ಭಾಗ -೧೭


मूलम् - ಮೂಲ
श्रोत्रियोऽवृजिनोऽकामहतो यो ब्र्ह्मवित्तमः ।
ब्रह्मण्युपरतः शान्तो निरिन्धन इवानलः।
अहेतुक-दयासिन्धुः बन्धुरानमतां सताम्॥३४॥

ಶ್ರೋತ್ರಿಯೋಽವೃಜಿನೋಽಕಾಮಹತೋ ಯೋ ಬ್ರಹ್ಮವಿತ್ತಮಃ|
ಬ್ರಹ್ಮಣ್ಯುಪರತಃ ಶಾಂತೋ ನಿರಿಂಧನ ಇವಾನಲಃ |
ಅಹೇತುಕ-ದಯಾಸಿಂಧುರ್ಬಂಧುರಾನಮತಾಂ ಸತಾಮ್ ||೩೪||

ಪ್ರತಿಪದಾರ್ಥ:
(ಯಃ =ಯಾರು, ಶ್ರೋತ್ರಿಯೋ=ಶ್ರೋತ್ರಿಯನೋ(ಶಾಸ್ತ್ರಾರ್ಥಗಳ ವಿವೇಚನೆಯುಳ್ಳವನು), ಅವೃಜಿನಃ=ಪಾಪವಿಲ್ಲದವನು, ಅಕಾಮಹತಃ=ಬಯಕೆಗಳಿಲ್ಲದವನು,  ಬ್ರಹ್ಮವಿತ್ತಮಃ=ಜ್ಞಾನಿಗಳಲ್ಲಿ ಶ್ರೇಷ್ಠನು, ಬ್ರಹ್ಮಣಿ=ಬ್ರಹ್ಮದಲ್ಲಿ, ಉಪರತಃ=ನೆಲಸಿರುವವನು, ನಿರಿಂಧನಃ ಅನಲಃ ಇವ = ಉರುವಲಿಲ್ಲದ ಬೆಂಕಿಯಂತೆ,  ಶಾಂತಃ= ಶಾಂತನೂ, ಅಹೇತುಕ ದಯಾಸಿಂಧುಃ=ಯಾವ ನಿಮಿತ್ತವೂ ಇಲ್ಲದ ದಯಾಸಿಂಧುವೂ, ಆನಮತಾಂ ಸತಾಮ್= ನಮಿಸುತ್ತಿರುವ ಸತ್ಪುರುಷರಿಗೆ, ಬಂಧುಃ = ಬಾಂಧವನೂ..... (ಆಗಿರುವವನು) )

ತಾತ್ಪರ್ಯ :
ಯಾರು ಶ್ರೋತ್ರಿಯನೋ, ಪಾಪರಹಿತನೋ, ಬಯಕೆಗಳೇ ಇಲ್ಲದವನೋ, ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನೋ, ಕೇವಲ ಬ್ರಹ್ಮದಲ್ಲಿ ಮನಸನ್ನು ನೆಟ್ಟಿರುವವನೋ, ಕಟ್ಟಿಗೆಯಲ್ಲಿ ಉರಿದು ಆರಿಹೋದ ಬೆಂಕಿಯಂತೆ (ಉರುವಲೇ ಇಲ್ಲದ) ಶಾಂತನಾಗಿರುವವನೂ, ಯಾವ ನಿಮಿತ್ತವೂ ಇಲ್ಲದೆ ದಯಾಸಿಂಧುವಾಗಿರುವವನೋ, ಶರಣು ಬಂದ ಸಜ್ಜನರಿಗೆ ಬಂಧುವಂತಿರುವವನೋ .....)

