ಭಾಗ ೨೨




मूलम्-ಮೂಲ

विद्वान् स तस्मा उपसत्तिमीयुषे मुमुक्षवे साधु यथोक्तकारिणे।
प्रशान्तचित्ताय शमान्विताय तत्वोपदेशं कृपयैव कुर्यात् ॥४३॥

ವಿದ್ವಾನ್ ಸ ತಸ್ಮಾ ಉಪಸತ್ತಿಮೀಯುಷೇ ಮುಮುಕ್ಷವೇ ಸಾಧು ಯಥೋಕ್ತಕಾರಿಣೇ |
ಪ್ರಶಾಂತಚಿತ್ತಾಯ ಶಮಾನ್ವಿತಾಯ ತತ್ವೋಪದೇಶಂ ಕೃಪಯೈವ ಕುರ್ಯಾತ್ |೪೩|

ಪ್ರತಿಪದಾರ್ಥ :-

(ಸಃ ವಿದ್ವಾನ್ = ಆ ವಿದ್ವಾಂಸನು, ಉಪಸತ್ತಿಮ್ ಈಯುಷೇ = ತಿಳಿವನ್ನು ಬಯಸಿರುವ, ಮುಮುಕ್ಷವೇ = ಮುಮುಕ್ಷವಾದ, ಸಾಧು-ಯಥೋಕ್ತ-ಕಾರಿಣೇ = ಹೇಳಿದಂತೆ ಸರಿಯಾಗಿ ನೆಡೆಯುವ(ಮಾಡುವ), ಪ್ರಶಾಂತ ಚಿತ್ತಾಯ = ನಿರ್ಮಲ ಮನಸ್ಕನಾದ, ಶಮಾನ್ವಿತಾಯ = ಶಮದಮಾದಿ ಗುಣಗಳಿಂದ ಸಂಪನ್ನನಾದ, ತಸ್ಮೈ = ಆ ಅಪೇಕ್ಷಿಗೆ, ಕೃಪಯಾ ಏವ = ಕರುಣೆಯಿಂದಲೇ, ತತ್ವೋಪದೇಶಂ -ಕುರ್ಯಾತ್ = ತತ್ವೋಪದೇಶವನ್ನು ಮಾಡಬೇಕು )

ತಾತ್ಪರ್ಯ:-

ಬ್ರಹ್ಮಜ್ಞಾನಿಯಾದ ಗುರುವು ಉಪದೇಶವನ್ನು ಬಯಸುತ್ತಿರುವ, ಶಮಾದಿ ಗುಣಗಳಿಂದ ಕೂಡಿರುವ , ಹೇಳಿದಂತೆ ಸರಿಯಾಗಿ ನೆಡೆಯುವ, ಒಳ್ಳೆಯ ಮನಸಿನವನಾದ , ಮುಮುಕ್ಷವಾದ ಜ್ಞಾನಾಪೇಕ್ಷಿಗೆ ಕರುಣೆಯಿಂದ ಕೃಪೆತೋರಿ ತತ್ವೋಪದೇಶವನ್ನು ಮಾಡಬೇಕು.

