ವಿವೇಕ ಚೂಡಾಮಣಿ -ಭಾಗ ೬
ಗ್ರಂಥದ ಮುಂದುವರಿದ ಭಾಗ
अतो विमुक्यै प्रयतेत विद्वान् सन्यस्त बाह्यार्थ सुखस्पृहसन् |
संतं महातं समुपेत्य देशिकं तेनोपदिश्टार्थ समाहितात्मा ||८||
ಅತೋ ವಿಮುಕ್ತ್ಯೈ ಪ್ರಯತೇತ ವಿದ್ವಾನ್ ಸನ್ಯಸ್ತ ಬಾಹ್ಯಾರ್ಥ ಸುಖಸ್ಪೃಹಸನ್ |
ಸಂತಂ ಮಹಾತಂ ಸಮುಪೇತ್ಯ ದೇಶಿಕಂ ತೇನೋಪದಿಷ್ಟಾರ್ಥ ಸಮಾಹಿತಾತ್ಮಾ ||೮||
ದ್ರವ್ಯದಿಂದ, ವಿತ್ತದಿಂದ ಫಲದ ಮೇಲೆ ಬಯಕೆಗಳು ಉಂಟಾಗಿ ಜ್ಞಾನವರ್ಧನೆಗೆ ಅಡಚಣೆಯಾಗುವುದರಿಂದ ತಿಳುವಳಿಕೆಯುಳ್ಳವರು ಜ್ಞಾನಮಾರ್ಗದಿಂದಲೇ ಮುಮುಕ್ಷುತ್ವಕ್ಕೆ ಯತ್ನಿಸಬೇಕು ಎಂದು ಶ್ರೀ ಶಂಕರರು ಹೇಳುತ್ತಾರೆ.
ಮೇಲಿನ ಶ್ಲೋಕದ ಅರ್ಥವನ್ನು ಗಮನಿಸೋಣ.
ಅತೋ ವಿಮುಕ್ತ್ಯೈ ಪ್ರಯತೇತ ವಿದ್ವಾನ್ (= ವಿವೇಕಿಯು ಮುಕ್ತಿಗಾಗಿ ಯತ್ನಿಸಬೇಕು)
ಸನ್ಯಸ್ತ ಬಾಹ್ಯಾರ್ಥ ಸುಖಸ್ಪೃಹಸನ್ (= ಬಾಹ್ಯ ಸುಖಗಳ ಆಸೆಯನ್ನು ಮೊದಲು ಬಿಡಬೇಕು)
ಸಂತಂ ಮಹಾತಂ ಸಮುಪೇತ್ಯ ದೇಶಿಕಮ್ (=ಮಹಾತ್ಮರಾದ ಗುರುಗಳ ಸಂಗವನ್ನು ಹೊಂದಬೇಕು)
ತೇನೋಪದಿಷ್ಟಾರ್ಥ ಸಮಾಹಿತಾತ್ಮಾ (=ತನ್ನ ಇಷ್ಟಾರ್ಥ ಸಿದ್ಧಿಗಾಗಿ ಯತ್ನಿಸಬೇಕು)
ಕರ್ಮದಿಂದ , ಸಂಪತ್ತಿನಿಂದ ಮುಕ್ತಿಯು ದೊರಕುವುದಿಲ್ಲವಾದ್ದರಿಂದ ತಿಳುವಳಿಕೆಯುಳ್ಳವನು (ವಿದ್ವಾನ್) ಮಹಾತ್ಮರಾದ ಗುರುಗಳ ಸಂಗವನ್ನು ಹೊಂದಿ ಅವರ ಉಪದೇಶ ತತ್ತ್ವಗಳನ್ನು ಅರಿತು ಹೊರಗಿನ ಕ್ಷಣಿಕವಾದ ವಿಷಯಗಳ ಬಗೆಗೆ ಆಸಕ್ತಿಯನ್ನು ಬಿಟ್ಟು ಆತ್ಮಸಾಕ್ಷಾತ್ಕಾರಕ್ಕಾಗಿ ಯತ್ನಿಸಬೇಕು ಎಂಬುದು ಮೇಲಿನ ಶ್ಲೋಕದ ತಿರುಳು.
’ವಿದ್ವಾನ್’ ಎಂದರೆ ಆತ್ಮ ಮತ್ತು ಅನಾತ್ಮಗಳ (ಶಾಶ್ವತ ಮತ್ತು ಅಶಾಶ್ವತ) ವಿವೇಚನೆಯುಳ್ಳವನು ಎಂದು ತಿಳಿಯಬೇಕಾಗುತ್ತದೆ. ಹಾಗಾದರೆ ವಿದ್ವಾಂಸರಲ್ಲದವರಿಗೆ ಮುಕ್ತಿಯಿಲ್ಲವೇ ? ಎಂದರೆ, ಇದೆ !. ’ವಿದ್ವಾನ್’ ಎಂದು ಅನ್ನಿಸಿಕೊಳ್ಳುವವರೆಗೆ ಆತನು ಸಾಧನೆ ಮಾಡಿಕೊಂಡು ಬಂದರೆ ಮುಂದಿನ ಹಾದಿ ಸುಗಮವಾಗುತ್ತದೆ. ಏಳನೇ ತರಗತಿ ಮುಗಿಸಿದ್ದರೆ ಎಂಟಕ್ಕೆ ಸೇರಬಹುದು, ಇಲ್ಲವಾದರೆ ಕಷ್ಟ.
