Part 27

ಮೂಲ:


ಮಸ್ತಕನ್ಯಸ್ತ -ಭಾರಾದೇರ್ದುಃಖಮನ್ಯೈರ್ನಿವಾರ್ಯತೇ |
ಕ್ಷುಧಾದಿಕೃತ-ದುಃಖ ತು ವಿನಾ ಸ್ವೇನ ನ ಕಶ್ಚಿತ್ ||೫೩||

ಪ್ರತಿಪದಾರ್ಥ:


ಮಸ್ತಕನ್ಯಸ್ತ-ಭಾರಾದೇಃ = ತಲೆಯ ಮೇಲಿನ ಹೊರೆ (ಇತ್ಯಾದಿ) , ದುಃಖಂ = ಕಷ್ಟವು(ವನ್ನು) , ಅನ್ಯೈಃ = ಇತರ(ರು)ರಿಂದ, ನಿವಾರ್ಯತೇ = ಹೋಗಲಾಡಿಸಬಹುದು, ತು = ಆದರೆ, ಕ್ಷುಧಾದಿಕೃತ = ಹಸಿವಿನಿಂದ ಉಂಟಾಗುವ ಸಂಕಟಗಳು , ಸ್ವೇನ ವಿನಾ = ತನ್ನಿಂದಲ್ಲದೆ, ಕೇನ ಚಿತ್ ನ = ಮತ್ತಾರಿಂದಲೂ .( ಪರಿಹಾರವಾಗುವುದಿಲ್ಲ).

ತಾತ್ಪರ್ಯ:


ತಲೆಯ ಮೇಲಿನ ಹೊರೆಯ ಭಾರವನ್ನು ಬೇರೆ ಯಾರಾದರೂ ಕಡಿಮೆ ಮಾಡಿಕೊಡಬಹುದು. ಆದರೆ, ಹಸಿವಿನಿಂದ ಉಂಟಾಗುವ ಸಂಕಟವನ್ನು ತಾನಲ್ಲದೆ ಬೇರೆ ಯಾರೂ ಹೋಗಲಾಡಿಸಲು ಸಾಧ್ಯವಿಲ್ಲ.

ವಿವರಣೆ :


ಗುರುವು ಶಿಷ್ಯನಿಗೆ ಸ್ವಪ್ರಯತ್ನದ ವಿಶೇಷತೆಗಳನ್ನು ವಿವರಿಸುತ್ತಾ ಮುಂದುವರಿದು ಹೇಳುತ್ತಾರೆ.  ದೈಹಿಕ, ಮಾನಸಿಕ ಸಾಂಸಾರಿಕ ಹೊರೆಗಳನ್ನು, ಅಂದರೆ ಕಷ್ಟಸುಖಗಳನ್ನು ಮತ್ತೊಬ್ಬರ ಬಳಿ ಹೇಳಿಕೊಂಡಾಗಲೀ ಹಂಚಿಕೊಂಡಾಗಲೀ ಸಮಾಧಾನ ಪಟ್ಟುಕೊಳ್ಳಬಹುದು. ಹಾಗೆ ಹೇಳಿಕೊಳ್ಳುವುದರಿಂದ ಮನಸ್ಸಿನ ಉದ್ವೇಗ ಕಡಿಮೆಯಾಗುತ್ತದೆ ಎಂದು ಮನಃಶಾಸ್ತ್ರಜ್ಞರೂ ಅಭಿಪ್ರಾಯಪಡುತ್ತಾರೆ. ಇದಕ್ಕಾಗಿ ನೂರಾರು ಕೌನ್ಸೆಲಿಂಗ್ ಕೇಂದ್ರಗಳೂ ಇವೆ. ನಾವು ಸಾಲದ ಸುಳಿಯಲ್ಲಿ ಸಿಕ್ಕಿಕೊಂಡಿದ್ದರೆ ಸ್ನೇಹಿತರೋ, ಬಂಧುಗಳೋ ನಮ್ಮನ್ನು ಪಾರು ಮಾಡುವ ಸಾಧ್ಯತೆಯೂ ಇರುತ್ತದೆ. ಆದರೆ, ಒಬ್ಬ ವ್ಯಕ್ತಿಗೆ ಹಸಿವಾದಾಗ ಅವನೆ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕೆ ಹೊರತು ಆತನ  ಬಂಧುವೋ ಗೆಳೆಯನೋ ಹೊಟ್ಟೆ ಬಿರಿಯುವಂತೆ ತಿಂದರೆ ಉಪಯೋಗವಿಲ್ಲ. ಹಾಗೆಯೆ ತನ್ನತನದ ಅರಿವು ಸ್ವಪ್ರಯತ್ನದಿಂದ ಬರಬೇಕೆ ಹೊರತು ಅನ್ಯರ ಪಾಂಡಿತ್ಯದಿಂದಾಗಲೀ, ಉಪದೇಶದಿಂದಾಗಲಿ ಅಲ್ಲ ಎನ್ನುವುದು ತಾತ್ಪರ್ಯ. 
ಹಾಗಾದರೆ ಗುರುವಿನ ಉಪದೇಶದ ಅಗತ್ಯವಾದರೂ ಏನಿದೆ ? ಎಂದರೆ, ಸ್ವಪ್ರಯತ್ನದಿಂದ ಅರಿವು ಮೂಡುತ್ತದೆ ಎಂದು ಹೇಳಲಾದರೂ (ಭ್ರಮೆಯನ್ನು ವಿವರಿಸಲು) ಗುರುವು ಬೇಕಲ್ಲವೆ !.


