ವಿವೇಕ ಚೂಡಾಮಣಿ - ಭಾಗ ೭




ಗ್ರಂಥದ ಮುಂದುವರಿದ ಭಾಗ

चित्तस्य शुद्धये कर्म न तु वस्तूपलब्धये ।
वस्तुसिद्धिर्विचरेण न किञ्चित्  कर्मकोटिभिः ॥११॥ 

ಚಿತ್ತಸ್ಯ ಶುದ್ಧಯೇ ಕರ್ಮ ನ ತು ವಸ್ತೂಪಲಬ್ಧಯೇ |
(=ಚಿತ್ತಶುದ್ಧಿಗಾಗಿ ಕರ್ಮ; ಆತ್ಮವಸ್ತು(ಜ್ಞಾನ)ವನ್ನು ಪಡೆಯಲು ಅಲ್ಲ)


ವಸ್ತುಸಿದ್ಧಿರ್ವಿಚಾರೇಣ ನ ಕಿಂಚಿತ್ ಕರ್ಮಕೋಟಿಭಿಃ ||೧೧||
(=ವೈಚಾರಿಕತೆಯಿಂದ ಜ್ಞಾನ; ಕೋಟಿ ಕರ್ಮಾಚರಣೆಯಿಂದಲ್ಲ)