ವಿವರಣೆ :-

ಜ್ಞಾನೋಪದೇಶವನ್ನು ಬಯಸಿ ಬರುವ ಅಪೇಕ್ಷಿಯನ್ನು ಕರುಣೆಯಿಂದ ಶಿಷ್ಯನನ್ನಾಗಿ ಸ್ವೀಕರಿಸಿ ಆತನಿಗೆ ತತ್ವೋಪದೇಶವನ್ನು ಬ್ರಹ್ಮವಿದನಾದ ಗುರುವು ಮಾಡಬೇಕು ಎಂದು ಆಚಾರ್ಯರು ಈ ಶ್ಲೋಕದಲ್ಲಿ ಹೇಳಿರುತ್ತಾರೆ. ಪ್ರಕರಣದಲ್ಲಿ ಬರುವ ವಿಚಾರಗಳು ಗುರು-ಶಿಷ್ಯರಿಬ್ಬರಿಗೂ ಅನ್ವಯವಾಗುತ್ತದೆ. ಉಪಸತ್ತಿಯನ್ನು ಬಯಸಿ ಬರುವ ಶಿಷ್ಯನಾದರೂ ಸಾಮಾನ್ಯದವನೇ ? ಅಲ್ಲ, ಆತನು ಈಗಾಗಲೇ ಶಮಾದಿಗುಣಸಂಪನ್ನನಾಗಿರುತ್ತಾನೆ ಮತ್ತು ಒಳ್ಳೆಯ ಪ್ರಾಮಾಣಿಕ ಮನಸ್ಸುಳ್ಳವನಾಗಿರುತ್ತಾನೆ. ಗುರುವು ಹೇಳಿದ್ದನ್ನು ಸರಿಯಾಗಿ ನೆಡೆಸಿಕೊಡುವವನಾಗಿರುತ್ತಾನೆ. ವಿನಯವಂತನೂ ಆಗಿರುತ್ತಾನೆ. ಶಿಷ್ಯನಿಗೆ ಬ್ರಹ್ಮಜ್ಞಾನವೂ ತಿಳಿದಿರುತ್ತದೆ  ಆದರೆ, ಬ್ರಹ್ಮದ ಅನುಭೂತಿಗಾಗಿ ಆತನು ಗುರುವಿನ ಮೊರೆಹೋಗುತ್ತಾನೆ. ತನ್ನೊಳಗಿರುವ ಚೈತನ್ಯವನ್ನು ಜಾಗೃತಗೊಳಿಸಿಕೊಳ್ಳಲು ಗುರುವಿನ ಸಾಮೀಪ್ಯವನ್ನು ಶಿಷ್ಯನು ಬಯಸುತ್ತಾನೆ. ಇಂತಹ ಶಿಷ್ಯನಿಗೆ ಗುರುವು ಕೃಪೆಯಿಂದ ತತ್ವೋಪದೇಶವನ್ನು ಮಾಡಬೇಕು ಎಂದು ಆಚಾರ್ಯರು ಹೇಳುತ್ತಾರೆ.


मूलम्-ಮೂಲ :-

माभैष्ट विद्वंस्तव नास्त्यपायः संसारसिंधोस्तरणेऽस्त्युपायः ।
येनैव याता यतयोऽस्य पारं तमेव मार्गं तव निर्दिशामि ।४४।

ಮಾ ಭೈಷ್ಟ ವಿದ್ವಂಸ್ತವ ನಾಸ್ತ್ಯಪಾಯಃ ಸಂಸಾರಸಿಂಧೋಸ್ತರಣೇಽಸ್ತ್ಯುಪಾಯಃ |
ಯೇನೈವ ಯಾತಾ ಯತಯೋಽಸ್ಯ ಪಾರಂ ತಮೇವ ಮಾರ್ಗಂ ತವ ನಿರ್ದಿಶಾಮಿ |೪೪| 

ಪ್ರತಿಪದಾರ್ಥ :-

(ವಿದ್ವನ್ = ಅಯ್ಯಾ ವಿದ್ವಾಂಸನೇ, ಮಾ ಭೈಷ್ಟ = ಹೆದರಬೇಡ, ತವ-ಅಪಾಯಃ-ನ ಅಸ್ತಿ = ನಿನಗೆ ಅಪಾಯವೂ ಇಲ್ಲ, ಸಂಸಾರ ಸಿಂಧೋಃ = ಸಂಸಾರ ಸಾಗರವನ್ನು, ತರಣೇ = ದಾಟುವುದಕ್ಕೆ, ಉಪಾಯಃ -ಅಸ್ತಿ = ಸಾಧನವು ಇದೆ, ಯತಯಃ = ಯಾರು ಯಾರು (ಪ್ರಯತ್ನಶಾಲಿಗಳು), ಯೇನ ಏವ = ಯಾವುದೊಂದರಿಂದಲೇ (ಮಾರ್ಗದಿಂದಲೇ) , ಅಸ್ಯ-ಪಾರಂ= ಇದರ ತೀರವನ್ನು, ಯಾತಃ=ತಲುಪಿದರೋ (ಪಡೆದರೋ), ತಮ್ ಏವ ಮಾರ್ಗಂ= ಅದೇ ಹಾದಿಯನ್ನು, ತವ-ನಿರ್ದಿಶಾಮಿ= ನಿನಗೂ ತೋರಿಸುತ್ತೇನೆ )