ಮೂಲ:


ಪಥ್ಯಮೌಷಧಸೇವಾ ಚ ಕ್ರಿಯತೇ ಯೇನ ರೋಗಿಣಾ |
ಆರೋಗ್ಯಸಿದ್ಧಿರ್ದೃಷ್ಟಾಸ್ಯ ನಾನ್ಯಾನುಷ್ಮಿತ -ಕರ್ಮಣಾ ||೫೪||


ಪ್ರತಿಪದಾರ್ಥ:


ಯೇನ ರೋಗಿಣಾ = ಯಾವ ರೋಗಿಯಿಂದ, ಪಥ್ಯಂ = ಪಥ್ಯವು , ಔಷಧಸೇವಾ ಚ = ಮತ್ತು ಔಷಧ ಸೇವನೆ, ಕ್ರಿಯತೇ = ಮಾಡಲ್ಪಡುತ್ತದೆಯೋ, ಅಸ್ಯ = ಅವನಿಗೇ , ಆರೋಗ್ಯ ಸಿದ್ಧಿಃ ದೃಷ್ಟಾ = ಆರೋಗ್ಯ ಲಾಭವು ಕಂಡುಬರುತ್ತದೆ, ಅನ್ಯ-ಅನುಷ್ಠಿತ-ಕರ್ಮಣಾ ನ = ಇತರರಿಂದ ಆಚರಿಸಲ್ಪಟ್ಟ ಕರ್ಮದಿಂದಲ್ಲ.

ತಾತ್ಪರ್ಯ :


ಯಾವ ರೋಗಿಯು ಔಷಧಸೇವನೆ ಹಾಗೂ ಪಥ್ಯವನ್ನು ಅನುಸರಿಸುತ್ತಾನೆಯೋ ಅವನಿಗೆ ಆರೋಗ್ಯ ವೃದ್ಧಿಸುತ್ತದೆ. ಇತರರು ಮಾಡುವ ಸೇವೆ ಅಥವಾ ಕೆಲಸದಿಂದಲ್ಲ

ವಿವರಣೆ:


ಮಗುವಿಗೆ ಹಸಿವಾಗಿದೆ ಎಂದು ತಾಯಿ ಹಾಲು ಕುಡಿದರೆ ಕಂದನ ಅಳು ನಿಲ್ಲುವುದಿಲ್ಲ. ಹಾಗೆಯೆ, ಯಾರಿಗೆ ನೆಗಡಿಯಾಗಿದೆಯೋ ಅವನೇ ಔಷಧ ತೆಗೆದುಕೊಳ್ಳಬೇಕು. ಅದರಿಂದ ಮಾತ್ರ ಆತ ಗುಣಮುಖನಾಗಲು ಸಾಧ್ಯ. ಬೇರೆಯವರು ಹೆಚ್ಚೆಂದರೆ ಸಮಯಕ್ಕೆ ಸರಿಯಾಗಿ ಔಷಧವನ್ನು ತೆಗೆದುಕೊಳ್ಳಲು ನೆನಪಿಸಬಹುದು. ಮಾತ್ರೆಯನ್ನು ಬಾಯೊಳಗೂ ಇಡಬಹುದು. ಆದರೆ, ನುಂಗುವುದು ?!. ಅದಕ್ಕಾದರೂ ಸ್ವಪ್ರಯತ್ನ ಬೇಕಲ್ಲವೆ. ‘ಕುದುರೆಯನ್ನು ನೀರಿರುವ ಬಳಿ ಕರೆದುಕೊಂಡು ಹೋಗಿ ಬಿಡಬಹುದು. ಆದರೆ, ಕುಡಿಸಲು ಸಾಧ್ಯವೆ ?“ ಎಂಬ ಮಾತನ್ನು ಇಲ್ಲಿ ನೆನೆಯಬಹುದು. ಅಂತಯೆ ಯಾರು ಭ್ರಮೆಗೆ ಒಳಗಾಗಿದ್ದನೆಯೋ ಆತನೆ ಅದರಿಂದ ಹೊರಬರಲು ಯತ್ನಿಸಬೇಕು ಎಂಬುದು ಈ ಶ್ಲೋಕದ ತಾತ್ಪರ್ಯ.



ಮೂಲ


ವಸ್ತು ಸ್ವರೂಪಂ ಸ್ಫುಟಬೋಧಚಕ್ಷುಷಾ 
ಸ್ವೇನೈವ ವೇದ್ಯಂ ನ ತು ಪಂಡಿತೇನ |
ಚಂದ್ರ ಸ್ವರೂಪಂ ನಿಜಚಕ್ಷುಷೈವ 
ಜ್ಞಾತವ್ಯಮನ್ಯೈರವಗಮ್ಯತೇ ಕಿಮ್ |೫೫|

ಪ್ರತಿಪದಾರ್ಥ:


ವಸ್ತುಸ್ವರೂಪಂ = ವಸ್ತುವಿನ ಸ್ವರೂಪವು , ಸ್ಫುಟಬೋಧಚಕ್ಷುಷಾ = ತಿಳಿಯಾದ ಅರಿವಿನ ಕಣ್ಣಿನ ಮೂಲಕ, ಸ್ವೇನ ಏವ = ತನ್ನಿಂದಲೇ , ವೇದ್ಯಂ = ತಿಳಿಯತಕ್ಕಂತಹುದು, ನ ತು ಪಂಡಿತೇನ = ಪಂಡಿತರಿಂದ (ಮತ್ತೊಬ್ಬ) ತಿಳಿಲಾಗುವುದಿಲ್ಲ , ಚಂದ್ರ ಸ್ವರೂಪಂ = ಚಂದ್ರನ ಸ್ವರೂಪವು, ನಿಜ ಚಕ್ಷುಷಾ ಏವ = ತನ್ನ ಕಣ್ಣಿಂದಲೆ , ಜ್ಞಾತವ್ಯಂ = ತಿಳಿಯುವಂತಹುದು, ಅನ್ಯೈಃ = ಇತರರಿಂದ, ಅವಗಮ್ಯತೇ ಕಿಂ = ತಿಳಿಸಲ್ಪಡಲು ಸಾಧ್ಯವೆ ? .