’ಬಾಹ್ಯಾರ್ಥ ಆಸೆಯನ್ನು ಬಿಡು’ ಎಂದರೆ , ಹೊರಗಿನ ವಿಷಯಗಳು (ಪ್ರಾಪಂಚಿಕ ಸುಖಗಳು) ಕ್ಷಣಿಕವಾದುದರಿಂದ ಅವುಗಳಿಂದ ಯಾವತ್ತೂ ನೆಮ್ಮದಿಯಿಲ್ಲ ಅಂತಹ ವಿಷಯಗಳ ಬಗೆಗೆ ಅತಿಯಾದ ಆಸಕ್ತಿಯು ಬೇಡ ’ ಎಂಬ ಅರ್ಥದಲ್ಲಿ ತಿಳಿದುಕೊಳ್ಳಬೇಕಾಗುತ್ತದೆ. ಲಕ್ಷ ರೂಪಾಯಿ ದುಡಿದು ತಂದರೆ ಬದುಕಿನ ಕೊನೆಯವರೆವಿಗೂ ಸಾಲುತ್ತದೆಯೇ ? . ಜಿಪುಣತನ ತೋರಿದರೂ ಒಂದು ವರುಷದಲ್ಲಿ ಮುಗಿಯುತ್ತದೆ. ಇಂತಹ ಅಶಾಶ್ವತ ಸಂಗತಿಗಳಿಗೆ ಮನಗೊಡದೆ
ಅಂತಹ ಆಸೆಗಳನ್ನು(ದುರಾಸೆ) ಬಿಟ್ಟು ವಿವೇಕಿಯಾದ ಗುರುವಿನ (’ದೇಶಿಕ’ ಎಂದರೆ ಇಲ್ಲಿ ಗುರು ಎಂದು ತಿಳಿಯುವುದು ಉತ್ತಮ) ಸಹವಾಸ ಮಾಡಿ ತನ್ನ ಇಷ್ಟಾರ್ಥವನ್ನು (ಆತ್ಮ ಸಾಕ್ಷಾತ್ಕಾರ) ಈಡೇರಿಸಿಕೊಳ್ಳುವುದು ಉತ್ತಮ ಎಂದು ಶ್ರೀ ಶಂಕರರು ತಿಳಿಸುತ್ತಾರೆ.
--------------------------------------------------
ಮುಂದಿನ ಶ್ಲೋಕ
उद्धरेदात्मनात्मानं मग्नं संसारवारिधौ ।
योगारुढत्वमासाद्य सम्यग्दर्शननिष्ठया ॥९॥
ಉದ್ಧರೇದಾತ್ಮನಾತ್ಮಾನಂ ಮಗ್ನಂ ಸಂಸಾರ ವಾರಿಧೌ |
(=ಸಂಸಾರವೆಂಬ ಸಾಗರದಲ್ಲಿ ಮುಳುಗಿರುವವನು(ಮಗ್ನಂ) ತನ್ನನ್ನು ತಾನು ಎಚ್ಚರಗೊಳಿಸಿಕೊಳ್ಳಬೇಕು)
ಯೋಗಾರೂಢತ್ವಮಾಸಾದ್ಯ ಸಮ್ಯಗ್ದರ್ಶನ ನಿಷ್ಠಯಾ ||೯||
(=ಯೋಗನಿಷ್ಠೆಯಿಂದ ಆತ್ಮಜ್ಞಾನ(ಸಮ್ಯಗ್ದರ್ಶನ)ವನ್ನು ಪಡೆಯುವುದು)
ಮೇಲಿನ ಶ್ಲೋಕದ ಮೊದಲೆನೆಯ ಸಾಲು ’ಗೀತೆ’ಯ ವಾಕ್ಯವಾಗಿ ಬಹು ಪ್ರಸಿದ್ಧಿಯಾಗಿದೆ.
"ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ |
ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ || " ಎಂದು.
(ತನ್ನನ್ನು ತನ್ನಿಂದಲೇ ಉದ್ಧಾರಮಾಡಿಕೊಳ್ಳಬೇಕು, ತನ್ನನ್ನು ಕುಗ್ಗಿಸಿಕೊಳ್ಳಬಾರದು. ಏಕೆಂದರೆ ತಾನೇ ತನ್ನ ಬಂಧು ತಾನೇ ತನ್ನ ಶತ್ರು.)
