Part -55
ಮೂಲ:
ಮೋಹ ಏವ ಮಹಾಮೃತ್ಯುರ್ಮುಮುಕ್ಷೋರ್ವಪುರಾದಿಷು |
ಮೋಹೋ ವಿನಿರ್ಜಿತೋ ಯೇನ ಸ ಮುಕ್ತಿಪದಮರ್ಹತಿ ||೮೫||
ಪ್ರತಿಪದಾರ್ಥ:
ಮುಮುಕ್ಷೋಃ = ಮುಮುಕ್ಷುವಿಗೆ, ವಪುರಾದಿಷು = ಶರೀರವೇ ಮೊದಲಾದುವುಗಳಲ್ಲಿ, ಮೋಹಃ ಏವ = ಮೋಹವೇ, ಮಹಾಮೃತ್ಯುಃ = ಮಹಾಮರಣವು, ಯೇನ = ಯಾರಿಂದ, ಮೋಹಃ = ಮೋಹವು, ವಿನಿರ್ಜಿತಃ = ಜಯಿಸಲ್ಪಟ್ಟಿದೆಯೋ, ಸಃ=ಅವನು, ಮುಕ್ತಿಪದಂ = ಮೋಕ್ಷಸ್ವರೂಪವನ್ನು, ಅರ್ಹತಿ = ಹೊಂದಲು ಯೋಗ್ಯನಾಗುತ್ತಾನೆ.
ತಾತ್ಪರ್ಯ:
ಶರೀರದಿಂದ ಮೊದಲಾಗಿ ಹುಟ್ಟುವ ಮೋಹವೇ ಮುಮುಕ್ಷುವಿಗೆ ಮಹಾಮರಣವನ್ನು ತಂದಿಡುತ್ತದೆ. ಯಾರು ಅಂತಹ ಮೋಹವನ್ನು ಗೆಲ್ಲುತ್ತಾನೋ ಅವನು ಮೋಕ್ಷ ಸ್ವರೂಪವನ್ನು ಹೊಂದಲು ಅರ್ಹನಾಗುತ್ತಾನೆ.
ವಿವರಣೆ:
ದೇಹಾಸಕ್ತಿಯೇ ಮುಮುಕ್ಷುವಿಗೆ ಮೃತ್ಯುಸಮಾನವಾಗುತ್ತದೆ ಎಂದು ಹೇಳುತ್ತಾರೆ. ಶರೀರದಿಂದ ಮೊದಲಾಗಿ ಬ್ರಹ್ಮದವರೆಗಿನ (ದೇಹಾದಿ ಬ್ರಹ್ಮಪರ್ಯಂತಮ್) ಎಲ್ಲ ಮಮಕಾರಗಳನ್ನು ಬಿಟ್ಟು, ಅದರ ಮೇಲಿನ ಮೋಹಾಕಾಂಕ್ಷೆಯನ್ನು ಯಾರು ತ್ಯಜಿಸುವನೋ ಆತನು ಮಾತ್ರ ಸಾಕ್ಷಾತ್ಕಾರಕ್ಕೆ ಅರ್ಹನಾಗುತ್ತಾನೆ, ಇನ್ಯಾರಿಂದಲೂ ಸಾಧ್ಯವಿಲ್ಲ ಎಂಬ ಅರ್ಥದಲ್ಲಿ ಕಡ್ಡಿ ಮುರಿದಂತೆ ಹೇಳಿರುತ್ತಾರೆ. ಮೃತನಾದವನು ಹೇಗೆ ನಿಶ್ಚಲನಾಗಿ ಬಿದ್ದಿರುತ್ತಾನೋ ಹಾಗೆ ಮೋಹದ ಪಾಶಕ್ಕೆ ಸಿಲುಕುವ ಮುಮುಕ್ಷುವು ಮರಣವನ್ನು ಹೊಂದಿದಂತಯೇ ಸರಿ ಎಂದು ವಿವರಿಸುತ್ತಾರೆ.
ಯಾವುದೇ ವಸ್ತು ಅಥವಾ ವ್ಯಕ್ತಿಯ ಗುಣಗಳಿಗೆ ಮಾರುಹೋಗಿ (ಪರವಶವಾಗುವುದು) ದಾಸರಾಗುವುದು ಎಂದರೆ ವಿನಾಶಕ್ಕೆ ಮುನ್ನುಡಿ ಬರೆದಂತೆ. ಶರೀರದಿಂದ (ಇಂದ್ರಿಯಗಳ ಮೂಲಕ) ಹುಟ್ಟುವ ಮಮಕಾರಗಳನ್ನು ದೋಷದ ದೃಷ್ಟಿಯಿಂದ ನೋಡಿದಾಗ ಮಾತ್ರ ಆಯಾ ವಸ್ತು_ವಿಷಯಗಳ ಮೇಲಿನ ಮೋಹವು ದೂರವಾಗುತ್ತದೆ. ಮಹಾಕವಿ ಕಾಳಿದಾಸನ ಮಾತಿನಂತೆ** ಶರೀರವು ಧರ್ಮಸಾಧನೆಗೆ ಪೂರಕವಾಗಿ ಪೋಷಿತವಾಗಬೇಕು, ಅದಕ್ಕೆ ವಿರುದ್ಧವಾಗಿ ಅಲ್ಲ ಎನ್ನುವುದನ್ನು ನಾವಿಲ್ಲಿ ಸ್ಮರಿಸಬಹುದು. 'ಆತ್ಮಾನಂ ರಥಿನಂ ವಿದ್ದಿ' (ಕ.ಉ) ಎನ್ನುವ ವಾಕ್ಯದಂತೆ ರಥವನ್ನು ಎಳೆಯಲು ಕುದುರೆಯು ಬೇಕು, ಆದರೆ ಅಶ್ವಗಳನ್ನು ವಿಪರೀತ ಪೋಷಿಸಿದರೆ ಅದು ಸಹಾಯ ಮಾಡುವ ಬದಲು ಸೋಮಾರಿತನ ಮೈಗೂಡಿಸಿಕೊಂಡು ಕೆಲಸಕ್ಕೆ ಬಾರದ ಪ್ರಾಣಿಯಾಗುತ್ತದೆ. (ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು ಎನ್ನಬಹುದು !).
...
ಟಿಪ್ಪಣಿ :
**ಶರೀರಮಾದ್ಯಂ ಖಲು ಧರ್ಮಸಾಧನಮ್ .
ಕ.ಉ. = ಕಠೋಪನಿಷತ್ತು.
-
ಭಗವತ್ಪಾದರ ‘ವಿವೇಕಚೂಡಾಮಣಿ’ಗೆ ನಿಮ್ಮ ಸಾರ್ಥ ವಿವರಣೆ. ಓದುವುದೇ ಒಂದು ಸಂತೋಷದ ಕೆಲಸವಾಗಿದೆ.
ಪ್ರತ್ಯುತ್ತರಅಳಿಸಿಈ ಬರೆವಣಿಗೆಗೆ ನಿಮ್ಮ ಪ್ರೋತ್ಸಾಹವೇ ಕಾರಣ.
ಅಳಿಸಿ