ಕರ್ಮಗಳನ್ನು ಆಚರಿಸುವುದರಿಂದ ಮುಕ್ತಿಯಂತೂ ದೊರೆಯುವುದಿಲ್ಲ ಎಂದಾದಲ್ಲಿ ಅವುಗಳನ್ನು ಆಚರಿಸುವುದಾದರೂ ಏಕೆ ? ಎಂಬ ಪ್ರಶ್ನೆಗೆ ಮೇಲಿನ ಶ್ಲೋಕದ ಮೂಲಕ ಶಂಕರರು ಉತ್ತರವನ್ನು ತಿಳಿಸುತ್ತಾರೆ.
’ಚಿತ್ತಶುದ್ಧಿಗಾಗಿ ಕರ್ಮ’ ಎಂದು ಹೇಳುತ್ತಾರೆ. ಬುದ್ಧಿಗೆ ಆವರಿಸುವ ಭ್ರಮೆ ಅಥವಾ ಅಜ್ಞಾನವನ್ನು ತೊಡೆದುಹಾಕಲು ಕರ್ಮಗಳನ್ನು ಆಚರಿಸಬೇಕು ಎನ್ನುತ್ತಾರೆ. ಮೊದಲು ಅಜ್ಞಾನವನ್ನು ಕಳೆದುಕೊಂಡರೆ ಜ್ಞಾನದ ಮಾರ್ಗ ಯಾವುದು ಎಂದು ತಂತಾನೇ ಕಾಣಿಸುತ್ತದೆ. ಜ್ಞಾನಸಿದ್ಧಿಗೆ ಬೇಕಾಗುವ ಧೃಡತೆ, ಏಕಾಗ್ರತೆ, ಸಹಿಷ್ಣುತೆ ಇತ್ಯಾದಿಗಳು ಮಾಡುವ ಕರ್ಮದಿಂದ ನೆಲೆಗೊಳ್ಳುತ್ತವೆ ಮತ್ತು ಸಾಧನೆಯ ಹಾದಿಗೆ ದಾರಿದೀಪವಾಗುತ್ತದೆ. ಸಮಚಿತ್ತಕ್ಕಾಗಿ ಕರ್ಮವೇ ಹೊರತು ಆತ್ಮವಸ್ತುವನ್ನು ಅಥವಾ ಆತ್ಮಜ್ಞಾನವನ್ನು ಪಡೆಯಲು ಅಲ್ಲ ಎಂದು ಹೇಳುತ್ತಾರೆ.
ಮೇರುಪರ್ವತವನ್ನು ಅಥವಾ ಎವರೆಸ್ಟ್ ಅನ್ನು ಏರಬೇಕೆನ್ನುವವರು ಅದಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕಾಗುತ್ತದೆ. ಕೆಲವು ಏರುವುದಕ್ಕೆ ಮುಂಚೆ ಬೇಕಾದ ತಯಾರಿಗಳು ಮತ್ತು ಕೆಲವು ಏರುವಾಗ ಬೇಕಾಗುವ ತಯಾರಿಗಳು ಇರುತ್ತವೆ. ಶಿಖರವನ್ನು ಏರಬೇಕೆಂದು ಮನಸು ಮಾಡಿದವನು ಮೊದಲು ಧೃಡಾಕಾಯನಾಗಿರಬೇಕಾಗುತ್ತದೆ. ಗರಡಿಮನೆಯ ವ್ಯಾಯಾಮಗಳನ್ನು ಮಾಡಿಕೊಂಡು ಗಟ್ಟಿಮುಟ್ಟಾಗಿರಬೇಕಾಗುತ್ತದೆ. ಇದಕ್ಕೆ ಕೆಲವು ತಿಂಗಳುಗಳು ಬೇಕಾಗುತ್ತದೆ. ಉಸಿರನ್ನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯವನ್ನು ಕೆಲವು ವಾರಗಳ ಅಭ್ಯಾಸದಿಂದ ಪಡೆದುಕೊಳ್ಳಬೇಕಾಗುತ್ತದೆ. ಆರೋಗ್ಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಇಷ್ಟೆಲ್ಲಾ ಕರ್ಮಗಳನ್ನು ಏರುವವನು ಮುಂಚೆಯೇ ಮುಗಿಸಿ ಸಿದ್ಧನಾಗಿರಬೇಕಾಗುತ್ತದೆ. ನಂತರ ಪರ್ವತವನ್ನು ಏರುವಾಗ ಈ ಹಿಂದಿನ ಯಾವ ಸಾಧನಗಳು ಬೇಕಾಗುವುದಿಲ್ಲ, ಇಲ್ಲಿ ಬೇರೆಯದೇ ಸಾಧನಗಳು ಬೇಕಾಗುತ್ತವೆ. ಬೆಚ್ಚಗಿನ ಉಣ್ಣೆಯ ಬಟ್ಟೆ, ಆಮ್ಲಜನಕದ ಸಿಲಿಂಡರ್, ಹಿಮನಿರೋಧಕ ಬೂಟುಗಳು, ಕೈ ಗವಸುಗಳು ಇತ್ಯಾದಿ. ಇವೆಲ್ಲಾ ಗರಡಿಮನೆಯ ತಯಾರಿಯಲ್ಲಿ ಬೇಕಾಗುವುದಿಲ್ಲ. ಹೇಗೂ ಹಿಮಾಲಯ ಏರಲೇಬೇಕು ಅದಕ್ಕಾಗಿ ಬೂಟು, ಗವಸು, ಉಣ್ಣೆಯ ಬಟ್ಟೆ ಇವುಗಳನ್ನೆಲ್ಲಾ ಹಾಕಿಕೊಂಡೇ ವ್ಯಾಯಾಮ ಮಾಡುತ್ತೇನೆಂದು ಹೇಳುವವನನ್ನು ಮೂಳನೆನ್ನಬೇಕಾಗುತ್ತದೆ.  ಗರಡಿಮನೆಯ ವ್ಯಾಯಾಮವು ಕರ್ಮಕ್ಕೆ ಸಾಧನವಾದರೆ ಏರುವಾಗ ಬೇಕಾಗುವ ವಸ್ತುಗಳು ಜ್ಞಾನಕ್ಕೆ ಸಾಧನಗಳು. ಇವು ಒಂದನ್ನೊಂದು ಸಂಪರ್ಕಿಸುವುದಿಲ್ಲ.  ಕೇವಲ ಗಟ್ಟಿಮುಟ್ಟಾದ ದೇಹವನ್ನು ಹೊಂದಿದ ಮಾತ್ರಕ್ಕೆ ಹಿಮಾಲಯವನ್ನು ಏರಿದಂತಾಗುತ್ತದೆಯೇ? ಇಲ್ಲ ; ಅದು ಪರೋಕ್ಷವಾಗಿ ಸಹಾಯ ಮಾಡುತ್ತದೆ ಆದರೆ ಜ್ಞಾನಪ್ರಾಪ್ತಿಯ ಸಾಧನಗಳ ಮುಂದೆ ಅದು ಗೌಣವಾಗುತ್ತದೆ. ಆಮ್ಲಜನಕದ ಸಿಲಿಂಡರ್ ಇಲ್ಲದೆ ಯಾರೂ ಎವರೆಸ್ಟನ್ನು ಏರಲಾರರು !.  ಕೆಲವರು ಗರಡಿಮನೆಯಲ್ಲಿ ಪಳಗದೆಯೂ ಸಹ ಆಮ್ಲಜನಕದ ಸಿಲಿಂಡರ್, ಉಣ್ಣೆಯ ಬಟ್ಟೆ, ಇತ್ಯಾದಿ ಸಾಧನಗಳನ್ನಿಟ್ಟುಕೊಂಡು ಮನೋಬಲದಿಂದ (ಮನಸಿನಂತೆ ಮಹಾದೇವ !) ಎವರೆಸ್ಟ್ ಏರಿದರೂ ಏರಬಹುದು !. ಅಂತಹವರು ತುಂಬಾ ವಿರಳ ಎನ್ನಬೇಕಾಗುತ್ತದೆ. ಅಂತಹ ಮನೋಬಲವುಳ್ಳವರು ಆತ್ಮಜ್ಞಾನಕ್ಕೆ ನೇರವಾಗಿ ಅರ್ಹರಾಗುತ್ತಾರೆ.