ಸಂಸಾರಸಾಗರದಲ್ಲಿ ಮುಳುಗಿರುವವನಿಗೆ ನೆಮ್ಮದಿ ಎನ್ನುವುದು ಮರೀಚಿಕೆಯಾಗಬಹುದು ಅಥವಾ ಸಂಸಾರದಿಂದಲೇ ಯಾವತ್ತೂ ನೆಮ್ಮದಿ ಎನ್ನುವುದು ಸಾಧ್ಯವಾಗದೇ ಇರಬಹುದು. ಆದುದರಿಂದ ಕರ್ಮಬಂಧನಗಳಿಂದ ಬಿಡಿಸಿಕೊಳ್ಳಲು ಮೊದಲು ತನ್ನನ್ನು ತಾನು ಉದ್ಧಾರಮಾಡಿಕೊಳ್ಳಬೇಕು. ತನ್ನ ಪ್ರಜ್ಞೆಯನ್ನು ಎಚ್ಚರಗೊಳಿಸಿಕೊಳ್ಳಬೇಕು. ವೇದಾಂತಯೋಗದಲ್ಲಿ ನಿಷ್ಠೆಯಿರಿಸಿ ಸಮ್ಯಕ್ ದರ್ಶನ(ಆತ್ಮಜ್ಞಾನ)ವನ್ನು ಪಡೆದುಕೊಳ್ಳಬೇಕು ಎಂದು ಹೇಳುತ್ತಾರೆ.
ಸ್ವಾನುಭವಗಳಿಂದ ಪಾಠವನ್ನು ಕಲಿತು ಯಾರು ತನ್ನನ್ನು ತಾನು(ಅಂತರಂಗವನ್ನು) ಅರಿತುಕೊಳ್ಳುತ್ತಾನೋ ಅವನು ಜಾಗೃತವ್ಯಕ್ತಿ ಎನಿಸಿಕೊಳ್ಳುತ್ತಾನೆ. ಮನುಷ್ಯನ ಎಲ್ಲಾ ಏಳು-ಬೀಳುಗಳಿಗೆ ಮೂಲವಾಗಿ ಮನಸ್ಸೇ ಕಾರಣ. ಮನಸ್ಸಿನ ಹೊಯ್ದಾಟಗಳಿಗೆ ಕಡಿವಾಣ ಹಾಕಿ, ಇಂದ್ರಿಯ ವಿಷಯಗಳಲ್ಲಿ ಹತೋಟಿ ಸಾಧಿಸಿ ಸದಾ ಸಾಂಸಾರಿಕ ವಿಷಯಗಳಲ್ಲಿ ಮಗ್ನರಾಗಿರುವುದನ್ನು ಬಿಟ್ಟು ಎಚ್ಚರಗೊಳ್ಳಬೇಕು. ಆತ್ಮಶ್ರದ್ಧೆಯ ವಿಷಯದಲ್ಲಿ ವಿವೇಕಾನಂದರು ಮಿಂಚಿನಂತಹ ಮಾತೊಂದನ್ನು ಹೇಳುತ್ತಾರೆ . " ಯಾರಿಗೆ ದೇವರಲ್ಲಿ ನಂಬಿಕೆಯಿಲ್ಲವೋ ಅವನನ್ನು ನಾಸ್ತಿಕ ಎಂದು ಹಿಂದಿನ ಧರ್ಮಗಳು ಹೇಳುತ್ತಿದ್ದವು, ಆದರೆ ನಾನು ಹೇಳುತ್ತೇನೆ ಯಾರಿಗೆ ಆತ್ಮಶ್ರದ್ಧೆ, ಆತ್ಮವಿಶ್ವಾಸವಿಲ್ಲವೋ ಅವನೇ ನಾಸ್ತಿಕ " ಎಂದು. ವೈದ್ಯರು ಕಾಯಿಲೆಗೆ ಮದ್ದು ಕೊಟ್ಟರೆ ಅದನ್ನು ರೋಗಿಯು ತೆಗೆದುಕೊಳ್ಳದೆ ವೈದ್ಯರೇ ತೆಗೆದುಕೊಂಡರೆ ರೋಗಿಯ ಕಾಯಿಲೆ ಗುಣವಾಗುವುದಿಲ್ಲ. ನಾವೇ ಸಂಸಾರದ ಗೋಜಿನಲ್ಲಿ ( ಸಂಸಾರ ಎಂದಾಕ್ಷಣ ಕೇವಲ ಹೆಂಡತಿ-ಮಕ್ಕಳು ಎಂದು ತಿಳಿಯುವ ಅಗತ್ಯವಿಲ್ಲ) ಸಿಲುಕಿಕೊಂಡಿರುವುದರಿಂದ ಬಿಡಿಸಿಕೊಳ್ಳುವ ಹೊಣೆಯೂ ನಮ್ಮದೇ ಆಗಿದೆ.