ವಿವರಣೆ :
ಜ್ಞಾನಾರ್ಥಿಯಾಗಿ ಗುರುವಿನ ಬಳಿಸಾರಬೇಕು ಎಂದು ತಿಳಿಸಿದ ನಂತರ ಆಚಾರ್ಯರು ಮತ್ತೆ ಗುರೂಪಸತ್ತಿಯನ್ನು ಮುಂದುವರಿಸುತ್ತಾರೆ. ಅಧಿಕಾರಿಯ ಅರ್ಹತೆಯ ನಿರೂಪಣೆಯ ನಂತರ ಜ್ಞಾನಾರ್ಜನೆಯ ಪಾಠವನ್ನು ಆಚಾರ್ಯರು ಆರಂಭಿಸುತ್ತಾರೆ. ಮೇಲಿನ ಶ್ಲೋಕದಲ್ಲಿ ಮೊದಲಿಗೆ ’ಶ್ರೋತ್ರಿಯಃ’ ಎನ್ನುವುದರ ಮೂಲಕ ಗುರುವು ಶಾಸ್ತ್ರಾರ್ಥಗಳನ್ನು ಅನುಭವದಿಂದ ನಿಶ್ಚಯಿಸಿಕೊಂಡವನಾಗಿರಬೇಕು ಎಂದು ಹೇಳುತ್ತಾರೆ. ಕೇವಲ ಪುಸ್ತಕ ಪಾಂಡಿತ್ಯವಲ್ಲದೆ ಸ್ವಾನುಭದಿಂದಲೂ ತಿಳಿದುಕೊಂಡು ತರ್ಕಕ್ಕೆ-ಶಾಸ್ತ್ರಕ್ಕೆ, ಅನುಭವಕ್ಕೆ-ಶಾಸ್ತ್ರಕ್ಕೆ ವಿರೋಧಗಳು ತೋರ್ಗೊಡದಂತೆ (ಅವಿರೋಧವೆನಿಸುವಂತೆ) ಕಡ್ಡಿಮುರಿದಂತೆ ಹೇಳುವವನಾಗಿರಬೇಕು ಅಥವಾ ಹೇಳುವ ತಿಳುವಳಿಕೆಯನ್ನು ಉಳ್ಳವನಾಗಿರಬೇಕು ಎಂಬರ್ಥದಲ್ಲಿ ತಿಳಿಸುತ್ತಾರೆ. ’ಉಪನಿಷತ್ತುಗಳನ್ನು ಅಧ್ಯಯನ ಮಾಡಿ ಅದರ ಅರ್ಥವನ್ನು ವಿಚಾರಮಾಡಿದವನೇ ಶ್ರೋತ್ರಿಯನು’ ಎಂಬ ಪಾಣಿನಿಯ ಸೂತ್ರದ ವಿಚಾರವನ್ನು ಶ್ರೀ ಚಂದ್ರಶೇಖರ ಭಾರತಿಗಳು ವ್ಯಾಖ್ಯಾನದಲ್ಲಿ ಒಕ್ಕಣಿಸಿರುತ್ತಾರೆ. ’ಅವೃಜಿನಃ’ ಎಂದರೆ ಪಾಪರಹಿತನು ಎಂಬ ಅರ್ಥವಿರುತ್ತದೆ. ಜ್ಞಾನಿಯಾದ ಗುರುವಿನಲ್ಲಿ ನೈತಿಕ ಮೌಲ್ಯಗಳೂ ಇರಬೇಕಾಗುತ್ತದೆ. ಜಗತ್ತಿಗೆ ಮಾದರಿಯಾಗಿ ನಿಲ್ಲಬೇಕಾಗುವ ಗುರುವು ಒಳ್ಳೆಯತನದ ಗುಣಗಳನ್ನು ಇಟ್ಟುಕೊಂಡಿರಬೇಕೇ ಹೊರತು ’ತಾನು ಗುರು ತಾನೇನು ಮಾಡಿದರೂ ಸರಿಯೆ’ ಎನ್ನುವ ಧೋರಣೆಯನ್ನು ಹೊಂದಿರಬಾರದು. ಜಗಕ್ಕೆ ಹಿತಕಾರಿಯಾದ ಕೆಲಸಗಳನ್ನು ಮಾಡುತ್ತಾ ಲೋಕಾನುಗ್ರಹಕ್ಕಾಗಿ ಬದುಕಬೇಕು ಎಂದು ’ಅವೃಜಿನಃ’ ಎನ್ನುವಲ್ಲಿ ಹೇಳಿರುತ್ತಾರೆ. ಮುಂದೆ ’ಅಕಾಮಹತಃ’ ಎಂದು ಹೇಳುತ್ತಾರೆ. ಬಯಕೆಗಳನ್ನೆಲ್ಲಾ ನಾಶಮಾಡಿಕೊಂಡಿರುವವನು ಅಥವಾ ಬಯಕೆಗಳೇ ಏಳದಂತೆ ಸಾಧನೆ ಮಾಡಿಕೊಂಡಿರುವವನನ್ನು ಅಕಾಮಹತಃ ಎಂದು ಹೇಳುತ್ತಾರೆ.  ಮಾನ್ಯ ಡಿ.ವಿ.ಜಿ.ಯವರು ತಮ್ಮ ಕಗ್ಗದಲ್ಲಿ ಈ ಸಂದರ್ಭವನ್ನು ಸೊಗಸಾಗಿ ನಿರೂಪಿಸುತ್ತಾರೆ..

