ವಿವೇಕ ಚೂಡಾಮಣಿ -ಭಾಗ-೧೨
ಗ್ರಂಥದ ಮುಂದುವರಿದ ಭಾಗ विरज्य विषयव्रातात् दोषदृष्ट्या मुहुर्मुहुः । स्वलक्ष्ये नियतावस्था मनसः शम उच्यते ॥२२॥ ವಿರಜ್ಯವಿಷಯವ್ರಾತಾತ್ ದೊಷದೃಷ್ಟ್ಯಾ ಮುಹುರ್ಮುಹುಃ | (= ಭೋಗವಸ್ತುಗಳಲ್ಲಿರುವ ದೋಷಗಳನ್ನು ಮತ್ತೆ-ಮತ್ತೆ ಕಂಡು ಭೋಗ ವಿಷಯಾಸಕ್ತಿಯನ್ನು ಬಿಡುವುದು) ಸ್ವಲಕ್ಷ್ಯೇ ನಿಯತಾವಸ್ಥಾ ಮನಸಃ ಶಮ ಉಚ್ಯತೇ ||೨೨॥ (=ಗುರಿಯ ಸಾಧನೆಗೆ ಮನೋನಿಗ್ರಹವನ್ನಿಟ್ಟುಕೊಳ್ಳುವುದೆ ಶಮವು ) ಸಾಧನ ಚತುಷ್ಟಯದ ಮೂರನೆಯ ಸಾಧನದ ನಿರೂಪಣೆಯನ್ನು ಮಾಡುತ್ತಾ ’ಶಮದಮಾದಿ’ ಆರು ಸಂಪತ್ತುಗಳ ವಿಚಾರವನ್ನು ಶ್ರೀ ಶಂಕರರು ವಿವರಿಸುತ್ತಾರೆ. ಮೊದಲನೆಯದಾಗಿ ’ಶಮ’ :- ಭೋಗವಸ್ತುಗಳಲ್ಲಿ ಕಂಡುಬರುವ ದೋಷಗಳನ್ನು ಗ್ರಹಿಸಿ ಅವುಗಳಲ್ಲಿ ಜಿಗುಪ್ಸೆಯನ್ನು ಹೊಂದಿ ಆತ್ಮವಿಷಯದಲ್ಲಿ ಮಾತ್ರವೇ ಮನಸ್ಸನ್ನು ತಲ್ಲೀನಗೊಳಿಸಿಕೊಳ್ಳುವುದನ್ನು ’ಶಮ’ ಎಂದು ಹೇಳುತ್ತಾರೆ. ಮನಸ್ಸನ್ನು ಹತೋಟಿಯಲ್ಲಿಡುವುದು ಎಂದರೆ, ಇಂದ್ರಿಯಯಗಳನ್ನು ನಿಗ್ರಹಿಸುವುದು ಎಂದು ತಿಳಿಯಬೇಕಾಗುತ್ತದೆ. ಮುಖ್ಯವಾಗಿ ಜ್ಞಾನೇಂದ್ರಿಯಗಳು (ಕಣ್ಣು, ಕಿವಿ, ಮೂಗು, ಚರ್ಮ, ನಾಲಿಗೆ) ವಿಷಯವಸ್ತುವಿನ ಗೊಡವೆಗೆ ಹೋಗದಂತೆ ಹತೋಟಿಯಲ್ಲಿಟ್ಟುಳ್ಳುವುದು ಎಂದು ಅರ್ಥ. ಅಪೇಯಪಾನವು ಮನೆಯಲ್ಲಿಯೂ ಆರೋಗ್ಯಕ್ಕೆ ಹಾನಿಕಾರಕ ಹೊರಗಿನ ಅಂಗಡಿಯಲ್ಲೂ ಹಾನಿಕಾರಕವೆ !. ಜಾಗ ಬದಲಾದ ಮಾತ್ರಕ್ಕೆ ಅದರ ದೋಷಗುಣವೇನೂ ಬದಲಾಗುವುದಿಲ್ಲ. ದೋಷವನ್ನು ಗ್ರಹಿಸಿ ಒಟ್ಟಾರೆಯಾಗಿ ಭೋಗಲಾಲಸೆಯನ್ನು...