’ಯೋಗ’ ಎಂದರೆ ಒಂದುಗೂಡಿಸುವುದು ಎಂದು ಅರ್ಥ. ಜೀವಾತ್ಮನನ್ನು ಪರಮಾತ್ಮನೊಂದಿಗೆ ಒಂದುಗೂಡಿಸುವುದಕ್ಕೆ ಯೋಗ ಎನ್ನುತ್ತೇವೆ. ’ಯೋಗಾರೂಢ ’ ಎಂಬಲ್ಲಿ ಶ್ರೀ ಶಂಕರರು ಪಾತಂಜಲ ಯೋಗವನ್ನಾಗಲೀ ಅಷ್ಟಾಂಗ ಯೋಗವನ್ನಾಗಲೀ ಹೆಸರಿಸದೆ ಕೇವಲ ವೇದಾಂತದ ಶ್ರವಣ-ಮನನ-ಸ್ವಾನುಭವದಿಂದ ಹುಟ್ಟುವ ಜ್ಞಾನಯೋಗವನ್ನು ಪ್ರತಿಪಾದಿಸುತ್ತಾರೆ ಎಂಬುದು ಸದ್ಗುರು ಚಂದ್ರಶೇಖರ ಭಾರತಿಗಳ ಒಕ್ಕಣೆ.
ಹಾಗಾದರೆ ಪಾತಂಜಲ, ಅಷ್ಟಾಂಗ ಮುಂತಾದ ಯೋಗಗಳೆಲ್ಲಾ ಬಳಕೆಗೆ ಬಾರದ್ದೇ ? ಎಂಬ ಪ್ರಶ್ನೆ ಬರುತ್ತದೆ. ’ಅಷ್ಟಾಂಗ, ಪಾತಂಜಲ ಮುಂತಾದ ಯೋಗಗಳನ್ನೆಲ್ಲಾ ಹೇಗಾದರೂ ( ಒಂದಷ್ಟು ಜನ್ಮಗಳಲ್ಲಿ) ಮುಗಿಸಿಕೊಂಡು ಬಂದಿದ್ದರೆ ಮುಂದೆ ವೇದಾಂತ ದರ್ಶನದಲ್ಲಿ ಆತ್ಮಜ್ಞಾನ ಸಿದ್ಧಿಸುತ್ತದೆ’ ಎನ್ನುವ ಅರ್ಥದಲ್ಲಿ ಹೇಳುತ್ತಾರೆ. ಕರ್ಮದಲ್ಲಿ ಪರಿಪಾಕಗೊಂಡಿರುವುದು ತಿಳಿಯುವುದಾದರೂ ಹೇಗೆ ? ಎಂದರೆ, ಅದು ತನ್ನಿಂತಾನೇ ತಿಳಿಯುವಂತಹುದು ಮತ್ತು ಸದ್ಗುರುಗಳಾದವರು ಅಂತಹವರನ್ನು ಗುರುತಿಸುತ್ತಾರೆ ಎಂದು ಹೇಳಬಹುದು. ಹಣ್ಣು ಮಾಗಿದ ನಂತರ ತನ್ನಿಂತಾನೇ ಕೆಳಗೆ ಬೀಳುತ್ತದೆ, ಹಾಗೆಯೇ ಇದೂ ಸಹ ಎನ್ನಬಹುದು. ’ಆರೂಢ’ ಎಂದರೆ ಬಲವಾಗಿ ನೆಲೆಸಿರುವವನು ಎಂದು ಅರ್ಥ. ವೇದಾಂತಯೋಗದಲ್ಲಿ ಅಚಲವಾದ ನಿಷ್ಠೆಯಿರಿಸಿಕೊಳ್ಳುವವನು ಯೋಗಾರೂಢನಾಗುತ್ತಾನೆ. ಅದರಿಂದಲೇ ಆತ್ಮಜ್ಞಾನವನ್ನು ಪಡೆಯುವುದು ತನ್ನನ್ನು ತಾನು ಉದ್ಧರಿಸಿಕೊಂಡಂತೆ ಎಂದು ಹೇಳುತ್ತಾರೆ.
----------------------------------------------
ಮುಂದಿನ ಶ್ಲೋಕ
सन्यस्य सर्वकर्माणि भवबंधविमुक्तये ।
यत्यातां पंडितैर्धिरैः आत्माभ्यास उपस्थितैः ॥१०॥
ಸನ್ಯಸ್ಯ ಸರ್ವಕರ್ಮಾಣಿ ಭವಬಂಧ ವಿಮುಕ್ತಯೇ |
(= ಎಲ್ಲಾ ಕರ್ಮಗಳನ್ನೂ ತ್ಯಜಿಸಿ ಮುಕ್ತಿಗಾಗಿ ಯತ್ನಿಸುವುದು)
ಯತ್ಯತಾಂ ಪಂಡಿತೈರ್ಧೀರೈಃ ಆತ್ಮಾಭ್ಯಾಸ ಉಪಸ್ಥಿತೈಃ ||೧೦||