ತಾತ್ಪರ್ಯ:-

ಅಯ್ಯಾ ವಿವೇಕಿಯೇ-ವಿದ್ವಾಂಸನೇ ನೀನು ಹೆದರಬೇಡ. ನಿನಗೆ ಯಾವ ಅಪಾಯವೂ ಇಲ್ಲಿಲ್ಲ. ಸಂಸಾರಸಾಗರವನ್ನು ದಾಟುವುದಕ್ಕೆ ಉಪಾಯಗಳು ಇವೆ. ಪ್ರಯತ್ನಶೀಲರು ಯಾವೊಂದು ಮಾರ್ಗದಿಂದಲೇ ಭವಸಾಗರವನ್ನು ದಾಟಿದರೋ ಆ ದಾರಿಯನ್ನೇ ನಾನು ನಿನಗೂ ತೋರಿಸುತ್ತೇನೆ.

ವಿವರಣೆ:-

ಶಿಷ್ಯನು ಅರಿವಿನ ಅನುಭೂತಿಯ ಭಿಕ್ಷೆಯನ್ನು ಬೇಡಿಕೊಂಡು ಗುರುವಿನ ಬಳಿಗೆ ಬಂದಾಗ ಮೊದಲು ಗುರುವು ಆತನಿಗೆ ಅಭಯವನ್ನು ಕೊಡಬೇಕಾಗುತ್ತದೆ. ಆ ಪ್ರಕರಣವನ್ನು ಆಚಾರ್ಯರು ಇಲ್ಲಿ ನಿರೂಪಿಸುತ್ತಾರೆ.  ವಿದ್ವಾಂಸನಾದ ಶಿಷ್ಯನು ತನ್ನ ಮುಂದೆ ಬಾಗಿದಾಕ್ಷಣ ಗುರುವು ಆತನ ಹೆದರಿಕೆಯನ್ನು ಮೊದಲು ದೂರ ಮಾಡಬೇಕು. ಶಿಷ್ಯನಿಗೆ ಭವಸಾಗರವನ್ನು ದಾಟಬಲ್ಲನೇ ಎಂಬ ಹೆದರಿಕೆ ಇದ್ದಿರಬಹುದು ಹಾಗಾಗಿ ಆತನನ್ನು ಕಂಡ ಕೂಡಲೇ " ಬಾರಪ್ಪಾ, ನೀನೇನೂ ಭಯ ಪಡಬೇಕಾದ್ದಿಲ್ಲ. ಇಲ್ಲಿ ನಿನಗೆ ಯಾವ ಅಪಾಯವೂ ಉಂಟಾಗುವುದಿಲ್ಲ . ಈ ಸಂಸಾರ ಸಾಗರವನ್ನು ದಾಟುವುದಕ್ಕೆ ಉಪಾಯಗಳು ಇದ್ದೇ ಇವೆ. ಈ ಭವಸಾಗರವನ್ನಾಗಲೇ ಅನೇಕರು ದಾಟಿದ್ದಾರೆ.  ನೀನೇನೂ ಮೊದಲ ಪ್ರಯೋಗ ಪ್ರಾಣಿಯಲ್ಲ. ಈ ದಾರಿಯಲ್ಲಾಗಲೇ ಅನೇಕರು ನಡೆದು ಹೋಗಿದ್ದಾರೆ. ಹಾಗೆ ನೆಡೆದೂ ನೆಡೆದೂ ಈ ದಾರಿಯು ತುಂಬ ಗಟ್ಟಿಯಾಗಿದೆ. ನಿನಗೆ ಯಾವ ತೊಂದರೆಗಳೂ ಇಲ್ಲಿಲ್ಲ. ನೀರಡಿಕೆಯಾದರೆ ಕೆರೆ-ಬಾವಿಗಳಿವೆ. ಹಸಿವಾದರೆ ಭಿಕ್ಷಾನ್ನವು ದೊರೆಯುತ್ತದೆ. ಆಯಾಸ ನೀಗಿಸಿಕೊಳ್ಳಲು ದೇಗುಲತಾಣಗಳಿವೆ. ಇದು ನೆಮ್ಮದಿಯ ದಾರಿ. ಸಾಧನೆಗೈದವರು ಬೇರೆ-ಬೇರೆಯ ಹಂತಗಳಲ್ಲಿ ನಿನಗೆ ದೊರಕುತ್ತಾರೆ. ನಿನ್ನ ದಾರಿಯನ್ನು ಸರಳಗೊಳಿಸಿದ್ದಾರೆ. ಅನೇಕ ಸಾಧಕರು ಇದೇ ದಾರಿಯಲ್ಲಿ ಸಾಗಿ ಜ್ಞಾನಿಗಳಾಗಿದ್ದಾರೆ. ನಿನಗೂ ನಾನು ಅದೇ ದಾರಿಯನ್ನು ತೋರಿಸುತ್ತೇನೆ"  ಎಂಬ ಆಪ್ತವಚನಗಳಿಂದ ಸಂತೈಸಿ ಆತನಿಗೆ ಉಪದೇಶ ನೀಡಲು ಮುಂದಾಗಬೇಕು ಎಂದು ಆಚಾರ್ಯರು ಸೊಗಸಾಗಿ ನಿರೂಪಣೆ ಮಾಡುತ್ತಾರೆ.