ವಿಚಾರಮಂಥನದಿಂದ ಮಾತ್ರ ಜ್ಞಾನಪ್ರಾಪ್ತಿಯೇ ಹೊರತು ಹಲವು ಕೋಟಿ ಕರ್ಮಗಳನ್ನು ಆಚರಿಸುವುದರಿಂದಲ್ಲ ಎಂದು ಎರಡನಯೆ ಸಾಲಿನಲ್ಲಿ ಹೇಳುತ್ತಾರೆ. ವಿವೇಕ ಚೂಡಾಮಣಿಯನ್ನು ಓದಿ ಪಡೆಯುವ ಜ್ಞಾನಕ್ಕಿಂತಲೂ ಅಲ್ಲಿರುವ ವಿಚಾರವನ್ನು ಚರ್ಚಿಸಿ, ವಿವೇಚಿಸಿ ಪಡೆಯುವ ಜ್ಞಾನವು ಉನ್ನತಮಟ್ಟದ್ದಾಗಿರುತ್ತದೆ.  ತತ್ತ್ವವಿಚಾರದ ಚರ್ಚೆಗಳು ನಡೆದಂತೆಲ್ಲಾ ಆತ್ಮಜ್ಞಾನದ ಒಲವು  ಹೆಚ್ಚುತ್ತಾ ಹೋಗುತ್ತದೆ.  ವಿವೇಚಿಸದೆ , ವಿಚಾರವಿಲ್ಲದೇ ಮಾಡುವ ಕೋಟಿ ಕರ್ಮಗಳಿಗಿಂತಲೂ ವೈಚಾರಿಕತೆಯಿಂದ ಬರುವ ತಿಳುವಳಿಕೆ ಅಥವಾ ಆತ್ಮಜ್ಞಾನವೇ ಉನ್ನತವಾದುದು ಎಂದು ಶಂಕರರು ತಿಳಿಸುತ್ತಾರೆ.
ಹೀಗೆ ಕರ್ಮ-ಜ್ಞಾನಗಳು ಒಂದನ್ನು ಬಿಟ್ಟು ಮತ್ತೊಂದಿಲ್ಲ. ಚಿತ್ತ ಶುದ್ಧಿಯಾಗದ ಹೊರತು ಜ್ಞಾನಪ್ರಾಪ್ತಿಗೆ ಅವಕಾಶವಿಲ್ಲ.  ಅಜ್ಞಾನವನ್ನು ತೊರೆಯಲು ಕರ್ಮಗಳು ಸಹಾಯಕವಾಗುತ್ತವೆ ಆದರೆ ಆತ್ಮಜ್ಞಾನಕ್ಕೆ ಬೇರೆಯದೇ ಆದ ದಾರಿಯನ್ನು ಹುಡುಕಬೇಕಾಗುತ್ತದೆ.
ಅಜ್ಞಾನ ಅಥವಾ ಭ್ರಮೆಯು ಹೇಗೆ ತೋರುತ್ತದೆ ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ನಿರೂಪಿಸುತ್ತಾರೆ.

