ವಿವೇಕ ಚೂಡಾಮಣಿ ಭಾಗ -೯
ಗ್ರಂಥದ ಮುಂದುವರಿದ ಭಾಗ अतो विचारः कर्तव्यो जिज्ञासोरात्मवस्तुनः | समासाध्य दयासिन्धुं गुरुं ब्रह्मविदुत्तमम् ||१५ || ಅತೋ ವಿಚಾರಃ ಕರ್ತವ್ಯೋ ಜಿಜ್ಞಾಸೋರಾತ್ಮವಸ್ತುನಃ | (=ಆತ್ಮವಿಚಾರ ಕರ್ತವ್ಯದ ಜಿಜ್ಞಾಸೆಗಾಗಿ ) ಸಮಾಸಾಧ್ಯ ದಯಾಸಿಂಧುಂ ಗುರುಂ ಬ್ರಹ್ಮವಿದುತ್ತಮಮ್ ||೧೫|| (= ಕರುಣಾಳುವೂ, ಬ್ರಹ್ಮಜ್ಞಾನಿಯೂ ಆಗಿರುವ ಗುರುವನ್ನು ಹೊಂದವುದು) ಆತ್ಮವಿದ್ಯೆಯ ಸಿದ್ಧಿಗಾಗಿ ಗುರುವಿನ ಬಳಿಗೆ ತೆರಳಬೇಕು ಎಂದು ಈ ಹಿಂದಿನ ಶ್ಲೋಕದಲ್ಲಿ ತಿಳಿದೆವು. ಇಂದಿನ ಕಾಲದಲ್ಲಿ ಗುರುಗಳೇನೋ ಸಾಕಷ್ಟು ಇರುವರು. ಗುರುಗಳ ಶಿಷ್ಯರೂ ಅಸಂಖ್ಯರಿದ್ದಾರೆ !. ಎಂತಹವರು ಗುರು ಎನ್ನಿಸಿಕೊಳ್ಳಲು ಅರ್ಹರಾಗುತ್ತಾರೆ ? ಎಂತಹ ಗುರುವಿನ ಶಿಷ್ಯರಾಗಿ ಆತ್ಮಾಭ್ಯಾಸವನ್ನು ಮೊದಲು ಮಾಡಬೇಕು? ಎಂಬ ’ಗೊಂದಲ’ಕ್ಕೆ ಶ್ರೀ ಶಂಕರರು ಮೇಲಿನ ಶ್ಲೋಕದ ಜೊತೆಗೆ ಮುಂದಿನ ಮೂರು ಶ್ಲೋಕಗಳ ಮೂಲಕ ಪರಿಹಾರವನ್ನು ಒದಗಿಸುತ್ತಾರೆ. ಆಸಕ್ತನು ವಿಚಾರಾಧೀನನಾಗಿ ಆತ್ಮವಸ್ತುವಿನ ಜಿಜ್ಞಾಸೆಯೇ ತನ್ನ ಕರ್ತವ್ಯವೆಂದು ತಿಳಿದು ಯೋಗ್ಯ ಗುರುವನ್ನು ಹೊಂದಬೇಕು ಎಂದು ತಿಳಿಸುತ್ತಾರೆ. ’ದಯಾಸಿಂಧುಂ’ ಎಂದು ಹೇಳುವ ಮೂಲಕ ಅಧಿಕಾರಿಯು ಕರುಣೆಯ ಸಾಗರದಂತಿರಬೇಕು ಎಂದು ಸೂಚಿಸುತ್ತಾರೆ. ಜಾಣರಿಗೆ ಕಲಿಸುವುದು ಕಷ್ಟವೇನಲ್ಲ, ಆದರೆ ದಡ್ಡರಿಗೆ ತಾಳ್ಮೆಯಿಂದ ಮತ್ತು ಕರುಣೆಯಿಂದ ಹೇಳಿಕೊಡುವ ಅಧಿಕಾರಿಯು ಅಗತ್ಯ. ಒಂದು ಹನಿ ನೀರಿಗೂ ಸಮುದ್ರವು ಆಶ್ರಯವನ...