ತಾತ್ಪರ್ಯ:


ವಸ್ತುವಿನ ನೈಜತೆಯನ್ನು ತಾನೇ ತನ್ನ ಒಳಗಣ್ಣಿನಿಂದ ಅರಿಯಬೇಕೆ ಹೊರತು ಮತ್ತೊಬ್ಬರ ವರ್ಣನೆ ಅಥವಾ ವಿವರಣೆಯಿಂದಲ್ಲ. ಚಂದ್ರನ ಸ್ವರೂಪವನ್ನು ತನ್ನ ಕಣ್ಣಿಂದಲೆ ನೋಡಿ ತಿಳಿಯಬೇಕೆ ಹೊರತು ಇತರರ ಸಹಾಯದಿಂದಲ್ಲ.

ವಿವರಣೆ:


ಚಂದ್ರನನ್ನು ನಾವು ಎಷ್ಟು ಅರಿಯಲು ಸಾಧ್ಯ ?. ವೈಜ್ಞಾನಿಕ ಸಂಶೊಧನೆಗಳು ನೀಡಿರುವ ಮಾಹಿತಿಯನ್ನು ತಿಳಿಯಬಹುದು. ಅದರಲ್ಲೂ ಒಂದಷ್ಟು ಅನುಮಾನಗಳು ಅಪೂರ್ಣ ಮಾಹಿತಿಗಳು ಇವೆ. ಭೂಮಿಯಿಂದ ನೋಡಿದರೆ ಚಂದ್ರ ಹಾಲಿನಂತೆ ಬೆಳ್ಳಗಿದ್ದಾನೆ ಎನ್ನಬಹುದು. ನಿಜಕ್ಕೂ ಚಂದ್ರನ ಮೂಲ ಸ್ವರೂಪ ಹಾಗಿದೆಯೆ ? . ಸೂರ್ಯನ ಬೆಳಕನ್ನು ಪ್ರತಿಫಲಿಸುವುದರಿಂದ ಚಂದ್ರ ಬೆಳ್ಳಗೆ ಕಾಣುತ್ತಾನೆ ಎನ್ನುತ್ತದೆ ವಿಜ್ಞಾನ. ಹೀಗೆ ಎಲ್ಲವೂ ‘ಕೈ ತೂಕ ಬಾಯಿ ಬಣ್ಣ “. ಸರಿಯಾಗಿ ಅರಿಯಬೇಕೆಂದರೆ ಚಂದ್ರಲೋಕಕ್ಕೆ ಹೋಗಿ ಅಲ್ಲೆ ವಾಸವಿದ್ದು ಅಧ್ಯಯನ ಮಾಡಿ ಬರಬೇಕು. ಹಾಗೆಯೆ, ವಸ್ತುವಿನ ಅಂದರೆ ಬ್ರಹ್ಮದ ಅರಿವು ತನ್ನ ಅಂತಃಕರಣದಿಂದ ಹುಟ್ಟಬೇಕೆ ಹೊರತು ಇನ್ನಾವುದರ ಸಹಾಯದಿಂದಲಾಗಲಿ ಅಲ್ಲ ಎಂಬ ವಿವರಣೆ ಈ ಶ್ಲೋಕದಲ್ಲಿ ಕಂಡುಬರುತ್ತದೆ.

‘ಸ್ಫುಟವಾದ ಅಥವಾ ತಿಳಿಯಾದ ಕಣ್ಣಿನಿಂದ ಅರಿಯುವುದು ಎಂದರೆ, ಸಾಧನಾ ಚತುಷ್ಟಯ (ವಿವರಣೆಗೆ ಹಿಂದಿನ ಭಾಗಗಳನ್ನು ಓದಿರಿ) ದ ಸಂಪನ್ನತೆಯಿಂದ ಬಂದಿರುವ ತಿಳಿವಳಿಕೆ ಅಥವಾ ಜ್ಞಾನ’ ಎಂದು ಚಂದ್ರಶೇಖರ ಭಾರತಿ ಸ್ವಾಮಿಗಳು ವ್ಯಾಖ್ಯಾನಿಸಿರುತ್ತಾರೆ.