ಬೀಸಿದಲ್ಲದೆ ಬೂದಿಕವಿದ ಕಿಡಿಯುರಿದೀತೆ ?|
ಕೈಸೋಕದಿರೆ ಕೈಯ ಸಪ್ಪುಳಾದೀತೆ? ||
ವಾಸನೆಯೆ ಮಾತೆಯಾಶೆಗೆ ಪಿತನು ಸಂದರ್ಭ|
ದೋಷವೊಳಗೋ ಹೊರಗೋ ? - ಮಂಕುತಿಮ್ಮ ||

’ವಾಸನೆ ತಾಯಿ , ಸಂದರ್ಭ ತಂದೆ’ ಎಂದು ಸೊಗಸಾಗಿ ಡಿ.ವಿ.ಜಿ. ಯವರು ಹೇಳುತ್ತಾರೆ. ಗಸಗಸೆ ಪಾಯಸದ ಬಯಕೆಯೇ ಇಲ್ಲದ ಮೇಲೆ ಅದೆಷ್ಟು ಕೊಳಗ ಪಾಯಸ ತಂದಿಟ್ಟರೂ ಪ್ರಯೋಜನವಾಗಲಾರದು !. ಬಯಕೆ ಎಂಬ ದೋಷವು ಒಳಗಿನದೋ ಅಥವಾ ಹೊರಗಿನದೋ ಎಂಬುದನ್ನು ಯೋಚಿಸಿ ನಿರ್ಧರಿಸಬೇಕಾಗುತ್ತದೆ. ಕಾಮಹತಃ ಎಂದರೆ ವಿಷಯದ ಆಸೆಗಳಿಂದ ಕೂಡಿರುವವನು ಅಥವಾ ತನ್ನನ್ನು ತಾನೇ ಅದರೊಳಗೆ ದೂಡಿಕೊಂಡಿರುವವನು ಎಂದು ಅರ್ಥ. ಅಕಾಮಹತಃ ಎಂದರೆ ವಿಷಯಾಸಕ್ತಿಯಿಂದ ದೂರವಿರುವವನು ಎಂದು ಅರ್ಥ. ನಂತರ, ಬ್ರಹ್ಮಜ್ಞಾನಿಗಳಲ್ಲಿ ಉತ್ತಮೋತ್ತನೂ ಮತ್ತು ವಿಷಯಾಸಕ್ತಿಯನ್ನೆಲ್ಲಾ ಕರಗಿಸಿಕೊಂಡು ಕೇವಲ ಬ್ರಹ್ಮನಲ್ಲಿ ಮನಸನ್ನು ಇಟ್ಟಿರುವವನು ಗುರುವು ಎಂದು ಹೇಳುತ್ತಾರೆ. ಮುಂದೆ ’ಶಾಂತಃ ನಿರಿಂಧನ ಇವಾನಲಃ’ ಎಂದು ಹೇಳುತ್ತಾರೆ. ಈ ವಾಕ್ಯಕ್ಕೆ ಮೇಲಿನ ಕಗ್ಗವೇ ಉತ್ತಮ ವಿವರಣೆಯಾಗಿರುತ್ತದೆ. ಹೇಗೆ ಉರುವಲು ಇಲ್ಲದಿದ್ದರೆ ಬೆಂಕಿಯು ತಣ್ಣಗಾಗಿ ಉರಿಯಿಲ್ಲದೆಯೇ ತೋರುವುದೋ (ಹುಲ್ಲಿಲ್ಲದ ಜಾಗದಲ್ಲಿ ಬೆಂಕಿಯು ಹೊತ್ತಿದರೆ ಹೇಗೆ ತಾನೇ ಆರಿ ಹೋಗುವುದೋ) ಹಾಗೆಯೆ, ವಾಸನೆಯೇ ಇಲ್ಲದವರಲ್ಲಿ ಸಂದರ್ಭಗಳೂ ಹುಟ್ಟಲಾರದು ಮತ್ತು ಗುರುವು ಹೀಗೆಯೇ ಇರಬೇಕು ಎಂದು ಹೇಳುತ್ತಾರೆ. ಹೀಗೆ ಹೊರಗಿನ ವಿಷಯಗಳನ್ನು ಅವಲಂಬಿಸದೆ ’ಶಾಂತ’ನಾಗಿದ್ದು ಬ್ರಹ್ಮದಲ್ಲಿ ಗಟ್ಟಿಮನಸುಳ್ಳವನಾಗಿರಬೇಕು ಎಂದು ನಿರೂಪಿಸುತ್ತಾರೆ.