(=ಧೀರರಾದ ವಿದ್ವಾಂಸರು ಆತ್ಮಾಭ್ಯಾಸದಲ್ಲಿ ನಿರತರಾಗುವುದು)
ಎಲ್ಲಾ ಕರ್ಮಗಳನ್ನೂ ಬಿಟ್ಟುಬಿಡಬೇಕು ಎಂದರೆ , ನಾವೆಲ್ಲಾ ಅವುಗಳನ್ನು ಕಟ್ಟಿಕೊಂಡಿದ್ದೇವೆ ಎಂದೇ ಅರ್ಥ. ಕಟ್ಟಿಕೊಂಡಿರುವವರು ಅದನ್ನು ಅನುಸರಿಸಿ ಅದರಿಂದಲೇ ಜ್ಞಾನವನ್ನು ಪಡೆಯಬೇಕಾಗುತ್ತದೆ. ಪಂಡಿತರು ಅಥವಾ ವಿದ್ವಾಂಸರು ಅವೆಲ್ಲದರಿಂದಲೂ ಹೊರತಾಗಿ ಕೇವಲ ಆತ್ಮತತ್ತ್ವಾನ್ವೇಷಣೆಯಲ್ಲಿ ನಿರತರಾಗಬೇಕಾಗುತ್ತದೆ. ಇಂತಹ ವಿವೇಕಿಗಳಿಗೆ ಮೂಲತಃ ಯಾವ ಕರ್ಮಗಳೂ ಒದಗಿಬಂದಿರುವುದಿಲ್ಲ, ಅಂತಹ ವಿವೇಕಿಗಳು ಜಗಕ್ಕೊಬ್ಬರು , ಯುಗಕ್ಕೊಬ್ಬರು ಎನ್ನಬಹುದು. (ಎಲ್ಲೋ ಒಬ್ಬ ಬುದ್ಧ, ಶಂಕರರಂತಹವರು). ಯಾವ ಕರ್ಮಗಳನ್ನೂ ಅನುಸರಿಸದೆ ಬ್ರಹ್ಮಜ್ಞಾನಿಗಳಾದವರಿದ್ದಾರೆ, ಅನುಸರಿಸಿಯೂ ಆದವರಿದ್ದಾರೆ. ಕರ್ಮವು ಆಚರಿಸುವಂತಹುದು ನಂಬಿಕೆಯ ಮೇಲೆ ನಿಂತಿರುವಂತಹುದು ಆದರೆ ಜ್ಞಾನವು ಹುಡುಕುವುದು ಅಥವಾ ಅನ್ವೇಷಣೆ ಮಾಡುವಂತಹುದು. ಇರುವ ಧರ್ಮಶಾಸ್ತ್ರಗಳಲ್ಲೇ ಅನ್ವೇಷಣೆ ಮಾಡುವಂತಹುದೇ ಹೊರತು ಹೊಸದಾಗಿ ಏನನ್ನೂ ಹುಟ್ಟಿಸುವುದಲ್ಲ. ಕರ್ಮವು comprehension ಆದರೆ ಜ್ಞಾನವು discover ಮಾಡುವಂತಹುದು.
ಸೇಡಿಯಾಪು ಕೃಷ್ಣಭಟ್ಟರೇನೂ(ಪಾಣಿನಿಯೂ ಅಷ್ಟೆ) ಇಲ್ಲದ ಭಾಷೆಗೆ ಸಲ್ಲದ ವ್ಯಾಕರಣವನ್ನು ಬರೆಯಲಿಲ್ಲ. ಇರುವ ಭಾಷೆಯ ನಿಯಮಗಳನ್ನು ಅಧ್ಯಯನ ಮಾಡಿ ಅದಕ್ಕೊಂದು ವ್ಯಾಕರಣ ರೂಪವನ್ನು ಕೊಟ್ಟದ್ದು. ಆಲ್ಬರ್ಟ್ ಐನ್‍ಸ್ಟಿನ್ ಕೂಡಾ ಪ್ರಕೃತಿಯಲ್ಲಿನ ನಿಯಮಗಳನ್ನು ಗಮನಿಸಿ, ಅಧ್ಯಯನ ಮಾಡಿ E=mc square ಎಂಬ ಸೂತ್ರವನ್ನು ಕೊಟ್ಟಿದ್ದೇ ಹೊರತು ಹೊಸತೇನನ್ನೂ ಹುಟ್ಟಿಸಲಿಲ್ಲ.
ಹೀಗೆ ಧೀರರಾದವರು ಸರ್ವಕರ್ಮಗಳನ್ನೂ ತ್ಯಜಿಸಿ ಮುಮುಕ್ಷುತ್ವಕ್ಕಾಗಿ ಯತ್ನಿಸಬೇಕು ಎಂದು ಶ್ರೀ ಶಂಕರರು ಹೇಳುತ್ತಾರೆ.
ಮುಂದಿನ ಕಂತಿನಲ್ಲಿ ಮತ್ತಷ್ಟು ತಿಳಿಯೋಣ.
--------------------------------
ವಂದನೆಗಳೊಂದಿಗೆ..