सम्यग् विचारतः सिद्धा रज्जुतत्वावधारणा ।
भ्रान्त्योदितमहासर्पभवदुःखविनाशिनी ॥१२॥

ಸಮ್ಯಗ್ವಿಚಾರತಃ ಸಿದ್ಧಾ ರಜ್ಜುತತ್ವಾವಧಾರಣಾ |
(= ವಿಚಾರದಿಂದ ಜ್ಞಾನ ಎನ್ನುವುದು ಹಾವು-ಹಗ್ಗದ ತತ್ತ್ವದಿಂದ ತಿಳಿಯುತ್ತದೆ)


ಭ್ರಾಂತ್ಯೋದಿತ ಮಹಾಸರ್ಪ ಭವದುಃಖವಿನಾಶಿನೀ ||೧೨||
(= ಮಹಾಸರ್ಪವೆಂಬ ಭ್ರಮೆಯು ನೀಗುತ್ತದೆ)

ಕರ್ಮದಿಂದಲೇ ಮುಕ್ತಿ ಎಂದು ತಿಳಿದು ಆತ್ಮತತ್ತ್ವಾನ್ವೇಷಣೆಯನ್ನೇ ನೆಡೆಸದಿರುವುದು ಹಗ್ಗವನ್ನೇ ಹಾವೆಂದು ಭ್ರಮಿಸಿದಂತೆ ಮತ್ತು ಆತ್ಮಜ್ಞಾನವು ಬಂದೊಡನೆಯೆ ಅಂತಹ ಭ್ರಮೆಯು ತಾನಗೇ ತೊಲಗುವುದು ಎಂದು ಮೇಲಿನ ಶ್ಲೋಕದ ಮೂಲಕ ಹೇಳುತ್ತಾರೆ.  ಸರ್ಪ-ರಜ್ಜು (=ಹಗ್ಗ) ತತ್ತ್ವವು ವೇದಾಂತದರ್ಶನದ ಮಹತ್ವದ ಪ್ರಕ್ರಿಯೆಯಾಗಿದೆ.  ಭ್ರಮೆಯಲ್ಲಿದ್ದಾಗ ಹಗ್ಗವು ಹಾವಿನ ರೂಪದಲ್ಲಿ ತೋರಬಹುದು. ಕತ್ತಲಲ್ಲಿ ಪಂಜನ್ನು ಹಿಡಿದು ನೆಡೆದು ಹೋದವರನ್ನು ಕೊಳ್ಳಿದೆವ್ವವೆಂದು ಭ್ರಮಿಸಿ ವಾರಗಳ ಕಾಲ ಭಯದಿಂದ ತತ್ತರಿಸುವ ಪ್ರಮೇಯವೂ ಇರುತ್ತದೆ. ಹರೆಯದ ಮಾಯೆಯಲ್ಲಿ ಕತ್ತೆಯೂ (ಕತ್ತೆಗಳಲ್ಲಿ ಕ್ಷಮೆಯಾಚಿಸುತ್ತೇನೆ, ಅದು ನನ್ನ ಇಷ್ಟದ ಪ್ರಾಣಿ) ಸುಂದರವಾಗಿ ಕಾಣುತ್ತದೆ ಎಂಬ ಮಾತಿದೆ.  ಕತ್ತಲಿನಲ್ಲಿ ’ಸರ-ಸರ’ ಎಂದು ಸದ್ದಾದಾಗ ಅಲ್ಲಿ ಹಾವಿರುವುದೆಂಬ ಭ್ರಮೆಯಿಂದ ಭಯಗೊಂಡವರು ದೀಪದ ಬೆಳಕಿನಲ್ಲಿ ನೋಡಿದಾಗ ಅದು  ಹೆಗ್ಗಣವೋ ಮತ್ತೊಂದೋ ಆಗಿರುವುದು ತಿಳಿದಾಗ ಅವರ ಬುದ್ಧಿಗೆ ಬಡಿದಿದ್ದ ಮಂಕು ತೆರೆಯುತ್ತದೆ. ಆ ಕ್ಷಣಕ್ಕೆ ಹಗ್ಗವೇ ಹಾವಿನಂತೆ ಕಂಡರೂ ವಿಚಾರಿಸಿ, ವಿವೇಚಿಸಿ ನೋಡಿದಾಗ ವ್ಯತ್ಯಾಸವು ತಿಳಿದು ಭ್ರಮೆಯು ಅಳಿಯುತ್ತದೆ.  ಚಿತ್ತಶುದ್ಧಿಗಾಗಿ ಕರ್ಮ. ಕರ್ಮದಲ್ಲಿ ಪರಿಪಾಕಗೊಂಡ ನಂತರ ಆತ್ಮತತ್ತ್ವಾನ್ವೇಷಣೆಯ ದಾರಿ.  ಈ ದಾರಿಯಲ್ಲಿ ಸಾಗುತ್ತಿದ್ದಂತೆಯೆ ಹಗ್ಗವೇ ಮಾಹಸರ್ಪ ಎಂದು ತಿಳಿದ ಭ್ರಾಂತಿಯು ನೀಗಿ ವಿಚಾರದಿಂದಲೇ ಜ್ಞಾನ ಎಂಬುದು ನಿಕ್ಕಿಯಾಗುತ್ತದೆ.
