Part -62

ಮೂಲ:

ನಿಗದ್ಯತೇಂತಃಕರಣಂ ಮನೋಧೀ_

ರಹಂಕೃತಿಶ್ಚಿ ತ್ತಮಿತಿ ಸ್ವವೃತ್ತಿಭಿಃ |

ಮನಸ್ತು ಸಂಕಲ್ಪ ವಿಕಲ್ಪನಾದಿಭಿ_

ರ್ಬುದ್ಧಿಃ ಪದಾರ್ಥಾಧ್ಯವಸಾಯಧರ್ಮತಃ ||೯೨||

ಅತ್ರಾಭಿಮಾನಾದಹಮಿತ್ಯಹಂಕೃತಿಃ |

ಸ್ವಾರ್ಥಾನುಸಂಧಾನ_ಗುಣೇನ ಚಿತ್ತಮ್ ||೯೩||


ಪ್ರತಿಪದಾರ್ಥ:
ಅಂತಃಕರಣಂ=ಅಂತಃಕರಣವು, ಸ್ವ _ವೃತ್ತಿಭಿಃ=ತನ್ನ ವೃತ್ತಿಗಳಿಗೆ ಅನುಸಾರವಾಗಿ, ಮನಃ = ಮನಸ್ಸು, ಧೀಃ =ಬುದ್ಧಿ, ಅಹಂಕೃತಿಃ = ಅಹಂಕಾರ, ಚಿತ್ತಂ=ಚಿತ್ತ, ಇತಿ= ಎಂದು, ನಿಗದ್ಯತೇ=ಹೇಳಲಾಗಿದೆ; ಸಂಕಲ್ಪ_ವಿಕಲ್ಪನಾದಿಭಿಃ ತು = ಸಂಕಲ್ಪ ವಿಕಲ್ಪ ಮೊದಲಾದವುಗಳಿಂದ, ಮನಃ = ಮನಸ್ಸೆಂದೂ, ಪದಾರ್ಥ_ಅಧ್ಯವಸಾಯ_ಧರ್ಮತಃ = ವಸ್ತುಗಳನ್ನು ನಿಶ್ಚಯಿಸುವ ಧರ್ಮವುಳ್ಳದ್ದರಿಂದ, ಬುದ್ಧಿಃ = ಬುದ್ಧಿಯೆಂದೂ, ಅತ್ರ = ಈ ಶರೀರದಲ್ಲಿ, ಅಹಂ = ನಾನು, ಇತಿ = ಎಂದು, ಅಭಿಮಾನಾತ್ = ಅಭಿಮಾನವಿರುವುದರಿಂದ, ಅಹಂಕೃತಿಃ = ಅಹಂಕಾರವೆಂದೂ, ಸ್ವಾರ್ಥಾನು_ಸಂಧಾನ_ಗುಣೇನ = ಸ್ವಸುಖ ಸಾಧನಗಳನ್ನು ಕುರಿತು ಚಿಂತಿಸುವುದರಿಂದ, ಚಿತ್ತಂ = ಚಿತ್ತವೆಂದೂ, (ಹೇಳಲಾಗಿದೆ).

ತಾತ್ಪರ್ಯ:
ಅಂತಃಕರಣವನ್ನು ಅದರ ಸ್ವಭಾವ ಅಥವಾ ವೃತ್ತಿಯಿಂದ ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಎಂದು ಹೇಳಲಾಗಿದೆ. ಸಂಕಲ್ಪ ವಿಕಲ್ಪಗಳ ಚಿಂತನೆಯನ್ನು ಮಾಡುವುದರಿಂದ ಮನಸ್ಸೆಂದೂ, ವಸ್ತುಗಳನ್ನು ನಿಶ್ಚಯಿಸುವ ಧರ್ಮವುಳ್ಳದ್ದರಿಂದ ಬುದ್ಧಿಯೆಂದೂ, ಈ ಶರೀರದಲ್ಲಿ ನಾನು_ನನ್ನದು ಎಂಬ ಅಭಿಮಾನ ಹುಟ್ಟಿಸುವುದರಿಂದ ಅಹಂಕಾರವೆಂದೂ, ತನ್ನ ಸುಖ ಸಾಧನಗಳನ್ನು ಕುರಿತು ಚಿಂತಿಸುವುದರಂದ ಚಿತ್ತವೆಂದೂ ಹೇಳಲಾಗಿದೆ.

