Part - 65


ಮೂಲ:

ಇದಂ ಶರೀರಂ ಶ್ರುಣು ಸೂಕ್ಷ್ಮ ಸಂಜ್ಞಿತಂ

ಲಿಂಗಂ ತ್ವಪಂಚೀಕೃತಭೂತ_ಸಂಭವಮ್ |

ಸವಾಸನಂ ಕರ್ಮಫಲಾನುಭಾವಕಂ

ಸ್ವಾಜ್ಞಾನತೋsನಾದಿರುಪಾಧಿರಾತ್ಮನಃ ||೯೬||


ಪ್ರತಿಪದಾರ್ಥ:

ಸೂಕ್ಷ್ಮ ಸಂಜ್ಞಿತಂ = ಸೂಕ್ಷ್ಮವೆಂಬ ಹೆಸರುಳ್ಳ , ಅಪಂಚೀಕೃತಭೂತ_ಸಂಭವಂ = ಪಂಚೀಕೃತವಾಗದ ಭೂತಗಳಿಂದ ಹುಟ್ಟಿದ , ಸವಾಸನಂ = ವಾಸನೆಯಿಂದ ಕೂಡಿರುವ , ಕರ್ಮಫಲಾನುಭಾವಕಂ = ಕರ್ಮಫಲಗಳ ಅನುಭವವನ್ನು ಉಂಟುಮಾಡುವ , ಇದಂ ಲಿಂಗಂ ಶರೀರಂತು , ಈ ಲಿಂಗಶರೀರದ ವಿಷಯವನ್ನು , ಶ್ರುಣು = ಕೇಳು, ಸ್ವ_ಜ್ಞಾನತಃ = (ಇದು) ತನ್ನ ಸ್ವರೂಪವನ್ನು ತಿಳಿಯದಿರುವುದರಿಂದ , ಆತ್ಮನಃ = ಆತ್ಮನಿಗೆ , ಅನಾದಿಃ = ಅನಾದಿಯಾದ , ಉಪಾಧೀಃ = ಉಪಾಧಿಯು.


ತಾತ್ಪರ್ಯ:

ಸೂಕ್ಷ್ಮಶರೀರವೆಂಬ ಹೆಸರುಳ್ಳ , ಪಂಚೀಕೃತವಾಗದ ಭೂತಗಳಿಂದ ಹುಟ್ಟಿದ , ವಾಸನೆಯಿಂದ ಕೂಡಿರುವ ಮತ್ತು ಕರ್ಮಫಲಗಳ ಅನುಭವವನ್ನು ಉಂಟುಮಾಡುವ ಈ ಲಿಂಗಶರೀರದ ವಿಷಯವನ್ನು ಕೇಳು ; ಇದು ಸ್ವಸ್ವರೂಪವನ್ನು ತಿಳಿಯದೇ ಇರುವುದರಿಂದ ಆತ್ಮನಿಗೆ ಎಂದೂ ಉಪಾಧಿ ಎನಿಸಿದೆ.


ವಿವರಣೆ:

ಸ್ಥೂಲಶರೀರದ ನಿರೂಪಣೆಯ ಬಳಿಕ ಗುರುವು 'ಇದಂ ‌ಶರೀರಂ..' ಎಂಬ ಶ್ಲೋಕದ ಮೂಲಕ ಸೂಕ್ಷ್ಮ ಶರೀರದ ವಿವರಣೆಗೆ ಮುಂದಾಗುತ್ತಾರೆ. 

ಪಂಚೀಕೃತವಾಗದ ಎಂದರೆ, ಬಿಡಿಯಾಗಿರುವ ಪಂಚಭೂತಗಳಿಂದ ಹುಟ್ಟಿರುವುದು ಎಂದು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಆಕಾಶ, ಪೃಥ್ವಿ, ಬೆಂಕಿ, ಗಾಳಿ, ನೀರು ಇವುಗಳ ಪ್ರತ್ಯೇಕ ಗುಣಗಳಿಂದ ಸೂಕ್ಷ್ಮ ಶರೀರವು ಉತ್ಪನ್ನವಾಗಿದ್ದು ಇದಕ್ಕೆ ಲಿಂಗ ಶರೀರವೆಂದೂ ಹೇಳಲಾಗಿದೆ. ಮೋಹ_ಮತ್ಸರಗಳೆಂಬ ವಾಸನೆಗಳನ್ನು ಹೊಂದಿದ್ದು, ಕರ್ಮಫಲಗಳ ಅನುಭವವೂ ಆಗುವುದರಿಂದ ಲಿಂಗಶರೀರ ಎಂದು ಹೇಳಿದ್ದಾರೆ. ಸ್ವಸ್ವರೂಪವನ್ನು ತಾನಾಗಿಯೇ ತಿಳಿಯದೇ ಇರುವುದು ಎಂದರೆ ಅದು ಅವಿದ್ಯೆ ಅಥವಾ ಅಜ್ಞಾನ. ಹಾಗಾಗಿ ಆತ್ಮನಿಗೆ ಲಿಂಗ ಶರೀರವು ಮೊದಲಿನಿಂದಲೂ ತನ್ನನ್ನು ತೋರಿಕೊಳ್ಳುವ ಸ್ಥಾನವಾಗಿರುತ್ತದೆ. ಶರೀರವು ಆತ್ಮನಿಗೆ ಕೊನೆಮೊದಲಿಲ್ಲದ (ಅನಾದಿ) ಸ್ಥಾನ ಎಂದು ಹೇಳಿದಾಗ, ಮೊದಲಿಲ್ಲವೆಂದರೆ ಕೊನೆಯೂ ಇಲ್ಲವೆಂದೇ ಅರ್ಥ. ಹುಟ್ಟು ಇಲ್ಲವೆಂದಾಗ ಸಾವಿನ ಪ್ರಶ್ನೆಯೇ ಬರುವುದಿಲ್ಲ.