ನಂತರ ’ ಅಹೇತುಕ ದಯಾಸಿಂಧುಃ ಬಂಧುರಾನಮತಾಂಸತಾಮ್’ ಎಂದು ಹೇಳುತ್ತಾರೆ. ಶರಣಾಗಿ ಬರುವ ಸಜ್ಜನರಿಗೆ ಯಾವ ಪ್ರತಿಫಲದ ಅಪೇಕ್ಷೆಯೂ ಇಲ್ಲದೆ ಕರುಣೆಯ ಸಾಗರದಂತೆ ಇದ್ದು ತಿಳುವಳಿಕೆ ಮೂಡಿಸಬಲ್ಲಂತಹ ಬಂಧುವಿನಂತೆ , ಆಪ್ತ ಗೆಳೆಯನಂತೆ ಇರಬೇಕು ಎಂಬರ್ಥದಲ್ಲಿ ಹೇಳಿರುತ್ತಾರೆ. ಗೀತೆಯಲ್ಲಿ ಕೃಷ್ಣನು ಹೇಳುವ ವಾಕ್ಯವೊಂದು ಹೀಗೆ ಬರುತ್ತದೆ ; ’ ನನಗೆ ಈ ಲೋಕದಿಂದ ಯಾವ ಪ್ರಯೋಜನವೂ ಇಲ್ಲ. ಆದರೂ ಈ ಜಗತ್ತಿಗಾಗಿ ನಾನು ಎಲ್ಲವನ್ನೂ ಮಾಡುತ್ತೇನೆ, ಏಕೆಂದರೆ ಈ ಜಗತ್ತನ್ನು ನಾನು ಪ್ರೀತಿಸುತ್ತೇನೆ ಎಂದರೆ ಅನಿಮಿತ್ತವಾಗಿ ಪ್ರೀತಿಸುತ್ತೇನೆ ’ ಎಂದು. ಯಾವ ನಿಮಿತ್ತ ಕಾರಣವೂ ಇಲ್ಲದೆ ಶರಣಾಗಿ ಬಂದವರಿಗೆ ತಿಳಿಸುವ ಕರುಣೆಯನ್ನು ಗುರುವು ಹೊಂದಿರಬೇಕು ಎಂದು ನಿರೂಪಿಸುತ್ತಾರೆ. ವಾಡಿಕೆಯಂತೆ ಶೆಟ್ಟರ ಅಂಗಡಿಯಲ್ಲಿ ದಿನಸಿಯನ್ನು ಕೊಳ್ಳುವುದು ಬಿಟ್ಟು ಅಂದು ಪುಡ್ ಬಜಾರಿನಲ್ಲಿ ದಿನಸಿ ತಂದಿರುತ್ತೇವೆ. ಹೀಗೆ ತಂದಿದ್ದೇನಾದರೂ ಶೆಟ್ಟರಿಗೆ ತಿಳಿಯಿತೆಂದರೆ ಮುಂದೆ ಅವರ ಅಂಗಡಿಯಲ್ಲಿ ನಮಗೆ ಸಿಗುವುದು ಕಳಪೆ ದಿನಸಿ ಅಥವಾ ಬಜಾರಿಗಿಂತಲೂ ದುಪ್ಪಟ್ಟು ಬೆಲೆಯೆ !. ಶೆಟ್ಟರು ಸಹಿಸಿಕೊಳ್ಳುವರೆ ?!. ಗುರುವಿನ ಕತೆಯು ಹೀಗಾಗಬಾರದು ಎನ್ನುವುದು ಮೇಲಿನ ಶ್ಲೋಕದ ಆಶಯ. ಪ್ರವಾಹಣ ಜೈವಲಿಯು ಶ್ವೇತಕೇತುವಿಗೆ ಹೇಳಿದಂತೆ, ಯಾಜ್ಞವಲ್ಕ್ಯರು ಮೈತ್ರಾದೇವಿಗೆ ಹೇಳಿದಂತೆ, ಯಮನು ನಚಿಕೇತನಿಗೆ ತಿಳಿಸಿದಂತೆ  ವಿನಯದಿಂದ ಬಂದು ಕೇಳುವವರಿಗೆ (ಬೇರೆಯವರಿಗೆ ಅಲ್ಲ) ಗುರುವು ತಿಳಿಸಿಕೊಡುವಂತಹವನಾಗಿರಬೇಕು ಎನ್ನುವುದು ಸಾರಾಂಶ. ರಮಣ ಮಹರ್ಷಿಗಳಂತಹ ಮೌನವ್ಯಾಖ್ಯಾನ ಶಿರೋಮಣಿಗಳೂ ಸಹ ವಿನಯದಿಂದ ಬಂದ ಕೆಲವರಿಗೆ ತಿಳುವಳಿಕೆಯ ಪಾಠವನ್ನು ಹೇಳಿರುವುದನ್ನು ಅವರ ಜೀವನ ಚರಿತ್ರೆಯ ಸಾಹಿತ್ಯದಲ್ಲಿ ಓದಿರುತ್ತೇವೆ.