ಶಿಷ್ಯನಿಗೆ ಏನೆಲ್ಲಾ qualification ಗಳು ಇರಬೇಕೋ ಅದಕ್ಕಿಂತಲೂ ಹೆಚ್ಚಿನ ಗುಣಗಳು ಗುರುವಿನಲ್ಲಿರಬೇಕಾದ್ದು ಅನಿವಾರ್ಯ ಎನ್ನುವುದನ್ನು ಈ ಪ್ರಕರಣದಿಂದ ತಿಳಿಯಬಹುದು. ಶಿಷ್ಯನು ಈಗಾಗಲೇ ಸಕಲಗುಣ ಸಂಪನ್ನನಾಗಿದ್ದಾನೆ. ಅದು ಗುರುವಿಗೂ ತಿಳಿದೇ ಇರುತ್ತದೆ. ಆದರೂ, ಶಿಷ್ಯನಲ್ಲಿ ವಿನಯವಂತಿಕೆ ಮೂಡತ್ತದೆ ಗುರುವಿನ ಮುಂದೆ ಬಾಗುತ್ತಾನೆ. ತನ್ನ ಮುಂದೆ ಬಾಗಿ ನಿಂತುಬಿಟ್ಟನು ಎಂದ ಮಾತ್ರಕ್ಕೆ ಗುರುವು ಆತನ ಮೇಲೆ ಅಧಿಕಾರ ನೆಡೆಸುತ್ತಾನೆಯೆ ? ಇಲ್ಲ, ಆತನನ್ನು ಆಪ್ತವಚನಗಳಿಂದ ಸಂತೈಸುತ್ತಾನೆ.  ಈ ಸದ್ಭಾವನೆಯು ಎಂದೆಂದಿಗೂ ಪ್ರಸ್ತುತ.

ಮನೆಗೆ ಬಂದ ಗೆಳೆಯರಿಗೆ ’ತಾವು ಕಾಫಿ-ಟೀ ಕುಡಿಯೋದಿಲ್ವೇ" ಎಂದು ಕೇಳುವುದಕ್ಕಿಂತಲೂ " ಕಾಫಿ-ಟೀ ಏನಾದ್ರೂ ಕುಡಿಯುವಿರೇನು ? " ಎಂದು ಕೇಳುವುದು ಎಷ್ಟೋ ಉತ್ತಮ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ.

ವಂದನೆಗಳೊಂದಿಗೆ,....

ಕಾಮೆಂಟ್‌ಗಳು

  1. ನಿಮ್ಮ ಈ ನಿರೂಪಣೇ ಓದಿ ಹಸಿವಾದೊಡೆ 'ಭಿಕ್ಷಾನ್ನಗಳುಂಟು ತೃಷೆಯಾದೊಡೆ ಕೆರೆಭಾವಿಗಳುಂಟು, ಶಯನಕೆ ಹಾಳು ದೇಗುಲಗಳುಂಟು ಆತ್ಮ ಸಂಗಾತಕ್ಕೆ ಚೆನ್ನ ಮಲ್ಲಿಕಾರ್ಜುನನುಂಟು’ ಈ ವಚನ ನೆನಪಾಯಿತು. ತುಂಬಾ ಚೆನ್ನಾಗಿದೆ ವಿವರ ಬಹಳ ದಿನಗಳ ನಂತರ ಬ್ಲಾಗ್ ಗೇ ಪೋಸ್ಟ್ ಮಾಡಿದ್ದೀರಿ ಧನ್ಯವಾದಗಳು.