ಶರೀರವನ್ನು ಅನಾತ್ಮವಸ್ತು ಎಂದು ನಿರೂಪಿಸಿದ ಬಳಿಕ ಆತ್ಮನಿಗೆ ಶರೀರವು (ಸ್ವ ಅಜ್ಞಾನತಃ) ಅನಾದಿಯಾದ ಉಪಾಧಿ ಎಂಬ ವಾಕ್ಯವು ಗೊಂದಲಕ್ಕೀಡುಮಾಡುತ್ತದೆ. ಇದಕ್ಕೆ ಸಮಾಧಾನವನ್ನು ಶತಾವಧಾನಿ ಆರ್. ಗಣೇಶರು ಹೇಳುತ್ತಾರೆ. ವ್ಯಷ್ಟಿಯಲ್ಲಿ ಅಂದರೆ ವೈಯಕ್ತಿಕವಾಗಿ ಅವಿದ್ಯೆಯು ಅಂತ್ಯವನ್ನು ಕಂಡರೂ (ಜ್ಞಾನೋದಯದ ಬಳಿಕ) ಸಮಷ್ಟಿಯಲ್ಲಿ ಅಂದರೆ ಇನ್ನೂ ಕೋಟ್ಯಂತರ ಶರೀರಗಳು ಅವಿದ್ಯೆಯಲ್ಲೇ (ಸ್ವಸ್ವರೂಪವನ್ನು ತಿಳಿಯದೇ) ಇರುವುದರಿಂದ ಇದನ್ನು ಅನಂತ ಎಂದು ಹೇಳಬಹುದು. ಹಾಗಾಗಿ ಆತ್ಮನಿಗೆ ಎಂದೂ ಶರೀರವೇ ಉಪಾಧಿ ಕಲ್ಪಿತವಾದುದು ಎಂದು ಹೇಳುತ್ತಾರೆ.


ಆತ್ಮನಿಗೆ ಅನಾದಿಯಾದ ಉಪಾಧಿ ಈ ಲಿಂಗ ಶರೀರ. ಸೂಕ್ಷ್ಮಭೂತಗಳಿಂದ ಹುಟ್ಟಿದರೂ ವಿದೇಹ ಮುಕ್ತಿಯಾಗುವವರೆಗೂ ಇರುವುದರಿಂದ ಸ್ಥೂಲಶರೀರದಂತೆ ಇದಕ್ಕೆ ಹುಟ್ಟು ಎಂಬುದು ಇರುವುದಿಲ್ಲ ಹಾಗಾಗಿ ಅನಾದಿ ಎಂದು ಸದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳು ವ್ಯಾಖ್ಯಾನ ಮಾಡಿರುತ್ತಾರೆ.

............
ಟಿಪ್ಪಣಿ:

ಓದುಗರು ಸೂಕ್ಷ್ಮಶರೀರ ಮತ್ತು ಸ್ಥೂಲಶರೀರದ ವ್ಯತ್ಯಾಸವನ್ನು ಗಮನದಲ್ಲಿ ಇರಿಸಿಕೊಂಡು ಅರ್ಥಮಾಡಿಕೊಂಡರೆ ಗೊಂದಲವಾಗುವುದಿಲ್ಲ. ಹಿಂದಿನ ಶ್ಲೋಕಗಳಲ್ಲಿ ಸೂಕ್ಷ್ಮವು ಸ್ಥೂಲವಾಗುವುದನ್ನು ವಿವರಿಸಲಾಗಿದೆ.

................



ಕಾಮೆಂಟ್‌ಗಳು