇ ಸದ್ಗುರುವೂ ಸಹ, ಅರಿವಿನ ಬೆಳಕನ್ನು ಚೆಲ್ಲುವ ಮೂಲಕ ವಿಷಯಾಸಕ್ತರಿಗೆ  ಯಾವಾಗಲೂ ಕಾಣಿಸುತ್ತಾರೆ.  ಗುರುವು ಹೇಗಿರಬೇಕು ಎಂಬುದಕ್ಕೂ ಇದೇ ಸೂಕ್ತವು ಅನ್ವಯವಾಗಬಲ್ಲುದು. ಗುರುವೆನಿಸಿಕೊಂಡವನು ತನ್ನ ಹಾವ-ಭಾವಗಳಿಂದಾಗಲೀ, ಹಣದ ಪ್ರಭಾವದಿಂದಾಗಲೀ ಅಥವಾ  ರಾಜಕೀಯ ವಿಷಯಗಳಿಂದಾಗಲೀ ಅನೇಕ ಶಿಷ್ಯರನ್ನು ಸಂಪಾದಿಸಿಕೊಂಡರೆ ಕೊನೆಗೆ ಅಂತಹ ಶಿಷ್ಯರಿಂದಲೇ ಗುರುವೆಂಬ ಘನತೆಯನ್ನೂ ಕಳೆದುಕೊಳ್ಳುತ್ತಾನೆ. ಇಂದು ಇಂತಹ ಅನೇಕ ಗುರುಗಳನ್ನು ಕಾಣಬಹುದಾಗಿದೆ !. ಇಲ್ಲಿ ಸದ್ಗುರು ಶ್ರೀಧರರು ಹೇಳಿದ ವಾಕ್ಯವೊಂದನ್ನು ನೆನಪಿಸಿಕೊಳ್ಳಬಹುದು,

ಶತ್ರೋರಪಿ ಗುಣಾವಾಚ್ಯಾ ದೋಷಾವಾಚ್ಯಾ ಗುರೋರಪಿ |
ಯುಕ್ತಿಯುಕ್ತಂ ವಚೋಗ್ರಾಹ್ಯಂ ಬಾಲಾದಪಿ ಶುಕಾದಪಿ ||
ಗುರೋರಪ್ಯವಲಿಪ್ತಸ್ಯ ಕಾರ್ಯಾಕಾರ್ಯಮಜಾನತಃ|
ಅಪಾರ್ಥಪ್ರತಿಪನ್ನಸ್ಯ ನ್ಯಾಯ್ಯಂ ಭವತಿ ಶಾಸನಮ್ ||