ಒಂದು ಲೌಕಿಕದ ಉದಾಹರಣೆಯನ್ನು ಇಲ್ಲಿ ನೋಡೋಣ;  ಬೊಂಬಾಯಿ ಬೋಂಡವನ್ನು ಮಾಡಲು ಹಿಟ್ಟನ್ನು ಕಲೆಸಿ ಅದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಟ್ಟುರುತ್ತೇವೆ. ಕಾದಿರುವ ಎಣ್ಣೆಗೆ ಆ ಉಂಡೆಗಳನ್ನು ಹಾಕಿದಾಗ ಅದು ಸದ್ದುಮಾಡಿಕೊಂಡು ಬೇಯುತ್ತದೆ, ಬೆಂದ ನಂತರ ಸುಮ್ಮನಾಗುತ್ತದೆ. ಬೋಂಡದ ಉಂಡೆಯು ಬೇಯುವುದಕ್ಕೆ ಮುಂಚೆಯೂ ಸುಮ್ಮನಿತ್ತು. ಈಗ ಎರಡರ ಗುಣವನ್ನೂ ಒಂದೇ ಎನ್ನಲು ಸಾಧ್ಯವೆ ?!. ಬೇಯದ ಬೋಂಡವು ಕರ್ಮವನ್ನು ಮಾಡಿಲ್ಲದ ಜೀವವಾದರೆ ಬೆಂದಿರುವ ಬೋಂಡವು ಕರ್ಮವನ್ನು ಮೀರಿರುತ್ತದೆ !. ಎಣ್ಣೆಯಲ್ಲಿ ಚೆನ್ನಾಗಿ ಬೆಂದು ( ಕರ್ಮದಲ್ಲಿ ಪರಿಪಾಕಗೊಂಡು) ತೆಪ್ಪಗಾಗಿರುತ್ತದೆ. ಮುಂದೆ ಅದು ಒಬ್ಬರ ಹೊಟ್ಟೆಯನ್ನು ಸೇರಲು ಅರ್ಹತೆಯನ್ನು ಪಡೆದುಕೊಂಡಿರುತ್ತದೆ. (ಕನ್ನಡದ "ಭಕ್ತ ಕುಂಬಾರ" ಚಲನಚಿತ್ರ ನೋಡಿುವವರು , ಚಿತ್ರದಲ್ಲಿ ಕುಂಬಾರನ ಪಾತ್ರ ವಹಿಸಿರುವ ರಾಜಕುಮಾರರು ತಮ್ಮ ಮನೆಯಲ್ಲಿ ಸೇರಿದ್ದ ಸಂತರುಗಳ ತಲೆಯನ್ನು ಕುಟ್ಟಿ ’ಇದು ಬೆಂದಿಲ್ಲ, ಇದು ಅರ್ಧ ಬೆಂದಿದೆ, ಇದು ಮುಕ್ಕಾಲು’ ಎಂದು ಹೇಳುವ ಸನ್ನಿವೇಶವನ್ನು ನೆನೆಪಿಸಿಕೊಳ್ಳಬಹುದು !).  ಬೇಸಾಯ ಮಾಡಲು ಕುದುರೆಯು ಬೇಡವಾದರೆ  ಏನಂತೆ ? ಟಾಂಗಾ ಗಾಡಿಗಾದರೂ ಬೇಕಲ್ಲವೆ !. ಹೀಗೆ ಮುಕ್ತಿಗೆ ಕರ್ಮವಲ್ಲದಿದ್ದರೂ , ಭ್ರಮೆಯಿಂದ ಹೊರಬರಲು ಮತ್ತು ಚಿತ್ತಶುದ್ಧಿಗಾಗಿ ಕರ್ಮವು ಬೇಕಾಗುತ್ತದೆ ಮತ್ತು ವಿಚಾರದಿಂದಲೇ ಆತ್ಮಜ್ಞಾನ ಎನ್ನುವುದನ್ನು ಶಂಕರರು ತಿಳಿಸುತ್ತಾರೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ.







