Part -52
ಮೂಲ:
ಮೋಕ್ಷಸ್ಯ ಕಾಂಕ್ಷಾ ಯದಿ ವೈ ತವಾಸ್ತಿ
ತ್ಯಜಾತಿದೂರಾದ್ವಿಷಯಾನ್ ವಿಷಂ ಯಥಾ |
ಪೀಯೂಷವತ್ತೋಷ_ದಯಾ_ಕ್ಷಮಾರ್ಜವ_
ಪ್ರಶಾಂತಿ_ದಾಂತೀರ್ಭಜ ನಿತ್ಯಮಾದರಾತ್ ||೮೨||
ಪ್ರತಿಪದಾರ್ಥ:
ತವಃ =ನಿನಗೆ, ಮೋಕ್ಷಸ್ಯ=ಮೋಕ್ಷದ, ಕಾಂಕ್ಷಾ=ಅಭಿಲಾಷೆಯು, ಯದಿ ಅಸ್ತಿ ವೈ=ಇದ್ದರೆ, ವಿಷಯಾನ್=ವಿಷಯಗಳನ್ನು, ವಿಷಂ ಯಥಾ=ವಿಷದಂತೆ, ಅತಿ ದೂರಾತ್=ತುಂಬ ದೂರದಲ್ಲಿ, ತ್ಯಜ=ಬಿಟ್ಟುಬಿಡು, ತೋಷ_ದಯಾ_ಕ್ಷಮಾ_ಆರ್ಜವ_ಪ್ರಶಾಂತಿ_ದಾಂತೀಃ=ಸಂತೋಷ ದಯೆ ಕ್ಷಮೆ ಸರಳತೆ ಶಮ ದಮ ಇವುಗಳನ್ನು, ಪೀಯೂಷವತ್=ಅಮೃತದಂತೆ, ನಿತ್ಯಂ=ನಿತ್ಯವೂ, ಆದರಾತ್=ಪ್ರೀತಿಯಿಂದ, ಭಜ=ಸೇವಿಸು.
ತಾತ್ಪರ್ಯ:
ಮೋಕ್ಷಾಪೇಕ್ಷೆಯು ನಿನ್ನಲ್ಲಿ ಹುಟ್ಟಿರುವುದು ಸತ್ಯವೇ ಆಗಿದ್ದರೆ, ವಿಷಯಗಳನ್ನು ವಿಷವೆಂದು ಗಣಿಸಿ ಹತ್ತಿರಕ್ಕೆ ಸುಳಿಯದಂತೆ ದೂರವಿರಿಸು. ಅಮೃತ ಸಮಾನವಾದ ಸಂತೋಷ, ದಯೆ, ಕರುಣೆ, ಕ್ಷಮೆ, ಸರಳತೆ, ಶಮ_ದಮಾದಿ ಸಾಧನಗಳನ್ನು ನಿತ್ಯವೂ ಆದರದಿಂದ ಸೇವಿಸು (ಅನುಸರಿಸು).
ವಿವರಣೆ:
ಮುಮುಕ್ಷುವು ಜ್ಞಾನಸಿದ್ಧಿಗಾಗಿ ಯಾವುದನ್ನು ಕಡ್ಡಾಯವಾಗಿ ಬಿಡಬೇಕು ಮತ್ತು ಏನೇನನ್ನು ಅನುಸರಿಸಬೇಕು ಎನ್ನುವುದನ್ನು ಈ ಶ್ಲೋಕದಲ್ಲಿ ಆಚಾರ್ಯರು ಹೇಳುತ್ತಾರೆ. ಮೋಕ್ಷದ ಅಭಿಲಾಷೆಯು ಇದ್ದದ್ದೇ ಆದರೆ ಎನ್ನುವಲ್ಲಿ 'ಮೋಕ್ಷವು ಮಾತ್ರ'(ಬೇರೆ ಯಾವುದೂ ಅಲ್ಲ) ಎಂದು ಪರಿಗಣಿಸಬೇಕು ಎಂಬುದಾಗಿ ಸದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳು ವ್ಯಾಖ್ಯಾನದಲ್ಲಿ ಹೇಳಿರುತ್ತಾರೆ. ಕುತೂಹಲದ ತಿಳಿವಳಿಕೆಗೆ ಇಲ್ಲಿ ಜಾಗವಿಲ್ಲ ಎನ್ನುವುದು ಸೂಕ್ಷ್ಮವಾಗಿ ತಿಳಿಯಬೇಕಾದ ವಿಚಾರ. ಆ ಬಾವಿಯೊಳಗೆ ಏನೋ ಬಿದ್ದಂತೆ ಸದ್ದಾಯಿತು ನೋಡೋಣ ಎಂದು ಹೋದವರು, ಅದರೊಳಗೆ ರಕ್ಷಣೆ ಮಾಡಬೇಕಾದ ಏನೇ ವಸ್ತು_ಜೀವಿ ಇದ್ದರೂ ಕೈಲಾದ ರೀತಿಯಲ್ಲಿ ಸಹಾಯ ಮಾಡಬೇಕಿರುವುದು ಧರ್ಮವೆನಿಸಿಕೊಳ್ಳುತ್ತದೆ. ಅದು ಬಿಟ್ಟು, ಸುಮ್ಮನೆ ಕುತೂಹಲಕ್ಕೆಂದು ನೋಡಿದೆ ಎನ್ನುವುದು ಪಲಾಯನವಾದ ಅಥವಾ ಹೇಡಿತನಕ್ಕೆ ಸಾಕ್ಷಿಯಾಗುತ್ತದೆ. ಹಾಗಾಗಿ ಸತ್ಯವಾದ ಬುದ್ಧಿಯಿಂದ (ಸತ್ಯಬುದ್ಧ್ಯಾವಧಾರಣ..)ಮೋಕ್ಷವೇ ಪರಮಗುರಿ ಎಂಬ ನಿರ್ಧಾರ ತಳೆದು ವಿಷಯಗಳನ್ನು ವಿಷವೆಂದು ಪರಿಗಣಿಸಿ ಹತ್ತಿರಕ್ಕೂ ಸುಳಿಯದಂತೆ ಸರ್ವಥಾ ತ್ಯಜಿಸಬೇಕು ಎನ್ನುತ್ತಾರೆ.
.........
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