मूलम् = ಮೂಲ
तमाराध्य गुरुं भक्त्या प्रह्वः प्रश्रयसेवनैः ।
प्रसन्नं तमनुप्राप्य पृच्छेद् ज्ञातव्यमात्मनः॥३५॥ 

ತಮಾರಾಧ್ಯ ಗುರುಂ ಭಕ್ತ್ಯಾ ಪ್ರಹ್ವ-ಪ್ರಶ್ರಯ-ಸೇವನೈಃ|
ಪ್ರಸನ್ನಂ ತಮನುಪ್ರಾಪ್ಯ ಪೃಚ್ಛೇದ್ ಜ್ಞಾತಮಾತ್ಮನಃ ||೩೬||

ಪ್ರತಿಪದಾರ್ಥ :  
(ತಂ ಗುರುಂ= ಅಂತಹ ಗುರುವನ್ನು, ಭಕ್ತ್ಯಾ= ಭಕ್ತಿಯಿಂದ, ಆರಾಧ್ಯ=ಪೂಜಿಸಿ, ಆರಾಧಿಸಿ, ಪ್ರಹ್ವ-ಪ್ರಶ್ರಯ = ನಮ್ರತೆ-ವಿನಯದಿಂದ, ಸೇವನೈಃ= ಸೇವೆ ಮಾಡಿ, ಪ್ರಸನ್ನಂ ತಂ= ತೃಪ್ತನಾದ ಅವನನ್ನು, ಅನುಪ್ರಾಪ್ಯ= ಹೊಂದಿ, ಆತ್ಮನಃ ಜ್ಞಾತವ್ಯಂ= ತಾನು ತಿಳಿದುಕೊಳ್ಳಬೇಕಾದುದನ್ನು, ಪೃಚ್ಛೇತ್ = ಕೇಳಬೇಕು, ಪ್ರಶ್ನಿಸಬೇಕು )

ತಾತ್ಪರ್ಯ:
ಅಂತಹ (೩೪ನೆಯ ಶ್ಲೋಕದಲ್ಲಿ ವಿವರಿಸಿದ) ಗುಣಗಳನ್ನು ಹೊಂದಿರುವ ಗುರುವನ್ನು ಭಕ್ತಿಯಿಂದ ಪೂಜಿಸಿ ನಯ-ವಿನಯಗಳಿಂದ ಸೇವಿಸಿದ ನಂತರ ಶಾಂತನಾದ ಗುರುವಿನ ಸಮೀಪವನ್ನು ಹೊಂದಿ ತಾನು ತಿಳಿದುಕೊಳ್ಳಬೇಕಾಗಿರುವುದರ ವಿಚಾರದ ಬಗೆಗೆ ಕೇಳಬೇಕು ಅಥವಾ ಪ್ರಶ್ನೆ ಮಾಡಬೇಕು.