ಕಾಮೆಂಟ್‌ಗಳು

  1. "ಬೋಂಡದ ಉಂಡೆಯು ಬೇಯುವುದಕ್ಕೆ ಮುಂಚೆಯೂ ಸುಮ್ಮನಿತ್ತು. ಈಗ ಎರಡರ ಗುಣವನ್ನೂ ಒಂದೇ ಎನ್ನಲು ಸಾಧ್ಯವೆ" - ಉತ್ತಮ ಉದಾಹರಣೆ... ಸೊಗಸಾಗಿ ಮೂಡುತ್ತಿದೆ, ಮುಂದುವರೆಸಿ

    ಪ್ರತ್ಯುತ್ತರಅಳಿಸಿ
  2. ಸುಂದರ ಉದಾಹರಣೆಗಳೊಂದಿಗೆ ಸೊಗಸಾಗಿ ನಿರೂಪಿಸಿದ್ದಿರಿ.

    ಪ್ರತ್ಯುತ್ತರಅಳಿಸಿ
  3. ಶಂಕರಜ್ಞಾನವನ್ನು ತಿಳಿಯಾಗಿ ತಿಳಿಸುತ್ತಿದ್ದೀರಿ.

    ಪ್ರತ್ಯುತ್ತರಅಳಿಸಿ
  4. ಒಳ್ಳೆಯ ಉದಾಹರಣೆಗಳೊಂದಿಗೆ, ತುಂಬ ಚೆನ್ನಾಗಿ ಅರ್ಥ ಮಾಡಿಕೊಡುತ್ತಿದ್ದಿರ......ಧನ್ಯವಾದಗಳು ಸರ್...

    ಪ್ರತ್ಯುತ್ತರಅಳಿಸಿ
  5. ಉದಾಹರಣೆಗಳು ತುಂಬಾ ಅದ್ಭುತವಾಗಿವೆ. ತಮ್ಮ ಮೊದಲಿನ ಕಂತಿನಲ್ಲಿನ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಕ್ಕಿವೆ -ಜೊತೆಗೆ ನನ್ನ ಪ್ರಶ್ನೆಗೂ ..