ವಿವರಣೆ:
ಶರೀರದ ಹೊರ (ಬಾಹ್ಯ) ಇಂದ್ರಿಯಗಳ ಬಗ್ಗೆ ತಿಳಿಸಿದ ಬಳಿಕ ಅವು ಯಾವುದರ ಸಹಾಯದಿಂದ ಗ್ರಹಣಶಕ್ತಿಯನ್ನು ಪಡೆಯುತ್ತವೆ ಎನ್ನುವುದನ್ನು ನಿಗದ್ಯತೇ ಎಂಬ ಶ್ಲೋಕದ ಮೂಲಕ ಅಂತರಂಗ_ಬಹಿರಂಗ ಚಟುವಟಿಕೆಯು ಹೇಗೆ ಪರಸ್ಪರ ಅವಲಂಬನೆ ಹೊಂದಿರುತ್ತವೆ ಎಂದು ವಿವರಿಸುತ್ತಾರೆ. ವಿಷಯವಸ್ತುಗಳ ಅನುಭವವನ್ನು ಉಂಟುಮಾಡುವ ಶರೀರದ ಹೊರಭಾಗದ ಸಾಧನಗಳು ಇಂದ್ರಿಯಗಳಾದರೆ, ಒಳ ಭಾಗದ ಸಾಧನಗಳನ್ನು ಕರಣವೆಂದು ಹೇಳಲಾಗಿದೆ.  ಬಾಹ್ಯ ದಶೇಂದ್ರಿಯಗಳಿಗೆ ಅಂತಃಕರಣ ಚತುಷ್ಟಯವು ಬೆಂಬಲವಾಗಿ ಕೆಲಸ ಮಾಡುತ್ತದೆ. ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತ ಇವು ನಾಲ್ಕನ್ನು ಅವುಗಳ ಸ್ವಭಾವಾನುಸಾರ ಅಂತಃಕರಣವೆಂದು ಹೇಳಿದ್ದಾರೆ. ಕಣ್ಣು ನೋಡಿದ್ದನ್ನು ಮನಸ್ಸು ಪ್ರಚೋದಿಸುತ್ತದೆ, ಮನಸ್ಸಿನಲ್ಲಿ ಹುಟ್ಟುವ ಆಲೋಚನೆಗೆ ದಶೇಂದ್ರಿಯಗಳೂ ಪ್ರಚೋದನೆಗೊಳ್ಳುತ್ತವೆ. ಇದೊಂದು ರೀತಿ ವ್ಯಾವರ್ತಕ ನಿಯಮ ಎನ್ನಬಹುದು. ಬೇಕು ಬೇಡ(ಆಗು_ಹೋಗು)ಗಳ ಬಗ್ಗೆ ಆಲೋಚನೆ ಹುಟ್ಟುವುದು ಮನಸ್ಸಿನಲ್ಲಿ. ಆಲೋಚಿಸಲಾದ  ವಿಷಯ ಅಥವಾ ವಸ್ತುವಿನ ಬಗ್ಗೆ ನಿರ್ಧರಿಸಿ ಕ್ರಮವಹಿಸಲು ಸಹಕಾರಿಯಾಗುವುದು ಬುದ್ಧಿ. ಅದರಿಂದ ಉಂಟಾದ ಪ್ರತಿಫಲಕ್ಕೆ 'ನಾನು' ಕಾರಣ ಅಥವಾ ನನ್ನಿಂದಾಯಿತು ಎಂಬ ಅಭಿಮಾನವು ಅಹಂಕಾರ. ಹೀಗೆ ತನ್ನ ಸುಖ ಸಾಧನಗಳನ್ನೇ ಕುರಿತು ಚಿಂತಿಸುವುದನ್ನು ಚಿತ್ತವೆಂದು ಹೇಳಲಾಗಿದೆ. ನೆನಪು ಅಥವಾ ಜ್ಞಾಪಕ (ಸ್ಮರಣವೃತ್ತಿಯಿಂದ)ದಿಂದ ನಡೆಸುವ ವ್ಯವಹಾರಕ್ಕೆ ಚಿತ್ತವ್ಯಾಪಾರವೆಂದೂ ಹೇಳಲಾಗುತ್ತದೆ. 
ಅಂತಃಕರಣ ಚತುಷ್ಟಯದಲ್ಲಿ ಮನಸ್ಸನ್ನೆ ಪ್ರಧಾನವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಬುದ್ಧಿ, ಚಿತ್ತ ಹಾಗೂ ಅಹಂಕಾರವು ಅದರ ಜತೆ ಸೇರಿಕೊಂಡೆ ವ್ಯವಹರಿಸುತ್ತವೆ. ಆದರೂ ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಪ್ರತ್ಯೇಕವಾಗಿ ನೋಡುವ ಅಗತ್ಯವಿದೆ ಎಂದು ವ್ಯಾಖ್ಯಾನಕಾರರು ಹೇಳುತ್ತಾರೆ. ಹೀಗೆ ಅಂತಃಕರಣವನ್ನು ಅವುಗಳ ವೃತ್ತಿಯ ಅನುಸಾರ ಸಕಾರಣವಾಗಿ ನಾಲ್ಕು ವಿಧವಾಗಿ ವಿವರಿಸುತ್ತಾರೆ.

.............
  
x

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