————

ಕಾಮೆಂಟ್‌ಗಳು

  1. ‘ಸ್ವಪ್ರಯತ್ನವಿಲ್ಲದೆ ಅರಿವು ಮೂಡುವುದಿಲ್ಲ’ ಎನ್ನುವದಕ್ಕೆ ಶ್ರೀ ಶಂಕರಾಚಾರ್ಯರು ಉತ್ತಮ ಉದಾಹರಣೆಗಳನ್ನು ಕೊಟ್ಟಿದ್ದಾರೆ. ತಿಳಿಯಾದ ಕನ್ನಡದಲ್ಲಿ ವಿವರಿಸಿದ ನಿಮಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ.

    ವಿವೇಕ ಚೂಡಾಮಣಿ ಇಂದಿಗೂ ಪ್ರಸ್ತುತ.. ನಿತ್ಯ ಜೀವನಕ್ಕೆ ಹತ್ತಿರ ವಾಗಿದ್ದು ಅಂತ ನಿಮ್ಮ ಅನುವಾದ ಸಾಧಿಸ್ತಾ ಇದೆ. ಓದಿ ಖುಷಿ ಆಯಿತು.

    ಇಂದಿನ ದೊಡ್ಡ ಕಷ್ಟ, ಶಂಕರಾಚಾರ್ಯ , ವಿವೇಕಾನಂದ ಎಲ್ಲರನ್ನು ದೇವರ ತರ ನೋಡಿ ದೂರ ಇಡೋ ಜನರಿಗೆ , ಬರಿದೆ ಕಂಠ ಪಾಟ ಮಾಡ್ಸಿ ಕಳಿಸೊ ಮಠಗಳಿಗೆ ಇದೆಲ್ಲ ಅರ್ತ ಆಗಬೇಕಿದೆ.

    ಪ್ರತ್ಯುತ್ತರಅಳಿಸಿ
  3. ಶಂಭುಲಿಂಗ ಪುರಾಣ ಎಂದಾಕ್ಷಣವೇ ಕ್ಲಿಕ್ ಮಾಡಿದೆ. ಆದರೆ ತೆರೆದಂತೆ ವಿವೇಕ ಚುಡಾಮಣಿ ದರ್ಶನವಾಯಿತು. ಅದ್ಭುತ. ಇಷ್ಟೋಂದು ಆಪ್ಯಾಯಮಾನವಾಗಿ ಬರೆಹ ಓದಿಗೆ ಕುಳಿತ ತಪಸ್ವಿಯಂತೆ ಕಂಡಿತು. ಅಷ್ಟೇ ಖುಷಿಯೂ ಆಯಿತು. ತಾವು ಓದಿದ ಪುಸ್ತಕದ ಬಗ್ಗೆ ಬರೆಯುವ ಸ್ವಾತಂತ್ರ್ಯವನ್ನೂ ನೀಡಿದ್ದು ಇನ್ನು ಖುಷಿ ಕೊಟ್ಟಿತು. ಆದರೆ ನನಗೆ ಶಂಭುಲಿಂಗ ಪುರಾಣವೇ ಸಿಗಲಿಲ್ಲ(ಪತ್ರಿಕಾ ವ್ಯವಸಾಯದಲ್ಲಿ ಹುಡುಕಿದ್ದು) ಹುಡುಕಿ ಓದುತ್ತೇನೆ. ಅವಸರದ ಪ್ರಕೃತಿಯ ಕೆಲಸದಲ್ಲಿರುವ ನನಗೆ ಅದು ಸಾಧ್ಯವಾಗದಿರಬಹುದು. ಇರಲಿ
    ಸುಬ್ರಮಣ್ಯ ಭಟ್ ಮಹೋದಯರಿಗೆ ನಿಮ್ಮಡಿಗಳಿಗೆ ಪ್ರಣಾಮಗಳು
    ಬ್ರಹ್ಮ ತೇಜೋ ಬಲಂ ಬಲಂ.
    ಸುಶೀಲೇಂದ್ರ ಕುಂದರಗಿ
    ಪತ್ರಕರ್ತ ಸಂಯುಕ್ತ ಕರ್ನಾಟಕ
    ಹುಬ್ಬಳ್ಳಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