"ಗುರು ಎಂದಾಕ್ಷಣ ಅವರ ಅಯೋಗ್ಯ, ಕೀಳು ವಿಚಾರಗಳು ತಿಳಿದಿದ್ದರೂ ಸಹ ಅವರನ್ನು ಅನುಸರಿಸುವುದು ತಪ್ಪು. ತನ್ನ ನಡತೆ ಮತ್ತು ಒಳ್ಳೆಯ ಗುಣಗಳಿಂದ ಯಾರು ಉತ್ತಮರೆನಿಸಿಕೊಳ್ಳುತ್ತಾರೋ ಅವರೇ ನಿಜವಾದ ಸದ್ಗುರುಗಳು"
ಎಂದು ಹೇಳುತ್ತಾರೆ.  ನಮ್ಮ ಜಾತಿಯವರೆಂದೋ, ಮತ-ಧರ್ಮದವರೆಂದೋ ಕುರುಡು ಬುದ್ದಿಯಿಂದ ಯಾರೋ ಒಬ್ಬರನ್ನು ಶ್ರೀ ಶ್ರೀ ಶ್ರೀ ಜಗದ್ಗುರುವೆಂದು ಒಪ್ಪುವ ಬದಲು ಅಂತಹ ಗುರುವಿನಲ್ಲಿರುವ ಅರಿವನ್ನು ಒರೆಗೆ ಹಚ್ಚಬೇಕು ಎಂಬುದು ಮೇಲಿನ ಸೂಕ್ತಗಳ ಸಾರವಾಗಿದೆ. ಶಿಷ್ಯನು ಹೇಗಿರಬೇಕು ಎಂಬುದಕ್ಕೂ ಮೇಲಿನ ಸೂಕ್ತಗಳೇ ಮಾದರಿಯಾಗಿವೆ.
ನಮಗೂ ಸಹ ವಿವೇಕ ಚೂಡಾಮಣಿಯನ್ನು ಶ್ರೀ ಶಂಕರರು ಬರೆದಿದ್ದಾರೆ ಹಾಗಾಗಿ ಅದೊಂದು ಪವಿತ್ರ ಗ್ರಂಥ ಎನ್ನುವ ಭಾವನೆಗಿಂತಲೂ , ಅದರೊಳಗಿನ ಸತ್ವವನ್ನು ತಿಳಿದು ಅದರಲ್ಲಿ ಶಂಕರರನ್ನು ಕಂಡರೆ ನಾವು ನಿಜವಾದ ಗುರುವನ್ನು ಪಡೆದುಕೊಂಡಂತಾಗುತ್ತದೆ ಎನ್ನಬಹುದು. ಇಂದು ಗೋವಿಂದರಂತಹ ಗುರುಗಳು ಮತ್ತು ಜ್ಞಾನದಲ್ಲೇ ಗುರುವನ್ನು ಕಂಡ ಶಂಕರರಂತಹ ಶಿಷ್ಯರು ಸಿಗುವುದು ಬಲು ಕಷ್ಟ. ಮುಕ್ತಿ ಮಾರ್ಗಕ್ಕೆ ಅಥವಾ ನೆಮ್ಮದಿಯ ಬದುಕಿಗೆ ಆಧ್ಯಾತ್ಮವೇ ಅಂತಿಮವೆಂದೇನೂ ಇಲ್ಲ, ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈಯಬಹುದಾಗಿದೆ ಅದರಿಂದಲೇ ನೆಮ್ಮದಿಯನ್ನೂ ಪಡೆಯಬಹುದಾಗಿದೆ. ಹಾಗೆ ಸಾಧಿಸಲು ಅನುಸರಿಸಬೇಕಾದ ಮಾರ್ಗಗಳು ನಮ್ಮ ವೇದೋಪನಿಷತ್ತುಗಳಲ್ಲಿದೆ. ಎಲ್ಲೆಲ್ಲೋ ತಡಕಾಡುವ ಬದಲು ನೇರವಾಗಿ ನಮ್ಮ ಸಂಸ್ಕೃತಿಯ ಬೇರನ್ನು ಅಪ್ಪಿಕೊಳ್ಳುವುದು ಉಚಿತವೇ ಆಗಿದೆ.  ಅರಿವನ್ನು ಹಂಚುವ ಮತ್ತು ಪಡೆಯುವ ಕಾರ್ಯದಲ್ಲಿ ಗುರು-ಶಿಷ್ಯರಿಬ್ಬರಿಗೂ ಸ್ಥಿತಪ್ರಜ್ಞತೆಯ ಅಗತ್ಯವಂತೂ ಇದ್ದೇ ಇದೆ, ಅಲ್ಲಿ ಸ್ವಾರ್ಥಕ್ಕೆ ಅವಕಾಶವಿಲ್ಲ.

ಮುಂದಿನ ಬರಹದಲ್ಲಿ ವಿವೇಕ ಚೂಡಾಮಣಿಯ ಆರಂಭದ ಮೊದಲ ಸೂಕ್ತಿಯನ್ನು ತಿಳಿಯೋಣ.

ವಂದನೆಗಳೊಂದಿಗೆ,


ಕಾಮೆಂಟ್‌ಗಳು

  1. ಸೀತಾರಾಮ. ಕೆ. / SITARAM.K said...
    ಗುರುವಿನ ಬಗ್ಗೆ ಆದಿಶಂಕರರ ಕಲ್ಪನೆ ಅತ್ಯುತ್ತಮವಾದದ್ದು. ಮುಂದಿನ ಕಂತಿಗೆ ಕಾಯುತ್ತಿರುವೆ.