    ಪ್ರತ್ಯುತ್ತರಅಳಿಸಿ
  6. ಸುಬ್ರಹ್ಮಣ್ಯರೇ, ಬ್ರಾಂತಿ ಎಂಬುದು ಭ್ರಮೆಯ ಇನ್ನೊಂದು ಹೆಸರು ಹೌದಷ್ಟೇ? ಸುಮ್ಮನೇ ಯಾವುದೋ ಒಳ್ಳೇ ವ್ಯಾಪಾರವಾಗುವ ಸಸ್ಯಾಹಾರ ತಯಾರಿಕೆಯ ಹೋಟೆಲಿನ ಬಗ್ಗೆ ಒಂದಿಬ್ಬರು ಜನರಲ್ಲಿ " ಅಲ್ಲಿ ಖಸಾಯಿಖಾನೆಯಲ್ಲಿ ತೆಗೆಯಲಾದ ಪ್ರಾಣಿ ಕೊಬ್ಬನ್ನು ಬಳಸುತ್ತಾರಂತೆ " ಅಂದುಬಿಡಿ, ವಾರದೊಳಗೆ ಪೂರ್ತಿ ಡಲ್ ಹೊಡೆಯುತ್ತದೆ! ಭ್ರಮೆ ಎಂಬುದು ಮನುಷ್ಯನ ದೌರ್ಬಲ್ಯ ಕೂಡ. ಕಥೆಯೊಂದು ಹೀಗಿದೆಯಲ್ಲ--ದೆವ್ವದ ಭಯದಲ್ಲಿ ಕಾಡಲ್ಲಿ ನಡೆದ ಬ್ರಾಹ್ಮಣನ ಹೆಗಲ ಪಂಚೆ ಕಾಲುದಾರಿಯ ಪಕ್ಕದಲ್ಲಿರುವ ಮುಳ್ಳಿನಗಿಡಕ್ಕೆ ಸಿಲುಕಿ ಆತ ಮುಂದೆ ನಡೆದಾಗ ಹಿಂದಕ್ಕೆ ಎಳೆದಂತೇ ಭಾಸವಾಯ್ತಂತೆ! ಉಟ್ಟಪಂಚೆ ಒದ್ದೆಯಾಯ್ತೋ ಏನೋ ಗೊತ್ತಿಲ್ಲ. ಮೂಲತೋ ಮಧ್ಯರೂಪಾಯ ಮಧ್ಯತೋ ಅಗ್ರರೂಪಿಣೇ ಅಗ್ರತ ಅಗ್ರರೂಪಾಯ ....ಎಂದೆಲ್ಲಾ ಗಂಟೆಗಟ್ಟಲೆ ಪಠಿಸಿ ಯಾವುದೋ ಇದ್ದಬದ್ದ ಧೈರ್ಯವನ್ನು ಸೇರಿಸಿ ಒಮ್ಮೆ ಅರೆತೆರಗಣ್ಣಿನಲ್ಲಿ ಸ್ವಲ್ಪ ತಿರುಗಿ ನೋಡಿದ್ದಾನೆ " ಓಹ್ ಇಷ್ಟೇನಾ ..." ಎಂದುಕೊಂಡು ನಿರುಂಬಳನಾಗಿದ್ದಾನೆ! ಲಾಟರಿಯಲ್ಲಿನ ಜಯ ನಿಜವಾದ ಜಯವಲ್ಲ, ಅದರಲ್ಲಿ ಗೆಲ್ಲುವ ಸಾಧ್ಯತೆ ಕಡಿಮೆ ಎಂದು ಗೊತ್ತಿದ್ದರೂ ಗೆಲ್ಲುವ ಭ್ರಮೆ ಇನ್ನೊಂದು ತೆರನಾದದ್ದು. ಕುಡಿತದಿಂದ ಶರೀರಕ್ಕೂ ಮನಸ್ಸಿಗೂ ನೆಮ್ಮದಿ ಸಿಗುತ್ತದೆ ಎಂಬುದು ಇನ್ನೊಂದು ತೆರನಾದ ಭ್ರಮೆ. ಹೀಗೇ ಭ್ರಮೆಗಳಲ್ಲೇ ಹಲವು ಪ್ರಭೇದಗಳನ್ನೂ ಕಾಣಬಹುದಾಗಿದೆ. ಆತ್ಮೋನ್ನತಿಗೆ ಹೇಳುವುದಾದ್ರೆ ಸ್ವಲ್ಪ ಬಿಸಿಲಿಗೆ ಒಣಗಿದ ಶೇಂಗಾ ಬೀಜ ಬಿತ್ತಿದರೆ ಮತ್ತೆ ಗಿಡವಾಗುತ್ತದೆ; ಬಿಸಿಲಿಗೆ ಒಣಗಿಸಿ ಹುರಿದ/ಕರಿದ ಶೇಂಗಾ ಬಿತ್ತರೆ ಅದೂ ಕೂಡ ಕ್ರಮೇಣ ಕೊಳೆತು ಭೂಮಿಯಲ್ಲಿ ಲೀನವಾಗುತ್ತದೆ. ಇಲ್ಲಿ ಬೀಜದ ಶೇಂಗಾ ಕರ್ಮ ಬಂಧನದ ಚೌಕಟ್ಟಿನಲ್ಲಿ ಮತ್ತೆ ಜನಿಸಿ ಬರುತ್ತದೆ, ಹುರಿದ/ಕರಿದ ಶೇಂಗಾಕ್ಕೆ ಮತ್ತೆ ಜನ್ಮವಿಲ್ಲ! ಲೇಖನ ಪುಷ್ಕಳವಾಗಿದೆ, ಮುಂದುವರಿಯಲಿ

    ಪ್ರತ್ಯುತ್ತರಅಳಿಸಿ
  7. ಸುಲಭದಲ್ಲಿ ಅರ್ಥೈಸಿಕೊಳ್ಳಲು ಕ್ಲಿಷ್ಟ ಎನ್ನಿಸುವ ವಿಚಾರಗಳನ್ನು ಉದಾಹರಣೆಗಳೊ೦ದಿಗೆ ಸರಳವಾಗಿಸಿ ತಿಳಿಸುತ್ತಿದ್ದೀರಿ. ತು೦ಬಾ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  8. ಮಂಜುನಾಥರೆ,
    ಬಾಲು,
    ಸುನಾಥ ಕಾಕಾ,
    ಗಿರೀಶ,
    ವಿ.ಆರ್. ಭಟ್ಟರು,
    ಮನಮುಕ್ತಾ,

    ನಿಮ್ಮೆಲ್ಲರ ಒಳ್ಳೆಯ ಮಾತುಗಳಿಗೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