ಸಂಸ್ಕೃತ ಶ್ಲೋಕಗಳಿಗೆ ಕೇವಲ ಅರ್ಥವನ್ನು ಮಾತ್ರ ಬರೆಯದೆ ಅದರ ತಿರುಳನ್ನೂ ತೆಗೆದಿಟ್ಟು ಉತ್ತಮ ಕೆಲಸ ಮಾಡುತ್ತಿದ್ದೀರಿ. ನನ್ನಲ್ಲಿ ಕೆಲವೊಂದು ಸಂಶಯಗಳಿವೆ, ಬಹುಶಃ ಅವುಗಳಿಗೆ ಮುಂದಿನ ಒಂದೆರೆಡು ಸೂಕ್ತಿಗಳಲ್ಲಿ ಉತ್ತರ ದೊರೆಯಬಹುದು, ಇಲ್ಲವಾದಲ್ಲಿ ಇಲ್ಲೇ ಕೇಳುತ್ತೇನೆ. ನಿಮ್ಮ ವಿವರಣೆಗಳು ತಿಳಿಯಾಗಿದೆ. ಸಂತೋಷವಾಗುತ್ತದೆ. ಇನ್ನುಳಿದ ೫೭೧ ಸೂಕ್ತಿಗಳಲ್ಲೂ ಇದೇ ಉತ್ಸಾಹ ಕಾಣಿಸಲಿ ಎಂದು ಬಯಸುತ್ತೇನೆ. ಧನ್ಯವಾದಗಳು.
ಪ್ರತ್ಯುತ್ತರಅಳಿಸಿ-Someshwara
Benagaluru.
ಬರಹ ಚೆನ್ನಾಗಿ ಬರುತ್ತಿದೆ, ಎಂದಿನಂತೆ. ಮೂಲಶ್ಲೋಕಗಳ ಕನ್ನಡ ಭಾವಾನುವಾದ ಯಾಕೋ ನಿಂತಂತಿದೆ. ಮತ್ತೆ ಶುರುಮಾಡಿದರೆ ಚೆನ್ನ.
ಪ್ರತ್ಯುತ್ತರಅಳಿಸಿ"ಪಾತಂಜಲ, ಅಷ್ಟಾಂಗ ಮುಂತಾದ ಯೋಗಗಳೆಲ್ಲಾ ಬಳಕೆಗೆ ಬಾರದ್ದೇ ? ಎಂಬ ಪ್ರಶ್ನೆ ಬರುತ್ತದೆ. ’ಅಷ್ಟಾಂಗ, ಪಾತಂಜಲ ಮುಂತಾದ ಯೋಗಗಳನ್ನೆಲ್ಲಾ ಹೇಗಾದರೂ ( ಒಂದಷ್ಟು ಜನ್ಮಗಳಲ್ಲಿ) ಮುಗಿಸಿಕೊಂಡು ಬಂದಿದ್ದರೆ ಮುಂದೆ ವೇದಾಂತ ದರ್ಶನದಲ್ಲಿ ಆತ್ಮಜ್ಞಾನ ಸಿದ್ಧಿಸುತ್ತದೆ’ ಎನ್ನುವ ಅರ್ಥದಲ್ಲಿ ಹೇಳುತ್ತಾರೆ" - ತುಸು ಗೊಂದಲವಿದೆ. ಶಂಕರರು ಪಾತಂಜಲ ಯೋಗವನ್ನು ಸರ್ವಥಾ ಸಮರ್ಥಿಸುವುದಿಲ್ಲವೆಂದು ನಾನು ತಿಳಿದ ಮಾತು (ಆದರೆ ನನಗೆ ಸರಿಯಾಗಿ ತಿಳಿದಿಲ್ಲದಿರಬಹುದು).
" ’ಯೋಗಾರೂಢ ’ ಎಂಬಲ್ಲಿ ಶ್ರೀ ಶಂಕರರು ಪಾತಂಜಲ ಯೋಗವನ್ನಾಗಲೀ ಅಷ್ಟಾಂಗ ಯೋಗವನ್ನಾಗಲೀ ಹೆಸರಿಸದೆ ಕೇವಲ ವೇದಾಂತದ ಶ್ರವಣ-ಮನನ-ಸ್ವಾನುಭವದಿಂದ ಹುಟ್ಟುವ ಜ್ಞಾನಯೋಗವನ್ನು ಪ್ರತಿಪಾದಿಸುತ್ತಾರೆ" ಎಂಬ ಚಂದ್ರಶೇಖರಭಾರತಿಗಳ ಒಕ್ಕಣೆ ಬಹುಶಃ ಇದನ್ನೇ ಸೂಚಿಸಬಹುದು. ನೀವೊಮ್ಮೆ ನೋಡಿದರೆ ಒಳ್ಳೆಯದು; ನನ್ನ ಗೊಂದಲವೂ ಪರಿಹಾರವಾದೀತು.
ಸೋಮೇಶ್ವರರೇ,
ಪ್ರತ್ಯುತ್ತರಅಳಿಸಿನಿಮ್ಮ ಸಂಶಯಗಳಿಗೆ ಮುಂದಿನ ಕಂತುಗಳಲ್ಲಿ ಉತ್ತರ ಸಿಗದಿದ್ದರೆ ದಯವಿಟ್ಟು ನಿಮ್ಮ ಪ್ರಶ್ನೆಯನ್ನು ಬರೆಯಿರಿ. ಚರ್ಚಿಸಿ ಉತ್ತರ ಪಡೆಯಬಹುದು.
ಧನ್ಯವಾದಗಳು ನಿಮಗೆ.