    July 4, 2011 1:40 PM

    ಮನಸು said...
    ಹಾ..!! ಗುರುವಿನ ಗುಲಾಮರಾದಾಗಲೇ ಎಲ್ಲವೂ ಸಿದ್ಧಿಸುವುದು. ಧನ್ಯವಾದಗಳು ಒಳ್ಳೆಯ ಬರಹ ಮುಂದುವರಿಸಿ..

    July 4, 2011 2:50 PM

    ಮನಮುಕ್ತಾ said...
    ಸರಳವಾಗಿ ಅರ್ಥವಾಗುವ೦ತೆ ಇದ್ದು,ಗುರುವಿನ ಬಗ್ಗೆ ಚೆನ್ನಾಗಿ ಅರ್ಥ ನೀಡಿದ ಉತ್ತಮ ಲೇಖನ..ಆಸಕ್ತಿಪೂರ್ಣವಾಗಿದೆ.

    July 4, 2011 5:34 PM

    Manjunatha Kollegala said...
    ಉತ್ತಮ ಪ್ರಯತ್ನ.

    ಮೂಲ ಶ್ಲೋಕಕ್ಕೆ ನಿಮ್ಮ Interpretation ಸೊಗಸಾಗಿದೆ. ಆದರೆ ಶ್ಲೋಕದ ಅನುವಾದವೂ interpretationನೇ ಆಗಿರುವ ಬದಲು (ಸಂಪೂರ್ಣ ಭಾವಾನುವಾದವೇ ಆಗಿರುವ ಬದಲು) ತುಸು ಮೂಲದ ಪದಾರ್ಥಕ್ಕೆ (ಪದದ ಅರ್ಥಕ್ಕೆ) ಹತ್ತಿರವಾಗಿದ್ದರೆ ಇನ್ನೂ ಚೆನ್ನಿರುತ್ತದೆ. ಅಂದರೆ ಅನುವಾದವು ತೀರ ಭಾವಾನುವಾದವಾಗುವುದಕ್ಕೂ ತೀರ ಪ್ರತಿಪದಾನುವಾದವಾಗಿರುವುದಕ್ಕೂ ನಡುವಿನ ಒಂದು ಸೊಗಸಾದ ಹದ ಹಿಡಿದರೆ ಇನ್ನೂ ಚೆನ್ನವೆಂದು ನನ್ನ ಅನಿಸಿಕೆ.

    ಮುಂದಿನ ಕಂತುಗಳಿಗಾಗಿ ಕಾಯುತ್ತಿದ್ದೇವೆ.

    July 4, 2011 6:46 PM

    Subrahmanya said...
    ಒಂದೇ ಸಲಕ್ಕೆ ಎರಡೂ ಲೇಖನಗಳನ್ನು ಓದಿ ಬೆನ್ನು ತಟ್ಟಿದ್ದೀರಿ, ನಿಮ್ಮ ಜೊತೆ ನಾನೂ ತಿಳಿದುಕೊಳ್ಳಲು ಇದೊಂದು ನೆಪ ಅಷ್ಟೆ ! .ಧನ್ಯವಾದ.

    July 4, 2011 10:53 PM

    Subrahmanya said...
    ಮನಸು,

    ಮನಮುಕ್ತಾ,

    ನಿಮಗೂ ಧನ್ಯವಾದಗಳು.

    July 4, 2011 10:54 PM

    Subrahmanya said...
    ಮಂಜುನಾಥರೆ,

    ಹ್ಮ್, " ಆದರೆ ಶ್ಲೋಕದ ಅನುವಾದವೂ interpretationನೇ ಆಗಿರುವ ಬದಲು (ಸಂಪೂರ್ಣ ಭಾವಾನುವಾದವೇ ಆಗಿರುವ ಬದಲು) ತುಸು ಮೂಲದ ಪದಾರ್ಥಕ್ಕೆ (ಪದದ ಅರ್ಥಕ್ಕೆ) ಹತ್ತಿರವಾಗಿದ್ದರೆ ಇನ್ನೂ ಚೆನ್ನಿರುತ್ತದೆ. ಅಂದರೆ ಅನುವಾದವು ತೀರ ಭಾವಾನುವಾದವಾಗುವುದಕ್ಕೂ ತೀರ ಪ್ರತಿಪದಾನುವಾದವಾಗಿರುವುದಕ್ಕೂ ನಡುವಿನ ಒಂದು ಸೊಗಸಾದ ಹದ ಹಿಡಿದರೆ ಇನ್ನೂ ಚೆನ್ನವೆಂದು ನನ್ನ ಅನಿಸಿಕೆ."