    ಮನೆಗೆ ಬಂದ ಅತಿಥಿಗಳನ್ನು ಕಾಫಿ ಕುಡಿತೀರಾ ಎಂದು ಕೇಳಿದರೆ ಕುಡಿತೀನಿ ಅಂತಾರ... ಹಾಗೆ ಕೇಳಬಾರದು ಕಾಫಿ/ಟೀ ಮಾಡಿಕೊಂಡು ತಂದುಕೊಡಬೇಕು. ಮನೆಗೆ ಬಂದ ಅತಿಥಿಗಳಿಗೆ ಸಂಕೋಚವಿರುತ್ತೆ ಹಾಗೆ ಕೇಳಬಾರದು ಎಂದು ನಮ್ಮ ತಂದೆ ಯಾವಾಗಲೂ ಹೇಳ್ತಾನೇ ಇರ್ತಾರೆ. :))

    ಪ್ರತ್ಯುತ್ತರಅಳಿಸಿ
  2. ಸುಗುಣ,

    ಅಕ್ಕಮಹಾದೇವಿಯ ವಚನವನ್ನು ಇಲ್ಲಿ ಕೊಟ್ಟು ಲೇಖನದ ಮೆರುಗನ್ನು ಹೆಚ್ಚಿಸಿದ್ದಕ್ಕೆ ನಿಮಗೆ ಧನ್ಯವಾದಗಳು.
    ನಿಮ್ಮ ತಂದೆಯವರ ಸಂಸ್ಕಾರವು ಅತ್ಯುತ್ತಮ ಎನ್ನಬಹುದು. ಅಂತಹವರು ನಮಗೆಲ್ಲಾ ಮಾರ್ಗದರ್ಶಕರಿದ್ದಂತೆ. ಅವರಿಗೂ ನನ್ನ ನಮನಗಳು.

    off the screen ...ಅಂದಹಾಗೆ , ನಿಮ್ಮ ಮನೆಯಲ್ಲಿ ನನಗೆ ಕಾಫಿ/ಟೀ ಏನು, ತಿಂಡಿ ಕೊಟ್ಟರೂ ಸಂಕೋಚ ಆಗಲ್ಲ ! :)

    ಪ್ರತ್ಯುತ್ತರಅಳಿಸಿ
  3. ಶಿಷ್ಯ ಹಾಗು ಗುರು ಇವರೀರ್ವರಿಗೂ ಇರಬೇಕಾದ ಗುಣಗಳನ್ನು ಚೆನ್ನಾಗಿ ವಿವರಿಸಿದ್ದೀರಿ. ಭಗವತ್ಪಾದರು ತಮ್ಮ ಸ್ತೋತ್ರ ಒಂದರಲ್ಲಿ ‘ಅವಿನಯಮಪನಯ ವಿಷ್ಣೋ..’ ಎಂದು ಪ್ರಾರ್ಥಿಸಿರುವರು. ಬಸವಣ್ಣನವರೂ ಸಹ ‘ಅಯ್ಯಾ ಎಂದೆಡೆ ಸ್ವರ್ಗ...’ ಎಂದಿಲ್ಲವೆ? ವಿನಯವು ಸಾಧಕರಿಗೆ ಹಾಗು ಜ್ಞಾನಿಗಳಿಗೆ ಅತ್ಯವಶ್ಯವಾದ ಗುಣವೇ ಆಗಿದೆಯಲ್ಲವೆ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಕಾಕಾ,
      ವಿನಯದಿಂದ ವಿದ್ಯೆಯು ಲಭಿಸುತ್ತದೆ ಎನ್ನುವುದು ಅನುಭವದ ಮಾತೇ ಆಗಿದೆ. ನಿಮ್ಮ ಪ್ರತಿಕ್ರಿಯೆಯು ಲೇಖನಕ್ಕೆ ತುಂಬ ಪೂರಕವಾಗಿದೆ. ಧನ್ಯವಾದಗಳು ನಿಮಗೆ.

