Part - 61
ಮೂಲ:
ಬುದ್ಧೀಂದ್ರಿಯಾಣಿ ಶ್ರವಣಂ ತ್ವಗಕ್ಷಿ
ಘ್ರಾಣಂ ಚ ಜಿಹ್ವಾ ವಿಷಯಾವಬೋಧನಾತ್ |
ವಾಕ್ಪಾಣಿಪಾದಾ ಗುದಮಪ್ಯುಪಸ್ಥಃ
ಕರ್ಮೇಂದ್ರಿಯಾಣಿ ಪ್ರವಣೇನ ಕರ್ಮಸು ||೯೧||
ಪ್ರತಿಪದಾರ್ಥ:
ಬುದ್ಧೀಂದ್ರಿಯಾಣಿ = ಜ್ಞಾನೇಂದ್ರಿಯಗಳು, ಶ್ರವಣಂ = ಕಿವಿ, ತ್ವಕ್ = ಚರ್ಮ, ಅಕ್ಷಿ = ಕಣ್ಣು, ಘ್ರಾಣಂ = ಮೂಗು , ಜಿಹ್ವಾ ಚ = ಮತ್ತು ನಾಲಗೆ , ವಿಷಯಾವಬೋಧನಾತ್ = (ಇವು) ವಿಷಯಗಳನ್ನು ತಿಳಿಸುವುದರಿಂದ , ವಾಕ್-ಪಾಣಿ=ಪಾದಾಃ = ಮಾತು(ಬಾಯಿ) ಕೈ-ಕಾಲುಗಳು, ಗುದಮ್ = ಮಲದ್ವಾರ , ಉಪಸ್ಥಃ ಅಪಿ = ಮೂತ್ರದ್ವಾರ -ಇವು, ಕರ್ಮಸು = ಕರ್ಮಗಳಲ್ಲಿ , ಪ್ರವಣೇನ = ಪ್ರವೃತ್ತವಾಗಿರುವುದರಿಂದ, ಕರ್ಮೇಂದ್ರಿಯಾಣಿ = ಕರ್ಮೇಂದ್ರಿಯಗಳು.
ತಾತ್ಪರ್ಯ:
ಕಿವಿಗಳು, ಚರ್ಮ, ಕಣ್ಣುಗಳು, ಮೂಗು ಮತ್ತು ನಾಲಗೆ ಇವು ವಿಷಯಗಳನ್ನು ತಿಳಿಸುವುದರಿಂದ ಜ್ಞಾನೇಂದ್ರಿಯಗಳು ಎನಿಸಿಕೊಳ್ಳುತ್ತವೆ. ವಾಕ್ಕು (ಮಾತು_ಬಾಯಿ) , ಕೈ-ಕಾಲುಗಳು, ಮಲದ್ವಾರ ಮತ್ತು ಮೂತ್ರದ್ವಾರ ಇವು ಕರ್ಮದಲ್ಲಿ ಪ್ರವೃತ್ತವಾಗುವುದರಿಂದ ಕರ್ಮೇಂದ್ರಿಯಗಳು ಎನಿಸಿವೆ.
ವಿವರಣೆ:
ವಿವರಣೆ:
ಅನಾತ್ಮವಾದ ಸ್ಥೂಲದೇಹವನ್ನೂ , ಅದರಿಂದ ಒದಗಿ ಬರುವ ಸಂಸಾರ ಬಂಧವನ್ನು ವರ್ಣಾಶ್ರಮಾದಿ ನಿಯಮಗಳ ಅನುಷ್ಠಾನದಿಂದ ಕಂಡುಕೊಳ್ಳುವ ಬಗೆಯನ್ನು ನಿರೂಪಿಸಿದ ಬಳಿಕ, ಶರೀರದ ದಶೇಂದ್ರಿಯಗಳು, ಅಂತಃಕರಣ ಚತುಷ್ಟಯ, ಪಂಚಪ್ರಾಣಗಳು ಹಾಗೂ ಪುರ್ಯಷ್ಟಕದ ಮೂಲಕ ಸೂಕ್ಷ್ಮಶರೀರದ ವಿವರಣೆಗೆ ಮುಂದಾಗುತ್ತಾರೆ.
ಮೊದಲಿಗೆ ಶರೀರದ ಹತ್ತು ಇಂದ್ರಿಯಗಳು ಯಾವುದಕ್ಕೆ ಮತ್ತು ಯಾವುದರಿಂದ ಗುರುತಿಲಾಗುತ್ತದೆ ಎಂಬುದನ್ನು 'ಬುದ್ಧೀಂದ್ರಿಯಾಣಿ.. 'ಎಂಬ ಶ್ಲೋಕದಿಂದ ಆರಂಭಿಸುತ್ತಾರೆ. ಎಲ್ಲರಿಗೂ ತಿಳಿದರುವಂತೆ ಶಬ್ದವನ್ನು ಕೇಳಲು ಕಿವಿಗಳು, ಸ್ಪರ್ಷಾನುಭವಕ್ಕೆ ಚರ್ಮ, ನೋಡಲು ಕಣ್ಣುಗಳು, ರುಚಿಯನ್ನು ತಿಳಿಯಲು ನಾಲಗೆ ಹಾಗೂ ಆಘ್ರಾಣಕ್ಕೆ ಮೂಗು; ಇವುಗಳನ್ನು ಜ್ಞಾನೇಂದ್ರಿಯಗಳೆಂದು ಸೂಚಿಸಲಾಗಿದೆ. ಪಂಚಗುಣಗಳು ಶರೀರದ ಅನುಭವಕ್ಕೆ ಬರಲು ಈ ಇಂದ್ರಿಯಗಳ ಪಾತ್ರ ಮಹತ್ವದ್ದಾಗಿದೆ. ವಾಕ್ಕು ಅಂದರೆ ಮಾತಿನ ಮೂಲಕ ಕರ್ಮಗಳು ನಡೆಯುತ್ತವೆ. ಕೈ, ಕಾಲುಗಳನ್ನು ಪ್ರತಿನಿತ್ಯವೂ ನಾನಾವಿಧವಾದ ಕೆಲಸಗಳನ್ನು ಮಾಡಲು ಬಳಸುತ್ತಲೇ ಇರುತ್ತೇವೆ. ಮಲದ್ವಾರ ಹಾಗೂ ಮೂತ್ರದ್ವಾರಗಳು ಶರೀರದ ಕಲ್ಮಶಗಳನ್ನು ಹೊರಹಾಕುವುದಕ್ಕೆ ಕಾರಣವಾಗುವ ಇಂದ್ರಿಯಗಳು. ಇವೆಲ್ಲವೂ ನಿತ್ಯಕರ್ಮಗಳನ್ನು ನಿರ್ವಹಿಸಲು ಬಳಸುವುದರಿಂದ ಕರ್ಮೇಂದ್ರಿಯಗಳು ಎನ್ನಲಾಗಿದೆ. ಹೀಗೆ ದಶೇಂದ್ರಿಯಗಳ ನಿರೂಪಣೆಯನ್ನು ಮಾಡಿ ಅಂತಃಕರಣ ಚತುಷ್ಟಯದ ವಿವರಣೆಗೆ ಮುಂದಾಗುತ್ತಾರೆ.
.............
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