    ನಿಜ, ಆದರೆ ಅದು ನನ್ನಿಂದ ಸಾಧ್ಯವಾ ? :) ನನಗೆ ಯಾಕೋ ಧೈರ್ಯವಿಲ್ಲ :) . ಮುಂದಿನ ಲೇಖನದಲ್ಲಿ ನೀವು ನೀಡಿರುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಸಲ್ಲಿಸಲು ಯತ್ನಿಸುತ್ತೇನೆ.

    ನಿಮಗೆ ಅನೇಕ ಧನ್ಯವಾದಗಳು.

    July 4, 2011 10:56 PM

    sunaath said...
    ಶ್ರುತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಮ್|
    ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್||

    ಸುಬ್ರಹ್ಮಣ್ಯರೆ,
    ಬಹಳ ದೊಡ್ಡ ಕೆಲಸವನ್ನು ಕೈಗೆತ್ತಿಕೊಂಡಿರುವಿರಿ. ನಿಮಗೆ ಈ ಕಾರ್ಯದಲ್ಲಿ ಸಕಲ ಯಶಸ್ಸು ಸಿದ್ಧಿಸಲಿ ಎಂದು ಭಗವತ್ಪಾದರಲ್ಲಿ ಪ್ರಾರ್ಥಿಸುತ್ತೇನೆ.

    July 5, 2011 6:20 PM

    Subrahmanya said...
    ಸುನಾಥ ಕಾಕಾ,

    ನೀವು ಈ ತರಹ ಸಮಯಕ್ಕೆ ಸರಿಯಾಗಿ ಬಂದು ಹಾರೈಸುತ್ತಾ ಇದ್ದರೆ ದೊಡ್ಡ ಕೆಲಸವೂ ಸಲೀಸಾಗಿ ಆಗುತ್ತೆ :)

    July 5, 2011 10:11 PM

    ಚುಕ್ಕಿಚಿತ್ತಾರ said...
    ಉತ್ತಮವಾಗಿ ಗುರುವಿನ ವಿಚಾರವನ್ನು ವಿವರಿಸಿದ್ದೀರಿ..
    ಮು೦ದುವರೆಸಿ..

    July 7, 2011 9:20 AM

    Subrahmanya said...
    ಚುಕ್ಕಿ ಚಿತ್ತಾರ,

    ಗುರುವಿನ ಬಗೆಗೆ ಶಂಕರರ philosophy ಇನ್ನೂ ಎಷ್ಟಿದ್ದೀತೋ , ನನಗೆ ತಿಳಿದಷ್ಟನ್ನು ಇಲ್ಲಿ ಬರೆದಿದ್ದೇನೆ. ನಿಮ್ಮ ಒಳ್ಳೆಯ ಮಾತುಗಳಿಗೆ ನಂನಿ.

    July 7, 2011 7:48 PM

    ಶಿವಪ್ರಕಾಶ್ said...
    informative article..
    last joke kooda sooper ;)

    ಪ್ರತ್ಯುತ್ತರಅಳಿಸಿ
  2. ತಿಳುವಳಿಕೆ ನೀಡುವ ಇಂತಹ ಉತ್ತಮ ಲೇಖನ ಸಮಚಿತ್ತದಲ್ಲಿ ನಡೆಯಲು ಪ್ರೇರೇಪಿಸುವ ಜ್ನಾನ ದೀವಟಿ..ಧನ್ಯವಾದಗಳು..ಮುಂದಿನ ಕಂತಿಗೆ ಕಾಯುವಂತೆ ಮಾಡಿದ ವಿವರಣೆ ಶೈಲಿ...

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