ಮಂಜುನಾಥರೆ,
ಪ್ರತ್ಯುತ್ತರಅಳಿಸಿಬ್ರಹ್ಮಸೂತ್ರಗಳ ಭಾಷ್ಯದಲ್ಲಿಯೂ ಸಹ ಪಾತಂಜಲ ಯೋಗದ ಸಮರ್ಥನೆ ಕಂಡುಬರುವುದಿಲ್ಲ. ಚಂದ್ರಶೇಖರ ಭಾರತಿಗಳ ವಿವರಣೆಯೂ ಇದೇ ನಿಟ್ಟಿನಲ್ಲಿದೆ. ಶಂರರದ್ದೇನಿದ್ದರೂ ಜ್ಞಾನಮಾರ್ಗವೆಂಬುದು ಸುಸ್ಪಷ್ಟ. ಸಮರ್ಥನೆಯಂತೂ ಇಲ್ಲ, ಸಂಪೂರ್ಣ ನಿರಾಕರಣೆಯೂ ಇಲ್ಲ ಎಂದು ತಿಳಿಯಬೇಕಾಗುತ್ತದೆ. ಏಕೆಂದರೆ ಮುಂದಿನ ಶ್ಲೋಕದಲ್ಲಿ (ಬರಲಿದೆ) ’ಚಿತ್ತಶುದ್ಧಿಗಾಗಿ ಕರ್ಮ’ ಎಂದು ಹೇಳುತ್ತಾರೆ. ಅನುಸರಿಸುತ್ತಿರುವವರಿಗೆ ಆ ಮಾರ್ಗದಲ್ಲೇ ಮುಂದುವರಿದು ಮುಂದಿನ ಹಂತಕ್ಕೆ ಬರಬೇಕಾಗಿರುವುದು ಅನಿವಾರ್ಯವೇ ಅಲ್ಲವೆ ?. ನೀವು ಹೇಳಿದಂತೆ ಸಮರ್ಥನೆಯಂತೂ ಇಲ್ಲ, ಮುಕ್ತಿಗೆ ಅದರಿಂದ ಪ್ರಧಾನ ಪ್ರಯೋಜನವಿಲ್ಲ ಎಂಬ ಅರ್ಥದಲ್ಲಿ ತಿಳಿಯಬೇಕಾಗುತ್ತದೆ.
ಶಂಕರರು ಮೀಮಾಂಸಕರ ಕರ್ಮಮುಕ್ತಿವಾದವನ್ನು ಸಂಪೂರ್ಣ ನಿರಾಕರಿಸಿದವರು. ಎಲ್ಲರೂ ಕರ್ಮಗಳನ್ನು ಆಚರಿಸಿದರಾಯಿತಲ್ಲಾ (ಎಲ್ಲರೂ ಜನಿವಾರ ಹಾಕ್ಕೋಳೋಣ)ಏನಂತೆ ? , ಎಂದರೆ ಕರ್ಮಕ್ಕೆ ವೈವಿಧ್ಯತೆಯಿದೆಯಲ್ಲಾ, ನಾನಾತ್ವ ಉಂಟಲ್ಲಾ !. ಒಬ್ಬರು ಜನಿವಾರ ಅಂತಾರೆ, ಶಿವದಾರ ಅಂತಾರೆ, ಶಿಲುಬೆಯೇ ಸರ್ವಕರ್ಮನಾಶನ ಅಂತಾರೆ, ನಮಾಜು ಅಂತಾರೆ, ಭಸ್ಮ, ನಾಮ, ಮುದ್ರೆ :) ಇತ್ಯಾದಿ ..ಹೀಗೆ. ಇಂತಹ ಕರ್ಮಗಳು ಅಂತರ್ಮಖವಾದಂತೆ ಹುಟ್ಟುವುದೇ ’ಭಕ್ತಿ’. ಭಕ್ತಿ ಎಂದಾಕ್ಷಣ ಅಲ್ಲಿ ’ಉಪಾಸನೆ’ ಎಂಬುದು ತೆರೆದುಕೊಳ್ಳುತ್ತದೆ. ಉಪಾಸನೆಯಲ್ಲೂ ವಿವಿಧತೆಗಳು ಉಂಟಲ್ಲಾ !? . ಇಂತಹುದೇ ದೇವರು, ಇಂತದೇ ಸಂಪ್ರದಾಯ, ಇದೇ ಆಗಮ, ಶಿಲಾಮೂರ್ತಿ, ಲೋಹದ ವಿಗ್ರಹ, ವಿಗ್ರಹವೇ ಬೇಡ ಗೊಡೆಯೇ ಸಾಕು , ಇತ್ಯಾದಿ. ಹೀಗೆ Exclusive ಆಗುತ್ತಾ ಹೋದಂತೆ ವಿಶ್ವವಾದದಿಂದ ಕರ್ಮಗಳು ವಿಮುಖವಾಗುತ್ತಾ ಹೋಗುತ್ತದೆ. ಯಾವುದು ವೈಶ್ವಿಕವಾಗುತ್ತದೋ ಅದಕ್ಕೆ ಪ್ರಾಶಸ್ತ್ಯ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಜ್ಞಾನಕ್ಕೆ ಯಾವ ಬಂಧನವೂ ಇಲ್ಲದಿರುವುದರಿಂದ ಶಂಕರರು ಜ್ಞಾನಮಾರ್ಗವೇ ಅತ್ಯುತ್ತಮ ಎಂದು ಹೇಳುತ್ತಾರೆ.