      ಅಳಿಸಿ
  4. ಶಿಷ್ಯ ಹಾಗು ಗುರು ಪರ೦ಪರೆಯನ್ನು ಚನ್ನಾಗಿ ವಿವರಿಸುತ್ತಿದ್ದೀರಿ.. ಹೋಳಿಗೆ ಹಾಕ್ಲಾ ಅನ್ನೋದಕ್ಕಿ೦ತ ಹಾಕ್ಕೊಳ್ಳಿ ಹಾಕ್ತೇನೆ ಅನ್ನೋದೆ ಸರಿ ಅಲ್ವೆ..:))ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಚುಕ್ಕಿಚಿತ್ತಾರ,

      ನಿಮಗೂ ಧನ್ಯವಾದಗಳು.

      ..ಇನ್ನು ಹೋಳಿಗೆ ವಿಷ್ಯ, ಈಗ ಸರಿಯಾಯ್ತು. ನಾನು ಕಾಫಿ/ಟೀ ಅಂದೆ. ಸುಗುಣ ತಿಂಡಿಯವರೆಗೆ ಬಂದ್ರು. ನೀವು ಹೋಳಿಗೆ ಅಂತಿದೀರಿ. ಒಳ್ಳೇ ಬಾಳೇಲೆ ಗಡದ್ದು ಊಟ ಯಾಕಾಗಬಾರ್ದು ಅಂತೀನಿ ?! :)

      ಅಳಿಸಿ
  5. ಗುರು-ಶಿಷ್ಯ ಸಂಬಂಧವೆನೆಂದುಪಮಿಸುವೆ?ಜ್ಯೋತಿಯಲೊದಗಿದ ಜ್ಯೋತಿಯಂತಿರಬೇಕು,ದರ್ಪಣದೊಳಡಗಿದ ಪ್ರತಿಬಿಂಬದಂತಿರಬೇಕು,ಸ್ಫಟಿಕದೊಳಗಿರಿಸಿದ ರತ್ನದಂತಿರಬೇಕು,ರೂಪಿನ ನೆಳಲಿನ ಅಂತರಂಗದಂತಿರಬೇಕು,ಕೂಡಲ ಚನ್ನಸಂಗಯ್ಯಾ ಇದು ಕಾರಣ,ದರ್ಪಣವು ದರ್ಪಣಕೆ ತೋರಿದಂತಿರಬೇಕು..

    ಚೆನ್ನ ಬಸವಣ್ಣನ ಈ ವಚನ ನೆನಪಾಯ್ತು ಸರ್.... ಗುರು ಶಿಷ್ಯ ಸಂಭದ ಬಗ್ಗೆ ಬಹಳ ಚೆನ್ನಾಗಿ ವಿವರಣೆ ಕೊಟ್ಟಿದ್ದಿರಾ..

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಗಿರೀಶ್,

      ನೀವಿಲ್ಲಿ ಕೊಟ್ಟ ವಚನವು ನನಗೆ ತಿಳಿದಿರಲಿಲ್ಲ. ತುಂಬಾ ಚೆನ್ನಾಗಿದೆ, ಅರ್ಥಪೂರ್ಣವಾಗಿದೆ. ಧನ್ಯವಾದಗಳು ನಿಮಗೆ

      ಅಳಿಸಿ
  6. ಪ್ರತ್ಯುತ್ತರಗಳು
    1. ಸೀತಾರಾಮ್ ಸರ್,

      ಧನ್ಯವಾದಗಳು. ನಿಮ್ಮ ಬ್ಲಾಗಿನಲ್ಲಿ ಮತ್ತಷ್ಟು ಲೇಖನಗಳನ್ನು ಎದುರು ನೋಡುತ್ತಿರುವೆ.

      ಅಳಿಸಿ
  7. ಬಹಳ ದಿನಗಳ ನ೦ತರ ನಿಮ್ಮ ಬ್ಲಾಗ್ ಗೆ ಬ೦ದೆ. ಬಹಳ ಸ್ವಾರಸ್ಯಕರವಾದ ವಿಚಾರವನ್ನು ತಿಳಿಸುತ್ತಿದ್ದೀರಿ, ಧನ್ಯವಾದಗಳು ಸುಬ್ರಹ್ಮಣ್ಯರವರೆ, ನನ್ನ ಬ್ಲಾಗ್ ಗೆ ಸ್ವಾಗತ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