ವಿವರಣೆ:
ಗುಣಸಂಪನ್ನನಾದ ಗುರುವನ್ನು ನಯ-ವಿನಯಗಳಿಂದ ಪೂಜಿಸಿ ಸೇವೆ ಮಾಡಬೇಕು ಎಂದು ಹೇಳುತ್ತಾರೆ. ಗೀತೆಯಲ್ಲಿ (೧) ಹೇಳುವಂತೆ " ಸಾಷ್ಟಾಂಗ ನಮಸ್ಕಾರದಿಂದಲೂ ಕೇಳುವಿಕೆಯಿಂದಲೂ, ಗುರುಸೇವೆಯಿಂದಲೂ ತಿಳಿದುಕೊಳ್ಳಬೇಕು. ತತ್ವವನ್ನು ಅರಿತ ಜ್ಞಾನಿಗಳು ನಿನಗೆ ಅದನ್ನು ತಿಳಿಸುತ್ತಾರೆ" ಎಂಬ ವಾಕ್ಯವು ಸೊಗಸಾದುದು. ಇಲ್ಲಿ ನಮಸ್ಕಾರ, ಗುರುಸೇವೆ ಎನ್ನುವುದೆಲ್ಲವೂ ನಯ-ವಿನಯಗಳಂತಹ ಸದ್ವಿಚಾರಗಳಿಗೆ ಬೆಂಬಲವಾಗಿ ನಿಲ್ಲುತ್ತದೆ. ಭಕ್ತಿಯಿಂದ-ನಮ್ರತೆಯಿಂದ ಎಂದು ವಿಶೇಷವಾಗಿ ಹೇಳಿರುವುದು ’ಮಾತು-ಮನಸು-ಕೆಲಸ’ (ಕಾಯಾ-ವಾಚಾ-ಮನಸಾ; ತ್ರಿಕರಣ ಶುದ್ಧಿ) ಗಳಲ್ಲಿ  ನಿಯತ್ತನ್ನು ಇಟ್ಟುಕೊಳ್ಳವುದು, ಪಾರದರ್ಶಕ ನಡೆವಳಿಕೆಯನ್ನು ಉಳಿಸಿಕೊಳ್ಳುವುದು ಎನ್ನುವ ಅರ್ಥದಲ್ಲಿ. ಇಂತಹ ಉತ್ತಮ ನಡವಳಿಕೆಗಳಿಂದ ಗುರುವಿನ ಮನಸು ಒಲಿದ ನಂತರ ಆತನ ಸಮೀಪವನ್ನು ಹೊಂದಿ ಯಾವುದು ಆತ್ಮಾರ್ಥ ವಿಚಾರವೋ (ಇನ್ಯಾವುದೋ ವಿಷಯವನ್ನಲ್ಲ) ಅದರ ಬಗೆಗೆ ಕೇಳಿ ತಿಳಿದುಕೊಳ್ಳಬೇಕು ಎಂದು ಮೇಲಿನ ಶ್ಲೋಕದಲ್ಲಿ ಆಚಾರ್ಯರು ಹೇಳಿರುತ್ತಾರೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ...
------------------------------------------------

ಟಿಪ್ಪಣಿ :

ಗೀತೆಯ ವಾಕ್ಯ.." ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ | ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ವದರ್ಶಿನಃ || ( ೪.೩೪) 

ವಂದನೆಗಳೊಂದಿಗೆ....



ಕಾಮೆಂಟ್‌ಗಳು

  1. ಅನೇಕ ಮೂಲಗಳಿಂದ ಹಾಗು ಸ್ವಂತ ವಿಚಾರದಿಂದ ಸಮರ್ಪಕ ಉದಾಹರಣೆಗಳನ್ನು ನೀಡುತ್ತ, ವ್ಯಾಖ್ಯಾನಿಸಿರುವಿರಿ. ಸಮುಚಿತ ಅರಿವನ್ನು ಹರಡುತ್ತಿರುವ ನಿಮಗೆ ವಂದನೆಗಳು.

    ಪ್ರತ್ಯುತ್ತರಅಳಿಸಿ
  2. ಗುರು ಹೇಗಿರಬೇಕೆ೦ಬುದನ್ನು ಉತ್ತಮವಾಗಿ ಮತ್ತು ಸರಳವಾಗಿ ವಿವರಿಸಿದ್ದೀರಿ. ವ೦ದನೆಗಳು.

    ಪ್ರತ್ಯುತ್ತರಅಳಿಸಿ
  3. ಉತ್ತಮ ಬರಹದೊ೦ದಿಗೆ ಒಳ್ಳೆಯ ಅರಿವನ್ನು ನೀಡಿದ್ದೀರಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  4. ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ವಿವರಿಸಿದ್ದೀರಿ. ಉತ್ತಮ ಗುರು ಹೇಗಿರಬೇಕು ಎಂಬುದಕ್ಕೆ ಇಲ್ಲಿ ಕೆಲವು ನೀತಿ ಪಾಠಗಳಿವೆ.ಇಂತಹ ಉಪಯುಕ್ತ ಲೇಖನಗಳನ್ನು ಬರೀತಾ ಇರಿ...ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  5. ಪ್ರತಿಕ್ರಿಯೆ ಬರೆದು ಬೆನ್ನುತಟ್ಟುತ್ತಿರುವ ಆತ್ಮೀಯರೆಲ್ಲರಿಗೂ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