ಪಾತಂಜಲಾದಿ ಯೋಗಗಳು ಕೇವಲ ಸಾಧನಗಳಷ್ಟೇ. ಈ ಯೋಗಗಳಲ್ಲದೇ ಬೇರೆ ಸಾಧನಗಳೂ ಇವೆ. ತಾನು ಹಾಗು ತನ್ನ ದೈವ ಒಂದೇ ಎನ್ನುವ ಜ್ಞಾನವೇ ಮುಕ್ತಿ. ಆ ಜ್ಞಾನಸಾಧನೆಯಾಗುವವರೆಗೂ ‘ಕಮಲಪತ್ರಮಿವಾಂಭಸಿ’ಯಂತೆ ಕರ್ಮಗಳನ್ನು ಆಚರಿಸಬೇಕು. ಪ್ರತಿ ಶ್ಲೋಕಕ್ಕೂ ನೀವು ನೀಡುತ್ತಿರುವ ವ್ಯಾಖ್ಯಾನವು ಸಮುಚಿತವಾಗಿದೆ.
ಪ್ರತ್ಯುತ್ತರಅಳಿಸಿಸುನಾಥ ಕಾಕಾ,
ಪ್ರತ್ಯುತ್ತರಅಳಿಸಿನೀವು ಹೇಳಿದ್ದು ಸರಿ. ಮುಕ್ತಿಗೆ ಪಾತಂಜಲ ಯೋಗಾದಿಗಳಲ್ಲದೆ ಬೇರೆ ಸಾಧನಗಳೂ ಇವೆ. ಅದರ ವಿವರಣೆಗಳು ಮುಂದಿನ ಶ್ಲೋಕಗಳಲ್ಲಿ ಬರಲಿದೆ. 'ಸಾಧನ ಚತುಷ್ಟಯ' ದ ಸಂಪತ್ತಿಗಾಗಿ ಈ ಎಲ್ಲಾ ಕರ್ಮಗಳನ್ನು ಆಚರಿಸಬೇಕಾಗುತ್ತದೆ.
'ಕಮಲಪತ್ರಮಿವಾಂಭಸಿ' ; ಒಳ್ಳೆಯ ಉಪಮೆ ಕೊಟ್ಟಿರಿ.
ಧನ್ಯವಾದಗಳು ನಿಮಗೆ.
ಶಾರೀರಿಕ ಸಂತುಲನದಿಂದ ಮಾನಸಿಕ ಔನ್ಯತೆಗೇ -ಅಷ್ಟಾಂಗ ಯೋಗಗಳು ಮತ್ತು ಪತಂಜಲ ಯೋಗಗಳು ಸಾಧನೆಗೆ ಪ್ರಥಮ ಹಂತದ ಮೆಟ್ಟಿಲುಗಳು. ಬಾಹ್ಯಶರೀರವನ್ನ ಸದೃಡವಾಗಿಸಲು ಯೋಗಗಳು-ಅಂತರಿಕ ಶಾರೀರವನ್ನು ಸದೃಡವನ್ನಾಗಿಸಲು-ಪ್ರಾಣಾಯಾಮ ಅವಶ್ಯ. ದೇಹ-ಬಾಹ್ಯ ಮತ್ತು ಆಂತರಿಕವಾಗಿ ಸದೃಡವಾದಲ್ಲಿ ಲೌಕಿಕ ವಿಷಯಗಳಲ್ಲಿ ಮಾನವ ನಿರ್ಲಿಪ್ತತೆಯನ್ನು ಸಾದಿಸಲು ಅವಶ್ಯ. ಈ ನಿರ್ಲಿಪ್ತತೆಯು ಜ್ಞಾನ ಮಾರ್ಗದ ಯೋಗಕ್ಕೆ ಅವಶ್ಯ.
ಪ್ರತ್ಯುತ್ತರಅಳಿಸಿಹಾಗಾಗಿ ಎಲ್ಲವು ಪ್ರಸ್ತುತವೆ...ಯುಗಪುರುಷರಿಗೆ ಜ್ಞಾನ ಮಾರ್ಗದಲ್ಲಿ ಮುಂದುವರೆದು ಮುಕ್ತಿಯ ಪಡೆಯುವಲ್ಲಿ ಯೋಗ -ಪ್ರಾಣಾಯಾಮ ದಾರಿಗಳ ಅವಶ್ಯವಿಲ್ಲದಿರಬಹುದು ಆದರೆ ಪಾಮರರಿಗೆ ಅದೇ ಮೆಟ್ಟಿಲಿನಿಂದ ಜ್ಞಾನ ಮಾರ್ಗಕ್ಕೆ ಹೋಗಬೇಕಾದುದು ಅವಶ್ಯ ವೆಂದು ನನ್ನ ಅನಿಸಿಕೆ.
ತಮ್ಮ ಟಿಪ್ಪಣೆ ಚೆನ್ನಾಗಿ ಬರುತ್ತಿದೆ.